ಬೆಳಗಾವಿಯಲ್ಲಿ ಮಹಿಳೆಯ ಬೆತ್ತಲೆ ಮೆರವಣಿಗೆ

273

ಪ್ರಜಾಸ್ತ್ರ ಸುದ್ದಿ

ಬೆಂಗಳೂರು/ಬೆಳಗಾವಿ: ಹುಡುಗ, ಹುಡುಗಿ ಓಡಿ ಹೋದ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಡಬೇಕಾದ ಪೊಲೀಸ್ ಇಲಾಖೆ, ಸರ್ಕಾರ ಏನು ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೂರದ ಉತ್ತರ ಪ್ರದೇಶ, ಬಿಹಾರ, ಮಣಿಪುರದಂತಹ ರಾಜ್ಯದಲ್ಲಿ ಇಂತಹ ಅಮಾನವೀಯ, ನೀಚ ಕೃತ್ಯಗಳು ನಡೆಯುತ್ತಿದ್ದವು. ಕರ್ನಾಟಕ ಶಾಂತಿಯ ನಾಡೆಂದು ಆ ಭಾಗದ ಜನರು ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಆದರೆ, ಈ ನೆಲದಲ್ಲಿಯೂ ಅತ್ಯಂತ ಅಮಾನುಷ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.

ಕಲಬುರಗಿಯಲ್ಲಿ ಹಾಡಹಗಲೇ ವಕೀಲನನ್ನು ಭೀಕರವಾಗಿ ಹತ್ಯೆ ಮಾಡಲಾಯಿತು. ಜಮೀನು ವಿಚಾರ ಸಂಬಂಧ ಸಂಬಂಧಿಕರಿಂದಲೇ ಕೊಲೆ ನಡೆದಿದೆ. ಗುಮ್ಮಟನಗರಿ ವಿಜಯಪುರದಲ್ಲಿಯೂ ಸಹ ಯುವಕನ ಕೊಲೆ ಆಯಿತು. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಾನೂನು ಮೂಲಕ ಬಗೆಹರಿಸಿಕೊಳ್ಳಬಹುದಾದ, ಮಾತುಕತೆ ಮೂಲಕ ಸರಿಯಾಗಬಹುದಾದ ಪ್ರಕರಣಗಳಲ್ಲಿ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದಾರೆ.

ಮಗ ಮಾಡಿದ ತಪ್ಪಿಗೆ ತಾಯಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಹಲ್ಲೆ ಮಾಡುತ್ತಾರೆ ಎಂದರೆ ಅವರೆಷ್ಟು ನೀಚರು ಎನ್ನುವುದು ತಿಳಿಯುತ್ತೆ. ಇದೇ ಬೆಳಗಾವಿಯಲ್ಲಿ ಮಹಿಳೆಯೊಬ್ಬರಿಗೆ ಚಪ್ಪಲಿಯ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ನಡೆದು ಬಹಳ ದಿನವಾಗಿಲ್ಲ. ಇದೆಲ್ಲ ನೋಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪುಂಡ ಪೋಕರಿಗಳ ವಿರುದ್ಧ, ಮರ್ಯಾದೆ ಎಂದು ಮತ್ತೊಬ್ಬರ ಮಾನ ಕಳೆಯುವವರ ವಿರುದ್ಧ ಯಾಕೆ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಘಟನೆಗಳಿಂದ ಈಗಲೇ ಪಾಠ ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಹಾದಿ ಬೀದಿಯಲ್ಲಿ ಹೆಣಗಳು ಬೀಳುತ್ತವೆ.




Leave a Reply

Your email address will not be published. Required fields are marked *

error: Content is protected !!