ಸಿಂದಗಿ ಮುನ್ಸಿಪಾಟಿ ಗದ್ದಗಿ ಗುದ್ದಾಟ.. ಇವರು ಅಧ್ಯಕ್ಷರಾದ್ರ ಹ್ಯಾಂಗ್?

1220

ಪ್ರಜಾಸ್ತ್ರ ಓದುಗರ ಅಭಿಪ್ರಾಯ ವಿಭಾಗಕ್ಕೆ ಚಂದ್ರಕಾಂತ ಸೊನ್ನದ ಎಂಬುವರು ಕಿರು ಲೇಖನ ಬರೆದಿದ್ದಾರೆ.

ಇಷ್ಟ್ ದಿನ ತಣ್ಣಗಿದ್ದ ಸಿಂದಗಿ ಮುನ್ಸಿಪಾಟಿಯೊಳಗ ಈಗ ಬಿಸಿ ಜೋರಾಗೈತಿ. ಅದೇನಪ್ಪ ಅಂದ್ರ, ಅಧ್ಯಕ್ಷ, ಉಪಾಧ್ಯಕ್ಷ ಯಾರಾಗಬೇಕ ಅನ್ನೋದು. ಕಾಂಗ್ರೆಸ್ಸಿಗ ಪೂರಾ ಮೆಜಾರಿಟಿ ಇದ್ರೂ ಗದ್ದಿಗಿ ಹಿಡಿಲಕ್ಕ ಒಂದೀಟು ಗುದ್ಮುರಗಿ ನಡದೈತಿ. 11 ಸ್ಥಾನ ಗೆದ್ದಿರುವ ಕೈ ಪಾರ್ಟಿಯೊಳಗ ಅಧ್ಯಕ್ಷರಾಗೋ ಮಂದಿನ ಭಾಳ್ ಇದಾರ. 6 ಸೀಟ್ ಗೆದ್ದಿರೂ ತೆನೆ ಮಹಿಳೆನೂ ಇವರ ಕೂಡಾ ನಿಂತಾಳ. 3 ಅಭ್ಯರ್ಥಿ ಇರೋ ಕಮಲಕ್ಕ ಗಪ್ ಇದಾಳ. ಇನಾ ಮೂವರು ಪಕ್ಷೇತರದೊಳಗ ಇಬ್ಬರು ಕೈ ಹಿಡಿದು ಹೋಗ್ಯಾರ. ಹಿಂಗಾಗಿ ಮೀಟಿಂಗ್ ಮ್ಯಾಲ ಮೀಟಿಂಗ್ ನಡಿಲಾಕತ್ತಾವ.

ಇದೆಲ್ಲದರ ನಡಬರಕ 1ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಪ್ರತಿಭಾ ಕಲ್ಲೂರ ಅಧ್ಯಕ್ಷೆಯಾದ್ರ ಚೊಲೋ ಇರ್ತದಂತ ಭಾಳ್ ಮಂದಿ ಹೇಳಾಕತ್ತಾರ. ಯಾಕಂದ್ರ, ಡಿಗ್ರಿ ಮುಗಿಸಿದ ಹೆಣ್ಮಗಳು ಇದಾಳ. ತಾಲೂಕಿನ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರಾಗಿರುವ ಅಪ್ಪನ ರಾಜಕೀಯ ಗರಡಿಯಲ್ಲಿ ಬೆಳದಾಳ. ಹಿಂಗಾಗಿ ಆಡಳಿತ ಹೆಂಗ್ ಮಾಡಬೇಕಂತ ಗೊತ್ತದ. ಅದ್ಕ ಪ್ರತಿಭಾ ಕಲ್ಲೂರನ್ನ ಅಧ್ಯಕ್ಷ ಸ್ಥಾನಕ್ಕ ಸೂಕ್ತ ಅನಸ್ತದ ಅನ್ನಾಕತ್ತಾರ.

ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಜನರಲ್ ಇದಾವ. ಮಹಿಳಾ ಮೀಸಲಾತಿನೂ ಇಲ್ಲ. ಅದರಾಗ ಬ್ಯಾರೆ ಇವರು ಇದಾ ಮೊದಲ ಸಾರಿ ಸದಸ್ಯೆಯಾಗ್ಯಾರ. ಹಿಂಗಿರುವಾಗ ಅಧ್ಯಕ್ಷೆ ಹ್ಯಾಂಗ್ ಮಾಡೋದು, ಹಿರಿಯರ ಪಟ್ಟಿ ದೊಡ್ಡದಾದಂತ ತಾಲೂಕು ಕಾಂಗ್ರೆಸ್ ನಾಯಕರು ಹೇಳಾಕತ್ತಾರ ಅನ್ನೋ ಮಾತ ಭಾಳ್ ಸದಸ್ಯರ ಬಾಯಿಯಿಂದ ಕೇಳಿ ಬರಾಕತ್ತಾದ. ಆದ್ರೂ, ಡಿಗ್ರಿ ಓದಿರೋ ಹೆಣ್ಮಗಳಿಗೆ ಒಮ್ಮ ಅವಕಾಶ ಮಾಡಿಕೊಟ್ಟರ ಆಡಳಿತ ಚೆಂದ ಮಾಡ್ತಾಳ ಅನ್ನೋ ನಂಬಿಕೆ ಜನರದೈತಿ. ಹಿಂಗಾಗಿ ಹಿರಿಯ ನಾಯಕರು ಒಂದೀಟು ಮನಸ್ ಮಾಡಬೇಕು ಅನಸ್ತದ.

ಈ ಹಿಂದ ಮಹಿಳಾ ಸದಸ್ಯರು ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಸಿಂದಗಿ ಪುರಸಭೆಯಲ್ಲಿ ಆಡಳಿತ ಮಾಡಿ ತೋರಸ್ಯಾರ. ಹಿಂಗಿರುವಾಗ ಸದಸ್ಯೆ ಪ್ರತಿಭಾ ಶಿವಕುಮಾರ ಕಲ್ಲೂರಗ ಒಂದ ಚಾನ್ಸ್ ಕೊಟ್ಟ ನೋಡಬಹುದು. ಆದ್ರ ಕೊನೆ ತೀರ್ಮಾನ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರಿಗೆ ಬಿಟ್ಟಿದ್ದು. ಸಿಂದಗಿಯಂವನಾಗಿ ಇದು ನನ್ನ ಅಭಿಪ್ರಾಯ ಅಷ್ಟ.




Leave a Reply

Your email address will not be published. Required fields are marked *

error: Content is protected !!