ನಿಷ್ಠುರವಾದಿ ಜಗದ ಜಂಗಮನ ಕಥನ

590

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-8

ಅಲ್ಲಮಪ್ರಭುವಿನ ಜೀವನ ಕುರಿತು ಹರಿಹರನ ರಗಳೆ, ಚಾಮರಸನ ಪ್ರಭುಲಿಂಗಲೀಲೆ, ಶೂನ್ಯ ಸಂಪಾದನೆಗಳು, ಆಧುನಿಕವಾದ ವಿವಿಧ ರೀತಿಯ ಬರಹಗಳು ಬಹುಮುಖಿ ನೆಲೆಯಲ್ಲಿ ರಚಿತಗೊಂಡಿವೆ. ಇವೆಲ್ಲವನ್ನೂ ಅಧ್ಯಯನ ಮಾಡಿ, ಸಂಪೂರ್ಣವಾಗಿ ಯಾವ ಒಂದು ಕಾವ್ಯ ಅಥವಾ ಬರಹವನ್ನು ಅನುಸರಿಸದೇ, ಈ ಎಲ್ಲ ಬರಹಗಳನ್ನು ಗಮನದಲ್ಲಿಟ್ಟುಕೊಂಡು, ವಚನಗಳನ್ನು ಬಳಸಿಕೊಂಡು ಸೃಜನಶೀಲ ನೆಲೆಯಲ್ಲಿ ರೂಪಗೊಂಡ ಚಿತ್ರ ‘ಅಲ್ಲಮ’. ಕನ್ನಡನಾಡಿನ ಮೇರುಸದೃಶ್ಯ ವ್ಯಕ್ತಿತ್ವದ ಅಲ್ಲಮನನ್ನು ಕಲೆಯ ಮೂಲಕ ಬಂಧಿಸಿ ಅಲ್ಲಮ ಇಷ್ಟೇ, ಅವನ ಜೀವನ ಚಿತ್ರಣ ಇದು ಎಂದು ನಿರ್ಧಿಷ್ಟವಾಗಿ ಹೇಳುವುದು ಕಷ್ಟ. ಸುಲಭ ಗ್ರಹಿಕೆಗೆ ಸಿಕ್ಕದ ಇಂತಹ ವ್ಯಕ್ತಿತ್ವದ ಚಿತ್ರಣವನ್ನು ತೆರೆಯ ಮೇಲೆ ತರುವ ಪ್ರಯತ್ನವೇ ಮಹತ್ವದ್ದು.

ಇತಿಹಾಸವನ್ನು ನಿರ್ಧಿಷ್ಟಕರಿಸುವ ಪ್ರಯತ್ನ ಅದರ ಜಡತ್ವಕ್ಕೆ ಕಾರಣವಾಗುತ್ತದೆ. ಇಂತಹ ಒಬ್ಬ ವ್ಯಕ್ತಿಯ ಚಿತ್ರಣಗಳು ಬಂದಾಗ ವಾದ ವಿವಾದ ಸಹಜ. ಅದು ನಡೆಯಬೇಕಾದದ್ದು ಅನಿವಾರ್ಯ ಸಹ. ಆ ವಾದ ಸಂವಾದದ ನೆಲೆಯಲ್ಲಿ ಇರಬೇಕೇ ವಿನಃ ಸಂಘರ್ಷದ ಸ್ವರೂಪ ಹೊಂದಬಾರದು. ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಚಿತ್ರಗಳನ್ನು ಮಾಡುವಾಗ ನಿರ್ದೇಶಕನು ಇತಿಹಾಸಕ್ಕೆ ಹತ್ತಿರ ಎನ್ನುವಂತಹ ಘಟನೆಗಳನ್ನು ಚಿತ್ರಿಸಬೇಕು ಜೊತೆಗೆ ಅವನ ಸೃಜನಶೀಲತೆಗೆ ಅವಕಾಶವಿರಬೇಕು. ಆ ಸೃಜನತೆಯನ್ನು ಒಪ್ಪಿಕೊಳ್ಳುವುದು ಆರೋಗ್ಯಯುತ ಸಮಾಜದ ಲಕ್ಷಣ. ಇಂತಹ ಸ್ವಾತಂತ್ರ್ಯದ ಬಗ್ಗೆ ಅಪಾರ ಭರವಸೆ ನಿರ್ದೇಶಕ ಟಿ.ಎಸ್ ನಾಗಾಭರಣರಲ್ಲಿ ಕಾಣುತ್ತದೆ. ಹೀಗಾಗಿ ವಚನ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಬಳಿಸಿಕೊಂಡು ಇದನ್ನು ನಿರ್ಮಿಸಿದ್ದಾರೆ. ಕಥೆ ತಯಾರಿಯಾಗಲು ಮೂರು ವರ್ಷವಾಗಿದೆ ಎಂದರೆ ಅದರ ಹಿಂದಿನ ಶ್ರಮ ಅಪಾರವಾದದ್ದು ಎಂದು ಸ್ಪಷ್ಟವಾಗುತ್ತದೆ.

ಅಪಾರ ಶ್ರಮದಿಂದ ಸಿದ್ಧಗೊಳಿಸಿದ ಕಥೆಯನ್ನು ತೆರೆಯ ಮೇಲೆ ಅಷ್ಟೇ ಅದ್ಭುತವಾಗಿ ತಂದಿದ್ದಾರೆ. ಅಲ್ಲಮನ ಜೀವನದೃಷ್ಠಿಕೋನ, ಅವನು ಎದುರಿಸಿದ ಸವಾಲು ಮತ್ತು ಸಮಸ್ಯೆಗಳು, ಅವುಗಳೆಲ್ಲವನ್ನು ಮೀರಿ ಅನುಭಾವಿಕ ಸಾಧನೆಯ ಅತ್ಯಂತ ಉನ್ನತ ಹಂತವನ್ನು ಮುಟ್ಟಿ, ಅದು ಸಮಾಜಕ್ಕೆ, ಇತರ ಏಳ್ಗೆಗೆ ಸಹಾಯವಾಗುಂತೆ ಮಾಡಿದ ಬಗೆ ಈ ಚಿತ್ರದಲ್ಲಿದೆ. ಅಲ್ಲಮನ ಬಾಲ್ಯ, ಘಟಿಕಾಸ್ಥಾನದಲ್ಲಿನ ಶಿಕ್ಷಣ, ಯೌವನದಲ್ಲಿ ಮಾಯೆಯೊಂದಿಗಿನ ಸಂವಾದ, ಉತ್ತರದ ಕಡೆ ಸಂಚಾರ, ಕಲ್ಯಾಣದಲ್ಲಿ ಶೂನ್ಯ ಸಿಂಹಾಸನದ ಪೀಠಾಧಿಪತಿಯಾಗುವುದು, ನಂತರ ಶ್ರೀಶೈಲ ಕಡೆಗೆ ಪಯಣ, ನಿರ್ವಲಯ ಕಂಡು ಪರಾತತ್ವದಲ್ಲಿ ಒಂದಾಗುವ ಚಿತ್ರಣ ಇದರಲ್ಲಿದೆ. ಈ ಅಂಶಗಳನ್ನು ರೂಪಿಸಿಕೊಳ್ಳುವಾಗ ವಚನಗಳು ಮುಖ್ಯ ಆಧಾರವಾಗಿದ್ದು ಸ್ಪಷ್ಟವಾಗುತ್ತದೆ. ಅಲ್ಲಮನ ಆ ಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಸಂಗೀತ ಬಹಳ ಮಹತ್ವದ ಪಾತ್ರ ನಿರ್ವಹಿಸಿದೆ. ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಎಲ್ಲ ಭಾವಗಳ ಉದ್ರೇಕದ ಮೂಲ ಪ್ರದೀಪಿಕೆ ಸಂಗೀತವಾಗಿದೆ. ಅಲ್ಲಮಪ್ರಭು ಕಲ್ಯಾಣ ನಗರ ಪ್ರವೇಶದಿಂದ ಪ್ರಾರಂಭವಾಗುವ ಚಿತ್ರ ಫ್ಲ್ಯಾಸ್ ಬ್ಯಾಕ್ ಮೂಲಕ ಅಲ್ಲಮ ಜೀವನ ಚಿತ್ರ ತೆರೆದುಕೊಳ್ಳುತ್ತದೆ.

