ಪ್ರತಿ ಹೆಣ್ಣು ಮಗಳ ಅಂತರಂಗ ಅಮ್ಮಚ್ಚಿ

995

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-9

ವೈದೇಹಿಯವರ ‘ಅಕ್ಕು’ ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಹಾಗೂ ‘ಅಮ್ಮಚ್ಚಿಯೆಂಬ ನೆನೆಪು’ ಈ ಮೂರು ಕಥೆಗಳನ್ನು ಸೇರಿಸಿ ಮಾಡಿದ ಚಿತ್ರ ‘ಅಮ್ಮಚ್ಚಿಯೆಂಬ ನೆನೆಪು. ಒಂದೇ ಲೇಖಕಿಯ ಮೂರು ಭಿನ್ನ ಕಥೆಗಳನ್ನು ಕೋಲಾಜ್ ಮಾಡಿರುವ ರೀತಿ ಅವು ಸ್ವತಂತ್ರ ಹಾಗೂ ಭಿನ್ನ ಕಥೆಗಳು ಎನಿಸಲು ಎಲ್ಲಿಯೂ ಆಸ್ಪದವಿಲ್ಲದ ಹಾಗೇ ನಿರ್ದೇಶಕ ಚಂಪಾ ಪಿ. ಶೆಟ್ಟಿಯವರು  ಚಿತ್ರಕಥೆಯನ್ನು ಮಾಡಿಕೊಂಡಿದ್ದಾರೆ. ಹೆಣ್ಣು ನೋಟಕ್ರಮದ ಮೂಲಕವಾಗಿ ಸಾಗುವ ಚಿತ್ರದಲ್ಲಿ ಹೆಣ್ಣಿನ ಮೇಲಿನ ಶೋಷಣೆಯನ್ನು ತೋರಿಸುತ್ತದೆ. ಪುಟ್ಟಮ್ಮತ್ತೆ, ಅಕ್ಕು ಹಾಗೂ ಅಮ್ಮಚ್ಚಿ ಇವರು ಮೂರು ತಲೆಮಾರುಗಳಂತೆ ಕಂಡು ಬರುತ್ತಾರೆ. ಪುರಷಾಂಹಕಾರದ ದೌರ್ಜನ್ಯಕ್ಕೆ ಈ ಮೂವರ ಪ್ರತಿಕ್ರಿಯೆಗಳು ಭಿನ್ನವಾಗಿವೆ. ಪುಟ್ಟಮ್ಮತ್ತೆ ಪುರುಷ ಮಾಡುವ ಶೋಷಣೆಯನ್ನು ಸಹಜ ಎಂಬಂತೆ ಗ್ರಹಿಸಿದ್ದಾಳೆ. ಅಕ್ಕು ಅಂತಹ ಶೋಷಣೆಯನ್ನು ಗುರುತಿಸಿದರು ಸಹ ಅಸಹಾಯಕ ಸ್ಥಿತಿಯಲ್ಲಿ ಇದ್ದಾಳೆ. ಪ್ರತಿರೋಧಿಸಬೇಕು ಅಂತ ಗೊತ್ತು, ಆದರೆ ಯಾವ ಮಾರ್ಗದಲ್ಲಿ ಎಂಬುದು ತಿಳಿಯದೆ ಮಾನಸಿಕ ಆಘಾತಕ್ಕೆ ತುತ್ತಾಗಿ ಬಳಲುತ್ತಿದ್ದಾಳೆ. ಆದರೆ ಸ್ವತಂತ್ರ ಪ್ರವೃತಿಯ ಅಮ್ಮಚ್ಚಿ ಇವೆರಡನ್ನು ಮೀರಿ ಬದುಕು ಕಂಡುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗುತ್ತಾಳೆ. ಇದು ಒಂದು ಜನರೇಷನ್ ಮತ್ತೊಂದು ಜನರೇಷನಕ್ಕಿಂತಲೂ ಭಿನ್ನ ಎಂಬುದನ್ನು ನಿರೂಪಿಸುತ್ತದೆ. ಮೂವರು ಒಂದೇ ಸ್ಥಳದಲ್ಲಿದ್ದರು ಪರಿಸರ ಬೀರುವ ಪರಿಣಾಮ ಭಿನ್ನವಿರುತ್ತದೆ. ಸಂಕೀರ್ಣ ಎನಿಸುವಂತ ಮನಸ್ಥಿತಿಗಳನ್ನು ಎಲ್ಲ ಪಾತ್ರಗಳ ಮೂಲಕ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ನೋಡುವಾಗ ಸರಳ ಕಥೆ ಎನಿಸಿದರು ಸಹ ಒಂದು ಆಳವಾದ ಸಂವೇದನೆಗೆ ನಾವು ಮುಖಾಮುಖಿಯಾಗುತ್ತಿದ್ದೇವೆ ಎನಿಸದಿರದು. ಗಂಡಿನ ಅಧಿಕಾರ ಪ್ರವೃತ್ತಿ, ಸಣ್ಣತನ, ಹೆಣ್ಣು ಅಂದರೆ ತನಗೆ ಮಾತ್ರ ಸಲ್ಲಬೇಕು ಎಂಬ ಭೋಗಾಪೇಕ್ಷೆ, ಪ್ರಜ್ಞಾಪೂರ್ವಕವಾದ ದೌರ್ಜನ್ಯ ಇಂತಹ ಅಂಶಗಳನ್ನು ಇಲ್ಲಿ ಕಾಣುತ್ತೇವೆ. ಅದಕ್ಕೆ ವಿವಿಧ ರೀತಿಯ ಪ್ರತಿರೋಧದ ನೆಲೆಗಳನ್ನು ಸೂಕ್ಷ್ಮ ಹಾಗೂ ಸ್ಪಷ್ಟವಾಗಿ ಗೋಚರವಾಗುತ್ತವೆ.

ಚಿತ್ರದ ಮೊದಲ ದೃಶ್ಯ ಕತ್ತಲು ಮತ್ತು ಭಯದಿಂದ ಆರಂಭವಾಗಿ, ಕೊನೆಯ ದೃಶ್ಯ ನಿಚ್ಚಳ ಬೆಳಕಿನಲ್ಲಿ ಆತ್ಮವಿಶ್ವಾಸದ ನಗುವಿನೊಂದಿಗೆ ಮುಗಿಯುವುದು ಒಟ್ಟು ಚಿತ್ರದ ಆಶಯವನ್ನು ಸೂಚಿಸುತ್ತದೆ. ಪ್ರಾರಂಭದ ಒಂದೇ ದೃಶ್ಯದಲ್ಲಿ ಪುಟ್ಟಮತ್ತೆ, ಅಕ್ಕು ಹಾಗೂ ಅಮ್ಮಚ್ಚಿಯ ಮನೋಭಾವವನ್ನು ಹೇಳಿದ್ದು ನಿರ್ದೇಶಕರ ಜಾಣ್ಮೆಯ ಪ್ರತೀಕವಾಗಿದೆ. ಸಾಹಿತಿಕ ರಚನೆಯ ಒಂದು ತಂತ್ರವಾದ ನಿರೂಪಣೆಯನ್ನು ಇಲ್ಲಿ ಚೆನ್ನಾಗಿ ಬಳಿಸಿಕೊಂಡಿದ್ದಾರೆ. ನಿರೂಪಕರಾಗಿ ಪಾತ್ರ ನಿರ್ವಹಿಸುವರ ವೈದೇಹಿಯವರ ನಿರೂಪಣೆ ಚಿತ್ರಕ್ಕೆ ಜೀವಕಳೆ ಎಂದರೇ ಅತಿಶೋಕ್ತಿಯಲ್ಲ. ಅವರು ಸಮುದ್ರ ದಂಡೆಯ ಮೇಲೆ ಕುಳಿತು ಹೇಳುವ ದೃಶ್ಯ ಆಪ್ತವಾಗಿದೆ. ಪ್ರತಿ ಲೇಖಕನ ಕನಸು ಅದು ಎನ್ನುವ ರೀತಿ ಆ ದೃಶ್ಯವಿದೆ.

