ಕ್ರೌರ್ಯ ಮತ್ತು ಹಿಂಸೆಗೆ ದೊಡ್ಡ ಆಯುಧಗಳೇ ಬೇಕಿಲ್ಲ, ಚಿಕ್ಕ ಸೂಜಿ ಮೊನೆ ಸಾಕು

739

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-1

ಹೆಣ್ಣು ಮಗಳೊಬ್ಬಳು ಮದುವೆಯಾದ ಮೇಲೆ ತನ್ನ ಮುಂಚಿನ ಎಲ್ಲ ಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ತಾನು ಸೇರುವ ಗಂಡನ ಮನೆಯ ಪರಿಸ್ಥಿತಿಗೆ ಹೊಂದಿಕೊಳ್ಳವ ಮತ್ತು ಅಲ್ಲಿನವರ ಅಭಿರುಚಿಗಳನ್ನು ತಿಳಿಯಬೇಕು. ಅವುಗಳಿಗೆ ಅನುಗುಣವಾಗಿ ಇವಳು ತನ್ನ ಜೀವನಕ್ರಮವನ್ನು ಹೊಂದಿಸಿಕೊಳ್ಳಬೇಕು. ಹಾಗೇ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಮ್ಮ ಸಮಾಜ ಸೃಷ್ಟಿಸಿದೆ. ಹೀಗೆ ಹೊಂದಿಕೊಂಡು ಜೀವನ ನಡೆಸುವಾಗ ಅವಳ ಮೇಲೆ ಆಗುವ ದೈಹಿಕ ಮತ್ತು ಮಾನಸಿಕ ಹಿಂಸೆ ಹಾಗೂ ಕೌರ್ಯವನ್ನು ‘ದಿ ಗ್ರೇಟ್ ಇಂಡಿಯನ್ ಕಿಚನ್’ ಎಂಬ ಮಲೆಯಾಳಂನ ಚಿತ್ರದಲ್ಲಿ ಕಾಣಬಹುದು. ಇಂತಹುಗಳನ್ನು ಮೀರಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ, ಪ್ರತಿರೋಧಿಸುವ ದಿಟ್ಟ ಹೆಣ್ಣುಮಗಳ ಕಥೆಯನ್ನು ಈ ಚಿತ್ರ ಹೊಂದಿದೆ.

ಅಡುಗೆ ಮನೆ ಎನ್ನುವುದು ಮೇಲ್ಮೋಟಕ್ಕೆ ಚಲನಶೀಲತೆಯಿಂದ ಕೂಡಿದರೂ ಸಹ ಆಂತರ್ಯದಲ್ಲಿ ಅದಕ್ಕೆ ‘ಜಡತ್ವ’ ಆವರಿಸಿದೆ ಎನ್ನುವದನ್ನು ನಿರ್ದೇಶಕ ಜಿಯೋ ಬೇಬಿ ಅಡುಗೆ ಕ್ರಿಯೆಗಳ ಮೂಲಕ ತೋರಿಸುತ್ತಾನೆ. ಅಲ್ಲಿ ತರಕಾರಿ, ಅಕ್ಕಿಗಳು ಮಾತ್ರ ಆ ಬೆಂಕಿಯಲ್ಲಿ ಬೇಯುತ್ತಿಲ್ಲ ಅದರ ಜೊತೆಗೆ ಹೆಣ್ಣು ಮಗಳೊಬ್ಬಳು ನಿರಂತರವಾಗಿ ಬೇಯುತ್ತಿದ್ದಾಳೆ. ತನ್ನ ನಿಟ್ಟುಸಿರನ ಮೂಲಕ ಎನ್ನುವುದನ್ನು ಈ ಚಿತ್ರ ಮನಮುಟ್ಟುವ ಹಾಗೇ ಕಟ್ಟಿಕೊಡುತ್ತದೆ. ಇಲ್ಲಿ ಹಿನ್ನಲೆ ಸಂಗೀತವೆಂದರೆ ದಟ್ಟವಾದ ಮೌನ. ಆ ಮೌನದಿಂದ ತೂರಿ ಬರುವ ತರಕಾರಿ, ಕಾಯಿ ಹೆರಚುವ, ಪಾತ್ರೆ ತೊಳೆಯುವ, ಒಗ್ಗರಣೆ ಹಾಕುವ, ರಿಪೇರಿಯಾಗದ ಸಿಂಕಿನ ಸದ್ದುಗಳೆಲ್ಲವು ಎದೆ ಆಳಕ್ಕೆ ಇಳಿಯುತ್ತವೆ. ನಿರ್ದೇಶಕ ತಾನು ಏನು ಹೇಳಬೇಕು ಎಂದುಕೊಂಡಿದ್ದಾನೋ ಅದನ್ನು ಪ್ರತಿ ದೃಶ್ಯದಲ್ಲಿಯೂ ಅತ್ಯಂತ ಸಮರ್ಥವಾಗಿ ಕಟ್ಟಿಕೊಡುತ್ತಾನೆ. ಕಾರಣ ತಾನು ಏನು ಹೇಳಬೇಕೆಂಬ ವಿಷಯದ ಬಗ್ಗೆ ಸ್ಪಷ್ಟತೆ ಅವನಿಗಿದೆ. ಇದಕ್ಕೆ ಪೂರಕ ಎಂಬಂತೆ ನಟಿ ನಿಮಿಶಾ ಸಜಾಯನ ನಟಿಸಿದ್ದಾಳೆ. ಇಲ್ಲಿ ಅವಳದು ಪರಕಾಯ ಪ್ರವೇಶವಲ್ಲ ತನ್ನೊಳಗೆ ತಾನು ಇಳಿದು ಅಭಿನಯಿಸಿದ್ದಾಳೆ. ಅವಳ ಅಭಿನಯವನ್ನು ನೋಡುವಾಗ ತಾನು ಅನುಭವಿಸಿದ ನೋವನ್ನು ತನ್ನ ಅಭಿನಯದ ಮೂಲಕವಾಗಿ ಹೊರಹಾಕುತ್ತಿದ್ದಾಳೇನೋ ಎನಿಸುತ್ತದೆ. ಗಂಡನ ಪಾತ್ರದಲ್ಲಿ ನಟಿಸಿರುವ ನಟ ಸುರಜ್ ವೆಂಜರಮೋಡ ಮತ್ತು ಮಾವನ ಪಾತ್ರದಲ್ಲಿ ನಟಿಸುರುವ ಟಿ ಸುರೇಶ ಬಾಬು ಇವರ ಅಭಿನಯ ಎಲ್ಲಿಯೂ ನಟಿಸುತ್ತಿದ್ದಾರೆ ಎನಿಸುವುದಿಲ್ಲ ಸಹಜವಾಗಿ ನಿರ್ವಹಿಸಿಕೊಂಡು ಹೋಗಿದ್ದಾರೆ. ಇವರ ನಟನೆಯಲ್ಲಿ ಕೃತಕತೆಗೆ ಎಡೆಯಿಲ್ಲ. ಇಂತಹ ಎಲ್ಲ ಕಾರಣಕ್ಕೆ ಈ ಚಿತ್ರ ನಮ್ಮ ನಡುವೆಯೇ ನಡೆಯುವ, ನಮಗೆ ತಿಳಿದು ತಿಳಿಯದಾಗೆ ವರ್ತಿಸುವ ಚಿಕ್ಕ ಚಿಕ್ಕ ಕೌರ್ಯವನ್ನು ಸೂಚಿಸುತ್ತದೆ. ಇಂತಹ ಕಾರಣಗಳಿಗಾಗಿ ಮನೋರಂಜನೆ ಜೊತೆಗೆ ಪ್ರೇಕ್ಷಕರನ್ನು ಎಜ್ಯುಕೇಟ್ ಮಾಡುವ ಚಿತ್ರಗಳಲ್ಲಿ ಇದು ನಿಲ್ಲುತ್ತದೆ.

