ಅನಧಿಕೃತ ವೃತ್ತ ತೆರವುಗೊಳಿಸದಿದ್ದರೆ ಕಾನೂನು ಹೋರಾಟ: ದಾನಪ್ಪಗೌಡ ಚನಗೊಂಡ

696

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಗೋಲಗೇರಿ ಹಾಗೂ ಡಂಬಳ ಗ್ರಾಮಗಳಲ್ಲಿ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಅನಧಿಕೃತ ವೃತ್ತಗಳನ್ನು ನಿರ್ಮಿಸಲಾಗಿದೆ ಎಂದು ಕಾನೂನು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದಾನಪ್ಪಗೌಡ ಚನಗೊಂಡ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಬಾಹಿರ ಹಾಗೂ ಸುಪ್ರೀಂ ಕೋರ್ಟ್ ಆದೇಶ ಮೀರಿ ಗೋಲಗೇರಿಯಲ್ಲಿ ಸಂಗನಗೌಡ ಪಾಟೀಲ ಹಾಗೂ ಡಂಬಳದಲ್ಲಿ ಶಂಕರಗೌಡ ಪಾಟೀಲ ಅವರ ವೃತ್ತಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಒಂದು ವೇಳೆ ತೆರವುಗೊಳಿಸದೆ ಹೋದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಈಗಾಗ್ಲೇ ಗ್ರಾಮ ಪಂಚಾಯ್ತಿಯಲ್ಲಿ ಠರಾವು ಮಾಡಲಾಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವೃತ್ತ ನಿರ್ಮಾಣದ ಅಧಿಕಾರ ಗ್ರಾಮ ಪಂಚಾಯ್ತಿಗೆ ಇಲ್ಲ. ಅದು ಅಲ್ಲದೆ ಈ ವೃತ್ತಗಳು ಸಾರ್ವಜನಿಕ ಜಾಗದಲ್ಲಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಒಂದು ವೇಳೆ ಕಾನೂನು ಬಾಹಿರವಾಗಿ ಠರಾವು ಆಗಿದ್ದರೆ ಅಂತವರ ವಿರುದ್ಧವೂ ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದರು.

ಈ ವೇಳೆ ಬಸವರಾಜ ಮಾರಲಬಾವಿ, ಮುದಿಗೌಡ ಬಿರಾದಾರ, ಭೀಮನಗೌಡ ಚಿಂಚೋಳ್ಳಿ, ಶಿವಲಿಂಗಯ್ಯ ಹಿರೇಮಠ ಸೇರಿ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!