ಮತದಾನ ಮಾಡೋ ಮೊದಲ್ ಇದನ್ ಒಂದೀಟು ಓದ್ರಿ…

1355

ಇಂಗ್ಲೆಂಡ್ ನಲ್ಲಿ ನೆಲೆಸಿರುವ ಕೊಂಡಗೂಳಿ ಮೂಲದ ಬಸವ ಪಾಟೀಲ ಅವರು ಬರೆದ ಲೇಖನ ಇಲ್ಲಿದೆ.

ಸಿಂದಗಿ ವಿಧಾನ ಸಭಾ ಕ್ಷೇತ್ರ ಉಪ  ಚುನಾವಣೆ, ನಮ್ಮ ಕ್ಷೇತ್ರದ ಅನುಕ್ರಮ ಸಂಖ್ಯೆ 33, ಇದು ಮೊದಲು 224 ನೇ ಕ್ಷೇತ್ರವಾಗಿತ್ತು. ನನಗ ವಿಧಾನ ಸಭಾ ಕ್ಷೇತ್ರ ಅನ್ನಕಿಂತ ಪಕ್ಕದ ಮಹಾರಾಷ್ಟ್ರ ರಾಜ್ಯದಾಗ ‘ಮತದಾರರ ಸಂಘ’ ಅಂತಾರ ಅದೇ ಭಾಳ ಹಿಡಿಸಿದ ಪದ. ಯಾಕಂದ್ರ ಅದು ಜನರ ಕೇಂದ್ರಿತ ನುಡಿ. ಆದರೆ ವಿಧಾನ ಸಭಾ ಕ್ಷೇತ್ರ ಅನ್ನುದು ಭೌಗಳಿಕ ಕೇಂದ್ರಿತ ಪದ. ಇಲ್ಲಿ ಜನ ಮನ ಗೌಣ ಅಗತಾದ ಅನ್ನುದು ನನ್ನ ಅಭಿಪ್ರಾಯ ಅಷ್ಟೇ. ಈ ಉಪ ಚುನಾವಣೆ ಮನಗೂಳಿ ಮುತ್ತ್ಯಾ ಅವರ ಅಕಾಲಿಕ ಮರಣ ಹೊಂದಿದ ಕಾರಣ, ನಮ್ಮ ಚುನಾವಣಾ ಆಯೋಗ ತೆರವಾದ ಸ್ಥಾನ ತುಂಬಲಕ್ಕ ನಡೆಸುವ ಪ್ರಕ್ರಿಯೆ.

ನಾನು ಮೂಲತಃ ಸಿಂದಗಿ ತಾಲೂಕಿನವನಾಗಿದ್ದು (ದೇವರ ಹಿಪ್ಪರಗಿ ತಾಲೂಕ ಆಗುಕಿಂತ ಮೊದಲ್ ನಮ್ಮೂರ ಕೊಂಡಗೂಳಿ ಈ ಸಿಂದಗಿ ತಾಲೂಕಿನ ಭಾಗವಾಗಿತ್ತು) ಈಗಲೂ ನನಗ ಸಿಂದಗಿ ತಾಲೂಕಿನವನೇ ಅಂತ ಹೇಳಕೊಳ್ಳಾಕ ಇಷ್ಟ. ಯಾಕ್ ಏನೋ ಗೊತ್ತಿಲ್ಲ ಒಂದ ರೀತಿ ಭಾವನತ್ಮಕ ಸಂಬಂಧ ಅನ್ನರಿ. ಅಂದಂಗ ಯಾಕ ಈ ಅಂಕಣ ಬರೀಲಿಕ್ಕತ್ತೀನಿ  ಅಂದ್ರ ನಮ್ಮ ಸ್ನೇಹಿತ ನಾಗೇಶ್ ತಳವಾರ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುವ ಪ್ರಜಾಸ್ತ್ರ ವೆಬ್ ಪತ್ರಿಕೆಗೆ. ಮನಗೂಳಿ ಮುತ್ತ್ಯಾ ಲಿಂಗೈಕ್ಯರಾದಾಗ ಒಂದು ನಮನ ನುಡಿ ಬರಿದಿದ್ದೇ. ಅದನ್ನ ಭಾಳ ಜನ ಓದಿ ಇಷ್ಟ ಪಟ್ಟಿದ್ದರು. ಹಾಗೆ ಅವಾಗವಾಗ ನಾಗೇಶ್ ಅವರ ಜೊತೆ ಮಾತಾಡ್ತಾ ಇರತೀನಿ. ಹಂಗ ಮಾತಾದಾಗ ಅವರು ಒಮ್ಮೆ ನೀವು ಸಿಂದಗಿ ಉಪ ಚುನಾವಣೆ ನಡಿ ಮುಂದ ಇನ್ನೊಂದು ಅಂಕಣ ಬರೀರಿ ಅಂದಿದ್ದು ನೆನಪ ಇತ್ತು, ಅದಕ್ಕ ಇದು ಬರದೆ.

