‘ಯುವರತ್ನ’ನ ಮಾಸ್ ಪಾಠಶಾಲಾ

821

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-10

ಉಪದೇಶಾತ್ಮಕ ಮಾದರಿಯ ಚಿತ್ರಗಳಲ್ಲಿ ಮನೋರಂಜನೆಗಿಂತಲೂ ತಾವು ಜನರಿಗೆ ತಲುಪಿಸಬೇಕಾದ ಮೆಸೇಜ್ ಕಡೆಗೆ ಹೆಚ್ಚಿನ ಒಲವು ಇರುತ್ತದೆ. ಒಂದು ನಿರ್ದಿಷ್ಟ ವಿಷಯದ ಬಗ್ಗೆ ಧ್ವನಿ ಎತ್ತಿ ಅದನ್ನು ಜನರಿಗೆ ತಲುಪಿಸಲು ಕಮರ್ಷಿಯಲ್ ಫಾರ್ಮೆಟ್ ನಲ್ಲಿ ಹೇಳುವುದು ಸ್ವಲ್ಪ ಕಷ್ಟವೇ. ಮನೋರಂಜನೆ ಮತ್ತು ಮೆಸೇಜ್ ಇವೆರಡನ್ನು ಸರಿಯಾಗಿ ಬ್ಲೆಂಡ್ ಮಾಡಿ ರೂಪಗೊಂಡ ಚಿತ್ರ ‘ಯುವರತ್ನ’. ಶಿಕ್ಷಣ ಎನ್ನುವುದು ವ್ಯಾಪಾರ ಆಗುತ್ತಿರುವ ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ ಆನಂದರಾಮ್ ಇಂತಹ ವಿಷಯವನ್ನು ಎತ್ತಿಕೊಂಡಿರುವುದು ಮಹತ್ವದಾಗಿದೆ. ಒಂದು ಚಿತ್ರ ಅಂದ ಮೇಲೆ ಗುಣಾವಗುಣಗಳು ಇರುತ್ತವೆ. ಈ ಚಿತ್ರದಲ್ಲಿಯೂ ಇವೇ ಆದರೆ ಚಿತ್ರ ನೋಡುವಾಗ ಆಗುವ ಪರಿಣಾಮ ಒಂದು ಫಾಸಿಟಿವ್ ವೈಬ್ಸ್ ನಮ್ಮಲ್ಲಿ ನಿರ್ಮಾಣ ಮಾಡುತ್ತದೆ. ಈ ಪರಿಣಾಮ ಎಷ್ಟು ದೀರ್ಘಕಾಲದ್ದು ಎಂಬುದು ತಿಳಿಯದು.

ನಮ್ಮ ವ್ಯವಸ್ಥೆಯಲ್ಲಿ ಶಿಕ್ಷಣದ ಕುರಿತು ಹಲವು ಸಮಸ್ಯೆಗಳಿವೆ. ಅದು ಕ್ಲಾಸ್ ರೂಮಿನಿಂದ ಹಿಡಿದು ಸರಕಾರದ ಆಡಳಿತ ವರ್ಗದವರೆಗೆ ವಿಸ್ತರಿಸಿದೆ ಒಂದನ್ನೊಂದು ಪ್ರಭಾವಿಸುತ್ತಿರುತ್ತದೆ. ಇಂತಹ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಸರಕಾರಿ ಕಾಲೇಜುಗಳು ಸ್ಥಿತಿ, ಅವುಗಳನ್ನು ಮುಚ್ಚಿಸಲು ಕಾಪೋರೇಟ್ ವಲಯ ಮಾಡುತ್ತಿರುವ ಕುತಂತ್ರಗಳು, ಭಾಷಾ ಮಾಧ್ಯಮದ ಸಮಸ್ಯೆ, ವಿಧ್ಯಾರ್ಥಿಗಳಿಗೆ ಉಂಟಾಗುತ್ತಿರುವ ಒತ್ತಡ, ಪೋಷಕರು ಪಡುವ ಕಷ್ಟ, ವೈಟ್ ಕಾಲರ್ ಕ್ರಿಮಿನಲ್‌ಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿರುವ ಬಗೆ ಇಂತಹ ವಿವಿಧ ಅಂಶಗಳನ್ನು ಇದು ಪ್ರಸೆಂಟ್ ಮಾಡಲು ಪ್ರಯತ್ನಿಸುತ್ತದೆ. ಇವುಗಳಿಗೆ ಪರಿಹಾರ ರೂಪದ ಅಂಶಗಳನ್ನು ಎಂಟರಟೈನ್ ಆಗಿ ಹೇಳಿದ್ದಾರೆ. ಬೇಗ ಬೇಗ ಈ ವಿಷಯಗಳನ್ನು ತೋರಿಸುತ್ತಾ ಹೋಗುತ್ತಾರೆ. ಹೀಗೆ ಆಗುವುದಕ್ಕೆ ಕಾರಣ ಕಟೆಂಟ್ ಚೆನ್ನಾಗಿದ್ದರು ಅದರ ಬರವಣಿಗೆ ಇನ್ನೂ ಆಳಕ್ಕೆ ಇಲ್ಲದಾಗಿರಬಹುದು. ಶಿಕ್ಷಣ ಎನ್ನುವುದು ವ್ಯಾಪಾರವಾಗಬಾರದು. ಅದು ಸೇವೆ ಆಗಬೇಕು ಎಂಬ ಘನ ಉದ್ದೇಶವನ್ನು ಈ ಚಿತ್ರ ಹೇಳಲು ಬಯಸುತ್ತದೆ. ಈ ಉದ್ದೇಶವನ್ನು ಭಾವನಾತ್ಮಕ ನೆಲೆಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.

