ಮತಾಂತರ ನಿಷೇಧ ಕಾಯ್ದೆ: ಅದರಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ

578

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆ ಮಂಗಳವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದ್ದಾರೆ.

ಈ ಕಾಯ್ದೆಗೆ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಎಂದು ಹೆಸರಿಸಲಾಗಿದೆ. ಹಾಗಾದರೆ, ಈ ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳೇನು ಅನ್ನೋದು ಇಲ್ಲಿದೆ..

ನಗದು ರೂಪದಲ್ಲಾಗಲೀ ಅಥವಾ ವಸ್ತುವಿನ ರೂಪದಲ್ಲಾಗಲೀ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ಭೌತಿಕ ಪ್ರಯೋಜನ ಪಡೆಯುವುದು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ವಿರುದ್ಧವಾಗಿದೆ.

ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ, ಮದುವೆಯಾಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿ, ದೈವಿಕ ಅಸಂತೋಷ ಅಥವಾ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಿಸುವುದು ಮತಾಂತರದ ಭಾಗವಾಗಿರುತ್ತದೆ.

ಬಲವಂತ, ವಂಚನೆ, ತಪ್ಪು ನಿರೂಪಣೆ, ಆಮಿಷ, ಒತ್ತಾಯ, ಒತ್ತಡ, ಅನುಚಿತ ಪ್ರಭಾವ ಅಥವ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮಾಡುವುದು ಮತಾಂತರ.

ಕಾನೂನು ಬಾಹಿರ ಮತಾಂತರ ಅಥವಾ ಏಕಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆಯನ್ನು ಅಸಿಂಧು ಎಂದು ಘೋಷಿಸುವುದು.

ಮತಾಂತರ ಆಗ ಬಯಸುವ 60 ದಿನಗಳ ಮೊದಲು ಫಾರ್ಮ್ 1ನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡುವುದು.

ಮತಾಂತರ ಮಾಡುವ ವ್ಯಕ್ತಿಯೂ 1 ತಿಂಗಳು ಮೊದಲೇ ಫಾರ್ಮ್ 2ನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.

ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲೆರೇಷನ್ ಫಾರ್ಮ್ ಅಥವ ಘೋಷಣಾ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು.

ಡಿಕ್ಲೆರೇಷನ್ ಮಾಡಿದ 21 ದಿನಗಳ ನಂತರ ಮತಾಂತರ ಹೊಂದಿದ ವ್ಯಕ್ತಿ ಖುದ್ದಿ ಹಾಜರಾಗಿ ಗುರುತು ನೀಡಬೇಕು.

ಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.

ಮ್ಯಾಜಿಸ್ಟ್ರೇಟ್​‌ರಿಂದ ಮಾಹಿತಿ ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮವಹಿಸುವುದು.

ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

ಏನೆಲ್ಲಾ ಅಪರಾಧಗಳಾಗುತ್ತವೆ

1) ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳ ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ.

2) ದೂರು ನೀಡಬಹುದಾದ ಅರ್ಹ ವ್ಯಕ್ತಿಗಳು: ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ಮತಾಂತರದ ದೂರು ನೀಡಬಹುದು.

ಶಿಕ್ಷೆ ಪ್ರಮಾಣವೇನು?

ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.

ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನು ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ರೂ. ದಂಡ ವಸೂಲಿಗೂ ಅವಕಾಶವಿದೆ.

ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.

ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.




Leave a Reply

Your email address will not be published. Required fields are marked *

error: Content is protected !!