ಇದನ್ನ ಬರಿಕಿಂತ ಮುಂದ ನನ್ನ ಒಡತಿಯ ಮುಂದ ನನ್ನ ಮನದ ಇಂಗಿತ ಹಂಚಕೊಂಡೆ. ಆಕಿ ಬರಿದು ಬರಿತಿ ನನಗ ತಿಳಿವುಹಂಗ ಬರಿ, ಶಾಸಕ ಅಂದ್ರ ಏನು, ಅವರ ಕೆಲಸ ಏನು? ಅದರ ಬಗ್ಗೆ ಬರಿ ಅಂದಳು. ನಾ ಅರೆ ಹೊಂಬ ಗೌಡ ಆಗಿ, ಬಸವ ಭೀಮರ ತತ್ವಗಳನ್ನ ತಲ್ಯಾಗ ತುಂಬಕೊಂಡು, ಆತ್ಮಾನುಸಂಧಾನ ಮಾಡಕೊಂಡು ಭಾಳ ವಜ್ಜಿ ಸಮಾಜ ಕಾರಣದ ಒಲುವಿನಿಂದ ನಮ್ಮ ಜನರ ಬದುಕ ಬವಣೆ, ಆಗಬೇಕಾದ ಕೆಲಸ. ‘ಹಿಂದುಳಿದ ತಾಲೂಕ ಮುಂದುವರೆದ ಜನ’ರ ದ್ವಂದ್ವಗಳು, ರಾಜಕೀಯ ಲೆಕ್ಕಾಚಾರ ಬರಿಬೇಕೆಂದ್ರ, ನನ್ನ ಹೆಣ್ತಿ ಮುಂದಿನ ಪಿಳಿಗಿ ಜಾಗೃತರಾಗಬೇಕು ಅಂದ್ರ, ಯುವಕರ ರಾಜಕೀಯ ಪ್ರಜ್ಞೆ ಜಾಗೃತಗೊಳಿಸು ಅಂತ ಆಜ್ಞೆ ಹೊರಡಿಸಿ ಬಿಟ್ಟಳು. ಇನ್ನ ಗೃಹ ಸಚಿವರ ಮಾತ ಮೀರಿ ಸಂಸಾರ ಎಂಬ ಸರಕಾರ ನಡುಸುದು ಹ್ಯಾಂಗ ಅಂತ ಹೊಂಬ ಗೌಡನ ತಲ್ಯಾನ ಹೊಂಬತನ ಬದಿಗಿಟ್ಟು, ಬಸವ ಭೀಮರ ನೆನೆದು, ಅರಿವಿನ ವ್ಯಾಪ್ತಿ ವಿಸ್ತಾರಗೊಳ್ಳಲಿ ನಮ್ಮ ಜನರ ಬದುಕು ಶಾಂತಿ, ಸೌಹಾರ್ದತೆ ಇಂದ ಬಾಳಲು, ನಮ್ಮ  ಪ್ರತಿನಿಧಿಯನ್ನ ಆಯ್ಕೆ ಮಾಡಲ್ಲಕ್ಕ ಒಂದಷ್ಟು ಮಾಹಿತಿ ಕಲೆ ಹಾಕಿ, ನಿಮ್ಮ ತಲಿ ಚಿರ್ರ ಅಂದು ತಲಿ ಕೆರೆಕೊಂಡು ಏನ್ ಬರದಾನೋ ಮಾರಾಯ ಒಂದು ತಿಳ್ಯವಲ್ದು ಅಂತ ನೀವು ನನಗ ಬಯ್ಯಬೇಕು. ಇಲ್ಲಾ ಹೇ ಇವನೌನ ಭಾರಿ ಬರದಾನೋ ನಮ್ಮ ತಾಲೂಕಿನವ ಅಂತ ಇಂಗ್ಲೆಂಡನ್ಯಾಗ ಇರತಾನ ಅಂತ ಅನ್ನಬೇಕು ಈ ಎರಡೇ ಮಾತಿನ ಸಲುವಾಗಿ ಈ ಅಂಕಣ.

