ನೇಗಿಲಯೋಗಿ ‘ಕನ್ನೇರಿ ಶ್ರೀಮಠ’

1613

ಮಠ ಜ್ಞಾನದ ಕುಟೀರವಿದ್ದಂತೆ. ಭಕ್ತರಿಗೆ ಲೌಕಿಕ ಹಾಗೂ ಅಲೌಕಿಕ ಜೀವನದ ಪಾಠ ಮಾಡುತ್ತಾ, ಮನುಷ್ಯ ಜನ್ಮವನ್ನ ಹೇಗೆ ಪರೋಪಕಾರಿ ಮಾಡಿಕೊಳ್ಳಬೇಕು? ನೆಲಮೂಲದಲ್ಲಿ ಹೇಗೆ ಬದುಕುಬೇಕು.. ಅನ್ನದಾತನ ಜೀವನಕ್ಕೆ ದೇಶೀ ತಳಿಗಳು ಎಷ್ಟು ಸಹಾಯಕ ಅನ್ನೋದನ್ನ ಪ್ರಯೋಗಕವಾಗಿ ತೋರಿಸಿದ ಮಠದ ಬಗ್ಗೆ ವಿರೇಶ ಮನಗೂಳಿ ಅವರು ಬರೆದ ಲೇಖನ ಇಲ್ಲಿದೆ.

ಮಹಾರಾಷ್ಟ್ರದ ಕೊಲ್ಹಾಪುರದ ಹತ್ತಿರವಿರುವ ‘ಕನ್ನೇರಿ ಮಠ’ವೂ ಶೈವ ಸಿದ್ಧ ಪರಂಪರೆಗೆ ಸೇರಿದಾಗಿದೆ. ಸಹ್ಯಾದ್ರಿಯ ತಪ್ಪಲಿನ ಸೆರಗಿನ ಸಿದ್ಧಗಿರಿ(ಶಿಖರ)ಯ ಮೇಲೆ ಕಾಡಸಿದ್ಧೇಶ್ವರ ಮಹಾಸಂಸ್ಥಾನ ಮಠವಿದೆ. ಶ್ರೀಮಠವೂ ನೂರಾರು ಶಾಖಾ ಮಠಗಳನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮಹಾಸಂಸ್ಥಾನದ ಇಂದಿನ ಜಗದ್ಗುರುಗಳಾದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಕರ್ತತೃತ್ವ ಶಕ್ತಿಯುಳ್ಳವರಾಗಿದ್ದಾರೆ. ಇವರು ಈ ನೆಲದ ಮಣ್ಣನ್ನು, ಸಂಸ್ಕೃತಿಯನ್ನು ಪೂಜಿಸುವ, ಆರಾಧಿಸುವ ಪೂಜ್ಯರಲ್ಲಿ ಇವರು ಓರ್ವರಾಗಿದ್ದಾರೆ. ಇಲ್ಲಿ ಇವರು ದೇಶೀಯ ಬೀಜಗಳನ್ನು ಸಂರಕ್ಷಿಸಿ, ಸಾವಯುವ ಗೊಬ್ಬರದಿಂದ ಕೃಷಿಗೈದಿದ್ದು ಒಂದು ಪವಾಡವೇ ಸರಿ.

ಅಲ್ಲದೇ, ಒಂದು ಎಕರೆ ನೀರಾವರಿಯ ಭೂಮಿಯಲ್ಲಿ ಒಂದು ಕುಟುಂಬ ಸ್ವತಂತ್ರವಾಗಿ, ಸಂತೃಪ್ತ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದೆಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದ ಖಾವಿ ಧೀರರು. ನಿರ್ಮಲ ಗ್ರಾಮದ ಪರಿಕಲ್ಪನೆಯನ್ನು ಇಟ್ಟುಕೊಂಡು ಹತ್ತಾರು ಹಳ್ಳಿಗಳನ್ನು ದತ್ತು ಪಡೆದಿದ್ದಾರೆ. ಅಲ್ಲದೇ, ಗೋ-ರಕ್ಷಣೆಯನ್ನು ಇಲ್ಲಿ ಮಾಡಲಾಗುತ್ತಿದೆ. ಆಕಳ ಹೊಟ್ಟೆಯಲ್ಲಿ “ಅಚ್ಛೇರು ಬಂಗಾರ” ವೆಂಬ ನುಡಿಯನ್ನು ಇಲ್ಲಿ ಸಾಕಾರಗೊಳಿಸಿದ್ದಾರೆ. ಇಲ್ಲಿ ಇಪ್ಪತ್ತೆರಡು ದೇಶೀಯ ತಳಿಗಳನ್ನು ಪೋಷಿಸಿ, ಸಂವರ್ಧಿಸಲಾಗುತ್ತಿದೆ.

