ಸಿಂದಗಿ ತೋಟಗಾರಿಕೆ ಅಧಿಕಾರಿ ವಿರುದ್ಧ ಮನಗೂಳಿ ಗರಂ

1439

ಸಿಂದಗಿ: ತಮ್ಮ ಮಾತಿಗೂ ಕ್ಯಾರೆ ಅನ್ನುತ್ತಿಲ್ಲವೆಂದು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಗಿ ಹಿರೇಕುರಬರ ವಿರುದ್ಧ ಶಾಸಕ ಎಂ.ಸಿ ಮನಗೂಳಿ ವಾಗ್ದಾಳಿ ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ, ತಾಲೂಕಿನ ರೈತರ ಬೆಳೆಗಳು ಹಾಳಾಗಿದ್ದು, ಈ ಸಂಬಂಧ ಇದುವರೆಗೂ ಯಾವುದೇ ವರದಿ ನೀಡಿಲ್ಲ. ಕಳೆದ ಎರಡು ದಿನಗಳಿಂದ ಫೋನ್ ಮಾಡಿದ್ರೆ ಫೋನಿಗೂ ಸಿಗುತ್ತಿಲ್ಲ. ಹೀಗಾಗಿ ಇಂದು ಆಫೀಸ್ ಗೆ ಬಂದಿದ್ದೇನೆ. ಇಲ್ಲಿಯೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರ್ನಾಲ್ಕು ದಿನಗಳ ಹಿಂದೆ ಭರ್ಜರಿಯಾಗಿ ಸುರಿದ ಮಳೆಯಿಂದಾಗಿ ಸಾಸಾಬಾಳ, ಗೋಲಗೇರಿ, ಡಂಬಳ, ಸಾತಿಹಾಳ, ಯಂಕಂಚಿ ಸೇರಿದಂತೆ ಏಳೆಂಟು ಗ್ರಾಮಗಳಲ್ಲಿನ ರೈತರು ಬೆಳೆದ ನಿಂಬೆ, ಕಬ್ಬು, ಮೆಕ್ಕೆಜೋಳ, ಟೊಮ್ಯಾಟೋ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಹಾಳಾಗಿವೆ. ಅಂದಾಜು 700 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾಳಾಗಿದ್ದು, ನಾನು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಗಿ ಹಿರೇಕುರಬರ ಸೇರಿ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಆದ್ರೆ, ಪರಿಹಾರ ಕ್ರಮದ ಕುರಿತು ಚರ್ಚಿಸಲು ಅಧಿಕಾರಿ ಕೈಗೆ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾ ನಿರ್ದೇಶಕರ ಗಮನಕ್ಕೆ ತರಲಾಗುತ್ತಿದೆ ಎಂದಿದ್ದಾರೆ.

ತೋಟಗಾರಿಕೆ ಇಲಾಖೆಯಲ್ಲಿ ರೈತರ ಸಮಸ್ಯೆ ಕೇಳಿದ ಶಾಸಕರು

ಇನ್ನು ಇದೇ ವೇಳೆ ಸಾಸಾಬಳ, ಗೋಲಗೇರಿ, ಡಂಬಳ ಭಾಗದ ರೈತರಾದ ದ್ಯಾಮಣ್ಣ, ಶಿವಣ್ಣ ಕುದರಿ, ಸಿದ್ದು ಗಣಪುರ, ಶಂಕರಯ್ಯ ಮಠಪತಿ ಸೇರಿದಂತೆ ಸುಮಾರು 20 ಜನರು ಬೆಳೆ ಹಾನಿ ಪರಿಹಾರಕ್ಕೆ ದಾಖಲೆಗಳ ಫೈಲ್ ತೆಗೆದುಕೊಂಡು ಬಂದ್ರೆ ತೆಗೆದುಕೊಳ್ಳುವವರು ಯಾರೊಬ್ಬರೂ ಇಲ್ಲ. ಇರೋ ಒಂದಿಬ್ಬರು ಸಿಬ್ಬಂದಿ ಸಹ ಸೀಕೃತಿ ಕೊಡುವುದಿಲ್ಲವೆಂದು ನೇರವಾಗಿ ಹೇಳ್ತಿದ್ದಾರಂತೆ. ನಾವು ಕೊಟ್ಟ ಫೈಲ್ ನ್ನ ಸಂಜೆ ಸುಡಲಾಗ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಅಧಿಕಾರಿ ಲೋಕಲ್ ಇದಾನ. ಯಾರ್ ಏನ್ ಮಾಡ್ತಾರಾ ತಗೋ ಅಂದ್ಕೊಂಡು, ಇಲ್ಲಿಗೆ ಬರೋ ರೈತರಿಗೆ ಹೆದರಿಸಿಕೊಂಡು ಹೊಂಟಾನ. ಇಂತವರಿಂದ ರೈತರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗ್ತಿಲ್ಲ. ನಾನು ಮಾಡೋ ಪ್ರಯತ್ನ ಇಂತವರಿಂದ ಹಾಳ ಆಗಕತ್ತಾವ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲಂದ್ರ, ರೈತರನ್ನ ತಂದು ಕುಂದ್ರಸ್ತೀನಿ.

ಎಂ.ಸಿ ಮನಗೂಳಿ, ಶಾಸಕರು

ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಕಚೇರಿಗೆ ಬಂದ ಶಾಸಕರು 1 ಗಂಟೆಗೂ ಹೆಚ್ಚು ಕಾಲ ತೋಟಗಾರಿಕೆ ಕಚೇರಿಯಲ್ಲಿ ಕಾಯುತ್ತಾ ಕುಳಿತರೂ ಅಧಿಕಾರಿಗಳು ಬಂದಿಲ್ಲ. ಇದು ಹೀಗೆ ಮುಂದುವರೆದ್ರೆ ಹೇಗೆ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.




Leave a Reply

Your email address will not be published. Required fields are marked *

error: Content is protected !!