ಇನ್ನ ಮುಂದ ಓದರಿ, ಓದ್ತಾ ಓದ್ತಾ ನಿಮ್ಮ ಮನಸ್ಸಿನ್ಯಾಗ, ಪ್ರಶ್ನೆ ಮುಡಬೇಕು, ಉತ್ತರ ಹುಡುಕಬೇಕು, ಈ ರೀತಿ ನಿಮ್ಮ ಮತ ಅಳಿದು ತೂಗಿ ನೀಡುವಂತಾಗಬೇಕು, ಯಾಕಂದ್ರ ನೀವು ಆರಸಲಕ್ಕತ್ತಿದ್ದು ನಿಮ್ಮ ಪ್ರತಿನಿಧಿ, ಅವರು ಆರಿಸಿ ಹೋಗತಾ ಇದ್ದಿದ್ದು “ವಿಧಾನ ಸಭೆಗೆ, ಹಂಗಂದ್ರ ಈ ವಿಧಾನ ಸಭೆ ಅಂದ್ರ ಏನು? ಅಲ್ಲಿ ಹೋಗಿ ಇವರು ಏನ್ ಮಾಡತಾರ? ಈ ಪ್ರಶ್ನೆ ಕೇಳಕೊಂಡಿರಿ? ಇಲ್ಲಂದ್ರ ಕೆಳಕೋರಿ, ಇಲ್ಲಿಂದಲೇ ನಮ್ಮ ಅರಿವ  ವಿಸ್ತಾರಗೊಳ್ಳಬೇಕು, ಶಾಸಕ ನಮ್ಮ ತಾಲೂಕಿನ ಜನರ ಪ್ರತಿನಿಧಿ. ಅವರು ನಮ್ಮ ಧ್ವನಿಯಾಗಿ ಶಾಸನ ಸಭೆಯಲ್ಲಿ, ಕಾನೂನ, ನೀತಿ, ನಿಯಮವಾಳಿಗಳು ಮಾಡಲು, ನಮ್ಮ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ, ಶಾಂತಿ, ಸೌಹಾರ್ದತೆ, ಸ್ಥಿತಗತಿಗಳ ಬಗ್ಗೆ ಸದನದಲ್ಲಿ ಆಳುವ ಸರಕಾರದ ಗಮನ ಸೆಳೆಯಯುವದು ಅವರ ಕೆಲಸ. ಅದಕ್ಕಾಗಿ ನಮ್ಮ ಪ್ರತಿನಿಧಿ ನಮ್ಮ ಜಾತಿಯವನು, ನಮ್ಮ ಧರ್ಮದವನು, ನಮ್ಮ ಸಂಬಂಧಿಕ ಅನ್ನು ಆಧಾರದ ಮ್ಯಾಲ ನಾವು ನಮ್ಮ ಒಪ್ಪಿಗೆ ನೀಡಬೇಕಾ? ಅಥವಾ ನಮ್ಮ ಪ್ರತಿನಿಧಿ, ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳನ್ನ ಸಮರ್ಥವಾಗಿ ಮಂಡಿಸಬಲ್ಲನೆ/ಳೆ? ಅದಕ್ಕೆ ಪೂರಕವಾದ, ಅನುಭವ ಆಯಿತೋ ಇಲ್ಲಾ? ಕ್ಷಮತೆ ಇದಿಯೋ ಇಲ್ಲಾ? ಅವರು ಯಾವ ಸಿದ್ಧಾಂತಗಳು  ನಮ್ಮ ಜೀವನಕ್ಕ, ನಮ್ಮೂರಿಗಿ, ನಮ್ಮ ತಾಲೂಕಿನ ಜನಾಂಗಕ್ಕ, ಇರುವ ಅವಶ್ಯಕತೆ, ಮತ್ತು ಸಮಸ್ಯೆಗಳ ಅರಿವು ಆಯಿತೋ ಇಲ್ಲ ಅಂತ ನಾವು