ಇಂತಹ ಒಂದು ವಸ್ತು ವಿಷಯವನ್ನು ಪವರ್ ಸ್ಟಾರ್ ಪುನೀತರಾಜಕುಮಾರ ಒಪ್ಪಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ಈ ಚಿತ್ರದಲ್ಲಿ ನಾಯಕನ ಸಮ ಸಮವಾಗಿ ನಿಲ್ಲುವ ಪಾತ್ರ ಪ್ರಕಾಶ ರೈ ಅವರದು. ಇವರಿಬ್ಬರು ಇಡೀ ಚಿತ್ರದ ಶಕ್ತಿಯಾಗಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಸೀಟು ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಒಬ್ಬ ವಿದ್ಯಾರ್ಥಿನಿಯಿಂದ ಪ್ರಾರಂಭವಾಗುವ ಚಿತ್ರ. ಅವಳ ಸಾವಿಗೆ ನ್ಯಾಯ ಕೊಡಿಸುವ ದಾಟಿಯಲ್ಲಿಯೇ ಸಾಗಿದರು ಸಹ ಅದನ್ನು ಇನ್ನೂ ಕ್ಯಾರಿ ಮಾಡಬೇಕಾಗಿತ್ತು. ತನ್ನ ಕಾಲೇಜನ್ನು ಮತ್ತು ತನ್ನ ಗುರುವಿಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ಬರುವ ನಾಯಕ ಹಲವು ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದೇ ಕಥಾ ಹಂದರ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಇರಬೇಕಾದ ಎಲ್ಲ ಅಂಶಗಳು ಇದರಲ್ಲಿವೆ. ಅವುಗಳಿಗೆ ಕಳಶವಿಟ್ಟಂತೆ ಅಪ್ಪು ಅಭಿನಯವಿದೆ. ಡ್ಯಾನ್ಸ್, ಫೈಟ್ ಸೀನ್‌ಗಳಲ್ಲಿ ಅವರು ಸೂಪರ್. ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ, ಪೋಷಕರಿಗೆ ತಮ್ಮ ತಪ್ಪನ್ನು ಅರಿವು ಮಾಡಿಸುವಾಗ, ಗುರುವಿನ ಮುಂದೆ ಸಭ್ಯ ಶಿಷ್ಯನಾಗಿರುವಾಗ, ಸ್ನೇಹಿತರ ಜೊತೆ ಭಾವನೆ ಹಂಚಿಕೊಳ್ಳುವಾಗ, ನಾಯಕಿಯೊಂದಿಗೆ ಪ್ರೇಮ ನಿವೇದಿಸಿಕೊಳ್ಳವಾಗ ಪುನೀತ ತಮ್ಮದೆಯಾದ ಮ್ಯಾನರಿಸಂ ಮೆರೆದಿದ್ದಾರೆ. ಪ್ರಕಾಶ ರೈ ಅವರು ಗುರುಮುಖ ದೇಶಪಾಂಡೆ ಎನ್ನುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಂತಹ ಶಿಕ್ಷಕ ನಮಗೂ ಇರಬೇಕಿತ್ತು ಎನಿಸುತ್ತದೆ. ಪುನೀತ ಹಾಗೂ ಪ್ರಕಾಶ ರೈ ಅವರ ಪಾತ್ರಕ್ಕೆ ಕನೆಕ್ಟ್ ಆದ ಹಾಗೇ ಬೇರೆ ಯಾವ ಪಾತ್ರಗಳಿಗೂ ಕನೆಕ್ಟ್ ಆಗುವುದಿಲ್ಲ. ಈ ಪಾತ್ರಗಳಿಗೆ ಇನ್ನೊಂದಿಷ್ಟು ರೌಂಡ್ ಆಫ್ ಮಾಡಬೇಕಿತ್ತು. ದಿಗಂತ, ಅಚ್ಯುತ, ಅವಿನಾಶ, ಡಾಲಿ ಧನಂಜಯ, ಸಾಧುಕೋಕಿಲ, ರಂಗಾಯಣ ರಘು ಮುಂತಾದವರ ಪಾತ್ರಗಳಿಗೆ ನೀಡಬೇಕಾದ ಫೇ ಆಫ್ ನೀಡಿಲ್ಲ. ಅಷ್ಟು ಪವರ್ ಫುಲ್ ಆಗಿರುವ ನಾಯಕನಿಗೆ ಅಷ್ಟೆ ಶಕ್ತಿಯುತವಾದ ಪ್ರತಿನಾಯಕ ಬೇಕಾಗುತ್ತದೆ. ಇಲ್ಲಿ ಸಾಯಿಕುಮಾರ ಇದ್ದರು ಸಹ ಅವರ ಪಾತ್ರಕ್ಕೆ ಇನ್ನು ಏನೋ ಬೇಕಿತ್ತು ಎನಿಸುತ್ತದೆ. ಇನ್ನೂ ನಾಯಕಿ ಶೇಯಶಾ ಪಾತ್ರ ಹಾಡು ಮತ್ತು ಕೆಲವು ದೃಶ್ಯಗಳಿಗೆ ಮಾತ್ರ ಸಿಮೀತವಾಗಿದ್ದು, ಡ್ಯಾನ್ಸ್ ಮಾತ್ರ ಪುನೀತ ಅವರ ಸಮವಾಗಿದೆ.

