ಬಂಡಾಯ ಬಯಲಾಗದಿರಲಿ…

591

ಯುಕೆ(ಲಂಡನ್)ನಲ್ಲಿ ಶುಶ್ರೂಷಕನಾಗಿರುವ ಸಾಗರೋತ್ತರ ಕನ್ನಡಿಗರ ಸಂಘದ ಸಂಸ್ಥಾಪಕ ಬಸವ ಪಾಟೀಲ ಅವರು ಬಂಡಾಯ ಕವಿ ಡಾ.ಸಿದ್ಧಲಿಂಗಯ್ಯನವರ ಕುರಿತ ಬರಹವಿದು..

ಡಾ.ಸಿದ್ಧಲಿಂಗಯ್ಯನವರು ಲಿಂಗೈಕ್ಯರಾದರು, ಬಯಲಾದರೂ ಅನ್ನುವ ಸುದ್ದಿ, ಭಾವುಕನಾಗಿಸಿತು, “ಭೀಮ ಪಡೆಯ” ಸ್ನೇಹಿತರು, ಈ ಸುದ್ದಿಯನ್ನು ಹಂಚಿಕೊಂಡರು, ನೋಡಿ ಹಾಗೆ ಸುಮ್ಮನಾದೆ. ಹಾಗೆ ಇನ್ನೊಬ್ಬ ಸ್ನೇಹಿತರು “ನಿಜವಾಗಿನಾ? ಅಂತ ಕೇಳಿದಾಗ ಮನಸ್ಸು ಅವರಿಲ್ಲ ಅನ್ನುವ ಸುದ್ದಿಯನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಇದು ಮನುಷ್ಯ ತನ್ನವರು ಇಲ್ಲಾ ಅಂತ ತಿಳಿದಾಗ ದುಃಖ ವ್ಯಕ್ತ ಪಡಿಸುವ ಸಹಜ ಭಾವ.

ಡಾ ಸಿದ್ಧಲಿಂಗಯ್ಯನವರು, ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ. ಕನ್ನಡ ನಾಡಿನ ಅನೇಕ ಸಾಹಿತಿಗಳು ಸಾಹಿತ್ಯದ ಅನೇಕ ಆಯಾಮಗಳನ್ನ, ತಮ್ಮ ಇಷ್ಟದ ಅನುಸಾರವಾಗಿ ಆಯ್ದುಕೊಂಡು ಅದರಲ್ಲಿ ಸ್ವಂತಿಕೆಯನ್ನ, ತಾವು ನಂಬಿದ ವಿಚಾರಗಳನ್ನ ಮುಕ್ತವಾಗಿ, ಅವರ ಭಾವ ಲಹರಿಯನ್ನ ಹರಿಬಿಟ್ಟಿದ್ದಾರೆ. ಅದು ವೈಯಕ್ತಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ಮತ್ತು ಕೆಲವೊಮ್ಮೆ “ಶಾಶ್ತ್ರೀಕರಣಗೊಳಿಸಿದ್ದು” ಮೇಲ್ನೋಟಕ್ಕೆ ಕಂಡು ಬರುತ್ತೆ.

ಆದರೆ, ಡಾ.ಸಿದ್ಧಲಿಂಗಯ್ಯನವರ ಸಾಹಿತ್ಯ ಅನುಭಾವದ ಸಾಹಿತ್ಯ, “ಬಂಡಾಯ” ಅವರ ಸಾಹಿತ್ಯದ ಆತ್ಮ.  “ಅನುಭಾವದ” ಸಾಹಿತ್ಯ ಕನ್ನಡಕ್ಕೆ ಹೊಸತೇನಲ್ಲ. 12ನೇಯ ಶತಮಾನದ ಶರಣರು, ಭಾಷೆಯ ವ್ಯಾಪ್ತಿಯನ್ನ ವಿಸ್ತಾರಗೊಳಿಸಿದ್ದರು. ಅಲ್ಲಿ ಭಾಷೆ ಮತ್ತು ಜ್ಞಾನ ಕೆಲವರ ಸ್ವತ್ತಾಗಿರಲಿಲ್ಲ. ಅದು ದಾಸೋಹವಾಗಿತ್ತು! ಸಮಾನತೆ ಸಾರುವ ಮಾಧ್ಯಮ ಆಗಿದ್ದು “ಕನ್ನಡ”! ಶರಣರು, ತಮ್ಮ ಅನುಭಾವವನ್ನ “ವಚನ”ವಾಗಿಸಿ ಸಮಾಜಕ್ಕೆ ಸಮಾನತೆಯ ಜ್ಞಾನ ನೀಡಿದರು. ಮೇಲು ಕೀಳು ಎಂಬ ಭಾವ ಅಳಿಸಿದರು. ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ ಅನ್ನುವ ವಿಚಾರತಾಳಿದರು. ವಚನ ಸಾಹಿತ್ಯದಲ್ಲಿ, ಸಾಮಾಜಿಕ, ಧಾರ್ಮಿಕ, ವಿಜ್ಞಾನ ಮತ್ತು ಸಮಾಜಕಾರಣ  ನಿಲುವಗಳಲ್ಲಿ ಅನಿಸಿಕೆ, ಅಭಿಪ್ರಾಯ, ವಿಮರ್ಶೆ, ಅನುಭಾವ ಎಲ್ಲ ಮಿಳಿತಗೊಂಡಿದ್ದವು “ಅಲ್ಲಿಯೇ ಬಂಡಾಯ”ದ ಕಹಳೆ ಮೊಳಗಿತ್ತು.

