ಸಿಎಂ ಬಸ್ ತಡೆದ ಕಾರ್ಮಿಕರ ಇನ್ ಸೈಡ್ ಸ್ಟೋರಿ

428

ಸಿಎಂ ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸ್ತಿದ್ದಾರೆ. ಹೀಗಾಗಿ ಬಸ್ ಮೂಲಕ ಜನತಾ ದರ್ಶನಕ್ಕೆ ಹೋಗ್ತಿದ್ದ ಟೈಂನಲ್ಲಿ ಅಸ್ಕಿಹಾಳ ಬಳಿ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ರು. ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಬಸ್ ತಡೆದು ಆಕ್ರೋಶ ಹೊರ ಹಾಕಿದ್ರು.

ಕಾರ್ಮಿಕರ ಪ್ರತಿಭಟನೆ, ಬಸ್ ತಡೆದಿರುವುದಕ್ಕೆ ಕೋಪಗೊಂಡ ಸಿಎಂ ಕುಮಾರಸ್ವಾಮಿ ಅವರು ಫುಲ್ ಗರಂ ಆದ್ರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಹಾಗೂ ಎಸ್ಪಿ ವಿರುದ್ಧ ಗುಡುಗಿದ್ರು. ಇಷ್ಟೆಲ್ಲ ನಡೆದ ಘಟನೆ ಹಿಂದಿನ ಸ್ಟೋರಿ ಏನ್ ಗೊತ್ತಾ?

ವಾಪಸ್ ಕೆಲಸಕ್ಕಾಗಿ ಹೋರಾಟ

ರಾಯಚೂರಿನ ಯರಮರಸ್ ಥರ್ಮಲ್ ಪವರ್ ಸ್ಟೇಷನ್ ನ ಕಾರ್ಮಿಕರ ಹೋರಾಟದ ಹಿಂದೆ ಅವರ ಬದುಕಿದೆ. ಅವರ ಮಕ್ಕಳ ಭವಿಷ್ಯ ಅಡಗಿದೆ. ಇವರ ಹೋರಾಟಕ್ಕೆ ಕಾರಣವಾಗಿರೋದು 410 ಕಾರ್ಮಿಕರನ್ನ ಕೆಲಸದಿಂದ ತೆಗೆದು ಹಾಕಿರೋದು ಮತ್ತು ಅವರ ವೇತನ ಬಾಕಿ ಉಳಿಸಿಕೊಂಡಿರೋದು. ಇದಕ್ಕಾಗಿ ಕಳೆದ 23 ದಿನಗಳಿಂದ ನಿರಂತರ ಹೋರಾಟ ಮಾಡ್ತಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಜೂನ್ 3ರಂದು ವೈಟಿಪಿಎಸ್ ಮುಖ್ಯದ್ವಾರದ ಬಳಿ ಪ್ರತಿಭಟನೆ ಶುರುವಾಗಿದೆ. ಜೂನ್ 10ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ರೂ ಸರ್ಕಾರವಾಗ್ಲಿ, ಯಾವುದೇ ಅಧಿಕಾರಿಗಳಾಗ್ಲಿ ಕ್ಯಾರೆ ಅಂದಿಲ್ಲ.

ಕಳೆದ 23 ದಿನಗಳಿಂದ ವಿವಿಧ ರೀತಿ ಪ್ರತಿಭಟನೆಗಳನ್ನ ಮಾಡಲಾಗಿದೆ. ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಬಂಧನವಾಯ್ತು. ವಾಪಸ್ ಬಿಡುಗಡೆಯಾದ್ರು. ಅವರ ದುಡಿದ ಹಣ ಅವರು ಕೇಳಿದ್ರೆ, ಸರ್ಕಾರ ಮಟ್ಟದಲ್ಲಿ ತೀರ್ಮಾನ ಬಾಕಿಯಿದೆ. ಆದಷ್ಟು ಬೇಗ ಬಗೆಹರಿಸುತ್ತೇವೆ ಅನ್ನೋದು ಅಧಿಕಾರಿಗಳ ಉತ್ತರವಂತೆ.