ಚಿತ್ರದ ಮೊದಲನೇಯ ಭಾಗ ಎಲ್ಲ ಮಸಾಲಾ ಮಿಕ್ಸ್ ತರ ಇದೆ. ಹಾಡು ಡ್ಯಾನ್ಸ್, ಫೈಟ್, ಮೌಲ್ಯಗಳ ಪಾಠ ಇವೆಲ್ಲವನ್ನು  ತೋರಿಸಲು ಸ್ಕ್ರೀನ್ ಪ್ಲೇಯನ್ನು ಸಸ್ಪೆನ್ಸ್ ಮಾದರಿಯಲ್ಲಿ ಮಾಡಲು ಪ್ರಯತ್ನಿಸಿದರು ಅದು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಎರಡನೇಯ ಭಾಗ ಮಾತ್ರ ಚಿತ್ರದ ಅರ್ಥವಂತಿಕೆಯನ್ನು ಹೆಚ್ಚಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಯನ್ನು ತೋರಿಸುತ್ತಾ ಅವುಗಳಿಗೆ ಪರಿಹಾರದ ಮಾದರಿಯನ್ನು ಸಹ ಒದಗಿಸುತ್ತದೆ. ಗುರು ಎನ್ನುವನು ಮಾಡಬೇಕಾದ ಕರ್ತವ್ಯದ ಕುರಿತು ಪ್ರಸ್ತುತಪಡಿಸುವ ಸನ್ನಿವೇಶಗಳಲ್ಲಿ ಪ್ರಕಾಶ ರೈ ಹೇಳುವ ಮಾತುಗಳು ಮಹತ್ವದಾಗಿವೆ. ಗುರು ಶಾಲೆ ಕಾಲೇಜುಗಳಲ್ಲಿ ಮಾತ್ರ ಪಾಠ ಮಾಡುವುದು ಅಷ್ಟೇ ಅಲ್ಲದೆ, ಬೀದಿಯಲ್ಲಿ ಇಳಿದು ಹೋರಾಟ ಮಾಡುವ ಸ್ಥಿತಿ ಬಂದರೆ ಅದನ್ನು ನಿರ್ವಹಿಸಬೇಕು. ಗುರುವಿನ ಹಾಗೇ ಬೆಳೆದ ಶಿಷ್ಯರು ಅವನನ್ನು ಮೀರಿಸಿದರೆ ಅವನು ಪಡುವ ಖುಷಿ, ಗುರುವಿನ ತ್ಯಾಗ, ಶಿಷ್ಯನ ನಿಷ್ಠೆ ಇಂತಹ ಅಂಶಗಳನ್ನು ಇದು ಒಳಗೊಂಡಿದೆ. ಒಂದು ಕ್ಷೇತ್ರದಲ್ಲಿ ಸುಧಾರಣೆ ತರಲು ಬಯಸಿದಾಗ ನಮ್ಮ ಜೊತೆಗೆ ಕೆಲಸ ಮಾಡವ ಸಹದ್ಯೋಗಿಗಳ ಸಹಕಾರ ಬಹಳ ಮುಖ್ಯ. ಕೆಲವರು ತಮ್ಮ ಸಣ್ಣ ಮನಸ್ಥಿತಿಯಿಂದ ಅಸಹಕಾರವನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎನ್ನವಂತಹ ವಿಷಯನ್ನು ಎತ್ತಿ ತೋರಿಸಿದ್ದು ಮಹತ್ವದಾಗಿದೆ.

