ಎಫ್ಎಂ ರೇನ್ ಬೋ ಮುಚ್ಚುವ ಹುನ್ನಾರ: ಮಾಜಿ ಸಚಿವ ಸುರೇಶ್ ಕುಮಾರ್

238

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದಕ್ಷಿಣ ವಲಯದ ಆಕಾಶವಾಣಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ರಮಾಕಾಂತ್, ಎಫ್ಎಂ ರೇನ್ ಬೋ 101.3 ಮುಚ್ಚುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಅಧಿಕಾರಿಯು ಭಾಷಾಂಧತೆ ಮತ್ತು ಸುದ್ದಿಮೂಲದ ಜವಾಬ್ದಾರಿಯನ್ನೇ ಮಾಡಿಕೊಂಡು ಬಂದಿದ್ದು, ಮನೋರಂಜನೆಯ ಬಗ್ಗೆ ಉಪೇಕ್ಷೆ ಹೊಂದಿದ್ದಾರೆ. ಇದು ದುಷ್ಟ ಆಲೋಚನೆಯ ಮೂಲವಾಗಿದೆ ಎಂದಿರುವ ಅವರು, ಅಧಿಕಾರಿಗೆ 9 ಪ್ರಶ್ನೆಗಳನ್ನು ಕೇಳಿದ್ದಾರೆ.

1.ನಿಮ್ಮ ಸೇವೆಯುದ್ದಕ್ಕೂ ವಾರ್ತಾ ವಿಭಾಗಗಳಲ್ಲಿ ಕೆಲಸ‌ವಷ್ಟೇ ಮಾಡಿ ಅನುಭವ ಇರುವ ತಮಗೆ ಮನೋರಂಜನೆಯ, ಸಂಸ್ಕೃತಿ-ಸೊಗಡಿನ ಮೌಲ್ಯ ತಿಳಿದಿದೆಯೇ?

2. ಬೆಂಗಳೂರು ರೇನ್ ಬೋ ವಾಹಿನಿ, ಸ್ಥಳೀಯ ಪ್ರತಿಭೆಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಿಮ್ಮ ಪರ್ಯಾಯ ಆಲೋಚನೆ ಮಾರಕವಾಗಿದೆ‌ ಎಂದು ನಿಮಗೆ ಗೊತ್ತಿದೆಯೇ?

3. ಬೇರೆ ಬೇರೆ ಸ್ಥಳೀಯ ವಾಹಿನಿಗಳ, ಸ್ಥಳೀಯ ಆಲೋಚನೆಗಳುಳ್ಳ ಕಾರ್ಯಕ್ರಮ ರೇನ್ ಬೋ ಚಾನೆಲ್ ಮೂಲಕವೂ ಮರುಪ್ರಸಾರ ಮಾಡುವ ಆಲೋಚನೆಯಲ್ಲಿರುವ ತರ್ಕವಾದರೂ ಏನು? ಉದಾಹರಣೆಗೆ ಇನ್ನಾವುದೋ ತರಂಗಾಂತರದ ವನಿತಾ ವಿಹಾರ ಇಲ್ಲಿ ಮಧ್ಯಾಹ್ನ 12-1ಕ್ಕೆ ಏಕೆ ಪ್ರಸಾರ ಬೇಕು? ಅದರ ಅರ್ಥ ಬೆಂಗಳೂರಿನಲ್ಲಿ ಸಾಧಕ, ಮಹಿಳೆಯರ ಕೊರತೆಯೆಂದೇ?

4. ರಾತ್ರಿ 9-11ರವರೆಗೆ ರೇನ್ ಬೋ ವಾಹಿನಿಯಲ್ಲಿ ಬಿತ್ತರಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ಕನ್ನಡ ಹಳೆಯ ಚಿತ್ರಗೀತೆಗಳನ್ನು‌ ತೆಗೆದು ಪ್ರೈಮರಿ ಚಾನೆಲ್ ನ ರಸಹೀನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವಾದರೂ ಏನು? ಹೇಗಾದರೂ ಜನ ಈ ವಾಹಿನಿಯಿಂದ ವಿಮುಖರಾಗಲಿ ಎಂಬ ದುರುದ್ದೇಶವೇ?

5. ಪ್ರೈಮರಿ ಚಾನೆಲ್ ನಲ್ಲಿನ ಹಿಂದಿ -ಅನ್ಯಭಾಷಾ ಸುದ್ದಿ ಕಾರ್ಯಕ್ರಮಗಳನ್ನು ಸಹ ರೇನ್ ಬೋ ಮೂಲಕ ಪ್ರಸಾರ ಮಾಡುವ ಹುನ್ನಾರ ನೀವು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ರೀತಿಯೇ?

6. ಕನ್ನಡ ಸುದ್ದಿಗಳನ್ನು ಹೊರತುಪಡಿಸಿ, ಹಿಂದಿ ಮತ್ತಿತರೆ ಭಾಷೆಗಳ ಸುದ್ದಿಗಳ ಬಿತ್ತರದ ಅವಶ್ಯಕತೆ ಏನಿದೆ?

7. ಹಿಂದಿ, ತಮಿಳು, ತೆಲುಗು ಭಾಷೆಗಳ ಸುದ್ದಿಗಳನ್ನು‌ ಕೂಡಾ‌ ಪ್ರಸಾರ‌ ಮಾಡಿ ಬಹುತ್ವವನ್ನು ಮೆರೆಯಲು ಉದ್ದೇಶಿಸಿರುವ ತಮ್ಮ ದುರಾಲೋಚನೆಯನ್ನು ನಾವೆಲ್ಲರೂ ಗೌರವಿಸಬೇಕೇ?

8. ಮೀಡಿಯಂ ವೇವ್ ತರಂಗಾಂತರದ ಕಾರ್ಯಕ್ರಮಗಳನ್ನು ರೇನ್ ಬೋ ಮೂಲಕವೂ ಏಕಕಾಲಕ್ಕೆ ಪ್ರಸಾರ ಮಾಡುವುದರ ಹಿಂದೆ ಯಾವ ಘನ ಉದ್ದೇಶವಿದೆ?

9. ರೇನ್ ಬೋ ಮನೋರಂಜನಾ ಕಾರ್ಯಕ್ರಮಗಳ ಬಹುಮುಖ್ಯ ಗುಣವಾಗಿದ್ದ ಕೇಳುಗರ ಪ್ರತಿಕ್ರಿಯಾತ್ಮಕ ನಿರೂಪಣೆಗಳನ್ನು ಸ್ಥಗಿತಗೊಳಿಸಿ ಮುದ್ರಿತ ಕಾರ್ಯಕ್ರಮಗಳ ಪ್ರಸಾರಕ್ಕೆ ಒತ್ತುಕೊಡುವುದು ಯಾವ ಪುರುಷಾರ್ಥಕ್ಕೆ?

ನಿಮ್ಮ ಈ ನಿರ್ಧಾರಗಳಿಂದ ಹಿಂದೆ ಸರಿಯದೆ ಹೋದರೆ ನಿಮ್ಮ ವಿರುದ್ಧ ಗೋ ಬ್ಯಾಕ್ ರಮಾಕಾಂತ್ ಅನ್ನೋ ಚಳವಳಿ ನಡೆಸಬೇಕಾಗುತ್ತೆ ಅನ್ನೋ ಎಚ್ಚರಿಕೆಯನ್ನು ಶಾಸಕ ಸುರೇಶ್ ಕುಮಾರ್ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!