ಸಿಂದಗಿ-ಆಲಮೇಲ ಅಭಿವೃದ್ಧಿಗೆ 125 ಕೋಟಿ ಅನುದಾನ

160

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಶಾಸಕನಾಗಿ ಅಧಿಕಾರ ವಹಿಸಿಕೊಂಡು ದಿನದಿಂದ ಇಲ್ಲಿಯವರೆಗೂ ಸಿಂದಗಿ ಹಾಗೂ ಆಲಮೇಲ ಭಾಗದ ಅಭಿವೃದ್ಧಿಗೆ ಸಂಬಂಧಸಿದಂತೆ ಯಾವೆಲ್ಲ ಯೋಜನೆಗಳನ್ನು ಮಂಜೂರು ಮಾಡಿಸಲಾಗಿದೆ. ಯಾವ ಯಾವ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ಅನುದಾನ ತರಲಾಗಿದೆ ಎನ್ನುವುದರ ಕುರಿತು ಶಾಸಕ ಅಶೋಕ ಮನಗೂಳಿ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಜಾಹೀರಾತು

ಪಟ್ಟಣದಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಂದಗಿಗೆ ಯೋಜನಾ ಪ್ರಾಧಿಕಾರಿ ಕಚೇರಿ, ಕೆಆರ್ ಡಿಐಎಲ್ ಉಪ ವಿಭಾಗ ಕಚೇರಿ ಮಂಜೂರು ಮಾಡಿಸುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದೆ. ಇದರಿಂದಾಗಿ ಇನ್ನು ಮುಂದೆ ಭೂಪರಿವರ್ತನೆಗಾಗಿ ವಿಜಯಪುರಕ್ಕೆ ಹೋಗುವ ಅಗತ್ಯವಿಲ್ಲ ಎಂದರು. ಪಟ್ಟಣದ 23 ವಾರ್ಡ್ ಗಳಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಸಂಬಂಧ ವಿದ್ಯಾನಗರದಲ್ಲಿರುವ ನೀರು ಶುದ್ಧೀಕರಣ ಘಟಕದ ದುರಸ್ತಿಗಾಗಿ 33 ಲಕ್ಷ ರೂಪಾಯಿ ಮಂಜೂರಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯದಲ್ಲಿ ಹೊಸ ವಿದ್ಯುತ್ ಕಂಬಗಳಿಗಾಗಿ 5 ಕೋಟಿ ಅನುದಾನ, ಅಂಬೇಡ್ಕರ್ ವೃತ್ತದಿಂದ ಯರಗಲ್ ಬೈಪಾಸ್, ಟಿಪ್ಪು ಸುಲ್ತಾನ್ ವೃತ್ತದಿಂದ ಗಾಂಧಿ ವೃತ್ತ, ವಿವೇಕಾನಂದ ವೃತ್ತದಿಂದ ಯಂಕಂಚಿ ಬೈಪಾಸ್ ತನಕ 30 ಮೀಟರದ ರಸ್ತೆಯ ಜೊತೆಗೆ ಡಿವೈಡರ್ ಗಾಗಿ 25 ಕೋಟಿ, ಹೊನ್ನಪ್ಪಗೌಡ ಬಡಾವಣೆಯಲ್ಲಿನ 3 ಎಕರೆ ಜಾಗ ಪುರಸಭೆಗೆ ಹಸ್ತಾಂತರಗೊಂಡಿದ್ದು, ಅಲ್ಲಿ 1 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ಹೆಸರಿನ ಸುಸಜ್ಜಿತ ಉದ್ಯಾನವನ ನಿರ್ಮಿಸಲಾಗುವುದು. ಅಲ್ಲಿ ಈಜುಕೊಳ ಸೇರಿ ಎಲ್ಲ ಸೌಲಭ್ಯ ಇರಲಿದೆ. ತಾಲೂಕಿನ ಗ್ರಾಮಗಳಲ್ಲಿರುವ ಎಸ್ಸಿ, ಎಸ್ಟಿ ಬಡವಾಣೆಗಳ ಅಭಿವೃದ್ಧಿಗಾಗಿ 75 ಲಕ್ಷ ರೂಪಾಯಿ, ಅಲ್ಪಸಂಖ್ಯಾತ ಸಮುದಾಯಗಳ ಬಡವಾಣೆಗಾಗಿ ಅಭಿವೃದ್ಧಿಗಾಗಿ 5 ಕೋಟಿ, ಮಲಘಾಣ, ತಾಂಬಾದಲ್ಲಿ ಶಾದಿ ಮಹಲ್ ನಿರ್ಮಿಸಲಾಗುವುದು ಎಂದರು.

ತಾಲೂಕಿನಲ್ಲಿ ಶಾಲಾ ಕಟ್ಟಡಗಳ ದುರಸ್ತಿಗಾಗಿ 88 ಲಕ್ಷ ಕೈಗಾರಿಕಾ ವಸತಿ ಅಭಿವೃಧಿಗಾಗಿ 5 ಕೋಟಿ, ಯಂಕಂಚಿ, ಗೋಲಗೇರಿ ಪ್ರವಾಸಿ ತಾಣಗಳ ಅಭಿವೃಧಿಗೆ ತಲಾ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಇನ್ನು ಆಲಮೇಲ ಪಟ್ಟಣದ ಅಭಿವೃಧಿಗಾಗಿ 5 ಕೋಟಿ ರೂಪಾಯಿ, 3 ಅಗಸಿ, ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ, ಸಿಂದಗಿ ಕರೆಗಿಂತ ವಿಶಾಲವಾಗಿರುವ ಆಲಮೇಲ ಕೆರೆ ಅಭಿವೃದ್ಧಿಗಾಗಿ 3.50 ಕೋಟಿ ರೂಪಾಯಿ ಮಂಜೂರಾಗಿದ್ದು, ಅದನ್ನು ಪ್ರವಾಸಿ ಸ್ಥಳದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಹೀಗಾಗಿ ಸಿಂದಗಿ, ಆಲಮೇಲ ಭಾಗದ ಅಭಿವೃಧಿಗಾಗಿ 125 ಕೋಟಿ ರೂಪಾಯಿ ಸರ್ಕಾರ ಮಂಜೂರು ಮಾಡಿದೆ ಅಂತಾ ತಿಳಿಸಿದರು.

ಜನವರಿ 28ರಂದು ಮಾಜಿ ಸಚಿವ ದಿವಂಗತ ಎಂ.ಸಿ ಮನಗೂಳಿ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಬೇಕೆಂದು ಕೋರಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪ್ರವೀಣ ಕಂಟಿಗೊಂಡ, ಪರಶುರಾಮ ಕಾಂಬಳೆ, ಅರವಿಂದ ಹಂಗರಗಿ ಸೇರಿ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!