21ನೇಯ ಶತಮಾನದಲ್ಲಿ (70ರ ದಶಕದಲ್ಲಿ) ಉದಯಸಿದ “ಬಂಡಾಯ ಸಾಹಿತ್ಯ” 80ರ ದಶಕದಲ್ಲಿ ಜನಿಸಿದ ನನ್ನಂತವರಿಗೆ ಹತ್ತಿರವಾಗಿದ್ದು ಹೇಗೆ? ಅದು ಸಾಮಾಜಿಕ ಅಸಮಾನತೆ ಮತ್ತು ಜಾತಿಯ ವ್ಯವಸ್ಥೆ “ರಕ್ತ ರಕ್ತದಲ್ಲಿ” ಹರಿಯುತ್ತಿದೆ ಅಂತ ನಂಬಿದ ಕಾಲದಲ್ಲಿ, ಬಹುಜನರನ್ನ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿಯುವವಂತೆ ಮಾಡಿದ ಅಘೋಷಿತ ವ್ಯವಸ್ಥೆಯು ಹೂಂಕರಿಸುತ್ತಿರುವಾಗ, ದಲಿತರ (ಸ್ನೇಹಿತರ) ಮನಿಗೆ  ಊಟಕ್ಕ  ಹೋದರ “ಮೈಲಿಗೆ” ಆಗತಾದ ಅನ್ನುವ “ಜಾತಿಯ” ವಿಷ ಬಿತ್ತಿದ ಸಮಾಜ ಇರುವಾಗ ಸಮಾನತೆಗೆ ಹಾತೊರಿಯುವ ಮನಗಳಲ್ಲಿ, ಪ್ರಶ್ನಿಸುವ ಮನೋಭಾವದ ಕಿಚ್ಚು ಹಚ್ಚಿದವರು ಕವಿ ಡಾ.ಸಿದ್ಧಲಿಂಗಯ್ಯನವರು. ಅವರ ಬಹು ಚರ್ಚಿತ ಕವನ  ಕನ್ನಡ ನಾಡಿನ ದಮನಿತರರಲ್ಲಿ ಕ್ರಾಂತಿಯ ಭಾವ ಕೆರಳಿಸಿದ ಕವನ “ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ“ ಅನ್ನುವ ಪ್ರಶ್ನೋತ್ತರದ ಭಾವ ಪ್ರತಿ ಮನ ಮುಟ್ಟಿ, ಅವರಲ್ಲಿ ವಿಮರ್ಶೆಯ ಭಾವ ಮೂಡಿಸಿದರು. ವಾಸ್ತವ ಸಮಾಜಕ್ಕೆ ಕನ್ನಡಿ ಹಿಡಿದರು. ಈ ಕ್ರಾಂತಿ ಗೀತೆ ನಾವು ಸಮ-ಸಮಾಜ ಕಾಣುವವರೆಗೂ ನಿತ್ಯ ಹಾಡಲೇಬೇಕು. ಪ್ರತಿ ದಿನ ನಿಮ್ಮ ಮುಖ ಕನ್ನಡಿಯಲ್ಲಿ ಕಾಣುವ ಹಾಗೆ, ಸಮಾಜ ಈ ಕವನವನ್ನ ಕನ್ನಡಿಯಾಗಿಸಿ, ತನ್ನ ರೂಪ ವಿರೂಪವನ್ನ ತಾನೇ ಕಾಣಿಸಕೊಳ್ಳಬೇಕು. 

