ಹಾವೇರಿ ಶ್ರೇಷ್ಠ ದಾರ್ಶನಿಕರ ನಾಡು: ಸಿಎಂ ಬೊಮ್ಮಾಯಿ

139

ಪ್ರಜಾಸ್ತ್ರ ಸುದ್ದಿ

ಹಾವೇರಿ: ಏಲಕ್ಕಿ ನಗರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹಾವೇರಿ ಶ್ರೇಷ್ಠ ದಾರ್ಶನಿಕರ ನಾಡಾಗಿದೆ. ಸರ್ವಜ್ಞ, ಕನಕದಾಸರು, ಸಂತ ಶಿಶುನಾಳ ಶರೀಫ, ಪಂಚಾಕ್ಷರಿ ಗವಾಯಿಗಳು, ಕುಮಾರೇಶ್ವರರು, ಗಳಗನಾಥರು, ಜ್ಞಾನಪೀಠ ಪುರಸ್ಕೃತಿ ವಿ.ಕೃ ಗೋಕಾಕ, ಚಂಪಾ, ಪಾಟೀಲ ಪುಟ್ಟಪ್ಪ ಈ ಜಿಲ್ಲೆಯವರು ಎಂದು ಸ್ಮರಿಸಿಕೊಂಡರು. ಇದು ಹಾವೇರಿ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.

ಧರ್ಮದ ಚೌಕಟ್ಟನ್ನು ಮೀರಿ ಆಧ್ಯಾತ್ಮಿಕತೆಯನ್ನು ಬದುಕಿಗೆ ಹತ್ತಿರವಾಗಿ ತಂದು ನಮ್ಮೆಲ್ಲರಿಗೂ ಸ್ಪೂರ್ತಿಯನ್ನು ಕೊಡುತ್ತಿರುವವರು ಸಂತ ಶಿಶುನಾಳ ಶರೀಫರು. ಅವರ ಪ್ರತಿಯೊಂದು ಪದಗಳು ಅರ್ಥಪೂರ್ಣವಾಗಿವೆ.

ಅಮೋಘವರ್ಷ ನೃಪತುಂಗ, ರನ್ನ, ಪಂಪರಿಂದ ಹಿಡಿದು 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಹೊಂದಿರುವ ದೇಶದ ಏಕೈಕ ಭಾಷೆ ನಮ್ಮ ಕನ್ನಡ. ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಸಾಹಿತ್ಯ ಪ್ರಕಾರದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿಲ್ಲ. ಈ ಪ್ರಶಸ್ತಿಯಷ್ಟೇ ಮಹತ್ವದ್ದಾದ ಸರಸ್ವತಿ ಸಮ್ಮಾನ್ ಇಬ್ಬರು ಸಾಧಕರಿಗೆ ಸಂದಿದೆ. ಇದು ಕನ್ನಡ ಸಾಹಿತ್ಯದ ಆತ್ಮಶಕ್ತಿಯನ್ನು ತೋರಿಸುತ್ತದೆ ಎಂದರು.

ಸಮ್ಮೇಳನದ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಗರ ಪ್ರದೇಶದಲ್ಲಿ ಕನ್ನಡ ಮಾತನಾಡಲು ಹಿಂಜರಿಯುತ್ತಿರುವುದು ವಿಷಾದನೀಯ ಎಂದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಉಳಿಸಬೇಕಿದೆ. ಈಗಾಗ್ಲೇ ವಿಧೇಯಕ ಮಂಡಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸನೀಲ್ ಕುಮಾರ್ 86 ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ 49 ಕೃತಿಗಳನ್ನು ಹಾವೇರಿ ಜಿಲ್ಲಾ ಘಟಕದ ವತಿಯಿಂದ 37 ಕೃತಿಗಳನ್ನು ಪ್ರಕಟಿಸಲಾಗಿದೆ.

ಈ ವೇಳೆ ಸಮ್ಮೇಳನಾಧ್ಯಕ್ಷ ಸಾಹಿತಿ ದೊಡ್ಡರಂಗೇಗೌಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.‌ಎಸ್. ವೆಂಕಟೇಶಮೂರ್ತಿ, ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಸಚಿವ ಶಿವರಾಂ ಹೆಬ್ಬಾರ್, ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!