ಯೋಗೇಶಗೌಡ ಕೊಲೆ ಪ್ರಕರಣ: ಮಾಜಿ ಸಚಿವರ ವಿಚಾರಣೆ ಏನಾಯ್ತು?

327

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಬ್ಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.

ಯೋಗೇಶಗೌಡ

ಈ ಕೊಲೆ ರಾಜಕೀಯ ಪ್ರೇರಿತವಾದದ್ದು ಎಂದು ಹೇಳುತ್ತಲೇ ಬಂದಿರುವ ಯೋಗೇಶಗೌಡ ಕುಟುಂಬದವರ ದೂರಿನ ಮೇರೆಗೆ, ಸಿಬಿಐ ಅಧಿಕಾರಿಗಳು ತನಿಖೆಯನ್ನ ಈಗ ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿದ್ದಾರೆ. ಉಪನಗರ ಠಾಣೆಯಲ್ಲಿ ದಿನವೀಡಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಸಾಕ್ಷಿನಾಶ, ಕೊಲೆಯ ಸುಪಾರಿ ನೀಡಿರುವ ಆರೋಪಗಳ ಕುರಿತಂತೆಯೂ ಅಧಿಕಾರಿಗಳು ವಿನಯ ಕುಲಕರ್ಣಿಯವರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

12 ಗಂಟೆಗೂ ಹೆಚ್ಚು ಕಾಲ 2 ತಂಡಗಳಲ್ಲಿ ಸತತ ವಿಚಾರಣೆ ನಡೆಸಿದ ಸಿಬಿಐ ಪೊಲೀಸರು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಸಚಿವರ ಆಪ್ತರಾಗಿದ್ದ ಶ್ರೀ ಪಾಟೀಲ ಹಾಗೂ ನಟರಾಜ ಎಂಬುವವರನ್ನೂ ಸಿಬಿಐ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದೆ.

ಇನ್ನು ಮಾಜಿ ಸಚಿವವರ ಬಂಧನ ವಿಷಯ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ನಾಯಕರು ಉಪನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ ಮೌನ ಪ್ರತಿಭಟನೆ ಕೂಡ ನಡೆಸಿದರು. ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆಯೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜ್ಯ ಸಚಿವ ಜಗದೀಶ ಶೆಟ್ಟರ್, ಶಾಸಕ ಅಮೃತ ದೇಸಾಯಿ ಅವರ ನಿವಾಸಗಳಿಗೆ ಬಿಗಿಪೊಲೀಸ್ ಬಂದೋಬಸ್ತ ಕಲ್ಪಿಸಲಾಗಿದೆ.

ಕೊಲೆ ಪ್ರಕರಣದ ಹಿನ್ನಲೆ?:

2016ರ ಜೂನ್ 15ರಂದು ಧಾರವಾಡ ಸಪ್ತಾಪುರದ ಉದಯ ಜಿಮ್ ನಲ್ಲಿ ಯೋಗೀಶಗೌಡನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ರು. ಇದು ಆಸ್ತಿ ವಿವಾದ ಹಿನ್ನೆಲೆ ನಡೆದ ಕೃತ್ಯವೆಂದು ಪೊಲೀಸರು ಬಸವರಾಜ ಮುತ್ತಗಿ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ರು. ಆದ್ರೆ, ಇದು ರಾಜಕೀಯ ಪ್ರೇರಿತ ಕೊಲೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ಕಾರ 2019ರಲ್ಲಿ ಕೇಸನ್ನ ಸಿಬಿಐಗೆ ವರ್ಗಾಯಿಸಿತ್ತು.

ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇತ್ತು. ಈಗ ನ್ಯಾಯ ಸಿಕ್ಕಿದೆ. ಖುಷಿ ಆಗಿದೆ. ಇದಕ್ಕಾ ನನ್ನ ದೊಡ್ಡ ಮಗ ಗುರುನಾಥ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ತುಂಗಮ್ಮ, ಯೋಗೇಶಗೌಡ ತಾಯಿ

ಸಿಬಿಐ ಅಧಿಕಾರಿಗಳ ತಂಡ ವಿಚಾರಣೆ ನಡೆಸಿ ಬೆಂಗಳೂರು ಮತ್ತು ತಮಿಳುನಾಡು ಮೂಲದ ಅಶ್ವತ್ಥ, ಪುರುಷೋತ್ತಮ ಸೇರಿ ಐವರು ಆರೋಪಿಗಳನ್ನು ಬಂಧಿಸಿತ್ತು. ಇವರು ಬಸವರಾಜ ಮುತ್ತಗಿ ಕಡೆಯಿಂದ ಯೋಗೀಶಗೌಡ ಕೊಲೆಗೆ ಸುಫಾರಿ ಪಡೆದಿರುವ ಆರೋಪವಿದೆ. ಈ ಕೇಸಿನಲ್ಲಿ ಹು-ಧಾ ನಗರದ ನಿವೃತ್ತ ಪೊಲೀಸ್ ಕಮಿಷನರ್ ಪಾಂಡುರಂಗ ಎಚ್. ರಾಣೆಗೆ ಸಿಬಿಐ ನೋಟಿಸ್ ನೀಡಿತ್ತು. ಹೀಗಾಗಿ ರಾಣೆ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ರು. ಇಷ್ಟೆಲ್ಲ ವಿಚಾರಗಳ ನಡುವೆ ಇದೀಗ ಮಾಜಿ ಸಚಿವರ ಬಂಧನ ರಾಜ್ಯ ರಾಜಕೀಯ ಸಂಚಲನಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!