ಬಾಲ್ಯದ ಅವನ ಜೀವನ ಶೈಲಿಯನ್ನು ಹಾಡಿನ ಮೂಲಕ ತೋರಿಸುವ ನಿರ್ದೇಶಕರು ಅವನ ‘ಮದ್ದಳೆ’ ಆಸಕ್ತಿಯನ್ನು ಅಲ್ಲಿಯೇ ತೋರಿಸುತ್ತಾರೆ. ತಾಯಿಯ ಮಮತೆ ಅಪಾರವಾಗಿದ್ದರು, ನಂದಿಮಯನ ಪ್ರಭಾವದಿಂದ ಮನೆ ಬಿಡುವ ಅಲ್ಲಮ, ಬಳ್ಳಿಗಾವಿಯ ಘಟಿಕಾಸ್ಥಾನವನ್ನು ಸೇರುತ್ತಾನೆ. ಬಾಲ ಅಲ್ಲಮನಾಗಿ ನಟಿಸಿರುವ ಬಾಲಕನ ನಟನೆ ಚೆನ್ನಾಗಿದೆ. ಘಟಿಕಾಸ್ಥಾನವನ್ನು ತೋರಿಸಿರುವ ಪರಿ ವಾಸ್ತವದ ಚಿತ್ರಣದಂತಿದೆ. ಯುವಕ ಅಲ್ಲಮನಾಗಿ ಕಾಣಿಸಿಕೊಳ್ಳುವ ‘ಧನಂಜಯ’ ಅಲ್ಲಮನನ್ನು ಆಹ್ವಾನಿಸಿಕೊಂಡವರಂತೆ ಕಾಣಿಸುತ್ತಾರೆ. ಕುರುಚಲ ಗಡ್ಡ, ಆ ಮುಖದ ಮೇಲಿನ ಮಂದಹಾಸ, ಆಳ ಜ್ಞಾನ ಪ್ರತೀಕದಂತೆ ಗೋಚರಿಸುತ್ತದೆ. ಹೀಗೆ ಕಥೆಯ ಮುಂದುವರೆದ ಹಾಗೇ ತಾವೇ ಅಲ್ಲಮರಾಗಿ ಪರಿವರ್ತನೆ ಹೊಂದಿದವರ ಹಾಗೇ ಅವರ ನಟನೆಯಿದೆ. ಗುರುವಿನ ಸಣ್ಣತನವನ್ನು ಪ್ರತಿರೋಧಿಸಿ ಘಟಿಕಾಸ್ಥಾನದಿಂದ ತೊರೆಯುವ ಅಲ್ಲಮ, ತನ್ನ ತಾಯಿಯನ್ನು ಕಾಣುವ ಆಸೆಯಿಂದ ತನ್ನ ಊರಿಗೆ ತೆರಳಿ ತಾಯಿ ಸಿಗದೆ ನಿರಾಶನಾಗುವುದು. ನಂತರ ಮಾಯೆಯ ಮೋಹಕ್ಕೆ ಒಳಾಗಾಗಿ ಅದನ್ನು ಮೀರುವುದು ಅದ್ಭುತವಾಗಿದೆ. ಮಾಯೆಯ ಪಾತ್ರದಲ್ಲಿ ನಟಿಸಿರುವ ಮೇಘನಾ ರಾಜ್ ಅವರದು ಮಾಗಿದ ನಟನೆ. ಚಿತ್ರಕ್ಕೆ ಅವಶ್ಯಕವಾಗಿ ಬೇಕಾದ ನೃತ್ಯವನ್ನು ಅದ್ಭುತವಾಗಿ ಮಾಡಿದ್ದಾರೆ. ಅಲ್ಲಮ ಮತ್ತು ಮಾಯೆಯ ನಡುವಿನ ಸಂವಾದ ಅತ್ಯಂತ ಉನ್ನತ ಭೌದ್ದಿಕ ನೆಲೆಯಲ್ಲಿ ನಡೆಯುತ್ತದೆ. ಅದೇ ರೀತಿ ಘಟಿಕಾಸ್ಥಾನದಲ್ಲಿ ನಡೆಯುವ ಪ್ರತಿಭಾಪ್ರದರ್ಶನ ಮನಸ್ಸನ್ನು ಆವರಿಸುವುದರ ಜೊತೆಗೆ ಚಿಂತನೆಗೆ ಹಚ್ಚುತ್ತದೆ. ಇಂತಹ ಸಂವಾದ ಪ್ರಸಂಗಗಳನ್ನು ಗಮನಿಸಿದಾಗ ಸಂಭಾಷಣೆಕಾರರ ವಿದ್ವತ್ತು ತಿಳಿಯುತ್ತದೆ.