ಅಡುಗೆ ಮಾಡುವುದು ಬಡಿಸುವುದು, ಪಾತ್ರೆ ತೊಳೆಯುವುದು, ಮನೆ ಕಸ ಗುಡಿಸುವುದು ಇವು ಅವಳ ದಿನನಿತ್ಯದ ಕ್ರಿಯೆಗಳು. ಇನ್ನು ಮಲಗುವ ಕೋಣೆಯಲ್ಲಿ ಅವಳು ಕೇವಲ ಭೋಗದ ವಸ್ತುವಾಗಿದ್ದಾಳೆ. ಅವಳ ಇಚ್ಚೆಗೆ ವಿರುದ್ಧವಾಗಿ ಭೋಗಿಸುವ ಗಂಡನಿಲ್ಲಿದ್ದಾನೆ. ಅವನಿಗೆ ತನ್ನ ಕಂಪರ್ಟ್ ಮುಖ್ಯ. ಈ ದೃಶ್ಯಗಳು ಚಿತ್ರದಲ್ಲಿ ಮತ್ತೆ ಮತ್ತೆ ಬರುತ್ತವೆ. ಆ ಮೂಲಕ ನಿರ್ದೇಶಕ ತೋರಿಸುವುದೇನೆಂದರೆ ಅವಳನ್ನು ಮನುಷ್ಯಳನ್ನಾಗಿ ನೋಡದೆ ರೊಬೋ ತರಹ ಇಲ್ಲಿ ಗ್ರಹಿಸುತ್ತಿದ್ದಾದರೆ ಎನ್ನುವುದನ್ನು. ನೀಡಿದ ಸೂಚನೆಗಳನ್ನು ರೋಬೋ ಹೇಗೆ ನಿರ್ವಹಿಸುತ್ತದೆಯೋ ಹಾಗೇ ಇವಳಾಗಿದ್ದಾಳೆ. ಅವಳ ಅಸ್ತಿತ್ವದ ಬಗೆಗೆ ಇವರಿಗೆ ಯಾವುದೇ ಕಾಳಜಿ ಇಲ್ಲ. ಪ್ರತಿ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಇವಳು ಗೋಚರಿಸುತ್ತಾಳೆ. ಇಲ್ಲಿ ಮಾವನಿಗೆ ಮಿಕ್ಸಿಗೆ ಹಾಕಿದ ಚಟ್ನಿ ಬೇಡ, ವಾಸಿಂಗ್ ಮಿಷನಲ್ಲಿ ಬಟ್ಟೆಗಳನ್ನು ಹಾಕುವುದು ಬೇಡ, ಇವುಗಳನ್ನು ಅವಳು ಕೈಯಲ್ಲಿಯೇ ನಿರ್ವಹಿಸಬೇಕು. ಅಡುಗೆಯಲಿ ಸ್ವಲ್ಪ ಹೆಚ್ಚು ಕಡಿಮೆಯಾದರು ಇವರು ಸಹಿಸರು. ಅದನ್ನು ಅತ್ಯಂತ ಸಣ್ಣ ಧ್ವನಿಯಲ್ಲಿ ಹೇಳುವರು ಆ ಧ್ವನಿಯಲ್ಲಿ ತಣ್ಣಗಿನ ಕೌರ್ಯ ಮತ್ತು ಪುರುಷಾಧಿಕಾರದ ಅಹಂಕಾರ ಗೋಚರಾಗುವುದು. ಮುಟ್ಟಾದ ಅವಳನ್ನು ನಡೆಸಿಕೊಳ್ಳವ ಪರಿ, ಅವಳು ಕೆಲಸಕ್ಕೆ ಹೋಗುತ್ತೇನೆ ಎಂದಾಗ ನಯವಾಗಿ ತಿರಸ್ಕರಿಸುವುದು, ಅವಳು ಪೇಸ್ ಬುಕ್ಕನಲ್ಲಿ ತನ್ನ ವಿಚಾರಗಳನ್ನು ಶೇರ್ ಮಾಡಬೇಕೆಂದರು ಗಂಡನ ಅನುಮತಿ ಪಡೆಯಬೇಕು ಎಂಬುದು ಇಂತಹ ಹಲವು ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಈ ರೀತಿಯ ಹಲವು ನಿರ್ಬಂಧಗಳು ಅವಳಲ್ಲಿ ಪ್ರತಿರೋಧದ ಕಿಚ್ಚನ್ನು ಹೊತ್ತಿಸುತ್ತವೆ.

