ಮಾನವೀಯತೆ ಮರೆತ ‘ಕಿಮ್ಸ್’

402

ಹುಬ್ಬಳ್ಳಿ: ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿನ ಗೋಳ ಈ ಯುಗಕ್ಕೆ ಮುಗಿಯುವುದಿಲ್ಲ ಅನಿಸುತ್ತೆ. ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿರುವ ಆಸ್ಪತ್ರೆಯಲ್ಲಿ ಒಂದಲ್ಲ ಒಂದು ಅನಾಹುತ ನಡೆಯುತ್ತಲೇ ಇರುತ್ತೆ. ಈ ಬಗ್ಗೆ ಮಾಧ್ಯಮದವರು ಎಷ್ಟೇ ಸುದ್ದಿಗಳನ್ನ ಪ್ರಕಟಸಿದ್ರೂ, ಡೋಂಟ್ ಕೇರ್ ಅಂತಾರೆ. ಅಷ್ಟರ ಮಟ್ಟಿಗೆ ಇಲ್ಲಿ ಅನ್ಯಾಯ ಅನ್ನೋದು ತಾಂಡವಾಡ್ತಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ, ಗುರುವಾರ ನಡೆದ ಅಮಾನವೀಯ ಘಟನೆಯೇ ಸಾಕ್ಷಿ.

ಧಾರವಾಡದ ರಾಜೀವಗಾಂಧಿ ನಗರದ ನಿವಾಸಿಯಾಗಿರುವ ಗಣೇಶ ಸುಣಗಾರ ಕಾಮಣಿಯಿಂದ ಬಳಲುತ್ತಿದ್ದು, ಕಿಮ್ಸ್ ಆಸ್ಪತ್ರೆಗೆ ಮೇ 29ರ ಸಂಜೆ ದಾಖಲಿಸಲಾಗಿರುತ್ತೆ. ಮೇ 30ರ ಮಧ್ಯಾಹ್ನ 2 ಗಂಟೆಗೆ ಅವರು ಸಾವನ್ನಪ್ಪುತ್ತಾರೆ. ಆಸ್ಪತ್ರೆಯಿಂದ ಮೃತದೇಹವನ್ನ ಧಾರವಾಡಕ್ಕೆ ಸಾಗಿಸಲು ವಾಹನದ ವ್ಯವಸ್ಥೆ ಕೇಳಿದ್ರೆ ಇಲ್ಲ ಅನ್ನೋ ಉತ್ತರ ಬರುತ್ತೆ.


ಸಾರ್ವಜನಿಕರ ಎದುರೇ ಮೃತದೇಹ ಪ್ಯಾಕ್ ಮಾಡ್ತಿರುವುದು

ಇನ್ನು ಮೃತದೇಹವನ್ನ ಸರಿಯಾಗಿ ಪ್ಯಾಕ್ ಮಾಡಿ ಕೊಡಲು ಸಹ ಹಿಂದುಮುಂದು ನೋಡ್ತಾರೆ ಇಲ್ಲಿನ ಸಿಬ್ಬಂದಿ. ಅಲ್ದೇ ಆಸ್ಪತ್ರೆಯ ಉಳಿದ ರೋಗಿಗಳ ಎದುರಿನಲ್ಲಿಯೇ ಮೃತದೇಹದ ಬಟ್ಟೆ ಬಿಚ್ಚಿ ಪ್ಯಾಕ್ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಕಿಮ್ಸ್ ನ ಮುಖ್ಯಸ್ಥರನ್ನ ಕೇಳಿದ್ರೆ ಹಾರಿಕೆಯ ಉತ್ತರ ನೀಡ್ತಾರೆ.

ಆಸ್ಪತ್ರೆಯಲ್ಲಿ ವಾಹನ ಇತ್ತು. ಅದು ಕೆಟ್ಟು ಹೋಗಿ ಬಹಳ ದಿನವಾಗಿದೆ. ಅದನ್ನ ಇನ್ನೂ ರಿಪೇರಿ ಮಾಡಿಲ್ಲ. ಸಾಕಷ್ಟು ಹಣ ಕೇಳ್ತಿದ್ದಾರೆ ಅನ್ನೋ ಕಾರಣಕ್ಕೆ ಅದು ಇನ್ನೂ ರೆಡಿಯಾಗಿಲ್ಲ. ಬೇರೆ ವಾಹನ ಬಂದಾಗ ನೋಡಬೇಕು. ಖಾಸಗಿ ವಾಹನ ತೆಗೆದುಕೊಂಡು ಹೋಗಿ.