ಮಾಯೆಯನ್ನು ತೊರೆದು ಹೋಗವಾಗ, ಅನಮಿಷ ಗುರವಿನ ಚಿತ್ರಣ ಆ ಚೆನ್ನಾಗಿದೆ. ಅವನ ಕೈಯಿಂದ ಲಿಂಗ ಪಡೆದುಕೊಂಡು ಅಲ್ಲಮ ಹೊರ ಬರುವ ದೃಶ್ಯವು ಸಿನಿಮಾ ಒಂದು ಸಾಮೂಹಿಕ ಕ್ರಿಯೆ ಎನ್ನುವುದನ್ನು ಸೂಚಿಸುತ್ತದೆ. ಧನಂಜಯನ ಮುಖದ ಬದಲಾವಣೆ ಕ್ರಮ, ಆ ಅಭಿವ್ಯಕ್ತಿಗೆ ಬೇಕಾದ ಪರಿಸರ, ಸಂಗೀತ ಎಲ್ಲವು ಒಂದಕ್ಕೊಂದು ಸೇರಿ ಆ ದೃಶ್ಯವನ್ನು ಎತ್ತರಕ್ಕೆ ಒಯ್ಯುತ್ತದೆ. ಅಲ್ಲಮ ಕಲ್ಯಾಣಕ್ಕೆ ಬರುವ ಪ್ರಸಂಗ ಚೆನ್ನಾಗಿದ್ದರು ಸಹ ಇನ್ನೂ ದೊಡ್ಡದಾಗಿ ಕಲಾತ್ಮಕವಾಗಿ ಅಭಿವ್ಯಕ್ತ ಪಡಿಸಬಹುದಾಗಿತ್ತು. ಅಲ್ಲಮ ಮತ್ತು ಬಸವಣ್ಣನವರ ಮಹಾಸಂಗಮವನ್ನು ಎಷ್ಟು ತೀವ್ರವಾಗಿ ತೋರಿಸಬೇಕಿತ್ತೋ ಅಷ್ಟು ತೀವ್ರತೆಯಿಂದ ಬಂದಿಲ್ಲ. ಚಿತ್ರದ ಮೊದಲ ಭಾಗದಲ್ಲಿದ್ದ ಬರವಣೆಗೆಯ ಹಿಡಿತ ಎರಡನೇಯ ಭಾಗದಲ್ಲಿ ಇಲ್ಲವೆನಿಸಿತು. ಹಾಗೇ ದೃಶ್ಯಗಳು ಸಹ. ಮೊದಲ ಭಾಗದಲ್ಲಿ ಹಾಕಿದ ಮನೆ, ಊರು, ಘಟಿಕಾಸ್ಥಾನ, ಮಾಯೆಯ ಮನೆಯ ಸೆಟ್ ಗಳು ಮತ್ತು ಕಾಸ್ಟ್ಯೂಮ್ ಗಳು ತುಂಬಾ ಚೆನ್ನಾಗಿವೆ. ಎರಡನೇಯ ಭಾಗದಲ್ಲಿ ಬರುವ ಕಲ್ಯಾಣ ಪಟ್ಟಣ, ಅನುಭವ ಮಂಟಪದ ಸೆಟ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.  ಶರಣರಿಗೆ, ರಾಜವರ್ಗಕ್ಕೆ ಹಾಕಿದ ಕಾಸ್ಟ್ಯೂಮ್ಸ್ ಕನ್ವಿಸಿಂಗ್ ಆಗಿಲ್ಲ.