ಬಂಡಾಯ, ಸಂಪ್ರದಾಯವಾದಿಗಳ ನಂಬಿಕೆಯ ಬುನಾದಿಯನ್ನ ಅಭದ್ರಗೊಳಿಸುವ ದೊಡ್ಡ ಅಸ್ತ್ರ ಅದಕ್ಕೆ ಬಂಡಾಯ ಸಾಹಿತಿಗಳು “ಕಾವ್ಯ ಖಡ್ಗವಾಗಲಿ” ಅನ್ನುವ ಘೋಷ ವಾಕ್ಯ ಬಳಕೆಯಲ್ಲಿ ತಂದರು. ಹಾಗೆಯೇ ಆಗಿದ್ದು. ಡಾ.ಸಿದ್ಧಲಿಂಗಯ್ಯನವರ ಸಾಹಿತ್ಯ ಇವತ್ತು ಅನೇಕ ಸಹ ಮನಸ್ಕರು, ಅವರ ಈ ಕವನವನ್ನ;

ಇಕ್ರಲಾ ವದೀರ್ಲಾ

ಈ ನನ್ ಮಕ್ಕಳ ಚರ್ಮ ಎಬ್ರಲಾ

ದೇವ್ರು ಒಬ್ನೇ ಅಂತಾರೆ

ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ

ಎಲ್ಲಾರು ದೇವ್ರ ಮಕ್ಳು ಅಂತಾರೆ

ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ

ಲೇಖಕ ಬಸವ ಪಾಟೀಲ

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ಅವರನ್ನ ನೆನೆದರು. ಅವರ ಸಾಹಿತ್ಯ ಸಾಮಾಜಿಕ ಅಸಮಾನತೆ ಅಲ್ಲಗಳಿಯೋದರೊಂದಿಗೆ ಶಾಸ್ತ್ರೀಕರಣಗೊಂಡ ಕನ್ನಡಕ್ಕೆ  ಜಾನಪದೀಯ ಲಾಲಿತ್ಯ, ಸತ್ವ ಮತ್ತು ನೆಲದ ತತ್ವ ತುಂಬಿ ತಮ್ಮ ಸ್ವಂತಿಕೆಯನ್ನ  ಮೆರೆದರು. ಹೀಗೆ ಒಬ್ಬ ಕವಿ ನಮ್ಮ ಅಂತರಾಳದಲ್ಲಿ ಇಳಿದರೆ ನಮ್ಮ ಅಂತರಂಗದಲ್ಲಿ ಬಂಡಾಯ ಮೂಡುವುದು ಉತ್ಪ್ರೇಕ್ಷೆಯಲ್ಲ. ಹೌದು ಬಂಡಾಯ, ಸ್ಥಾಪಿತ ಸಂಸ್ಥೆಗಳ ವಿಮರ್ಶೆಯ ಜೊತೆಗೆ ನಮ್ಮ ಅಂತರಂಗದಲ್ಲಿ ಬಂಡಾಯ ಬೆಳೆಯಬೇಕು. ಆಗಲೇ ನಮ್ಮೊಳಗಿನ ಶ್ರೇಷ್ಠತೆಯ ವಿಷಮತೆ ಕರಗಿ, ನಡೆ ನುಡಿ ಒಂದಾಗುವದು. ಹಾಗಾಗಿ, ನೀವು ಬಯಲಾಗಿದ್ದಿರಿ ನಿಮ್ಮ “ಕಾವ್ಯ (ಖಡ್ಗ)” ನಮಗಿತ್ತು, ನಮ್ಮ ಹೋರಾಟ “ನನ್ನ  ಜನಗಳ “ ಸಲುವಾಗಿ ಎಂದು,

“ಹಸಿವಿನಿಂದ ಸತ್ತೋರು

ಸೈಜುಗಲ್ಲು ಹೊತ್ತೋರು

ಒದೆಸಿಕೊಂಡು ಒರಗಿದೋರು

ನನ್ನ ಜನಗಳು”

ಬಂಡಾಯ ಬಯಾಲಾಗದಿರಲಿ ಎಂದು ಆಶಿಸುತ್ತಾ ….

ಕೊಂಡಗುಳಿಯಾಂವ ಬಸವ




Leave a Reply

Your email address will not be published. Required fields are marked *

error: Content is protected !!