ಪವಾಡ ಪುರುಷ ಸಿದ್ಧಾರೂಢರ ರಥೋತ್ಸವ

270

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಪವಾಡ ಪುರುಷ ಸಿದ್ಧಾರೂಢರ 119ನೇ ಮಹಾರಥೋತ್ಸವ ಬುಧವಾರ ಸಂಜೆ ಶ್ರದ್ಧಾ-ಭಕ್ತಿಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭನೆಯಿಂದ ಜರುಗಿತು. ಐತಿಹಾಸಿಕ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಭಕ್ತರು ಅಷ್ಟೇ ಅಲ್ಲದೇ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಆಗಮಿಸಿದ್ದರು.

ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಭಕ್ತರು ಪಾದಯಾತ್ರೆ, ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಬಂದು ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು. ಸಿದ್ಧಾರೂಢರ ಮಠಕ್ಕೆ ಆಗಮಿಸುವ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಭಕ್ತರು ಉಚಿತ ಉಪಹಾರ, ತಂಪು ಪಾನೀಯ ಸೇವೆ ಮಾಡಿದರು.

ಸಂಜೆ ಸಿದ್ಧಾರೂಢರ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಂಗಳಾರತಿ ಮಾಡಿದ ನಂತರ, ಶ್ರೀಮಠದ ಪಲ್ಲಕ್ಕಿ ಉತ್ಸವ ಮೆರವಣಿಗೆ ವಿಜೃಂಭನೆಯಿಂದ ನಡೆಯಿತು. ಪಲ್ಲಕ್ಕಿ ಮೆರವಣಿಗೆ ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಪುನಃ ಸಿದ್ಧಾರೂಢರ ಗದ್ದುಗೆಗೆ ಆಗಮಿಸಿ ಮುಕ್ತಾಯಗೊಂಡಿತು.

ಹರ..ಹರ. ಮಹಾದೇವ

ಸಿದ್ಧಾತರೂಢ ಮಠದ ಟ್ರಸ್ಟ್ ಕಮಿಟಿಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಉಮೇಶ ಎಂ. ಅಡಿಗ ಅವರು, ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹರ.. ಹರ. ಮಹಾದೇವ… ಪವಾಡ ಪುರುಷ ಸಿದ್ಧಾರೂಢ ಮಹಾರಾಜ ಕೀ ಜೈ ಸೇರಿದಂತೆ ವಿವಿಧ ಜಯ ಘೋಷಣೆಗಳೊಂದಿಗೆ ಶ್ರೀಮಠದ ಬೀದಿಯಲ್ಲಿ ಲಕ್ಷಾಂತರ ಜನರು ರಥವನ್ನು ಎಳೆಯುವ ಮೂಲಕ ಭಕ್ತಿ ಮೆರೆದರು.

ಜಿಲ್ಲಾ ನ್ಯಾಯಾಧೀಶರಾದ ಬಿರಾದಾರ, ಶ್ರೀಮಠದ ಚೇರಮನ್ ಡಿ.ಡಿ.ಮಾಳಗಿ, ಗೋವಿಂದ ಮಣ್ಣೂರು, ಜಗದೀಶ ಮುಗಜಿಕೊಂಡಿ, ಕೆ.ಎಲ್.ಪಾಟೀಲ ಸೇರಿದಂತೆ ಎಲ್ಲ ಧರ್ಮದರ್ಶಿಗಳು ಹಾಗೂ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಮಧ್ಯರಾತ್ರಿವರೆಗೂ ಭಕ್ತರು ಆಗಮಿಸಿ ದರ್ಶನ ಪಡೆದರು. 2 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!