ಮನಗೂಳಿ ಮುತ್ಯಾ ಮತ್ತು ಶಾಸಕರ ಭವನ ಎದುರಿನ ಕಟ್ಟಿ…

809

ಲಂಡನ್ ನಲ್ಲಿ ನೆಲೆಸಿರುವ ಬಿಜಾಪುರ (ವಿಜಯಪುರ) ಜಿಲ್ಲೆಯ ಬಸವ ಪಾಟೀಲ ಅವರು ಮಾಜಿ ಸಚಿವರು, ಹಾಲಿ ಶಾಸಕ ಎಂ.ಸಿ ಮನಗೂಳಿ ಅವರ ಕುರಿತು ಪಕ್ಕಾ ಬಿಜಾಪುರ ಆಡು ಭಾಷೆಯಲ್ಲಿ ‘ಪ್ರಜಾಸ್ತ್ರ’ಕ್ಕೆ ಬರೆದ ವಿಶೇಷ ಲೇಖನ..

ಇದು ನಡದಿದ್ದು, 2000 ನೇ ಇಸ್ವಿಯಲ್ಲಿ, ನಾನು ಮೊದಲ ವರ್ಷ ಇಂಜನಿಯರಿಂಗ್ ಒದತಾ ಇದ್ಯಾ. ಆವಾಗ ರಾಜಕುಮಾರ ಅಪಹರಣ  ಆಗಿತ್ತು. ನಾನು ಶಾಸಕರ ಭವನ-2 ಎದುರಿನ ಗಿಡದ ಕಟ್ಟಿಗಿ ಕುಂತಿದ್ಯಾ (ಶರಣಪ್ಪ ಸುಣಗಾರ ಅವರ 524 ಕೊಠಡಿಯಲ್ಲಿ ನನ್ನ ವಸ್ತಿ ಅವಾಗ) ಅವಾಗ ಮೊಬೈಲ ಇರಲಿಲ್ಲ. ಹಂಗೆ ಕಟ್ಟಿಗಿ ಕುಂತಾಗ ಒಬ್ಬರು ನಮ್ಮ ಕೊರವಾರದವರು ಬಂದು ಗೌಡ್ರ ಶರಣಪ್ಪ ಅಣ್ಣಗ ಹೇಳಿ ನಮ್ಮ ಕೆಲಸ ಮಾಡಸರಿ ಅಂದರು. ಆಯಿತರಿ ಮಧ್ಯಾಹ್ನ ಮಾತಾಡೂಣರಿ ಅಂದ್ಯಾ. ಅವರು ಹಂಗ ಹಿಂಗ ಮಾತಾಡ್ತಾ, ನಾವು ಮನಗೂಳಿ ಸಾಹೇಬರ ಮನಷ್ಯಾರಿ ಅವರು ಸಿಕ್ಕರ, ಕೆಲಸ ತಡಕ್ ಇರಲಾರದೆ ಆಗುತ್ತಾರಿ ಅಂದರು. ಅದಕ್ಕ ಸಿಟ್ಟಿಗೇರಿ ಮತ್ತ ಅವರಿಗೆ ಕೇಳರಿ ಶರಣಪ್ಪ ಅಣ್ಣಾಗ ಹೇಳಂತಿರಿ ಅಂದ್ಯಾ! ಹೆ ಹಂಗಲ್ಲ ರಿ ಗೌಡ್ರ ಅಂತ ಬಾಯಿ ಸವ್ಯಾರಡಿದರು. ಅಟ್ಟ ಅನೊಟಗೆ ಮನಗೂಳಿ ಮುತ್ಯಾ ಎಡಗೈಯಾಗ ಧೋತ್ರ ನಿಲಗಿ ಹಿಡದು, ಗಡಬಡಲೆ ನಡಕೋತ ಶಾಸಕರ ಭವನಕ್ಕ ದಾಪಗಾಲ ಹಾಕಲಕ್ಕತ್ತಿದರು. (ಯಾಕಂದರ ಅವತ್ತ ಪಿ ಜಿ ಆರ್ ಸಿಂಧ್ಯಾ ಪತ್ರಿಕಾ ಪ್ರಕಟನೆ ನಡಸವರು ಇದ್ದರು) ಹಂಗೆ ನನ್ನ ನೋಡಿ ಹತ್ತರಕ್ಕ ಬಂದೆ ಬಿಟ್ಟರು. ನಾನು ಹಿರ್ಯಾರು ಅಂತ ಎದ್ದು ನಿಂತ ಕೈ ಮುಗದೆ. ನಮ್ಮ ಅಪ್ಪ ಅವರಿಗಿ ಮಾಮ ಅಂತ ಕರಿತಿದ್ದರು. ಇನ್ನೊಬ್ಬ ಕಾಕಾ ಅವರ ಪಕ್ಷದಾಗ ಗುರತಿಸಿಕೊಂಡಿದ್ದರು. ನಾ ಕಾಂಗ್ರೆಸ್! ಹಂಗ ಬಾಜು ಇದ್ದವರು ಇವರು ನನ್ನ ಪರಿಚಯ ಮಾಡುಸುತ್ತಾ ಇವರು ಕೊಂಡಗೂಳಿ ಗೌಡ್ರ ರಿ ಮಲ್ಲೇಶಪ್ಪ ಗೌಡ್ರ ಅಣ್ಣನ ಮಗ ಅಂದರು. ಅದಕ್ಕ ಮುತ್ಯಾ ಯಾರ ಅಣ್ಣಪ್ಪಗೌಡ್ರ ಮಗಾನ ಅಂದರು. ಅದಕ್ಕ ಹೂ ರಿ ಮುತ್ಯಾ ಅನ್ನನ ತಮ್ಮ ಗ್ರಾಮ ಸೇವಕ ವೃತ್ತಿ ವೃತ್ತಾಂತ ಹೇಳಿದರು. ಹಂಗೆ ನಮ್ಮ ಅಪ್ಪನ ಅವರ ಒಡನಾಟ ಹೇಳಿದರು. (ನಮ್ಮ ತಂದೆ ಕೂಡಾ ಪಂಚಾಯಿತಿ ಕಾರಕೂನ ವೃತ್ತಿ ಯಿಂದ ಕಾರ್ಯದರ್ಶಿ ಅದಾವರು ಅದು ಅವರಿಗಿ ಗೊತ್ತಿತ್ತು).

