ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದ ಹೋರಾಟ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ವಿಷ್ಣು ಅಭಿಮಾನಿಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸ್ಮಾರಕ ಮೈಸೂರಿನಲ್ಲಾದರೂ, ಅಂತ್ಯಸಂಸ್ಕಾರಗೊಂಡ ಸ್ಥಳದಲ್ಲಿ ಪುಣ್ಯಭೂಮಿ ಆಗಬೇಕು ಅಂತಿದ್ದಾರೆ.
ಅಭಿಮಾನಿಗಳ ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ್ ಬೆಂಬಲ ಘೋಷಿಸಿದ್ದಾರೆ. ಈ ಕುರಿತು ನಟರು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ನಟ ಕಿಚ್ಚ ಸುದೀಪ್ ಬರೆದಿದ್ದಾರೆ.
ಇನ್ನು ಡಾಲಿ ಧನಂಜಯ್ ಟ್ವೀಟ್ ಮಾಡಿ, ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ ಎಂದಿದ್ದಾರೆ.