ಈ ಚುನಾವಣೆ ಬದುಕು, ಭಾವನೆ ನಡುವಿನ ಸಂಘರ್ಷ: ಹೆಚ್.ಕೆ ಪಾಟೀಲ

95

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಸಿಂದಗಿ ವಿಧಾನಸಭಾ ವ್ಯಾಪ್ತಿಯ ಮೋರಟಗಿಯಲ್ಲಿ ಭಾನುವಾರ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಹೆಚ್.ಕೆ ಪಾಟೀಲ, ಈ ಚುನಾವಣೆ ಬದುಕು ಹಾಗೂ ಭಾವನೆ ನಡುವಿನ ಸಂಘರ್ಷ. ಪ್ರಜಾಪ್ರಭುತ್ವದ ದೃಷ್ಠಿಯಲ್ಲಿ ತುಂಬಾ ಮಹತ್ವದ್ದಾಗಿದೆ ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಇದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವ ನ್ಯಾಯ, ಮಹಿಳಾ ನ್ಯಾಯ, ಸಾಲಮನ್ನಾ, ಶ್ರಮಿಕನ್ಯಾಯ, ಜಾತಿಗಣತಿ ಯೋಜನೆಯ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ.

ರಾಹುಲ್ ಗಾಂಧಿ ಹೇಳಿಕೆಯನ್ನು ಪ್ರಧಾನಿ ಮೋದಿಯವರು ಅಪಹಾಸ್ಯ ಮಾಡಿದರು. ಆದರೆ, ರಾಜ್ಯದಲ್ಲಿ ನಾವು ಹೇಗೆ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸೇರಿದಂತೆ ವಿವಿಧ ಗ್ಯಾರಂಟಿಗಳನ್ನು ನೀಡುತ್ತಿದ್ದೇವೋ ಇದೆ ಮಾದರಿಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನೀಡುತ್ತೇವೆ. ಆದರೆ, ಮೋದಿಯವರು ಕಳೆದ ಎರಡು ಚುನಾವಣೆಯಲ್ಲಿ ಘೋಷಿಸಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. 15 ಲಕ್ಷ ರೂಪಾಯಿ ಬರಲಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬೆಲೆ ಏರಿಕೆ ಆಯಿತು. ಬಿಜೆಪಿಯವರು ಬರೀ ದೇವರ ಹೆಸರು ಕೇಳಿಕೊಂಡು ಭಾವನೆಗಳನ್ನು ಕದಡುವ ಕೆಲಸ ಮಾಡುತ್ತಾರೆ. ಸ್ವತಂತ್ರ ಬಂದ ನಂತರ ದೆಹಲಿಯಲ್ಲಿ ನಡೆದ ರೈತ ಹೋರಾಟದಲ್ಲಿ 734 ರೈತರು ಪ್ರಾಣ ಕಳೆದುಕೊಂಡರು. ಅವರ ಹೋರಾಟಕ್ಕೆ ಮಣಿದು ರೈತ ವಿರೋಧಿ ಕಾನೂನುನ್ನು ಕೊನೆಗೆ ಹಿಂದಕ್ಕೆ ಪಡೆದರು ಅಂತಾ ವಾಗ್ದಾಳಿ ನಡೆಸಿದರು. ಆದ್ದರಿಂದ ಜನಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಿದರೆ ಶಾಸಕ ಅಶೋಕ ಮನಗೂಳಿಗೆ ಭೀಮಬಲ ಬಂದಂತೆ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ಅಶೋಕ ಮನಗೂಳಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಜನರಿಗೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಇದು ಮನೆ ಮನೆಗೆ ಮುಟ್ಟುವ ಕೆಲಸ ಮಾಡಲಾಗುತ್ತಿದೆ. ಇದೇ ರೀತಿ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು 25 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಿಳೆಯ ಖಾತೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ ನೇರವಾಗಿ ಬರುತ್ತೆ. ಹೀಗಾಗಿ ಸರಳ, ಸಜ್ಜನಿಕೆ ರಾಜು ಆಲಗೂರ ಅವರಿಗೆ ಮತ ನೀಡಿ ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾ ಚುನಾವಣೆ ಉಸ್ತುವಾರಿ ಸೈಯದ್, ಮಲ್ಲಣ್ಣ ಸಾಲಿ ಸೇರಿದಂತೆ ಅನೇಕರು ಮಾತನಾಡಿದರು. ಇದೇ ವೇಳೆ ಐದು ಗ್ಯಾರಂಟಿಗಳ ಕಾರ್ಡ್ ಬಿಡುಗಡೆ ಮಾಡಿ ವಿತರಣೆ ಮಾಡಲಾಯಿತು.

ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾದಿಕ ಸುಂಬಡ, ಸಿಂದಗಿ ಘಟಕದ ಮಹಿಳಾ ಅಧ್ಯಕ್ಷೆ ಜಯಶ್ರೀ ಹದನೂರ, ಆಲಮೇಲ ಘಟಕದ ಮಹಿಳಾ ಅಧ್ಯಕ್ಷೆ ಶೈಲಜಾ, ಎಸ್.ಎಂ ಪಾಟೀಲ ಗಣಿಹಾರ, ರಮೇಶ ಸೂಳಿಭಾವಿ, ಶಿವು ಹತ್ತಿ, ಚೈತನಗೌಡ, ಚಂದ್ರಶೇಖರ ದೇವರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!