ಮನುಷ್ಯನ ಸಮಗ್ರ ವಿಕಾಸಕ್ಕೆ ಯೋಗ ಅವಶ್ಯಕ: ಕೇಂದ್ರ ಸಚಿವ ಜೋಶಿ

230

ಪ್ರಜಾಸ್ತ್ರ ಸುದ್ದಿ

ಧಾರವಾಡ: ಮನುಷ್ಯನ ಸಮಗ್ರ ವಿಕಾಸಕ್ಕೆ ಯೋಗ ತನ್ನದೇ ಆದ ಕೊಡುಗೆ ನೀಡಿದೆ. ಹೀಗಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ತುಂಬಾ ಅವಶ್ಯಕ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ, ಯೋಗ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಧಾರವಾಡ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತವಾಗಿ, ಆಯೋಜಿಸಿದ ‘ಆರೋಗ್ಯದಲ್ಲಿ ಯೋಗದ ಮಹತ್ವ’ಎಂಬ ವಿಷಯದ ಒಂದು ವಾರದ ವೆಬಿನಾರ್ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸಲು ಯೋಗ ಬಹಳ ಸಹಾಯಕಾರಿಯಾಗಿದೆ. ಯೋಗ ದಲ್ಲಿ 200ಕ್ಕಿಂತ ಹೆಚ್ಚು ಯೋಗ ಸೂತ್ರಗಳು ಇದ್ದು, ಸಂಶೋಧನೆಯ ಅನ್ವಯ ಪ್ರಾಚೀನ ಯೋಗ ಕ್ರಿಯೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿ ತೆಲಂಗಾಣದ ವಿದ್ಯಾ ಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಸಂಘಟನಾ ಕಾರ್ಯದರ್ಶಿ ಜಿ.ಆರ್ ಜಗದೀಶ್ ಮಾತನಾಡಿ, ಇಂದು ಯೋಗ ಜಗತ್ತಿನ ಒಂದು ಅವಿಭಾಜ್ಯ ಅಂಗವಾಗಿದ್ದು, ಯೋಗದ ಮೂಲಕ ಜಗತ್ತಿಗೆ ಜ್ಞಾನ ತಿಳಿಸುವ ಶಕ್ತಿ ಇದೆ ಎಂದರು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ ಮಾತನಾಡಿ, ಒತ್ತಡ ಆತಂಕದಿಂದ ಹೊರಬರಲು ಯೋಗದ ಮೂಲಕ ಸಾಧ್ಯವಿದ್ದು, ಇಂದು ಜಗತ್ತಿನಾದ್ಯಂತ ಯೋಗವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿಯ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ವೈಜ್ಞಾನಿಕ ವಿಚಾರಗಳನ್ನು ಯೋಗದಲ್ಲಿ ಪ್ರಸ್ತಾಪಿಸಿಲಾಗಿದೆ. ಯೋಗ ತನ್ನದೇ ಆದ ದೃಷ್ಟಿಕೋನ ಹೋಂದಿದ್ದು, ಒಂದು ಜೀವನ ಕ್ರಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವರಾದ ಡಾ.ಕೆ.ಟಿ.ಹನುಮಂತಪ್ಪ, ಮೌಲ್ಯ ಮಾಪನ ಕುಲಸಚಿವರಾದ ಡಾ.ರವೀಂದ್ರ ಕದಂ, ಕಲಾ ನಿಖಾಯದ ಡೀನ್ ಪ್ರೊ ಎಸ್.ಸಿ.ಶೆಟ್ಟರ್, ಎನ್ಎಸ್ಎಸ್ ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ, ನೆಹರು ಯುವ ಕೇಂದ್ರದ ಸಂಯೋಜನಾ ಅಧಿಕಾರಿ ಗೌತಮ ರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!