ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಮೋದಿ: ಸಿಎಂ ಸಿದ್ದರಾಮಯ್ಯ

75

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖರ್ದ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲ ಪ್ರಧಾನಿ ಮೋದಿ ಅವರು ಒಂದಿಷ್ಟು ಸುಳ್ಳು ಹೇಳಿ ಹೋಗ್ತಾರೆ. ಹೆಣ್ಣುಮಕ್ಕಳ ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಮೋದಿಯಂತಹವರಿಂದ ಪ್ರಧಾನಿ ಹುದ್ದೆಗೆ ಗೌರವ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಣಿ ಚನ್ನಮ್ಮ, ಶಿವಾಜಿ ಮಹಾರಾಜರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಾರೆ. ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಆಚರಣೆಗೆ ಆದೇಶಿಸಿದ್ದು ನಾವು. ಬೊಮ್ಮಾಯಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಲಿಲ್ಲ. ಸುಳ್ಳಿಗೂ ಒಂದು ಮಿತಿ ಬೇಡ್ವಾ? ಹತ್ತು ವರ್ಷ ಆಳಿದ ಪ್ರಧಾನಿಯೊಬ್ಬರು ಚುನಾವಣೆ ಗೆಲ್ಲಲು ಈ ರೀತಿ ಸುಳ್ಳಿನ ಮೊರೆ ಹೋಗಿರುವುದು ನಾಚಿಕೆಗೇಡು ಎಂದು ತಿರುಗೇಟು ನೀಡಿದರು.

1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ನಾನು ಹಣಕಾಸು ಸಚಿವನಾಗಿದ್ದೆ. ಆಗ ಮುಸ್ಲೀಂರಿಗೆ ಶೇ.4ರಷ್ಟು ಮೀಸಲಾತಿ ತರಲಾಗಿದೆ. ಬೊಮ್ಮಾಯಿ ಸಿಎಂ ಆಗಿದ್ದಾಗಿ ಅದನ್ನು ಕಿತ್ತು ಲಿಂಗಾಯತರು, ಒಕ್ಕಲಿಗರಿಗೆ ಹಂಚಿದರು. ಮುಸ್ಲೀಂ ನಾಯಕರು ಸುಪ್ರೀಂ ಕೋರ್ಟ್ ಗೆ ಹೋದರು. ಸುಪ್ರೀಂ ಕೋರ್ಟ್ ನಲ್ಲಿ ಛೀಮಾರಿ ಹಾಕಿದ್ಮೇಲೆ ಬೊಮ್ಮಾಯಿಯವರು ಯಥಾವತ್ತಾಗಿ ಮುಂದುವರೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. 10 ವರ್ಷದ ನಿಮ್ಮ ಸಾಧನೆ ಬಿಟ್ಟು ತಾಳಿ, ಬಳೆ, ಮುಸ್ಲಾಂನ ಧರ್ಮದ ವಿಚಾರ ಪ್ರಸ್ತಾಪ ಮಾಡ್ತೀರಲ್ಲ ನಿಮಗೆ ನಾಚೀಕೆಯಾಗಬೇಕು ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ, ಸಚಿವ ಭರೈತಿ ಸುರೇಶ್, ಶಾಸಕರಾದ ಲಕ್ಷ್ಮಣ ಸವದಿ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!