ಸಿಂದಗಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಹತ್ಯೆ: ಬ್ಯಾಂಕ್ ಮತ್ತು ಸಂಸ್ಥೆ ಹೇಳೋದೇನು?

883

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್ ನ ಎಟಿಎಂ ಸೆಕ್ಯೂರಿಟಿ ಗಾರ್ಡ್ ರಾಹುಲ ಎಂಬಾತನ ಕೊಲೆಯಾಗಿದೆ. ರಾತ್ರಿ ಸುಮಾರು 1.45ಕ್ಕೆ ಘಟನೆ ನಡೆದಿದ್ದು, 3 ಜನರು ಸೇರಿಕೊಂಡು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 3.30ರ ಸುಮಾರಿಗೆ ಡೆಪ್ಯೂಟಿ ಮ್ಯಾನೇಜರ್ ಅವರಿಗೆ ಅಲರ್ಟ್ ಮೆಸೇಜ್ ಬಂದಿದೆ. ಅವರು ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಗೆ ಫೋನ್ ಮಾಡಿ ಅಲರ್ಟ್ ಮೆಸೇಜ್ ಬಂದಿದ್ದು, ಹೋಗಿ ನೋಡು ಅಂದಿದ್ದಾರೆ. ಆತ ಬ್ಯಾಂಕಿಗೆ ಬಂದು ನೋಡಿದಾಗ ರಾಹುಲ ಕೊಲೆಯಾಗಿರುವುದು ತಿಳಿದು ಬಂದಿದೆ.

24 ವರ್ಷದ ರಾಹುಲ ಖೀರು ರಾಠೋಡ ಅನ್ನೋ ಸೆಕ್ಯೂರಿಟಿ ಗಾರ್ಡ್ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದು ತಿಳಿದು ಬಂದಿದೆ. ಎಟಿಎಂ ಮಷಿನ್ ನನ್ನ ಸುತ್ತಿಗೆ ಹಾಗೂ ಹಾರಿಯಿಂದ ಒಡೆದು ನೋಡಲು ಪ್ರಯತ್ನಿಸಿದ್ದು, ಯಾವುದೇ ಹಣ ಕಳ್ಳತನವಾಗಿಲ್ಲ. ಮಷಿನ್ ಒಡೆದಿರುವುದ್ರಿಂದ ಸುಮಾರು 1 ಲಕ್ಷ ರೂಪಾಯಿದಷ್ಟು ನಷ್ಟವಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ರಾಕೇಶ ಕಿಶೋರ ಪುರೋಹಿತ ಅವರು ನೀಡಿದ ದೂರಿನ ಮೂಲಕ ತಿಳಿದು ಬಂದಿದೆ.

ರಾಹುಲ ಯಾರು? ಕೆಲಸಕ್ಕೆ ಸೇರಿದ್ದು ಯಾವಾಗ?

ವಿಜಯಪುರ ಜಿಲ್ಲೆಯ ಮದಭಾವಿ ತಾಂಡ ನಿವಾಸಿಯಾದ 24 ವರ್ಷದ ರಾಹುಲ ಖೀರು ರಾಠೋಡ ಎಂಬಾತನು ಸುಮಾರು 6 ತಿಂಗಳ ಹಿಂದೆ ಐಸಿಐಸಿಐ ಬ್ಯಾಂಕ್ ನ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದನಂತೆ. ಮುಂಬೈ ಮೂಲದ ಸೆಕ್ಯೂರಿಟಿ ಪ್ರೈವೇಟ್ ಲಿಮಿಟೆಡ್ ಅನ್ನೋ ಸಂಸ್ಥೆಯ ಮೂಲಕ ಕೆಲಸಕ್ಕೆ ಸೇರಿದ್ದ.

ಪರಿಹಾರದ ವಿಚಾರದಲ್ಲಿ ಬ್ಯಾಂಕ್-ಸೆಕ್ಯೂರಿಟಿ ಸಂಸ್ಥೆ ಹೇಳಿದ್ದೇನು?

ಕೊಲೆಯಾದ ರಾಹುಲ ಮುಂಬೈ ಮೂಲದ ಸೆಕ್ಯೂರಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ 6 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ನಾಗರೆಡ್ಡಿ ಎನ್ನುವರನ್ನ ಮಾತ್ನಾಡಿಸಿದಾಗ, ಅವರಿಗೆ ಪೂರ್ತಿ ಸಂಬಳ ನೀಡುತ್ತೇವೆ. ಪಿಎಫ್, ಇಎಸ್ಐ ವ್ಯವಸ್ಥೆ ನಮ್ಮಲ್ಲಿದೆ. ಈ ಸೌಲಭ್ಯ ರಾಹುಲ ಹೊಂದಿದ್ರೆ ಅದ್ರಿಂದ ಬರುವ ಹಣ ನೀಡಬಹುದು. ಆದ್ರೆ, ಕೈಯಿಂದ ಹಣ ಹಾಕಿ ಕೊಡಿ ಎಂದರೆ ಎಲ್ಲಿಂದ ಕೊಡಬೇಕು ಎಂದು ಹೇಳ್ತಾರೆ.

ಇನ್ನು ಬ್ಯಾಂಕ್ ಮ್ಯಾನೇಜರ್ ರಾಕೇಶ ಪುರೋಹಿತ ಅವರನ್ನ ವಿಚಾರಿಸಿದ್ರೆ, ಕೊಲೆಯಾದ ರಾಹುಲ ನಮ್ಮ ಬ್ಯಾಂಕ್ ಸಿಬ್ಬಂದಿ ಅಲ್ಲ. ಹೀಗಾಗಿ ಅವನು ಥರ್ಡ್ ಪಾರ್ಟಿ ಆಗಿರುತ್ತಾನೆ. ಪರಿಹಾರದ ವಿಚಾರ ಸೆಕ್ಯೂರಿಟಿ ಏಜೆನ್ಸಿ ಅವರಿಗೆ ಸಂಬಂಧಿಸಿದೆ. ಇದರ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಹೀಗೆ ಕೆಲಸಕ್ಕೆ ತೆಗೆದುಕೊಂಡ ಬ್ಯಾಂಕ್, ಕೆಲಸ ಕೊಡಿಸಿದ ಸಂಸ್ಥೆಯವರು ಹೇಳುವ ಮಾತುಗಳು. ಈ ಸಂಬಂಧ ಮುಂದೇನಾಗುತ್ತೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!