ತಿಳ್ಕೋಬೇಕೋ ಅಲ್ಲ? ಹಂಗಂದ್ರ ನೀವು ಒಂದು ಹಾಳಿ  ಮ್ಯಾಲ ಬರೀರಿ ಪೆನ್ನ ತಗೊಂಡು, ಕ್ಯಾಂಡಿಡೇಟ್ ಹೆಸರ, ಅವರ ಅನುಭವ, ಅರ್ಹತೆ, ಅವರು ನೀಡಿದ ಆಶ್ವಾಸನೆಗಳನ್ನ ಪಟ್ಟಿ ಮಾಡಿ, ಆಗ ನಿಮ್ಮ ಆಯ್ಕೆಯನ್ನ ಮನದಲ್ಲಿ ಗುರುತ ಇಟ್ಟಕೊಂಡು ಗೌಪ್ಯವಾಗಿ ಮತದಾನ ಮಾಡಿ, ಯಾಕಂದ್ರ ಇದು ಒಬ್ಬ/ಳು ಪ್ರಜ್ಞಾವಂತ ನಾಗರಿಕ ಮಾಡುವ ಕೆಲಸ. ನಾವು ನಮ್ಮ ವಿವೇಚನೆ, ವಿವೇಕವನ್ನ ಬಳಕೆ ಮಾಡಲಿಲ್ಲ ಅಂದ್ರ, ಭ್ರಷ್ಟರು, ಕೋಮುವಾದಿಗಳು, ಜಾತಿವಾದಿಗಳು, ವಯಕ್ತಿಕ ಪ್ರತಿಷ್ಠೆಯುಳ್ಳವರು ನಮ್ಮ ನಾಯಕರಾಗಿ ಬಿಡತಾರ, ಆಗ ಒಲ್ಯಾಗ ಹೇತು ನೋಡು ನನ್ನ ಹಣೆ ಬರಹ ಅಂದ್ರ ಅಂದಂಗ ಆಗತಾದ. ಹಂಗೆ ಒಂದು ಸಂಸ್ಥೆ ಆಯಿತಿ, ಪ್ರಜಾಪ್ರಭುತ್ವ ಸುಧಾರಣೆಗಳ ಸಂಘ (https://adrindia.org/  https://www.myneta.info/ ), ಈ ಜಾಲತಾಣಕ್ಕ ಭೇಟಿ ಕೊಟ್ಟು ಸ್ಪರ್ದಿಸಿದ ಅಭ್ಯರ್ಥಿಯ ಶಿಕ್ಷಣ, ಆಸ್ತಿ ಪಾಸ್ತಿ, ಅವರ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯನ್ನ ಅವಲೋಕಿಸಿ. ಅದು ಆದ ಮ್ಯಾಲ ಅವರ ಪಕ್ಷದ ಧೋರಣೆ ಮತ್ತ ನಿಲುವಗಳನ್ನ ಅವಲೋಕಿಸಿ. ಇದು ಆದ ಮ್ಯಾಲ ನಿಮ್ಮ ವಿವೇಚನೆ ಮತ್ತು ವಿವೇಕದಿಂದ ನಿಮ್ಮ ಮತವನ್ನ ಗೌಪ್ಯವಾಗಿ ಚಲಾವಣೆ ಮಾಡರಿ. ಏನೋ ಮಾರಾಯ ಇಟ್ಟು ಯಾಂವ ಮಾಡಾಂವ? ಸುಮ್ಮ ನಮ್ಮ ಜಾತಿಯವನಿಗಿ ಹಾಕಿ ಬರತಿವಿ ಅಂದ್ರ ಅದು ನಿಮ್ಮ ಅಭಿಪ್ರಾಯವೇ, ಆದರ ಇದರಿಂದ ನಮ್ಮ ತಾಲೂಕಿನ ಜನರ ಅವಶ್ಯಕತೆಗಳು ಈಡೇರತಾವ ಮತ್ತ ಸಮಸ್ಯೆ ಬಗಿ ಹರಿತಾವ ಅಂತೀರಿ?