ಇಂಥ ಎಲ್ಲ ಅಂಶಗಳಿಂದ ಬೇಸತ್ತು ಗಂಡ ಮತ್ತು ಮಾವನಿಗೆ ಪ್ರತಿರೋಧ ತೋರಿ ಅವಳು ಮನೆಯಿಂದ ಹೊರಡುವುದು ಸಹಜ ಸ್ವತಂತ್ರ ಹಂಬಲವಾಗಿ ಕಾಣುತ್ತದೆ. ಅವಳು ತನ್ನ ತವರು ಮನೆಗೆ ಹೋದಾಗ ತನ್ನ ತಮ್ಮ ಇನ್ನೊಬ್ಬ ಹೆಣ್ಣು ಮಗಳಿಗೆ ಒಂದು ಗ್ಲಾಸ್ ನೀರು ತಂದು ಕೂಡು ಎನ್ನುತ್ತಾನೆ. ಆಗ ಇವಳು ‘ನೀನೇ ಹೋಗಿ ತೆಗೆದುಕೊಳ್ಳಲು ಏನಾಗುತ್ತದೆ’ ಎಂದು ಕಿರುಚುತ್ತಾಳೆ. ಇಷ್ಟು ದಿನ ಸಹಿಸಿದ ನೋವು ಇಲ್ಲಿ ಆಕ್ರೋಶವಾಗಿ ಮಾರ್ಪಡಾಗುತ್ತದೆ. ಈ ಮಾತು ಇಡೀ ಪುರುಷ ಸಮೂದಾಯಕ್ಕೆ ಹೇಳಿದಂತಿದೆ. ಇನ್ನು ಕೊನೆಯಲ್ಲಿ ಇವಳು ಡ್ಯಾನ್ಸ್ ಟೀಚರಾಗಿ ಮಾಡಿಸುವ ಒಂದು ದೃಶ್ಯದಲ್ಲಿ ಹೆಣ್ಣುಮಗಳೊಬ್ಬಳು ದೊಡ್ಡ ಸರಪಳಿಯಿಂದ ಬಂಧಿತಳಾಗಿದ್ದಾಳೆ, ನಂತರ ಅವಳು ಸ್ವ ಸಾಮರ್ಥ್ಯದಿಂದ ಅದರಿಂದ ಬಿಡಿಸಿಕೊಂಡು ಸಿಂಹಾಸನದಂತಹ ಒಂದು ಕುರ್ಚಿಯ ಮೇಲೆ ಕುಳಿತ್ತುಕೊಳ್ಳುತ್ತಾಳೆ. ಇದು ಹೆಣ್ಣಮಗಳೊಬ್ಬಳು ಎಲ್ಲ ಬಂಧನಗಳನ್ನು ಮೀರಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡ ರೂಪಕದಂತಿದೆ. ಆಕೆ ಗಂಡನು ಇವಳು ಮನೆ ಬಿಟ್ಟು ಹೋಗಿದ್ದಕ್ಕೆ ಇನ್ನೊಂದು ಹೆಣ್ಣನ್ನು ಮದುವೆಯಾಗುತ್ತಾನೆ. ಗಂಡಿನ ಪರ್ಯಾಯಗಳಿಗೆ ಹೆಣ್ಣೆ ಬಲಿ ಎಂಬಂತಿದೆ. ಆದರೆ ಇದನ್ನು ಮೀರುವ ಆಶಯವನ್ನು ಈ ಚಿತ್ರ ಗರ್ಭಿಸಿಕೊಂಡು ರೂಪಿತವಾಗಿದೆ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!