ವೈಟಿಪಿಎಸ್ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ

ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಸುತ್ತಲಿನ ರೈತರು 134 ಎಕರೆ ಜಮೀನು ನೀಡಿದ್ದಾರೆ. ಇದರಲ್ಲಿ ಕೆಲಸ ಮಾಡ್ತಿದ್ದ 410ಜನರನ್ನ ಕೆಲಸದಿಂದ ತೆಗೆದು ಬೇರೆ ರಾಜ್ಯದಿಂದ ಬಂದವರಿಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಅನ್ನೋದು ಕಾರ್ಮಿಕರ ಆರೋಪ. ಕಳೆದ 5 ತಿಂಗಳ ಹಿಂದೆ ಕೆಲಸ ಕಳೆದುಕೊಂಡ ಕಾರ್ಮಿಕರು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಜಿಲ್ಲಾಧಿಕಾರಿಯಾಗ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾಗ್ಲಿ ಇವರ ಸಮಸ್ಯೆಗೆ ಸ್ಪಂದಿಸಿಲ್ಲ. ಹೀಗಾಗಿ ಸಿಎಂ ಬರುವ ವೇಳೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೆಪಿಟಿಸಿಎಲ್ ಅಡಿಯಲ್ಲಿ 8 ವಿದ್ಯುತ್ ಸ್ಥಾವರಗಳು ಬರುತ್ತವೆ. ಅದರಲ್ಲಿ ಐದು ಉಷ್ಣ ವಿದ್ಯುತ್ ಸ್ಥಾವರ, 1 ಅನಿಲ್ ವಿದ್ಯುತ್ ಸ್ಥಾವರ ಹಾಗೂ 2 ಖಾಸಗಿ ವಿದ್ಯುತ್ ಸ್ಥಾವರಗಳಿವೆ. ಆದ್ರೆ, ಇವುಗಳಿಗೆ ಪೂರೈಕೆಯಾಗುವ ಇಂಧನ ಪ್ರಮಾಣ ಕಡಿಮೆಯಾಗ್ತಿದ್ದು,  ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಕಡಿಮೆಯಾಗ್ತಿದೆ. ಎಂಟು ಘಟಕಗಳಿಗೆ ನಿತ್ಯ 30 ಸಾವಿರ ಟನ್ ಕಲ್ಲಿದ್ದಲು ಬೇಕು. ಆದ್ರೆ, ಬಿಲ್ ಪಾವತಿಯಾಗದ ಕಾರಣ ಸರಿಯಾದ ಪ್ರಮಾಣದಲ್ಲಿ ಕಲ್ಲಿದ್ದಲು ಬರ್ತಿಲ್ಲ. 1,600 ಮೆಗಾವ್ಯಾಟ್ ಸಾಮರ್ಥ್ಯದ ಯರಮರಸ್ ವಿದ್ಯುತ್ ಕೇಂದ್ರ ಆಗಾಗ ತನ್ನ ಕಾರ್ಯವನ್ನ ಸ್ಥಗಿತಗೊಳಿಸಿರುತ್ತೆ. ಹೀಗಾಗಿ 802 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡುತ್ತಿದೆ.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿರುವ ಸಿಎಂ

ರಾಜ್ಯದಲ್ಲಿ ಒಟ್ಟಾರೆ 7,193 ಮೆಗಾವ್ಯಾಟ್ ವಿದ್ಯುತ್ ಬೇಕು. ಶಾಖೋತ್ಪನ್ನ, ಪವನ್ ಶಕ್ತಿ, ಜಲಶಕ್ತಿ ಹಾಗೂ ನವೀಕೃತ ಇಂಧನ ಸೇರಿ 4,136 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗ್ತಿದೆ. ಹೀಗಾಗಿ ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕಿನ ಮೇಲೂ ಇದರ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳಬೇಕಿದೆ.


TAG


Leave a Reply

Your email address will not be published. Required fields are marked *

error: Content is protected !!