ಇಷ್ಟೆಲ್ಲದರ ನಡುವೆ ಆ ಕಾಲವನ್ನು ಕಟ್ಟಿಕೊಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಚಿತ್ರಕ್ಕೆ ಬಳಸಿದ ಭಾಷೆ ಸೂಕ್ತವಾಗಿದೆ. ಸಂದರ್ಭಕ್ಕೆ ತಕ್ಕ ಹಾಗೇ ವಚನಗಳನ್ನು ಬಳಸಿದರ ಪರಿಣಾಮ ವಿವಿಧ ಗಂಭೀರ ಮತ್ತು ಅನುಭಾವಿಕ ನೆಲೆಯ ಹಲವು ಅಂಶಗಳು ಬೇಗ ಅರ್ಥವಾಗುತ್ತವೆ. ಆಗಿನ ಕಾಲದ ಅಳತೆ ಮಾಪನಗಳ ವಿಷಯವನ್ನು ನಿರ್ದೇಶಕ ಉದ್ದೇಶಪೂರ್ವಕವಾಗಿ ತರುವುದು ಆ ಪರಿಸರದ ನಿರ್ಮಾಣಕ್ಕೆ ಮಾಡಿದ ಪ್ರಯತ್ನದಂತೆ ಕಂಡು ಬರುತ್ತವೆ. ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಯ ಮಹಾಸಂಗಮ, ಬಸವ-ಅಲ್ಲಮನ ಭೇಟಿಯನ್ನು ಹೇಳುವುದು. ಅರಿವಿನ ಬೆಳೆಕು ಅನುಭಾವದೆಡೆಗೆ ಕೊಂಡುಯ್ಯುಂತಾಗಲಿ, ‘ಅರಿವಿನ ಅರಸ ನೀವು’ ‘ಭಕ್ತಿ-ಒಳಗಿನ ತಿರುಳು’ ‘ಸಿದ್ದನಾಗು’ ‘ನೋಟವೆಂಬುದು ಕಣ್ಣಿನಿಂದಲ್ಲ ತಾಯೇ ಚಿತ್ತದಿಂದ’ ‘ತಮಗಾಗಿ ಇದ್ದಿಲು ತಂದಿದ್ದೇನೆ ಕೆಂಡ ಮಾಡಲು’ ‘ಈ ವಜ್ರಕ್ಕೆ ನಿಮ್ಮ ಸಾಣೆ ಅವಶ್ಯಕ’ ‘ಕ್ರಿಯಾಶೀಲತೆ ದುಡಿಮೆಗೆ ದಾರಿ’ ‘ಆಳವೇ ಎತ್ತರ’ ‘ಭಾವಲೋಕದಿಂದ ಹೊರ ಬಂದರೆ, ಭವ್ಯಲೋಕ ತೆರೆದುಕೊಳ್ಳುತ್ತದೆ’ ಈ ರೀತಿಯ ಸಂಭಾಷಣೆಗಳು ಅನುಭಾವಲೋವನ್ನು ತೆರೆದಿಡುತ್ತವೆ.

