ಜೀವನ ಪೂರ್ತಿಗಾಗುವಷ್ಟು ಪ್ರೀತಿ, ಸ್ಪೂರ್ತಿ ಕೊಟ್ಟ ಸಿದ್ಧಲಿಂಗಯ್ಯ ಸರ್..

289

ಹಿರಿಯ ಕವಿ ಡಾ.ಸಿದ್ಧಲಿಂಗಯ್ಯನವರ ಜೊತೆಗಿನ 10 ವರ್ಷದ ಒಡನಾಟದ ಕುರಿತು ಸ್ನೇಹ ಬುಕ್ ಹೌಸ್ ಪ್ರಕಾಶಕ ಪರಶಿವಪ್ಪ ಕೆ.ಬಿ ಅವರು ಹಂಚಿಕೊಂಡ ನೆನಪುಗಳು..

ಅದು 2010 ಸಮಯ, ನಮ್ಮ ಸ್ನೇಹ ಬುಕ್ ಹೌಸ್ ನ 2ನೇ ವರ್ಷದ ವಾರ್ಷಿಕೋತ್ಸವ. ಶ್ರೀನಗರ ಪುಸ್ತಕೋತ್ಸವ ಮತ್ತು ಪತ್ರಕರ್ತೆ ಚೇತನ ತೀರ್ಥಹಳ್ಳಿ ಅವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದೇವು. ಸಂಜೆ 5ಗಂಟೆಗೆ ಸಮಾರಂಭ ಇತ್ತು. ಸಮಯ ಮೀರ್ತಾ ಇತ್ತು. ಎಲ್ಲಾ ಅತಿಥಿಗಳು ಬಂದಿದ್ದರು. ಆದರೆ ಅಧ್ಯಕ್ಷತೆ ವಹಿಸಬೇಕಾಗಿದ್ದ ನನ್ನ ಮೆಚ್ಚಿನ ಪ್ರಸಿದ್ಧ ಸಾಹಿತಿಯೊಬ್ಬರ ಬರುವಿಕೆಗಾಗಿ ಆಚೆ ಕಾಯ್ತಾ ಇದ್ವಿ. ಸಮಯ ಬೇರೆ ಆಗಿದೆ ಅವರಿಗೆ ಕರೆ ಮಾಡೋಣ ಎಂದು ಮಳಿಗೆ ಒಳಗಡೆ ಕ್ಯಾಶ್ ಕೌಂಟರ್ ಹತ್ತಿರ ಬಂದರೆ ಅದಾಗಲೇ 10-12 ಪುಸ್ತಕ ಪರಿಚಯಿಸಿ ಹಣ ಪಾವತಿಸಿ ತಮ್ಮ ಕಾರಿನಲ್ಲಿ ಅದನ್ನು ಇಡುವಂತೆ ತಮ್ಮ ಡ್ರೈವರ್ ಗೆ ಸೂಚಿಸುತ್ತಿದ್ದರು. ಈ ದೃಶ್ಯ ನೋಡಿ ನಾನು ನಿಜಕ್ಕೂ ಅವಕ್ಕಾಗಿದ್ದೆ. ದಯವಿಟ್ಟು ಹಣ ಬೇಡ ಸರ್ ನೀವು ನಮ್ಮ ಅತಿಥಿ ಇವತ್ತು ಅಂತೇಳಿ ವಾಪಸ್ಸು ಕೊಡಲಿಕ್ಕೆ ಹೋದ್ರು ಸಹ ನಿರಾಕರಿಸಿ ನಾನು 4:30 ಕ್ಕೆ ಬಂದೆ ಒಂದಷ್ಟು ಪುಸ್ತಕಗಳನ್ನು ನೋಡಬಹುದು ಅನ್ನೋ ಕಾತುರದಿಂದ, ನನಗೆ ತುಂಬಾ ಸಂತೃಪ್ತಿ ಆಯ್ತು. ಸರಸ್ವತಿ ಮಂದಿರವನ್ನೇ ನಿರ್ಮಿಸಿದ್ದೀರ ಒಳ್ಳೊಳ್ಳೆಯ ಪುಸ್ತಕ ಸಂಗ್ರಹ ಇಟ್ಟಿದ್ದಿರಾ ನಿಮಗೆ ಒಳಿತಾಗಲಿ. ಎಷ್ಟೇ ಕಷ್ಟ ಬಂದ್ರು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮನ್ನು ಪುಸ್ತಕಗಳು ಯಾವತ್ತೂ ಕೈಬಿಡೋದಿಲ್ಲ ಅಂತ ಮನಸಾರೆ ಹಾರೈಸಿ ತಮಗೆ ಇಷ್ಟವಾದ ಬಿಸಿ ಬಿಸಿ ಚಹಾ ಸೇವಿಸಿ ಕಾರ್ಯಕ್ರಮಕ್ಕೆ ಜೊತೆಯಾಗಿ ಅಧ್ಯಕ್ಷತೆ ವಹಿಸಿ ಯಶಸ್ವಿಯಾಗಿಸಿಕೊಟ್ಟವರು ನಾಡಿನ ಜನಪ್ರಿಯ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯನವರು. 