ರಾಮಲಿಂಗಪ್ಪ, ಡೈರೆಕ್ಟರ್, ಕಿಮ್ಸ್
ಮೃತ ಗಣೇಶ ಸುಣಗಾರ

ಆಟೋ ಓಡಿಸಿ ಜೀವನ ಮಾಡ್ತಿದ್ದ ಗಣೇಶ ಕೇವಲ 40 ವರ್ಷಕ್ಕೆ  ಸಾವನ್ನಪ್ಪುತ್ತಾರೆ. ಇದ್ರಿಂದಾಗಿ ಪತ್ನಿ ಸುಧಾ ಹಾಗೂ ಸ್ಕೂಲ್ ಗೆ ಹೋಗುವ ಎರಡು ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡುತ್ತೆ. ಸಂಸಾರಕ್ಕೆ ಆಸರೆಯಾಗಿದ್ದ ಪತಿ ಕಳೆದುಕೊಂಡ ಪತ್ನಿಗೆ, ಆಸ್ಪತ್ರೆಯಿಂದ ಮಾನವೀತೆಯ ನೆರವು ಸಹ ಸಿಗೋದಿಲ್ಲ. ಈ ಬಗ್ಗೆ ಧಾರವಾಡ ಡಿಹೆಚ್ಒ ಅವರನ್ನ ಕೇಳಿದ್ರೆ, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವಾಹನದ ವ್ಯವಸ್ಥೆಯಿದೆ ಅಂತಾರೆ. ಕಿಮ್ಸ್ ಬಗ್ಗೆ ಕೇಳಿದ್ರೆ,ಕೊಡುವ ಉತ್ತರವೇ ಬೇರೆ.

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ ಸಾಗಿಸಲು ವಾಹನ ವ್ಯವಸ್ಥೆಯಿದೆ. ಇಲ್ಲಿಂದ ಸೌಲಭ್ಯ ಸಿಗುತ್ತೆ. ಕಿಮ್ಸ್ ನಲ್ಲಿ ಇಲ್ಲ. ಅದು ನಮ್ಮ ವ್ಯಾಪ್ತಿಗೆ ಬರಲ್ಲ. ಅದೊಂದು ಸ್ವಾಯತ್ತತೆ ಹೊಂದಿರುವ ಸಂಸ್ಥೆ. ಹೀಗಾಗಿ ಅವರಿಗೆ ಇದನ್ನು ಮಾಡಿ, ಅದನ್ನು ಮಾಡಿ ಅಂತಾ ಹೇಳಲು ಬರೋದಿಲ್ಲ.

ಡಾ. ಆರ್.ಎಂ ದೊಡ್ಡಮನಿ, ಡಿಹೆಚ್ಒ, ಧಾರವಾಡ

ಇನ್ನು ಖಾಸಗಿ ವಾಹನಗಳನ್ನ ಕೇಳಲು ಹೋದ್ರೆ, ಇದೇ ಅವಕಾಶ ಅಂದ್ಕೊಂಡು ಅವರು 2 ಸಾವಿರ ರೂಪಾಯಿ ಕೇಳಿದ್ರಂತೆ. ಬಡವರು ಇದ್ದಾರೆ. ಸ್ವಲ್ಪ ಸಹಾಯ ಮಾಡಿ ಅಂದ್ರೆ, ಇದಕ್ಕೆ ತೆಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಒಂದಿಷ್ಟು ಸುತ್ತಾಡಿ ಬೇರೆ ಬೇರೆ ಗಾಡಿಗಳನ್ನು ಕೇಳಿದಾಗ 1,500 ರೂಪಾಯಿ ಬಾಡಿಗೆ ತೆಗೆದುಕೊಂಡಿದ್ದಾರೆ. ಇಷ್ಟೆಲ್ಲ ಮಾಡುವಲ್ಲಿ ಈ ಕುಟುಂಬಕ್ಕೆ ಚಂದ್ರಶೇಖರ್ ಅನ್ನೋ ಪರಿಚಯಸ್ಥ ಯುವಕ ಸಹಾಯ ಮಾಡಿದ್ದಾನೆ. ಅಂತ್ಯಸಂಸ್ಕಾರ ಆಗುವ ತನಕ ಅವರೊಂದಿಗೆ ಇದ್ದು, ಹಣಕಾಸಿನ ನೆರವು ನೀಡಿದ್ದಾನೆ. ಒಂದ್ಕಡೆ ಮಾನವೀಯತೆ ಸತ್ತು ಹೋಗಿದ್ರೆ, ಇನ್ನೊಂದ್ಕಡೆ ಮಾನವೀಯತೆ ಇನ್ನೂ ಜೀವಂತವಾಗಿದೆ.

ಇನ್ನು ಮುಂದಾದ್ರೂ ಕಿಮ್ಸ್ ಆಸ್ಪತ್ರೆ ಬಡ ರೋಗಿಗಳ ಬಾಳಲ್ಲಿ ಚೆಲ್ಲಾಟವಾಡದೇ ನ್ಯಾಯದಿಂದ ನಡೆದುಕೊಳ್ಳಲಿ ಅನ್ನೋದು ನಮ್ಮ ಆಸೆ.


TAG


Leave a Reply

Your email address will not be published. Required fields are marked *

error: Content is protected !!