‘ಗುರವಿಗೆ ಶಿಷ್ಯ ಬಗೆಯುವ ದ್ರೋಹ, ಶಿಷ್ಯ ಗುರುವಿಗೆ ಬಗೆಯೋ ದ್ರೋಹ ಎರಡು ಒಂದೇ’ ‘ಫಸ್ಟ್ ಬೆಂಚಲ್ಲಿ ಕೂತರೆ ಬರೀ ಬೋರ್ಡ್ ಕಾಣುತ್ತೇ. ಲಾಸ್ಟ್ ಬೆಂಚಲ್ಲಿ ವರ್ಲ್ದೇ ಕಾಣುತ್ತೇ’, ಎಕ್ಸಾಮ್‌ನಲ್ಲಿ ಫೇಲ್ ಆಗಬಹುದು, ಆದರೆ ಜೀವನದಲ್ಲಿ ಫೇಲ್ ಆಗಬಾರದು’ ‘ಇಂಗ್ಲೀಷ್ ಎನ್ನುವುದು ಭಾಷೆ, ಜ್ಞಾನವಲ್ಲ’ ಮುಂತಾದ ಡೈಲಾಗ್ ಗಳು ಕಚುಗುಳಿ ಇಡುವುದರ ಜೊತೆಗೆ ಪ್ರೇಕ್ಷಕನನ್ನು ಎಜ್ಯುಕೇಟ್ ಮಾಡುತ್ತವೆ.

ಒಂದು ಸಾಮಾನ್ಯ ದೃಶ್ಯವನ್ನು ಸಹ ಎತ್ತರ ಮಟ್ಟಕ್ಕೆ ಒಯ್ಯುವುದು ಸಂಗೀತ ನಿರ್ದೇಶಕ ತಮನ್ನ ಅವರ ಬಿಜಿಎಂ. ಭಾವನಾತ್ಮವಾಗಿ ನಾವು ಬೇರೆ ಬೇರೆ ಸನ್ನಿವೇಶಗಳಿಗೆ ಕನೆಕ್ಟ್ ಆಗಲು ಈ ಸಂಗೀತ ಮುಖ್ಯ ಕಾರಣ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಚಿತ್ರಕ್ಕೆ ಮೆರಗು ತಂದಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾಲೇಜನ್ನು ತಮ್ಮ ಕ್ಯಾಮಾರಾ ಕಣ್ಣಿನಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಏರಿಯಲ್ ವೀವ್ ನಲ್ಲಿ ಇವೆರಡನ್ನು ತೋರಿಸಿರುವ ಪರಿ ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ. ಸಿನಿಮಾಗಳಲ್ಲಿನ ಒಳ್ಳೆಯ ವಿಷಯವನ್ನು ಮಾತ್ರ ಹೇಗೆ ಗ್ರಹಿಸಬೇಕು ಎನ್ನುವುದರ ಕುರಿತು ಪುನೀತ ಡೈಲಾಗ್ ರೂಪದಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಹಾಗೇ ನೋಡಿದರೆ ಥೇಟರ್ ನಿಂದ ಹೊರಗೆ ಬರುವಾಗ ಮುಖದಲ್ಲಿ ಒಂದು ಆತ್ಮವಿಶ್ವಾಸದ ನಗೆ ಇರುತ್ತದೆ. ರಾಜಕುಮಾರ ಚಿತ್ರದ ಬಳಿಕ ನಿರ್ದೇಶಕ ಸಂತೋಷ ಆನಂದರಾಮ್ ಹಾಗೂ ಪುನೀತರಾಜಕುಮಾರ ಜೋಡಿ ಮತ್ತೊಂದು ಒಳ್ಳೆಯ ಸಿನಿಮಾ ನೀಡಿದೆ.




Leave a Reply

Your email address will not be published. Required fields are marked *

error: Content is protected !!