ಒಂದು ತಲೆಮಾರನ್ನು ಪ್ರತಿನಿಧಿಸುವ ಪುಟ್ಟಮ್ಮತ್ತೆಯ ಜೀವನ ದುರಂತಗಳ ಸರಮಾಲೆಯಾಗಿದೆ. ಅಪ್ಪನ ಅಹಂಕಾರ ಪ್ರವೃತ್ತಿಯಿಂದ ಅಮ್ಮನನ್ನು ಕಳೆದುಕೊಳ್ಳುವ ಅವಳು, ಅಜ್ಜಿಯೊಬ್ಬಳ ಪ್ರೀತಿಯಲ್ಲಿ ಬೆಳೆಯುತ್ತಾಳೆ. ಈ ಘಟನೆಯನ್ನು ವಿವರಿಸುವಾಗ ಅವಳ ಮಾಡುವ ಪ್ರೀತಿಯ ವ್ಯಾಖ್ಯಾನ ಸಾರ್ವತ್ರಿಕವಾದ್ದದ್ದು. ಅವಳ ಫ್ಲ್ಯಾಸ್ ಬ್ಯಾಕ್ ನ್ನು ಕಪ್ಪು ಬಿಳಿಪಿನಲ್ಲಿ ಹಿಡಿದಿಟ್ಟುರುವುದು ಬಣ್ಣಗಳಿಲ್ಲದ ಅವಳ ಜೀವನ ಸಂಕೇತದಂತಿದೆ. ಹಲವು ಸಾವುಗಳು ಅವಳನ್ನು ಅನಾಥಪ್ರಜ್ಞೆಗೆ ದೂಡಿದರು, ಅವಳ ಬದುಕಿನ ಹಂಬಲ ದೊಡ್ಡದು. ಯೌವನದಲ್ಲಿ ಗಂಡನ ಕಳೆದುಕೊಂಡ ಅವಳಿಗೆ ಲೈಂಗಿಕ ಹಸಿವು ಮತ್ತು ದಾಹದ ಬಗ್ಗೆ ಕೇಳಿದಾಗ, ಎದೆಯ ಮೇಲೆ ಕೈಯಿಟ್ಟುಕೊಂಡು ಇದನ್ನು ಕಲ್ಲು ಮಾಡಿಕೊಂಡರೆ ಯಾವವು ಭಾದಿಸವು ಎನ್ನುವುದು ಅವಳ ಆಳ ನೋವನ್ನು ಸೂಚಿಸುತ್ತದೆ. ವಿಧಿವೆ ಹೆಣ್ಣು ಮಕ್ಕಳ ಪ್ರತಿನಿಧಿಯಂತೆ ಅವಳು ಕಾಣುತ್ತಾಳೆ. ಈ ಪಾತ್ರವನ್ನು ರಾಧಾಕೃಷ್ಣ ಉರಾಲ ಅವರು ಅದ್ಭುತವಾಗಿ ನಟಿಸಿದ್ದಾರೆ. ಪುರುಷನೊಬ್ಬ ಹೆಣ್ಣು ಪಾತ್ರವನ್ನು ನಿರ್ವಹಿಸುವಾಗ ತಿಳಿಯುತ್ತದೆ. ಆದರೆ ಇವರು ಯಾರು ಅಂತ ನಾವು ಹುಡುಕುವವರೆಗೆ ಅವರು ಪುರುಷ ಅಂತ ಗೊತ್ತಾಗುವುದಿಲ್ಲ ಅಷ್ಟು ಸಮರ್ಥವಾಗಿ ಅದನ್ನು ನಿಭಾಯಿಸಿದ್ದಾರೆ.

ನಾವು ನಿರ್ವಚಿಸಿಕೊಂಡ ಸೌಂದರ್ಯ ಪರಿಕಲ್ಪನೆ ಹಲವು ರೀತಿ ಆಘಾತಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಅಕ್ಕುವಿನ ಪಾತ್ರದ ಮೂಲಕ ಅರಿಯಬಹುದು. ಚಿತ್ರದಲ್ಲಿ ಬರುವ ಒಂದು ದೃಶ್ಯದಲ್ಲಿ ಸೌಂದರ್ಯದ ಬಗ್ಗೆ ಅಕ್ಕು ಮಾಡುವ ಕಾಮೆಂಟ್ ಈ ರೀತಿಯ ಯೋಚನೆಗೆ ಹಚ್ಚುತ್ತದೆ. ಅವಳಿಗೆ ಭ್ರಾಂತಿ ಆವರಿಸಿದೆ ಎಂದು ಮೇಲ್ನೋಟಕ್ಕೆ ಅನಿಸಿದರು ಅದು ಆಳವಾದ ನೋವು ಎಂಬುದು ಸ್ಪಷ್ಟವಾಗುತ್ತದೆ. ಗಂಡನಿಂದ ಆದ ಅನ್ಯಾಯವನ್ನು ನುಂಗಿಕೊಂಡು, ಅವನು ವಾಪಸ್ಸು ಬಂದಾಗ ಅವಳು ಸ್ಪೋಟಿಸುವ ಪರಿ ಅವಳ ನಿರಾಳತೆಗೆ ಕಾರಣವಾಗುತ್ತದೆ. ಬಹುತೇಕ ಹೆಣ್ಣು ಮಕ್ಕಳು ಗರ್ಭಿಸಿಕೊಂಡ ಕುದಿ ಅದು, ಅದನ್ನು ಹೇಳಲಾರದೆ, ಒಳಗೆ ಇಟ್ಟುಕೊಳ್ಳಲಾರದೆ ಅನುಭವಿಸಿ ಮಾನಸಿಕವಾಗಿ ಕುಗ್ಗಿರುತ್ತಾರೆ. ಅಂತಹವರ ಪ್ರತಿನಿಧಿಯಂತೆ ಅಕ್ಕು ಕಾಣುತ್ತಾಳೆ. ಇವಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಅಮ್ಮಚ್ಚಿ ಮತ್ತು ಪುಟ್ಟಮ್ಮತ್ತೆ. ಹೀಗಾಗಿ ಅವಳನ್ನು ನಿಭಾಯಿಸುವಲ್ಲಿ ಇತರರಿಗಿಂತ ಯಶಸ್ವಿಯಾಗುತ್ತಿರುತ್ತಾರೆ. ದೀಪಿಕಾ ಆರಾಧ್ಯ ಅವರು ಅಕ್ಕು ಪಾತ್ರವನ್ನು ನಿಭಾಯಿಸಿದ್ದಾರೆ. ಕೆಲವು ಕಡೆಗಳಲ್ಲಿ ಅತಿಯಾದ ನಾಟಕೀಯತೆ ಅವರ ಅಭಿನಯದಲ್ಲಿ ಕಂಡು ಬರುತ್ತದೆ. ಅದು ಪಾತ್ರಕ್ಕೆ ಅನಿವಾರ್ಯ ಇದ್ದರು ಸಹ ಇನ್ನೂ ಸ್ಪಲ್ಪ ಕಡಿಮೆ ಮಾಡಿಕೊಳ್ಳಬಹುದಿತ್ತು. ನಾಟಕದ ಅಭಿನಯಕ್ಕಿಂತಲೂ ಭಿನ್ನ ಅಂಶವನ್ನು ಚಲನಚಿತ್ರ ಮಾಧ್ಯಮ ಅಪೇಕ್ಷಿಸುತ್ತದೆ.

ಈ ಮೇಲಿನ ಎರಡು ವ್ಯಕ್ತಿತ್ವಗಳನ್ನು ಆಗು ಮಾಡಿಕೊಂಡು, ಭಿನ್ನವಾಗಿ ಯೋಚಿಸುವ, ಹಾಗೇ ಬದುಕಲು ಪ್ರಯತ್ನಿಸುವಳೆ ಅಮ್ಮಚ್ಚಿ. ಜೀವನಪ್ರೀತಿ ಉತ್ಸಾಹ ಹೊಂದಿದ ಇವಳು ಸ್ವತಂತ್ರ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವಳು. ಈ ಕಾರಣಕ್ಕಾಗಿ ನಿರಂತರವಾಗಿ ವೆಂಕಪ್ಪಯ್ಯನನ್ನು ವಿರೋಧಿಸುವಳು. ವೆಂಕಪ್ಪಯ್ಯ ಪುಟ್ಟಮ್ಮತ್ತೆಗೆ ಮಾಡಿದ ಸಹಾಯದ ಪ್ರತಿಫಲ ಅಧಿಕಾರ ಎನ್ನುವುದು ಅವನ ಭಾವನೆ. ಪುಟ್ಟಮ್ಮತ್ತೆಯ ಮೊಮ್ಮಗಳು ಅಮ್ಮಚ್ಚಿ ತನ್ನ ಸೊತ್ತು ಎನ್ನುವ ಹಾಗೇ ವರ್ತಿಸುವವ. ಹೀಗಾಗಿ ಇವನ ಅಧಿಕಾರ ಮತ್ತು ಅಹಂಕಾರ ಕೇಂದ್ರಿತ ಎಲ್ಲ ಕ್ರಿಯೆಗಳಿಗೆ ದಿಟ್ಟವಾದ ಪ್ರತಿರೋಧ ತೋರುವವಳು ಅಮ್ಮಚ್ಚಿ. ಇವಳು ಸ್ನೇಹ, ಸಂಬಂಧಗಳನ್ನು ಅತಿಯಾಗಿ ಪ್ರೀತಿಸುವಳು ಮತ್ತು ಗೌರವಿಸುವಳು ಆಗಿದ್ದಾಳೆ. ಚೆನ್ನಾಗಿ ಬದುಕಬೇಕೆಂಬ ಕನಸು ಕಟ್ಟಿಕೊಂಡವಳು. ಆ ಕನಸುಗಳನ್ನು ವಾಸ್ತವಗೊಳಿಸುವ ನೆಲೆಯಲ್ಲಿಯೇ ಇವಳ ಪ್ರಯತ್ನವಿರುವುದು. ಆ ಪ್ರಯತ್ನದಲ್ಲಿ ಎದುರಾಗುವ ಅಡೆತಡೆಗಳನ್ನು ಎದುರಿಸುವ ಮಾರ್ಗಗಳು ಇವಳಿಗೆ ತಿಳಿದಿವೆ. ಹೀಗಾಗಿ ಇವಳು ಅಕ್ಕು ಹಾಗೂ ಪುಟ್ಟಮ್ಮತ್ತೆಕ್ಕಿಂತಲೂ ಭಿನ್ನವಾಗಿ ನಿಲ್ಲುವಳು.