ಅಂದು ಕಾರ್ಯಕ್ರಮದಲ್ಲಿ ವೀಕ್ಷಕರಾಗಿ ಆಗಮಿಸಿ ಪ್ರೇಕ್ಷಕರ ಸಾಲಿನಲ್ಲಿ ಕೂತಿದ್ದ ಕನ್ನಡ ಪ್ರಭದ ಹಿರಿಯ ಪತ್ರಕರ್ತರಾದ ಸತ್ಯ ಅವರನ್ನು ಗಮನಿಸಿ ಅವರನ್ನು ಎಲ್ಲರಿಗೂ ಪರಿಚಯಿಸಿ ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದರು. ಆ ದಿನ ಹತ್ತು ರಾತ್ರಿ ಹತ್ತು ಗಂಟೆ ಆಗಿತ್ತು ಕಾರ್ಯಕ್ರಮ ಮುಗಿಸಿ ಹೊರಟಾಗ, ಮರುದಿನ 4-5 ಪತ್ರಿಕೆಗಳು ನಮ್ಮ ಪುಸ್ತಕೋತ್ಸವದ ಬಗ್ಗೆ ಮತ್ತು ಪುಸ್ತಕ ಸಂಸ್ಕೃತಿಯ ಬಗ್ಗೆ ಸಿದ್ದಲಿಂಗಯ್ಯ ಸರ್ ಹೇಳಿದ ವಿಚಾರಗಳನ್ನು ವರದಿ ಮಾಡಿದ್ದವು. ಇದು ನನಗೊಂದು ದೊಡ್ಡ ಶಕ್ತಿ ಮತ್ತು ಸ್ಪೂರ್ತಿಯಾಗಿತ್ತು. ಅಂದಿನಿಂದ ಅವರ ಪ್ರೋತ್ಸಾಹ ಬೆಂಬಲ ನಿರಂತರವಾಗಿ ಇತ್ತು.

ಒಮ್ಮೆ ಫ್ರೀಡಮ್ ಪಾರ್ಕ್ ನಲ್ಲಿ ಇವೆಂಟ್ ಸಂಸ್ಥೆಯವರೊಬ್ಬರು ಬೃಹತ್ ಪುಸ್ತಕ ಮೇಳ ನಡೆಸಬೇಕು ಎಂದು ನಿರ್ಧರಿಸಿ ನಿಮ್ಮ ಸಂಪೂರ್ಣ ಬೆಂಬಲ ಬೇಕು ಸರ್. ನೀವಿದಿರಾ ಅಂದರೆ ಎಲ್ಲಾ ಪ್ರಕಾಶನ ಸಂಸ್ಥೆಯವರು ಮಳಿಗೆ ತೆರಿತಾರೆ ಯಶಸ್ವಿಯಾಗುತ್ತದೆ ಅಂತ ನಂಬಿಕೆಯಿಟ್ಟಾಗ ನನಗೆ ಆಸರೆಯಾಗಿ ಬಂದು ರಾಜ್ಯ ಮಟ್ಟದ ಬೃಹತ್ ಪುಸ್ತಕ ಮೇಳವನ್ನು ಉದ್ಘಾಟಿಸಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಕಾರಣಕರ್ತರಾಗಿದ್ದರು. ಹೀಗೆ ನೂರಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದಾರೆ. ಯಾವುದೇ ಹೊಸ ಲೇಖಕರ ಪುಸ್ತಕ ಬಿಡುಗಡೆ ಇದೆ ಸರ್ ನೀವು ಬಂದು ಅವರಿಗೆ ಹಾರೈಸಬೇಕು ವಿನಂತಿಸಿದಾಗ ಆರೋಗ್ಯವನ್ನು ಲೆಕ್ಕಿಸದೆ ಬರ್ತಾ ಇದ್ರು. ಯಾವುದೇ ಕಾರ್ಯಕ್ರಮಕ್ಕೆ ಅವರು ಬರ್ತಾರೆ ಅಂದರೆ ಅವರಿಗೋಸ್ಕರ ಅವರ ಹಲವಾರು ಅಭಿಮಾನಿಗಳು, ವಿದ್ಯಾರ್ಥಿಗಳು, ಯುವ ಲೇಖಕರು ಹಾಜರಿರ್ತಾ ಇದ್ರು. ಎಷ್ಟೊಂದು ಸಮಾರಂಭಗಳಲ್ಲಿ ಇವರು ಅಧ್ಯಕ್ಷತೆ ವಹಿಸಿದ್ದಾಗ ಸಭೆ ತುಂಬಾ ಗಂಭೀರವಾಗಿದ್ದಾಗ ಇಡೀ ಸಮಾರಂಭವನ್ನು ತಮ್ಮ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದರು.