ಹಂಗೆ ಈ ತಾಲೂಕ 150 ಹಳ್ಳಿಗಳ ಹೊಂದಿದ್ದು, 2,95,675 ಜನಸಂಖ್ಯೆ ಆಯಿತಿ, ಇದರಾಗ 19.54% ಜನ ಪರಿಶಿಷ್ಟ ಜಾತಿಯವರು. ಇಷ್ಟೊಂದು ದೊಡ್ಡ ಸಮುದಾಯ ಆದರೂ ಅವರ ಮೇಲಿನ ಅತ್ಯಾಚಾರ, ಅಸ್ಪೃಶ್ಯತೆ ನಿಂತಿದಿಯಾ? ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯವರ ಮತ ಸೆಳೆಯಲು ಆಯಾ ಸಮುದಾಯದ ನಾಯಕರನ್ನ ತಂದು ತೋರಿಸಿ ನಮ್ಮ ಪಕ್ಷಕ್ಕ ಮತ ಹಾಕಿರಿ ಅಂತಾರ. ನಾವು ಅವರ ಮಾತ ಕೇಳಿ ಅವರಿಗಿ ಮತ ಹಾಕಲಾಕ್ಕತ್ತಿವಿ. ಆದರೂ ಜಾತೀಯತೆ ಕಳಿಲಿಕ್ಕ ಆಗಿಲ್ಲ, ಯಾಕ? ನಾವು ಜಾತಿವಾದಿಗಳೇ ಆಗಿ ಬಿಟ್ಟಿವಿ? ಬಾಬಾಸಾಹೇಬರು ಬಯಸ್ತಾರ ರಾಜಕೀಯ ಸಮಾನತೆಗಿಂತ, ಸಾಮಾಜಿಕ ಸಮಾನತೆ, ಆ ಸಾಮಾಜಿಕ ಸಮಾನತೆ ತರುವಂತಹ ನಾಯಕರು ನಮ್ಮ ತಾಲೂಕಿನ್ನಲ್ಲಿ ಯಾರರೇರೆ ಅದಾರ? ಈ ಸಾಮಾಜಿಕ ಸಮಾನತೆ ಬಯಸುವ ಯುವ ಮನಸ್ಸುಗಳು ಸಂಘಟಿತವಾಗಬೇಕು ಅನ್ನುದು ವಯಕ್ತಿಕ ಹೆಬ್ಬೆಯಕೆ. ವಸೂಲಿ ಮಾಡುವ ಎಡಬಿಡಂಗಿಗಳ್ಳನ್ನ, ಸ್ವಹಿತಾಸಕ್ತಿಗಾಗಿ ಬಾಬಾಸಾಹೇಬರ ಫೋಟೋ ಹಾಕೊಂಡು ರಾಜಕೀಯ ಮಾಡೋವರನ್ನ ಪ್ರತಿರೋಧಿಸಬೇಕು. ಇದು ಸಾಮಾಜಿಕ ನ್ಯಾಯ.