ಕೊನೆಯ ದೃಶ್ಯದಲ್ಲಿ ಅವಳು ತಿರುಪತಿಯಿಂದ ಬಂದಾಗ ಅವಳ ಮುಖದ ಮೇಲಿನ ಆತ್ಮವಿಶ್ವಾಸ ಬಿಡುಗಡೆಯ ಸಂಕೇತದಂತಿದೆ. ಈ ಬಿಡುಗಡೆ ಎನ್ನುವಂತಹದು ಪ್ರತಿ ಹೆಣ್ಣು ಮಗಳ ಅಂತರಂಗದ ಆಶೆ ಆಗಿರುತ್ತದೆ. ಈ ಪಾತ್ರವನ್ನು ವೈಜಯಂತಿ ವಿ. ಅಡಿಗ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅಮ್ಮಚ್ಚಿ ತಾವೇ ಆಗಿದ್ದಾರೆ. ಒಟ್ಟು ಬಾಡಿ ಲಾಂಗ್ವೇಜ್ ಅವಳು ನಿಜ ಅಮ್ಮಚ್ಚಿ ಎನ್ನುವ ಹಾಗಿದೆ. ಆ ನಗು, ಕೋಪ ವ್ಯಕ್ತಪಡಿಸುವಾಗ ಮೂಗು ಮುರಿಯುವ ಶೈಲಿ, ಸೀತೆಯೊಂದಿಗೆ ಇದ್ದಾಗ ಸ್ನೇಹದ ಭಾವ, ಅಜ್ಜಿಯೊಂದಿಗಿನ ಹುಸಿ ಮುನಿಸು, ವೆಂಕಯ್ಯನ ಕಂಡಾಗ ಉಕ್ಕಿ ಬರುವ ಕೋಪ, ಕನ್ನಡಿ ಕಂಡಾಗ ಉಂಟಾಗುವ ಉತ್ಸಾಹ ಇವೆಲ್ಲವನ್ನು ಅಭಿವ್ಯಕ್ತಿ ಪಡಿಸಿದ ರೀತಿಯು ಅವರು ದೊಡ್ಡ ಕಲಾವಿದೆಯಾಗಿ ಬೆಳೆಯುವ ಮುನ್ನುಡಿಯಂತಿವೆ. ವೆಂಕಪ್ಪಯ್ಯ, ಸೀತಾ, ಅಜ್ಜಯ್ಯ, ಶೇಷಮ್ಮ, ಅಣ್ಣಯ್ಯ, ವಾಸು, ಪುಟ್ಟ, ಸೌದಾಮಿನಿ, ಭಾನು ಎನ್ನುವಂತಹ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ. ವಿವಿಧ ರೀತಿಯ ಮನಸ್ಥಿತಿ ಹೊಂದಿದ ಇವು ಮುಖ್ಯವಾಗಿವೆ. ಈ ಪಾತ್ರಗಳನ್ನು ನಿರ್ವಹಿಸುವ ರಾಜ್ ಬಿ. ಶೆಟ್ಟಿ, ದಿಯಾ ಪಾಲಕ್ಕಳ್, ಗೀತಾ ಸೂರತ್ಕಲ್, ವಿಶ್ವಾನಾಥ ಉರಾಲ, ಬಿ ಜಿ ರಾಮಕೃಷ್ಣ ಮುಂತಾದವರ ಅಭಿನಯ ಸಹಜವಾಗಿದೆ.