ಇಂತಹ ಕಥೆಗೆ ಬಹಳ ದೊಡ್ಡ ಕ್ಯಾನ್ ವಾಸ್ ಬೇಕಾಗುತ್ತದೆ. ಆದರೂ ಕಡಿಮೆ ಬಂಡವಾಳದಲ್ಲೇ ತಾನು ಹೇಳಬೇಕಾದದನ್ನು ನಿರ್ದೇಶಕ ಹೇಗೆ ಸ್ಪಷ್ಟವಾಗಿ ಚಿತ್ರಿಸಬಲ್ಲ ಎಂಬುವುದಕ್ಕೆ ಇದರಲ್ಲಿನ ಅಲ್ಲಮ-ಅನಿಮೇಷನ್ ಪ್ರಸಂಗ, ಮಾಯೆ-ಅಲ್ಲಮ ಮೊದಲಿಗೆ ಭೇಟಿ ಮಾಡುವ ಚಿತ್ರಣ, ಅವಳಿಗೆ ನೃತ್ಯ ಕಲಿಸುವುದು, ಆತ್ಮಲಿಂಗದೊಡನೆ ನೀರಿನಲ್ಲಿಯ ಚಿತ್ರಣ ಅದ್ಬುತವಾಗಿದೆ. ಗೋರಖನಾಥರ ಚಿತ್ರಣ, ಉತ್ತರದ ಹಿಮದ ನಡುವೆ ಧ್ಯಾನಕ್ಕೆ ಕುಳಿತ ಅಲ್ಲಮ, ಕೊನೆಯ ಮಗುವಿನ ರೂಪದ ಗುಹೇಶ್ವರ, ಬಯಲನು ತೋರಿಸಿದ ಪರಿ, ಉತ್ತಮಕ್ಕೆ ಉದಾಹರಣೆಯಗುತ್ತವೆ. ಅದರ ಜೊತೆಗೆ ನಿರ್ದೇಶಕ ಸ್ವಲ್ಪ ಅಜಾಗೃತಿ ವಹಿಸಿದರೆ, ಅನುಭವ ಮಂಟಪದ ಚಿತ್ರಣ, ಕಲ್ಯಾಣ ಪಟ್ಟಣದ ಚಿತ್ರಣ, ಅನುಭವ ಮಂಟಪದಲ್ಲಿ ಬೆರಳಣಿಕೆಗೆ ಸಿಗುವಷ್ಟು ಮಾತ್ರ ಇರುವ ಶರಣರು, ಕೆಲವರ ಅತಿಯಾದ ನಾಟಕೀಯ ನಟನೆ, ಕೆಲವೊಮ್ಮೆ ಆಧುನಿಕ ಮಾರ್ಬಲ್ ಗಳು ಸ್ಪಷ್ಟವಾಗಿ ಕಾಣುವುದು ಒಟ್ಟು ಚಿತ್ರದ ತೀವ್ರತೆಯನ್ನು ಕಡಿಮೆ ಮಾಡುತ್ತವೆ.

