ಸಿಂದಗಿ ಉಪ ಕದನ: ಮನಗೂಳಿಗೆ ಟಿಕೆಟ್.. ಸಿಡಿದೆದ್ದ ಮೂಲ ನಾಯಕರು

820

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮೂಲ ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ನೀಡಿದರೂ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದ್ದಾರೆ. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ವಲಸಿಗರಿಗೆ ಟಿಕೆಟ್ ಕೊಟ್ಟಿರುವುದು ಕಾರ್ಯಕರ್ತರಲ್ಲಿ ಆಕ್ರೋಶ ತಂದಿದೆ. ಹೈಕಮಾಂಡ್ ನಿರ್ಧಾರಕ್ಕೆ ತಾಲೂಕಿನ ಮೂಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಅಸಮಾಧನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ನಾನು ನಾಲ್ಕು ಬಾರಿ ಟಿಕೆಟ್ ತಂದಿದ್ದೇನೆ. ಚುನಾವಣೆ ದಿನಾಂಕ ಘೋಷಣೆ ಪೂರ್ವದಲ್ಲಿಯೇ ಟಿಕೆಟ್ ಘೋಷಣೆ ಮಾಡಿದ್ದು ಇತಿಹಾಸದಲ್ಲೆ ನಾನು ನೋಡಿಲ್ಲ. ಇದು ಜಿಲ್ಲೆಯ ನಾಯಕರ ಗಮನಕ್ಕೂ ಬಂದಿಲ್ಲ. ಜಿಲ್ಲೆಗೆ ಸಂಬಂಧ ಪಡದ ಇಬ್ಬರು ನಾಯಕರಿಂದ ಈ ಕೆಲಸವಾಗಿದೆ. ಇದಕ್ಕೆ ಮೂಲ ಕಾಂಗ್ರೆಸ್ ನಾಯಕರಿಂದ ಹಿಡಿದು ಕಾರ್ಯಕರ್ತರಲ್ಲೂ ಅಸಮಾಧಾನ ಮೂಡಿಸಿದೆ. ಹೀಗಾಗಿ ಹೈಕಮಾಂಡ್ ತನ್ನ ನಿರ್ಧಾರ ಬದಲಾವಣೆ ಮಾಡಬೇಕೆಂದು ಒತ್ತಡ ಹೇರಲಾಗುವುದು. ಅದಕ್ಕಾಗಿ ಹಿಂದುಳಿದವರ, ಅಲ್ಪ ಸಂಖ್ಯಾತರ, ಎಸ್ಸಿ, ಎಸ್ಟಿ, ಕೋಲಿ ಕಬ್ಬಲಿಗ, ಹಾಲುಮತ ಸಮಾಜದ ಒಂದೊಂದು ಸಮಿತಿ ಮಾಡಿದ್ದು, ಒಂದೊಂದರಲ್ಲಿ 10 ಜನರು ಇರುತ್ತಾರೆ. ಇವರೆಲ್ಲ ಕೂಡಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಾ.ಜಿ.ಪರಮೇಶ್ವರ ಸೇರಿದಂತೆ ಎಲ್ಲರನ್ನು ಭೇಟಿಯಾಗಿ, ಕಾಂಗ್ರೆಸ್ ನ ಯಾವುದೇ ಸಮಾಜದ ಮೂಲ ನಾಯಕರಿಗೆ ಟಿಕೆಟ್ ಕೊಡಿ ಎಂದು ಒತ್ತಡ ಹಾಕುತ್ತೇವೆ ಎಂದರು.

ಮನಗೂಳಿ ಅವರು ಶಾಸಕರಾಗಿದ್ದರೂ ಪುರಸಭೆ ಚುನಾವಣೆಯಲ್ಲಿ 6 ಸೀಟ್ ಗೆದ್ದರು. ತಾಲೂಕು ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬಹುಮತ ಇದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ 250 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. 54 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು, 120ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದನ್ನು ನೋಡಿದ್ರೆ ಜನರ ಒಲವು ಕಾಂಗ್ರೆಸ್ ಕಡೆ ಇದೆ. ಪಕ್ಷದಲ್ಲಿ ದುಡಿಯದೆ ಇದ್ದವರು ಸೋಮವಾರ ಮನೆಗೆ ಬಂದು ಮಂಗಳವಾರ ಅಧಿಕಾರ ನಡೆಸಿದಂತಾಗುತ್ತೆ. ದುಡಿಯಿರಿ ಟಿಕೆಟ್ ಕೇಳಿ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಶರಣಪ್ಪ ವಾರದ ಮಾತ್ನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ಉಳಿಯಲು ಶರಣಪ್ಪ ಸುಣಗಾರ ಕಾರಣ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿದಿದ್ದಾರೆ. ಹೈಕಮಾಂಡ್ ಈಗಿನ ನಿರ್ಧಾರ ಬದಲಿಸಿ ಶರಣಪ್ಪ ಸುಣಗಾರಗೆ ಟಿಕೆಟ್ ಕೊಡಬೇಕು ಎಂದು ಒತ್ತಡ ಹಾಕುತ್ತೇವೆ ಎಂದರು. ದಲಿತ ಮುಖಂಡರು, ಅಲ್ಪಸಂಖ್ಯಾತ ಮುಖಂಡರು, ಹಾಲುಮತ ಸಮಾಜದ ಮುಖಂಡರು ಮಾತ್ನಾಡಿ, ಹೈಕಮಾಂಡ್ ನಿರ್ಧಾರ ನಮಗೆ ಒಪ್ಪಿಗೆ ಇಲ್ಲ ಎಂದರು.

ಈ ವೇಳೆ ಶರಣಪ್ಪ ವಾರದ, ಎಂ.ಎನ್ ಪಾಟೀಲ, ಶಾಂತಗೌಡ ಬಿರಾದಾರ, ಈರಗಂಟೆಪ್ಪ ಮಾಗಣಗೇರಿ, ಎಸ್.ಕೆ ಪೂಜಾರಿ, ಎಸ್.ಬಿ ಪಾಟೀಲ, ಭಾಷಾಸಾಬ ತಾಂಬೋಳಿ, ಮಹಿಬೂಬಸಾಬ ತಾಂಬೋಳಿ, ಶಾರಧಾಬಾವಿ ಬೆಟಗೆರಿ ಸೇರಿದಂತೆ ಹಲವರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!