ನಾನು ಸುಮ್ಮ ಬಿಡಲಿಲ್ಲ, ಮುತ್ಯಾರ ನನ್ನ ಜೊತಿ ಇದ್ದವರ ಕಡಿ ಕೈ ಮಾಡಿ, ಇವರು ನಿಮ್ಮ ಬೆಂಬಲಿಗರ ಅಂತ ಮುಂಜಾನಿ ಹಿಡದು ನಿಮ್ಮ ದಾರಿ ಕಾಯಲಕ್ಕತ್ತಾರಿ ಅಂದ್ಯಾ. ಅಟ್ಟ ಅನ್ನುದೆ ತಡ, ಅವರ ಫೈಲ್ ತಗೊಂಡು ಎನ ಹೇಳರಿ ನಿಮ್ಮ ಕೆಲಸ ಅಂದರು. ಅವರು ವಿಸ್ತಾರವಾಗಿ ಹೇಳಿದ ಮ್ಯಾಲ ತಮ್ಮ ಪಿಎ ಅವರಿಗಿ ಇದನ್ನ ಮಾಡರಿ ಕೆಲಸ ಅಂತ ಹೇಳಿ, ಕೈ ಮುಗಿದು ಮುಂದ ನಡದರು.

ನಾ ಮತ್ತ ಅಲ್ಲೆ ಗಿಡದ ಕಟ್ಟಿಗಿ ಕುಂತ ಹಸು ಆಗಾನ ಮ್ಯಾಗ 524 ಖೊಲಿಗಿ ಬಂದವಿ ಶರಣಪ್ಪ ಅಣ್ಣ ಎನರಿ ಗೌಡ್ರ ಊಟ ಅಂದರು. ಇಲ್ಲಾ ಅಣ್ಣಾ ನಿಮ್ಮದು ಅಂದ್ಯಾ, ಸುಮಾರ 20-30 ಮಂದಿ ಊರಿಂದ ತಂದ ರೊಟ್ಟಿ ಬುಟ್ಟಿ ತಿಂದವಿ. ತಿಂದ ಕೆಳಗ ಹೊಂಟಿದ್ದವಿ. ಪತ್ರಿಕಾ ಪ್ರಕಟನೆ ನಡಿದಿತ್ತು, ಭಾಳ ಜನ ಸೇರಿದ್ದರು ನಾನು ಕೂತಹಲದಿಂದ ನೋಡತಾ ಇದ್ಯಾ, ಮನಗೂಳಿ ಮುತ್ಯಾ ಅಲ್ಲೆ ಸಿಂಧ್ಯಾ ಪಕ್ಕದಾಗ ನಿಂತಿದ್ದರು. ಸ್ವಲ್ಪ ಹೊತ್ತಾಗಣ, ಪಕ್ಕಕ್ಕ ಸರದ ನಿಂತ್ಯಾ ಮತ್ತ ನಮ್ಮ ಸ್ನೇಹಿತರು ನಾವು ಮಾತಾಡ್ಕೊತು ನಿಂತಿದ್ದವಿ. ಇನ್ನೇನ ಹೊರಗ ಹೊಂಟಿದ್ದವಿ, ಯಾರಾ ನನಗ ಜುಬ್ಹಾ ಚಪ್ಪರಿಸಿದ ಅನುಭವ! ಹೊಳ್ಳಿ ನೋಡತಿನಿ, ಮನಗೂಳಿ ಮುತ್ಯಾ!

ಮತ್ತ ಕೈ ಮುಗದೆ, ಅವರು ಆ ಪ್ರೆಸ್ ಮೀಟ್ ಬಿಟ್ಟು ನನ್ನ ಹತ್ತರ ಯಾಕ ಬಂದರಪ ಅಂತ ಯೋಚಿಸುದೊರಳಗೆ, “ಗೌಡಪ್ಪ, ಮುಂಜಾಳಿ ಹೇಳಿದ್ದೆಲ್ಲ, ಆ ಕೆಲಸ ಮಾಡೀನಿ ನೋಡಪ್” ಅಂದರು. ನನಗಾದ ಆನಂದಕ್ಕ, ನಮಸ್ಕಾರಿ ಮುತ್ಯಾ ಅಂದ್ಯಾ! ಈ ಘಟನೆ ನಡದು ಹೆಚ್ಚು ಕಡಿಮೆ ಅಂದರು 21 ವರ್ಷ ಆಯಿತು. ಆದರೂ ನೆನಪ ಮಾಸಿಲ್ಲ. ಇದನ್ನ ಅನೇಕ ಜನರೆದರ ಹೇಳಕೊಂಡಿನಿ, ಇವತ್ತ ಭಾಳ ಮಂದಿ ಅವರಿಗಿ ಆಶೃತರ್ಪಣ ಅರ್ಪಿಸುತ್ತಾ ಅವರ ಸರಳತೆ ಬಗ್ಗೆ ಹೇಳಿದರು. ನನಗು ತಡಕೊಳ್ಳಲಕ್ಕ ಆಗಲಿಲ್ಲ. ಇತ್ತೀಚಗೆ ಮಡಿವಾಳ ಮಾಚಿದೇವ ವಚನ ಮಂಟಪ ಏರ್ಪಡಿಸಿದ ಕಾರ್ಯಾಕ್ರಮಕ್ಕ ಬಂದು ಸ್ಪರ್ಧಿಗಳಿಗಿ ಸನ್ಮಾನ ಮಾಡಿ ಶರಣರ ವಚನ ಮೌಲ್ಯಯುತ ಜೀವನ ನಡಿಸಲು ಆಧಾರ ಅಂತ ಹೇಳಿ ಬಯಲಾದ ಜೀವಕ್ಕೆ ಶರಣು ಶರಣಾರ್ಥಿ.

ಲೇಖಕರು: ಬಸವ ಪಾಟೀಲ, ಲಂಡನ್



Leave a Reply

Your email address will not be published. Required fields are marked *

error: Content is protected !!