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪಂಪ ಪ್ರಶಸ್ತಿ, ಬಿಎಂಟಿಸಿಯ ಅತ್ಯುನ್ನತ ಪ್ರಶಸ್ತಿಯಾದ ನೃಪತುಂಗ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ ನ ಸದಸ್ಯರಾಗಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದರೂ ಕೂಡ ಅಹಂಕಾರ ದರ್ಪಗಳನ್ನ ಸ್ವಾರ್ಥವನ್ನು ಮೈಗೂಡಿಸಿಕೊಳ್ಳಲಿಲ್ಲ. ತುಂಬಾ ಸರಳತೆ ಸಜ್ಜನಿಕೆಯನ್ನ ಕೊನೆಯವರೆಗೂ ಕಾಪಾಡಿಕೊಂಡಿದ್ದರು. ಯಾರೇ ಒಬ್ಬ ಹೊಸ ಲೇಖಕ ಅಥವಾ ಕವಿ ಸರ್ ನಾನೊಂದು ಕೃತಿ ಬರೆದಿದ್ದೇನೆ ನಿಮ್ಮ ಮುನ್ನುಡಿ ಬೇಕು, ಲೋಕಾರ್ಪಣೆ ಮಾಡಬೇಕು ಎಂದು ತಮ್ಮಲ್ಲಿಗೆ ಬಂದಾಗಲೆಲ್ಲಾ ಅವರನ್ನೆಲ್ಲ ತಿದಗದಿ ತೀಡಿ ಇವತ್ತು ಸಾವಿರಾರು ಲೇಖಕರಿಗೆ ಸ್ಪೂರ್ತಿಯಾಗಿದ್ದಾರೆ. ಮಾರ್ಗದರ್ಶಕರಾಗಿದ್ದಾರೆ.