ಗ್ರಾಮೀಣರ ಆರೋಗ್ಯಕ್ಕಾಗಿ ಬೃಹತ್ ಆಸ್ಪತ್ರೆಯನ್ನು ನಿರ್ಮಿಸಿದ್ದು ಇವರ ಸಾಮಾಜಿಕ ಕಳಕಳಿ ಅರಿವಾಗುತ್ತದೆ. ಇಂದು ನಾಗಾಲೋಟದಲ್ಲಿ ಓಡುತ್ತಿರುವ ಮಾನವ, ತನ್ನ ಹಳೆಯ ಗ್ರಾಮ ಜೀವನ-ಸಂಸ್ಕೃತಿ ನಾಶವಾಗಬಾರದೆಂಬ ಕಾರಣದಿಂದ ಇಲ್ಲಿ “ಗ್ರಾಮ ಜೀವನ-ಸಂಸ್ಕೃತಿ” ತಲೆ ಎತ್ತಿ ನಿಂತಿದೆ. ಮರಳು ಮತ್ತು ಸಿಮೆಂಟ್ನಿಂದ ಸಹಸ್ರಾರು ಗತಕಾಲದ ದಶ್ಯಗಳನ್ನು ಸೃಷ್ಟಿಸಿದ್ದಾರೆ. ಇದು ಸಾಮಾನ್ಯವಾದ ಕಾರ್ಯವಲ್ಲ. ಅದಕ್ಕಾಗಿ ಹಣ ಸಂಗ್ರಹಿಸುವುದು ಪವಾಡವೇ ಸರಿ. ಅದಕ್ಕಾಗಿ ಶ್ರೀಗಳವರು ಒಂದೊಂದು ಪುತ್ಥಳಿಗೆ ತಗಲುವ ವೆಚ್ಚವನ್ನು ಅವರ ಭಕ್ತಾಧಿಗಳಿಗೆ ವಹಿಸಿದರು. ಕೆಲವೇ ವರುಷಗಳಲ್ಲಿ ಮುಗಿದು 2005 ರಲ್ಲಿ ಲೋಕಾರ್ಪಣೆಗೊಂಡಿತು. ಇದರಿಂದ ಬರುವ ಆದಾಯವನ್ನು ವಿಧಾಯಕ ಕೈಂಕರ್ಯಗಳಿಗೆ ಬಳಸಲಾಗುತ್ತಿದೆ.

ಒಟ್ಟಾರೆ ಇವರು “ಪ್ರಕೃತಿ-ಸಂಸ್ಕೃತಿ”ಯ ಆರಾಧಕರಾಗಿದ್ದಾರೆ. ಗ್ರಾಮೀಣ ಬದುಕನ್ನ ಸಿಮೆಂಟ್ ಕಲಾಕೃತಿಗಳಲ್ಲಿ ರಚಿಸಿ ಇಲ್ಲೊಂದು ಹಳ್ಳಿಯೇ ನಿರ್ಮಾಣ ಮಾಡಿದ್ದಾರೆ. ಒಂದೊಮ್ಮೆಯಾದರೂ ತಾವು ಕೋಲ್ಹಾಪುರ ಮಹಾಲಕ್ಷ್ಮೀಯ ದರುಶನಕ್ಕೆ ಹೋದರೆ ಕನ್ನೇರಿ ಮಠಕ್ಕೆ ಭೇಟಿ ನೀಡಿರಿ.


TAG


Leave a Reply

Your email address will not be published. Required fields are marked *

error: Content is protected !!