ಇನ್ನ ನಮ್ಮ ಶಿಕ್ಷಣದ ಸ್ಥಿತಿ ಅಂಕರ ಹದಗೆಟ್ಟ ಹೈದರಾಬಾದ್. ಸಾಕ್ಷರತೆ ಪ್ರಮಾಣನೇ 53.55% ಅಂದ್ರ ಅರ್ಧದಷ್ಟು ಜನ ಅಕ್ಷರ ವಂಚಿತರು. ಇನ್ನ, ಉನ್ನತ ಶಿಕ್ಷಣ ಅಂಕಾರ ದೂರಿನ ಮಾತ. ಯಾಕ ನಮ್ಮ ತಾಲೂಕಿನ್ಯಾಗ, ಸರಕಾರಿ ಪದವಿ ವಿದ್ಯಾಲಯಗಳು ಹೆಚ್ಚಾಗಬಾರದು, ಹಿಂದುಳಿದವರ ಮಕ್ಕಳನ್ನ ಉನ್ನತ ಶಿಕ್ಷಣವಂಚಿತರಾಗಿ ಮಾಡುದು ಯಾವ ರಾಜಕಾರಣ?

ಇನ್ನ ಆರೋಗ್ಯ ವ್ಯವಸ್ಥೆ “ದೇವರೇ ಗತಿ, ಈ ಪರಿಸ್ಥಿತಿಯೇ ಈ ನಂಬಿಕೆಯನ್ನ ಬಲಗೊಳಿಸಿದ್ದು ಅಂದ್ರ ತಪ್ಪಲ್ಲ. ಅಂದೆಲ್ಲೆ ಯಥೇಚ್ಛವಾಗಿ ದೇವರ ಹೆಸರ ಮ್ಯಾಲ ದೊಡ್ಡ ದೊಡ್ಡ ಗುಡಿ ಕಟ್ಟಿವಿ, ದೊಡ್ಡ ದೊಡ್ಡ ಹುಂಡಿ ಇಟ್ಟಿವಿ, ಎಲ್ಲಾ “ದೇವರ ಮ್ಯಾಲ ಭಾರ ಹಾಕಿ“ ನಮ್ಮ ನಮ್ಮ ಜಾತಿಯವನಿಗಿ ವೋಟ್ ಹಾಕಿ ಮತ್ತ ಏನಂತೀವಿ, “ಎಲ್ಲ ಹಿಂದಿನ ಕರ್ಮ ರೀ“ ಕರ್ಮಕ್ಕ ಬಂದಿದ್ದು ಭೋಗಿಸಿ ಹೋಗಬೇಕಲ್ಲ ಅನ್ನು ಪಲಾಯನವಾದಿ ಮಾತ. ಇಸಬೆಕು ಇದ್ದು ಜಯಸಬೇಕು ಅನ್ನುದು ಮಂತ್ರ ಆಗಲಿ. ಸರಕಾರೀ ದವಾಖಾನೆ ಮ್ಯಾಲಿನ ವಿಶ್ವಾಸ ಕಳದು ಹೋಗಿ ಬಿಟ್ಟದಾ, ಹಿಂತಾ ವಿಷಯದಾಗ ನಮ್ಮ ಪ್ರತಿನಿಧಿ ಆಗ ಬಯಸುವರು ನಾನು ನಮ್ಮ ಜನರ ಜೀವನ ಕಾಪಾಡತೀನಿ ಅಂತ ಗಟ್ಟಿಯಾಗಿರುವ ವ್ಯಕ್ತಿತ್ವ ಇರಬೇಕು. ಓಣಿಗಿ ಒಂದು ಖಾಸಗಿ ದಾವಾಖಾನಿ ಆಗ್ಯಾವ, ಸಾಲಿ ಕಲೀರರಾದವು ದನಕ್ಕ ಚುಚ್ಚದಂಗ ಮನುಷ್ಯರಗಿ ಇಂಜೆಕ್ಷನ್ ಚುಚ್ಚಿ ಜೀವ ಹೊಡೆದರು. ಸುಮ್ಮ ಹಂಗೆ ನಾ ನಿಮ್ಮ ಜಾತಿಯಂವ ಇದೀನಿ ಅಂದ್ರ ನೀವು ವೋಟ್ ಹಾಕತೀರಿ?

ಸಾರಿಗೆ ವ್ಯವಸ್ಥೆ, ನಮ್ಮ ತಾಲೂಕಿಗೆ ಡಿಪೋ ಇದ್ದರು 150 ಹಳ್ಳಿಗಿ ಟೈಮ್ ಗಿ ಸರಿಯಾಗಿ ಬಸ್ ಬರತಾವ? ಯಾರಿಗೆರೆ ಎದಿ  ಬ್ಯಾನಿ ಆಗ್ಯಾದ ದಾವಾಖಾನಿ ಹೋಗಬೇಕೆಂದ್ರ, ದಾವಾಖಾನಿ ಮುಟ್ಟುದುರಾಗ ಸತ್ತಿರ್ತಾರ, ಹಂತ ರಸ್ತೆಗಳು ನಮ್ಮ ತಾಲೂಕಿನ್ಯಾಗ ಇಲ್ಲ ಅಂತೀರಿ? 108 ವಾಹನ ಎಸ ಹಳ್ಳಿಗಿ ತಮ್ಮ ಸೇವೆ ಒದಗಿಸ್ತಾದ ಕೇಳಿರಿ? ಅದಕ್ಕ, ನಮ್ಮೂರಗಳ  ಸಮಸ್ಯೆಗಳ ಅರಿವಿರಲಿ. ಸಿಂದಗಿ ತಾಲೂಕಿನಲ್ಲಿ ಭೀಮಾ ನದಿ ಮತ್ತ ದೋಣಿ ನದಿ ಹರದಾವ, ಆದರೂ ನಮ್ಮ ಜಮೀನ  ಎಟ್ಟು ನೀರಾವರಿ ಆಗ್ಯಾದ?

