ಲೋಕಸಭೆ ಕಾಳಗ: ರಣತಂತ್ರ ರೂಪಿಸಲು ಕಾಂಗ್ರೆಸ್ ಸಿದ್ಧ

197

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಕೆಲವು ಕಡೆ ಗೆಲುವು ಸಾಧಿಸುತ್ತಾ ಬರುತ್ತಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆ ಗೆಲುವಿಗೆ ಪ್ಲಾನ್ ನಡೆಸಿದೆ.

ರಾಜ್ಯ ಕೈ ನಾಯಕರಿಗೆ ಜೂನ್ 21ರಂದು ದೆಹಲಿಗೆ ಬರಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ. ಸಚಿವರು ದೆಹಲಿಗೆ ತೆರಳಿ ಚುನಾವಣೆ ರಣತಂತ್ರದ ಕುರಿತು ಚರ್ಚೆ ನಡೆಸಲಿದ್ದಾರೆ. 24 ಲೋಕಸಭಾ ಸ್ಥಾನಗಳಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ಟಾರ್ಗೆಟ್ ನೀಡಿದೆ.

ಪ್ರಸ್ತುತ ರಾಜ್ಯದಿಂದ 21 ಬಿಜೆಪಿ ಸಂಸದರು, ಒಬ್ಬರು ಕಾಂಗ್ರೆಸ್, ಒಬ್ಬರು ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರ ಸಂಸದರಿದ್ದಾರೆ. 21 ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ಪ್ರವಾಹದ ಪರಿಹಾರ, ಜಿಎಸ್ ಟಿ ಹಣ, ಅನುದಾನ ನೀಡುವಲ್ಲಿ ಮಾಡಿದ ತಾರತಮ್ಯ ಸೇರಿ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಣೆಯಲು ಕಾಂಗ್ರೆಸ್ ಸಜ್ಜಾಗಿದೆ. ಬಿಜೆಪಿ ಹಾಲಿ 13 ಸಂಸದರ ಟಿಕೆಟ್ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ. ಇದರ ಲಾಭ ಪಡೆಯಲು ಕೈ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

ಬಿಜೆಪಿ-ಜೆಡಿಎಸ್ ಒಂದಾಗುತ್ತಿವೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇವರ ಮೈತ್ರಿಯ ನಡುವೆಯೂ ಹೆಚ್ಚಿನ ಸ್ಥಾನ ಗೆಲ್ಲಲು ಪಕ್ಷ ಏನು ಮಾಡಬೇಕು? ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಶೇ.40ರಷ್ಟು ಕಮಿಷನ್ ಆರೋಪ, ಭ್ರಷ್ಟಾಚಾರ ಬಯಲಿಗೆಳೆಯುವ ಕೆಲಸದಂತೆ ಪ್ರಧಾನಿ ಮೋದಿ ಸರ್ಕಾರದ ಘೋಷಣೆಗಳು ವಿಫಲವಾಗಿರುವುದು, ಸುಳ್ಳು ಭರವಸೆಗಳು, ಬೆಲೆ ಏರಿಕೆ, ನೋಟು ರದ್ಧತಿ ಹಾಗೂ ವಾಪಸ್ ಪಡೆದಿರುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಕಮಲ ನಾಯಕರಿಗೆ ಠಕ್ಕರ್ ಕೊಡಲು ಕೈ ನಾಯಕರು ದೆಹಲಿಯಲ್ಲಿ ಸಭೆ ನಡೆಸಲಿದ್ದಾರಂತೆ.

ಈಗಾಗ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಚರ್ಚಿಸಿದ್ದಾರೆ. ಜೂನ್ 21ರಂದು ಸಚಿವರೊಂದಿಗೆ ಸಭೆ ನಡೆಸಿ ಗೆಲುವಿಗೆ ಏನೆಲ್ಲ ಮಾಡಬೇಕು ಎಂಬುವುದರ ಕುರಿತು ಚರ್ಚೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!