ಪ್ರತಿಯೊಂದು ಹಾಡು ಕಥನದ ಮುಂದುವರೆಕೆಯ ಭಾಗವಾಗಿಯೇ ಬಂದಿರುವುದು ವಿಶೇಷವಾಗಿದೆ. ‘ಬನವಾಸಿ ಕಾಡುತುಂಬ ಬಾನುದ್ದ ಮರಗಳು’ ಹಾಡು ಸೊಗಸಾಗಿ ಮೂಡಿ ಬಂದಿದೆ. ಈ ಹಾಡಿನಲ್ಲಿ ಅಲ್ಲಮ ಬಾಲ್ಯದ ಪರಿಸರವನ್ನು ಕಟ್ಟಿಕೊಡಲಾಗಿದೆ. ಹೀಗೆ ಬೇರೆ ಬೇರೆ ಹಾಡುಗಳನ್ನು ಬಳಿಸಿಕೊಂಡಿದ್ದಾರೆ. ಶರಣರ ವಿಶಿಷ್ಟವಾದ ಪರಿಭಾಷೆಗಳಾದ ಲಿಂಗ, ಜಂಗಮ, ದಾಸೋಹಗಳ ಸಾಮರಸ್ಯ ತತ್ವ, ಸಮಸಮಾಜದ ನಿರ್ಮಾಣದ ಕನಸು. ಅನುಭಾವಿಕ ಜೀವನದ ಎತ್ತರ ಈ ಅಂಶಗಳನ್ನು ಅತ್ಯಂತ ಸೂಕ್ತವಾಗಿ ಬಳಸಿದ್ದಾರೆ. ಒಟ್ಟು ಇಂತಹ ಮಹಾಚೇತನ ತೆರೆಯ ಮೇಲೆ ತರುವ ಪ್ರಯತ್ನವೇ ಬಹಳ ಮಹತ್ವದ್ದು ಹಾಗೂ ಧೈರ್ಯದಿಂದ ಕೂಡಿದಾಗಿದೆ.

ಇನ್ನು ನಟನಾ ವರ್ಗಕ್ಕೆ ಬಂದರೆ ನಟ ಧನಂಜಯ ಪರಿಪೂರ್ಣ ಕಲಾವಿದ. ಕಮರ್ಷಿಯಲ್ ಸಿನಿಮಾಗಳಿಗೂ ಓಕೆ. ಆರ್ಟ್ ಚಿತ್ರಗಳಿಗೂ ಓಕೆ. ಈ ಚಿತ್ರದ ನಟನೆಗಾಗಿ 2018ರಲ್ಲಿ ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್ ನಲ್ಲಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದರು. ಬಸವಣ್ಣನ ಪಾತ್ರಧಾರಿ ನಟ ಸಂಚಾರಿ ವಿಜಯ ನಟನಾ ವಿಜಯ ಮುಂದುವರೆದಿದೆ. ಅಲ್ಲಮನ ತಾಯಿಯಾಗಿ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಮಾಗಿದ ನಟನೆ, ಮಾಯಾದೇವಿ ಪಾತ್ರದಲ್ಲಿ ನಟಿ ಮೇಘನಾ ರಾಜ್ ಕಣ್ಮನ ತಣಿಸುತ್ತಾರೆ. ಹೀಗೆ ಪ್ರತಿಯೊಬ್ಬರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರ ನೋಡುಗರ ಹೃನ್ಮನ ಅರಳಿಸುವ ಸಂಗೀತಕ್ಕಾಗಿ ಬಾಪು ಪದ್ಮನಾಭ ಅವರಿಗೆ ರಾಷ್ಟ್ರೀಯ ಪ್ರಶಸ್ತಿ, 12ನೇ ಶತಮಾನದ ಶರಣರನ್ನು ಕಣ್ಮುಂದೆ ಬರುವಂತೆ ಮಾಡಿದ ಮೇಕಪ್ ಗೆ ಎನ್.ಕೆ ರಾಮಕೃಷ್ಣನ್ ಅವರಿಗೂ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಒಟ್ಟಾರೆಯಾಗಿ ಟಿ.ಎಸ್ ನಾಗಾಭರಣ ಅನ್ನೋ ಸೂಕ್ಷ್ಮ ನಿರ್ದೇಶಕನ ಕೈಯಲ್ಲಿ ಅರಳಿದ ಅತ್ಯುತ್ತಮ ಕಲಾಕೃತಿ ಇದು.




Leave a Reply

Your email address will not be published. Required fields are marked *

error: Content is protected !!