ಮುಂದ, ಇನ್ನ ಮೂರೂ ದೊಡ್ಡ ಪಕ್ಷಳು ತಮ್ಮ ಅಭ್ಯರ್ಥಿ ಘೋಷಣೆ ಮಾಡ್ಯಾರ, ಸಣ್ಣ ಪಕ್ಷಗಳು ತಮ್ಮ ಅಭ್ಯರ್ಥಿ ಘೋಷಣೆ ಮಾಡ್ಯಾರ, ಈಗ ನಾವೇನು ಮಾಡಬೇಕು ಅವರು ರ್ಯಾಲಿ ಕರೆದಾರ ಪೆಟ್ರೋಲ್ ಹಾಕಸ್ಯಾರ್ ಅಂತ ಭರ ಅಂತ ಗಾಡಿ ತಗೊಂಡು, ನಮ್ಮ ನಾಯಕ ಹುಲಿ, ಸಿಂಹ ಅಂದು ಅವರ ಎಗ್ಗಳ ಫೋಟೋ ಹಾಕಿ ಯಾವಾದರೆ ಕನ್ನಡ ಚಿತ್ರದ ಹಾಡ ಜೋಡಸಿ ಮೇರುಣಿಗಿ ತೆಗೆದು ಬಿಟ್ಟು, ಅವರಿಗೆ ಪ್ರಶ್ನೆ ಕೇಳರಿ. ನಾಯಕರ ನಾವು ನಿಮಗ್ಯಾಕ ವೋಟ್ ಹಾಕಬೇಕು ಅಂತ? ಅದಕ್ಕೇನು ಅವರೇನು ಕಮ್ಮಿ ಇಲ್ಲ ಅವರು ಎಗ್ಗಳ  ಫೋಟೋ ಹಾಕಿ ನಿಮ್ಮ ವಾಟ್ಸಪ್ಪ್, ಫೇಸ್ಬುಕ್ ಮತ್ತ ನಿಮ್ಗ ಎಸ್ಎಂಎಸ್ ಕಳಸೆ  ಬಿಟ್ಟಿರ್ತಾರಾ. ನೀವು ಗುಂಗ್ನ್ಯಾಗ ಅಥವಾ ಮುಗಮ್ಮಾಗಿ ನಂಬ ಬ್ಯಾಡರಿ. ಈಗಿನ ರಾಜಕಾರಣ ಇದು ದೊಡ್ಡ ನಾಟಕ ಅದಾ, ನೀ ಅತ್ತಂಗ ಮಾಡು ನಾ ಹೊಡದಂಗ ಮಾಡತೀನಿ ಅಂತ ನಮಗ ಮಬ್ಬ ಮಾಡಿ ಅವರು ಗಬರು ಆಗಿ ಬಿಡತಾರ. ಅದಕ್ಕ ನೀವು ಅರಿವಿನಿಂದ, ವಿವೆಚನೆಯಿಂದ, ನಮ್ಮ ತಾಲೂಕಿನ ಪೂರಾ  ಅಭಿವೃದ್ಧಿಗೆ ಪೂರಕವಾಗಿ ದುಡಿಯಿವ, ಕ್ಷಮತೆಯುಳ್ಳ, ಅನುಭಾವಿ ಮತ್ತು ಸಂವೇದನಶೀಲ ವ್ಯಕ್ತಿತ್ವವನ್ನ ನಿಮ್ಮ ಪ್ರತಿನಿಧಿಯಾಗಿ ಆರಿಸಿ ಕಳಿಸಿ.

ಲೇಖಕ ಬಸವ ಪಾಟೀಲ, ಇಂಗ್ಲೆಂಡ್



Leave a Reply

Your email address will not be published. Required fields are marked *

error: Content is protected !!