ಇಂತಹ ಒಬ್ಬ ಶ್ರೇಷ್ಠ ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯ ಅವರ ಆತ್ಮೀಯತೆ ಪ್ರೀತಿಗೆ ಪಾತ್ರನಾಗಿದ್ದು ಯಾವುದೋ ಜನ್ಮದ ಪುಣ್ಯವೆಂದೇ ನಾನು ಬಾವಿಸಿದ್ದೇನೆ. ಯಾವುದೇ ಒಬ್ಬ ಪ್ರಸಿದ್ಧ ಸಾಹಿತಿಗಳು ಪರಿಚಯ ಆದರೂ ಪ್ರಕಾಶಕನಾಗಿ ನಮ್ಮ ಸಂಸ್ಥೆಗೆ ಒಂದು ಪುಸ್ತಕ ಕೊಡಿ ಎಂದು ಲೋಕಾರೂಢಿಯಾಗಿ ಕೇಳುವ ನಾನು ಇವರ ಹತ್ತಿರ ಪುಸ್ತಕ ಕೊಡಿ ಸರ್ ನಿಮ್ಮದು ಪ್ರಕಟಿಸಬೇಕು ಅಂತ ಕೇಳಲೇ ಇಲ್ಲ ಅದೊಂದು ನೋವು ಸದಾ ಇರುತ್ತದೆ. ಬಹಶಃ ಕೇಳಿದ್ರೆ ಅವರು ಇಲ್ಲ ಅಂತ ಹೇಳ್ತಾ ಇರಲಿಲ್ಲ. ಆದರೆ ಒಂದು ಆಸೆ ಇತ್ತು ಯಾವುದಾದರೂ ಮಹತ್ವದ ಯೋಜನೆಯನ್ನು ಇವರ ಸಂಪಾದಕತ್ವದಲ್ಲಿ ಮಾಡಬೇಕೆಂದು, ಅದನ್ನು ನಿಧಾನವಾಗಿ ಹೇಳಬೇಕು ಅಂದುಕೊಂಡಿದ್ದೆ. ಇಷ್ಟು ಬೇಗ ನಮ್ಮಿಂದ ದೈಹಿಕವಾಗಿ ದೂರ ಆಗ್ತಾರೆ ಅನ್ನುವ ಒಂದು ಸಣ್ಣ ಸುಳಿವು ಸಹ ಇರಲಿಲ್ಲ. ನಿಜಕ್ಕೂ ಇವರಿಲ್ಲ ಅಂತ ಕಲ್ಪಿಸಿಕೊಂಡರೆ ಅನಾಥ ಭಾವವಾಗುತ್ತದೆ. ಸಿದ್ದಲಿಂಗಯ್ಯನವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಸಹ ಅವರ ಸಂಘಟನೆ ಹೋರಾಟ ಸಾಹಿತ್ಯ ಕೃತಿಗಳ ಮೂಲಕ ಸದಾ ಜಾಗೃತರಾಗಿರುತ್ತಾರೆ ಜೀವಂತವಾಗಿರುತ್ತಾರೆ. ಅದಕ್ಕೆ ನಾನು ಸಂಜೆ ಸಪ್ನದ ದೊಡ್ಡೇಗೌಡರ ಹತ್ತಿರ ಮಾತನಾಡ್ತಾ ಇರಬೇಕಾದರೆ ಅಂದುಕೊಂಡ್ವಿ ಅವರು “ಸಾವಿರದ ಸಿದ್ದಲಿಂಗಯ್ಯ” ಅಂತ, ಈ ಹೆಸರಿನಲ್ಲಿ ಒಂದು ಮಹತ್ವಾಕಾಂಕ್ಷೆಯ ಯೋಜನೆಗೆ ಸಂಕಲ್ಪ ಮಾಡಿಕೊಂಡಿದ್ದೇವೆ. ಒಡನಾಟ ಪ್ರೀತಿ ಬಾಂಧವ್ಯ ಹನ್ನೊಂದು ವರ್ಷವಾದ್ರು ಸಹ ಇಡೀ ನನ್ನ ಜೀವನ ಪೂರ್ತಿಗೆ ಆಗುವಷ್ಟು ಸ್ಪೂರ್ತಿ ಆತ್ಮ ಸ್ಥೈರ್ಯದ ಬುತ್ತಿಯನ್ನು ಕೊಟ್ಟಿದ್ದೀರ ಸರ್. ಯಾವುದೇ ದೊಡ್ಡ ಸಮಾರಂಭವಿದ್ರೂ ಸಹ ನಾನು ನಿಮ್ಮ ಮಾತನ್ನು ಕೇಳಬೇಕು ಅಂತ ಯಾವುದೋ ಮೂಲೇಲಿ ಕೂತಿದ್ರು ನಿಮ್ಮ ಕಣ್ಣಿಗೆ ಬಿದ್ದ ತಕ್ಷಣ ಬಾಯ್ತುಂಬ ನನ್ನ ಹೆಸರನ್ನು ಕರೆದು ಇಡೀ ಸಮಾರಂಭಕ್ಕೆ ಪರಿಚಯ ಮಾಡಿಕೊಡ್ತಾ ಇದ್ದ ಚಿತ್ರ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ನಮ್ಮ ಮನೆಯ ಹಿರಿಯ ಬಂಧುವನ್ನು ಕಳೆದುಕೊಂಡ ಹಾಗಿದೆ ನನ್ನ ಮನಸ್ಥಿತಿ. ನಿಮಗೆ ಗೌರವ ಪೂರ್ಣ ಶ್ರದ್ಧಾಂಜಲಿ




Leave a Reply

Your email address will not be published. Required fields are marked *

error: Content is protected !!