ಒಂದು ಕೃತಿ ಸಾಹಿತ್ಯ ಮಾಧ್ಯಮದಿಂದ ಚಿತ್ರ ಮಾಧ್ಯಮಕ್ಕೆ ಬಂದಾಗ, ಆ ಕೃತಿ ಲೇಖಕರು ನಿರ್ಮಿಸಿದ ಪರಿಸರವನ್ನು ಪುನಃ ನಿರ್ಮಿಸುವುದು ಬಹಳ ಮಹತ್ವದ ಅಂಶವಾಗುತ್ತದೆ. ಆ ವಿಷಯದಲ್ಲಿ ಈ ಚಿತ್ರದ ನಿರ್ದೇಶಕರು ಯಶಸ್ವಿಯಾಗಿದ್ದರೆ. ನೋಡುಗ ಸಹ ಆ ಪರಿಸರದ ಒಂದು ಭಾಗವಾಗಿ ಬಿಡುತ್ತಾನೆ ಓದುಗನಂತೆ. ಅಷ್ಟು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಂದ ನಾಡಿನ ಸಾಂಸ್ಕೃತಿಕ ಅಂಶಗಳನ್ನು ಮೂಲದಲ್ಲಿ ಇರುವ ಹಾಗೆಯೇ ಹಿಡಿದಿಟ್ಟಿದ್ದಾರೆ. ಅದಕ್ಕೆ ಬಲ ನೀಡಿದ್ದು ಕುಂದ್ರಾಪ ಕನ್ನಡ ಭಾಷೆ. ಮತ್ತೊಂದು ಶಕ್ತಿಯೆಂದರೆ ವೈದೇಹಿಯವರೆ ಸಂಭಾಷಣೆ ಬರೆದಿದ್ದು. ಕಾಶೀನಾಥ ಪತ್ತಾರ್ ಅವರು ನೀಡಿರುವ ಸಂಗೀತ ಚಿತ್ರದ ನೆಲೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಹೊಳೆಯುವ ಹೊಳೆಯಾಚೆಗೆ, ಸರಪಳಿ ಇಲ್ಲದ ಬಂಧನ, ಏಳು ಸುತ್ತಿನ ಕೋಟೆ ಈ ಹಾಡುಗಳು ಪದೇ ಪದೇ ಕೇಳುವ ಹಾಗೆ ಇವೆ. ಚಿತ್ರದ ಸಂದರ್ಭಕ್ಕೆ ತಕ್ಕ ಹಾಗೇ ರೂಪಿತಗೊಂಡಿವೆ. ನವೀನಕುಮಾರ ಅವರ ಹದವಾದ ಛಾಯಾಗ್ರಹಣವಿದೆ. ದೃಶ್ಯ ಬಯಸುವ ಸಂವೇದನೆಯನ್ನು ಅರಿತು ಸೆರೆ ಹಿಡಿದಿದ್ದಾರೆ ಎನಿಸುತ್ತದೆ. ಭಿನ್ನ ಪ್ರಯೋಗಕ್ಕೆ ಕೈ ಹಾಕಿಲ್ಲ. ಹೀಗಾಗಿ ಸರಳವಾಗಿ ಚಿತ್ರಗಳು ವಾಸ್ತವದ ನೆಲೆಗಟ್ಟಿನಲ್ಲಿ ಗೋಚರಿಸುತ್ತವೆ. ಅಕ್ಕು ಬಂಧಿಯಾಗಿರವುದನ್ನು ಸರಳುಗಳ ನೆರೆಳುಗಳ ಮೂಲಕ ತೋರಿಸಿದ್ದು, ಸಮುದ್ರ, ತೆಂಗಿನ ಮರಗಳು, ಸೂರ್ಯೊದಯ ಚೆನ್ನಾಗಿ ತೋರಿಸಿದ್ದಾರೆ. ಪಾತ್ರದ ಭಾವ ಪ್ರಕಟವಾಗುವಾಗ ಅವರ ಮುಖವನ್ನು ಜೂಮ್ ನಲ್ಲಿ ತೋರಿಸಿದ್ದು ಚೆನ್ನಾಗಿತ್ತು. ಒಂದು ಕಮರ್ಷಿಯಲ್ ಮತ್ತು ಆರ್ಟ್ ಮೂವಿಗಳ ಎರಡು ಅಂಶಗಳು ಇದರಲ್ಲಿ ಕಾಣುತ್ತವೆ. ಹಾಗಾಗಿ ಇವೆರಡರ ಮಧ್ಯದ ಸ್ಥಾನದಲ್ಲಿ ಈ ಚಿತ್ರ ನಿಲ್ಲುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!