ಆರೋಪಿಗಳ ಮೆರವಣಿಗೆಗೆ ಇಲ್ಲವೇ ಕಡಿವಾಣ?

154

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ದಿನದಿಂದ ದಿನಕ್ಕೆ ದೇಶದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ನೈತಿಕತೆ ಇಲ್ಲದೆ ಜನರು ಬದುಕುತ್ತಿರುವುದನ್ನು ನೋಡಿದರೆ ಇವರಿಗೆ ಮೂಗುದಾರ ಹಾಕಬೇಕಾದವರೆ ಕೈಕಟ್ಟಿ ಕುಳಿತುಕೊಳ್ಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿ, ನಾನು ಎಲ್ಲೂ ಓಡಿ ಹೋಗಿಲ್ಲ. ಊರಲ್ಲೇ ಇದ್ದೆ ಅನ್ನೋದು ಹಾಸ್ಯಸ್ಪದವಾಗಿದೆ. ಜೊತೆಗೆ ಶಾಸಕರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಕೊಡಲಿ ಏಟು ಕೊಟ್ಟಂತಾಗಿದೆ.

ಇತ್ತೀಚಿನ ದಿನಗಳಲ್ಲಿ ನಾನಾ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬರುವ ರಾಜಕಾರಣಿಗಳು, ರಾಜಕೀಯ ಮುಖಂಡರು, ರೌಡಿಗಳ ಮೆರವಣಿಗೆ ನಡೆಸುತ್ತಿರುವುದು ಸಾಮಾಜದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಗುಜರಾತಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ರಾಜ್ಯದಲ್ಲಿ ಪಿಎಸ್ಐ ಹಗರಣದ ಆರೋಪಿಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯನ ಕೊಲೆ ಪ್ರಕರಣದ ಆರೋಪಿ, ಕಾಂಗ್ರೆಸ್ ಮಾಜಿ ಸಚಿವ ವಿನಯ ಕುಲ್ಕರ್ಣಿಗೆ ಜಾಮೀನು ಸಿಕ್ಕಾಗಲು ಇದೆ ರೀತಿ ಮಾಡಲಾಯಿತು.

ಈಗ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪನವರ ಸರದಿ. ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ಅನ್ನೋ ಸಣ್ಣ ಅಳಕು ಇಲ್ಲದೆ ರಾಜಾರೋಷವಾಗಿ ಮೆರವಣಿಗೆ ಮಾಡಿಸಿಕೊಂಡು ಇವರು ಓಡಾಡುವುದನ್ನು ನೋಡಿದರೆ ಸಮಾಜದಲ್ಲಿ ಯಾವ ಸಂದೇಶ ಸಾರುತ್ತಿದ್ದಾರೆ. ಜನರು ಸಹ ಇಂತವರನ್ನು ಎತ್ತಿ ಮೆರೆಸುವ ಮೂಲಕ ತಾವು ನಿಂತಿರುವ ನೆಲವನ್ನು ತಾವೇ ಅಗೆದುಕೊಂಡಂತೆ ಅನ್ನೋ ತಿಳುವಳಿಕೆ ಇಲ್ಲದೆ ವರ್ತಿಸುತ್ತಿರುವುದು ಸಹ ಅಪಾಯದ ಸೂಚನೆ. ಇಂತಹ ಪ್ರಕರಣಗಳಲ್ಲಿ ಕಾನೂನು ಎನ್ನುವುದಕ್ಕಿಂತ ನೈತಿಕ ಹೊಣೆಗಾರಿಕೆ ಅನ್ನೋದು ಜಾಗೃತವಾಗಿದ್ದಾಗ ಮಾತ್ರ ಮಾದರಿಯಾಗಲು ಸಾಧ್ಯ.




Leave a Reply

Your email address will not be published. Required fields are marked *

error: Content is protected !!