ಇಲ್ಲದ ವಿವಾದ ಮಾಡಿಕೊಳ್ಳುತ್ತಿರುವ ಚೇತನ್ ಅಹಿಂಸಾ

290

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅದ್ಯಾಕೋ ಒಮ್ಮೊಮ್ಮೆ ಏನೇನೋ ಮಾತನಾಡಿ ವಿವಾದ ಮಾಡಿಕೊಳ್ಳುತ್ತಿದ್ದಾರೆ. ವಿಶ್ವಕಪ್ ಸೋಲಿನ ನೋವಿನಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಹಾಗೂ ಇತರರು ಚೇತನ್ ಮಾತಿಗೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಕ್ರಿಕೆಟ್ ನಲ್ಲಿ ಮೀಸಲಾತಿ ಇಲ್ಲದಿರುವುದೇ ಸೋಲಿಗೆ ಕಾರಣವೆಂದು ಹೇಳಿ ಹೊಸ ವಿವಾದದ ಕಿಡಿ ಹೊತ್ತಿಸಿದರು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಆಕ್ರೋಶಗಳು ವ್ಯಕ್ತವಾದವು. ಹೀಗಿರುವಾಗ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ಕೊಟ್ಟಿರುವ ವಿಚಾರದಲ್ಲಿಯೂ ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಚೇತನ್, ವಿಶ್ವಕಪ್ ಟ್ರೂಫಿ ಮೇಲೆ ಕಾಲಿಟ್ಟಿರುವ ಚಿತ್ರದೊಂದಿಗೆ ಆಸ್ಟ್ರೇಲಿಯಾ ಆಟಗಾರನೊಬ್ಬ ಸುದ್ದಿಯಲ್ಲಿದ್ದಾರೆ. ಬಲಗೈ ಮತ್ತು ಎಡಗೈ ಅಥವ ತಲೆ ಮತ್ತು ಕಾಲುಗಳಂತಹ ದೇಹದ ಭಾಗಗಳು ಶುದ್ಧ ಅಥವ ಅಶುದ್ಧವಾಗಿವೆ ಎಂಬ ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯ ಕಲ್ಪನೆಯ ಭಾರತೀಯ ಬಹುಸಂಖ್ಯಾತ ಸಂಸ್ಕೃತಿಯಾಗಿದೆ. ಪಶ್ಚಿಮದಲ್ಲಿ ಜನರು ಮನೆಯೊಳಗೆ ಮತ್ತು ಮಲಗುವ ಕೋಣೆಯಲ್ಲಿ ಶೋಗಳನ್ನು ಧರಿಸುತ್ತಾರೆ. ಆಸ್ಟ್ರೇಲಿಯಾ ಆಟಗಾರನಿಗೆ ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ. ಅದು ಕೇವಲ ಅವರ ವಿಶ್ರಾಂತಿ ಆಗಿತ್ತು ಎಂದು ಬರೆದಿದ್ದು, ಇದು ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಕೈ, ಕಾಲುಗಳಲ್ಲಿ ಶ್ರೇಷ್ಠ, ಕನಿಷ್ಠತೆಯ ಮನೋಭಾವ ಸರಿ ಅಲ್ಲ ಎನ್ನುವುದು ಶರಣರೆ ಹೇಳಿದ್ದಾರೆ. ಆದರೆ, ಅದನ್ನು ಹೇಳುವ ಸಂದರ್ಭ ಯಾವುದು ಎನ್ನುವುದು ಮುಖ್ಯ ಅಲ್ಲವೇ? ಹಿರಿಯರಿಗೆ, ಹೆತ್ತವರಿಗೆ ಕಾಲಿಗೆ ನಮಸ್ಕಾರ ಮಾಡುತ್ತೇವೆ. ಜಗಳವಾಡುವಾಗ ಎದುರಿಗೆ ಇರುವ ವ್ಯಕ್ತಿಗೆ ಕೈಯಿಂದ ಹೊಡೆಯುವುದಕ್ಕೂ ಕಾಲಿನಿಂದ ಒದೆಯುವುದಕ್ಕೂ, ಯಾರಾದರೂ ಏನಾದರೂ ಕೇಳಿದಾಗ ಕೈಯಿಂದ ಕೊಡದೆ ಕಾಲಿನಿಂದ ತಳ್ಳಿ ತಗೋ ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಗೇ ಪರಿಶ್ರಮ, ಪ್ರತಿಭೆಯ ಬಲದಿಂದ ಏನಾದರೂ ಸಾಧಿಸಿದರೆ ಅದಕ್ಕೆ ಗೌರವ ಕೊಡುವುದು ಸೌಜನ್ಯ, ವಿನಯದ ಲಕ್ಷಣ. ಭಾವನಾತ್ಮಕ ವಿಚಾರಗಳು ಬಂದಾಗ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಒಳ್ಳೆಯ ವ್ಯಕ್ತಿಯ ಗುಣವೆಂದು ನಟ ಚೇತನ್ ಅಹಿಂಸಾ ವಿರುದ್ಧ ಅಸಮಾಧಾನ ಹೊರ ಹಾಕಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!