ಸಂಜೆ ಭರ್ಜರಿ ಮಳೆ: ಪರೀಕ್ಷೆಗೆ ಹೋಗಲು ಪರದಾಡಿದ ವಿಜಯಪುರ ವಿದ್ಯಾರ್ಥಿ

288

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಭಾನುವಾರ ಸಂಜೆ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದೆ. ಹೀಗಾಗಿ ಅನ್ನದಾತನ ಮುಖದಲ್ಲಿ ಖುಷಿ ಮೂಡಿದೆ. ಆದ್ರೆ, ಇತ್ತ ಅನೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಅದರಲ್ಲಿ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಜನರು ಪರದಾಡಿದ್ದಾರೆ.

ನಿನ್ನೆ ಸಂಜೆ ವರುಣನ ಆರ್ಭಟಕ್ಕೆ ಗ್ರಾಮದ ಎಲ್ಲೆಡೆ ನೀರು ತುಂಬಿಕೊಂಡಿದೆ. ಇದ್ರಿಂದಾಗಿ, ಎಸ್ಎಸ್ಎಲ್ ಸಿ ವಿದ್ಯಾರ್ಥಿ ಇಂದು ಬೆಳಗ್ಗೆ ಪರೀಕ್ಷೆ ಬರೆಯಲು ಪರದಾಟ ನಡೆಸಿದ ಘಟನೆ ನಡೆದಿದೆ. ಗ್ರಾಮದ ಹಳ್ಳದ ಹತ್ತಿರದ ಮನೆಯೊಂದರ ವಿದ್ಯಾರ್ಥಿ ಸಾಕಷ್ಟು ಕಷ್ಟಪಟ್ಟು ಹಳ್ಳದಾಟಿಕೊಂಡು ಪರೀಕ್ಷೆಗೆ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ನಾಲತವಾಡ ಗ್ರಾಮದ ಸ್ಥಿತಿ

ಇನ್ನು ತಾಳಿಕೋಟೆ ತಾಲೂಕಿನಲ್ಲಿಯೂ ಭಾರೀ ಮಳೆಯಾಗಿದೆ. ಇದ್ರಿಂದಾಗಿ ಹಡಗಿನಾಳ ಗ್ರಾಮದಲ್ಲಿನ ಜಮೀನುಗಳಿಗೆ ನೀರು ನುಗ್ಗಿವೆ. ಇದರ ಪರಿಣಾಮ ಮುಂಗಾರಿನ ಆರಂಭದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಜಲಾವೃತಗೊಂಡಿವೆ.

ಇದೆ ರೀತಿ ಸಿಂದಗಿ, ದೇವರಹಿಪ್ಪರಗಿ ಭಾಗದಲ್ಲಿ ಮಳೆರಾಯ ಕಾಣಿಸಿಕೊಂಡಿದ್ದಾನೆ. ಹೀಗಾಗಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಒಂದ್ಕಡೆ ಖುಷಿ, ಮತ್ತೊಂದು ಕಡೆ ಜನರ ಪರದಾಟ. ಅದೇನೆ ಇರ್ಲಿ, ಮಳೆಯಿಂದ ರೈತರ ಅನುಕೂಲವಾಗಿದೆ.




Leave a Reply

Your email address will not be published. Required fields are marked *

error: Content is protected !!