ಯಾರು ಹಿತವರು ಈ ಮೂವರಲ್ಲಿ?

469

ಪ್ರಜಾಸ್ತ್ರ ಡೆಸ್ಕ್:

ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ರೈತ ಮಹಿಳೆಗೆ, ರಾಸ್ಕಲ್.. ಬಾಯಿ ಮುಚ್ಚು ಎಂದು ಬೈಯುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಸಾರ್ವಜನಿಕವಾಗಿ ಮಹಿಳೆಗೆ ಬಾಯಿಗೆ ಬಂದಂತೆ ನಿಂದಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪನವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಹೀಗೆ ಮಹಿಳೆಯರಿಗೆ, ಮತದಾರ ಪ್ರಭುವಿಗೆ ರಾಜಕಾರಣಿಗಳು ಬೇಕಾಬಿಟ್ಟಿಯಾಗಿ ಬೈಯುವುದು ಹೊಸದಲ್ಲ. ಜೆ.ಸಿ ಮಾಧುಸ್ವಾಮಿ ಮೊದಲಲ್ಲ, ಕೊನೆಯಲ್ಲ. ಯಾಕಂದ್ರೆ, ಈ ನೆಲದ ರಾಜಕಾರಣದ ರೀತಿ ನೀತಿನೇ ಬದಲಾಗಿ ಹೋಗಿದೆ. ಹೀಗಾಗಿ, ಜನಪ್ರತಿನಿಧಿಗಳು ಗೂಂಡಾಗಳಂತೆ ವರ್ತಿಸ್ತಾರೆ. ಇಂಥಾ ಘಟನೆಗಳಿಗಾಗಿ ಬಹಳ ಹಿಂದಕ್ಕೆ ನಾವು ಹೋಗಬೇಕಿಲ್ಲ. ಕಳೆದ ಎಂಪಿ ಚುನಾವಣೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ದಿನಗಳ ಹಿನ್ನೋಟ ನೋಡೋಣ.

ಕಳೆದ ದೋಸ್ತಿ ಸರ್ಕಾರದ ಹೊತ್ತಿನಲ್ಲಿ ಕಬ್ಬು ಬೆಳೆಗಾರರು, ಬೆಳಗಾವಿಯ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ರೈತ ಸಂಘಟನೆಯ ಮಹಿಳೆಯೊಬ್ಬರು, ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆಯಲ್ಲಿ ಮಾತ್ನಾಡಿದ್ದ ಹೆಚ್ಡಿಕೆ, ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮ ಎಂದಿದ್ರು. ಇದು ಬೇರೆ ಸ್ವರೂಪ ಪಡೆದುಕೊಂಡಿತು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು, ಮಗ ಡಾ.ಯತೀಂದ್ರ ಮೊದಲ ಬಾರಿಗೆ ಶಾಸಕರಾಗಿರುವ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯರ್ತರ ಸಭೆ ನಡೆಸಿದ್ರು. ಈ ವೇಳೆ ಮಹಿಳೆಯೊಬ್ಬರು ಸಿದ್ದರಾಮಯ್ಯನವರ ಎದುರು ಟೇಬಲ್ ಕುಟ್ಟಿ ಆಂತರಿಕ ಸಮಸ್ಯೆ ಬಗ್ಗೆ ಮಾತ್ನಾಡಿದ್ರು. ಇದ್ರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯನವರು, ಆಕೆಯನ್ನ ಗದರಿಸಿ ಮೈ ಮೇಲಿನ ವೇಲ್ ಎಳೆದಿದ್ರು. ಇದು ಸಹ ವಿವಾದದ ರೂಪ ಪಡೆಯಿತು.

ಇನ್ನು ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಹೆಚ್.ಡಿ ರೇವಣ್ಣ, ಲೋಕಸಭಾ ಚುನಾವಣೆ ಟೈಂನಲ್ಲಿ ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಲತಾ ಅಂಬರೀಶ ಬಗ್ಗೆ ಸಹ ಕೀಳಾಗಿ ಮಾತ್ನಾಡಿದ್ದು ವಿವಾದವಾಯ್ತು. ಚುನಾವಣೆ ಮುಗಿಯುವ ತನಕ, ಆ ಭಾಗದ ಜೆಡಿಎಸ್ ಶಾಸಕರು ಸುಮಲತಾ ಅವರ ಮೇಲೆ ವಾಗ್ದಾಳಿ ನಡೆಸಿದ್ದು ಜನ ಮರೆತಿಲ್ಲ. ಇದು ಇತ್ತೀಚೆಗೆ ನಡೆದ ಘಟನೆಗಳು. ದೇಶದ ರಾಜಕೀಯ ಇತಿಹಾಸದಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆದಿವೆ. ಸದನದಲ್ಲಿಯೇ ಜಯಲಲಿತಾ ಸೀರೆ ಎಳೆದ ಘಟನೆ ಸಹ ನಮ್ಮ ಕಣ್ಮುಂದೆ ಇದೆ.

ಇದೆಲ್ಲವನ್ನ ನೋಡಿದ್ರೆ, ಈ ರಾಜಕಾರಣಿಗಳು ಬಹುತೇಕ ವಿಚಾರಗಳಲ್ಲಿ ಒಂದೇ ನಾಣ್ಯದ ಎರಡು ಮುಖಗಳು. ಯಾವಾಗ ಹೇಗೆ ಬದಲಾಗಬೇಕು ಅನ್ನೋದು ಗೊತ್ತಿದೆ. ಜನರ ನಾಡಿಮಿಡಿತ ಅರೆತ ಅವರು, ಮೀಡಿಯಾದಲ್ಲಿ ಎರಡ್ಮೂರು ದಿನ ಸುದ್ದಿಯಾಗುವ ತನಕ. ಆಮೇಲೆ ಎಲ್ಲವೂ ಸೈಲೆಂಟ್. ಸದನದಲ್ಲಿ ಈ ರೀತಿ ಮಾತ್ನಾಡಿದ್ರೆ ಹಕ್ಕುಚ್ಯುತಿಯಾಗಿ, ತನಿಖೆಯಾಗ್ಲಿ, ಅವರನ್ನ ಹೊರಗೆ ಹಾಕಿ, ಕಡತದಿಂದ ಆ ಪದವನ್ನ ತೆಗೆದು ಹಾಕಿಯೆಂದು ಹೋರಾಟ ಮಾಡ್ತಾರೆ. ಆಚೆ ಬಂದ್ಮೇಲೆ ಇವರ ಬಾಯಿಗೆಳಲ್ಲವೂ ಬಚ್ಚಲುಮೋರೆಯಾಗುತ್ತವೆ. ಕೊನೆಗೆ ಜನರಲ್ಲಿ ಉಳಿಯುವ ಪ್ರಶ್ನೆ ಯಾರು ಹಿತವರು ಈ ಮೂವರಲ್ಲಿ?




Leave a Reply

Your email address will not be published. Required fields are marked *

error: Content is protected !!