ಪಡ್ಡಾಯಿ: ಪಾಪಪ್ರಜ್ಞೆಯಾಚೆಗೆ

644

ಡಾ.ವಿನಯ ನಂದಿಹಾಳ ಅವರ ಮೂವಿ ಮಾತು ಅಂಕಣ ಬರಹ ಭಾಗ-11

ವಿಲಿಯಮ್ ಷೇಕ್ಸ್ ಪಿಯರ್ ರಚಿಸಿದ ‘ಮ್ಯಾಕ್‌ಬೆತ್’ ಆಧಾರಿತ ಚಿತ್ರ ‘ಪಡ್ಡಾಯಿ’. ತುಳು ಭಾಷೆಯಲ್ಲಿ ನಿರ್ಮಾಣಗೊಂಡ ಈ ಚಿತ್ರ ಹಲವು ಕಾರಣಗಳಿಂದ ವಿಶಿಷ್ಟವಾಗಿದೆ. ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಮ್ಯಾಕ್‌ಬೆತ್ ಪಠ್ಯವನ್ನು ತುಳು ಸಂವೇದನೆ ಹಾಗೂ ಸಂಸ್ಕೃತಿಯೊಂದಿಗೆ ಅನುಸಂಧಾನಗೊಳಿಸಿದ ಕ್ರಿಯೆ, ನಿರ್ದೇಶಕ ಅಭಯಸಿಂಹ ಅವರ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ರಾಜಾಧಿಕಾರದ ದುರಾಸೆಗಾಗಿ ಮನುಷ್ಯನೊಬ್ಬ ಯಾವ ಹಂತಕ್ಕೆ ಇಳಿಬಹುದು ಎಂಬುದನ್ನು ಷೇಕ್ಸ್ ಪಿಯರ್ ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾನೆ. ಮನುಷ್ಯನ ಭಾವಗಳ ನಿರಂತರ ಆಳವಾದ ಶೋಧದ ರೂಪದಲ್ಲಿ ಇದು ಕಂಡುಬರುತ್ತದೆ. ಹಟಪೂರ್ವಕವಾದ ನೀಚಹಾದಿ ಅನುಸರಸಿ ಪಡೆದುಕೊಂಡಿದ್ದು ಭೌತಿಕವಾಗಿ ಅಸ್ತಿತ್ವದಲ್ಲಿದ್ದರು ಸಹ ಮಾನಸಿಕವಾಗಿ ಅದು ಒಡ್ಡಬಹುದಾದ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಿಲ್ಲ. ಕೈಗೆ ದಕ್ಕಿದ್ದು ಕೈಯಲ್ಲಿ ಮಾತ್ರ ಉಳಿಯುತ್ತದೆ ಪ್ರಯೋಜನಕ್ಕೆ ಬಾರದ ಹಾಗೇ. ಲಭ್ಯವಿದ್ದು ಸಹ ಅನುಭವಿಸಕ್ಕಾಗದ ಸ್ಥಿತಿ ಇಂತಹ ಅಧಿಕಾರ, ಅದರಿಂದ ಪಡೆದ ಸಂಪತ್ತು ಎಲ್ಲದರ ಬಗ್ಗೆ ನಿರಸನಗೊಳ್ಳುವಂತೆ ಮಾಡುತ್ತದೆ. ಈ ಸ್ಥಿತಿಗೆ ತಲಪುವುದರೊಳಗೆ ಸಮಯ ತುಂಬ ಜಾರಿ ಹೋಗಿರುತ್ತದೆ. ಪಶ್ಚಾಪತದ ವಿನಃ ಬೇರೆ ಮಾರ್ಗಗಳಿರುವುದಿಲ್ಲ. ಸಾವನ್ನು ಎದುರು ನೋಡುವ ಸ್ಥಿತಿ ಉಂಟಾಗಿ ಆ ಸ್ಥಿತಿ ಬರಲು ಕಾಯಬೇಕಾಗುತ್ತದೆ. ಇಂತಹ ಸ್ಥಿತಿಯನ್ನು ಮ್ಯಾಕ್‌ಬೆತ್ ಅನುಭವಿಸುತ್ತಾನೆ. ಈ ಸ್ಥಿತಿಗೆ ನೇರ ಕಾರಣವಾಗಿದ್ದು ಲೇಡಿ ಮ್ಯಾಕ್‌ಬೆತ್‌ನ ಮೀತಿ ಮೀರಿದ ಆಸೆ. ಈ ರಚನೆ ಮನಸ್ಸಿನ ಸಂಕೀರ್ಣ ಪದರಗಳನ್ನು ಇದು ಬಿಡಿಸುತ್ತ ಆತ್ಮವಿಮರ್ಶೆ ಹಾದಿಯಲ್ಲಿ ಸಾಗುತ್ತದೆ. ಇಂತಹ ಸಂಕೀರ್ಣ ಮನಸ್ಥಿತಿಯ ಪಾತ್ರಗಳನ್ನು ಸ್ಥಳೀಯ ನೆಲೆಯಲ್ಲಿ ಪಡ್ಡಾಯಿ ಚಿತ್ರದಲ್ಲಿ ಪುನರಚಿಸಿಕೊಳ್ಳಲಾಗಿದೆ. ಮೂಲ ಪಾತ್ರಗಳ ಸ್ವಭಾವ, ವರ್ತನೆ ಎಲ್ಲವೂ ಯಥಾಸ್ಥಿತಿಯಲ್ಲಿವೆ. ಒಂದೆರಡು ಪಾತ್ರಗಳು ಹೊಸದಾಗಿ ಸೇರಿಕೊಂಡಿವೆ.

ಸಮಕಾಲೀನತೆಗೆ ಅನುಗುಣವಾಗಿ ಚಿತ್ರಕಥೆ ಹಾಗೂ ಪಾತ್ರಗಳನ್ನು ರೂಪಿಸಿಕೊಳ್ಳಲಾಗಿದೆ. ದಿನೇಶಣ್ಣ ಉದಾತ್ತ ವ್ಯಕ್ತಿತ್ವ ಹೊಂದಿದ್ದವನು, ವ್ಯಾಪಾರ ಮನೋಭಾವ ಹೊಂದಿದ್ದರು ಸಹ ಪ್ರಾಮಾಣಿಕನು. ಅವನ ಕೆಲಸಗಾರನಾದ ಮಾಧವನನ್ನು ಪ್ರೀತಿಯಿಂದ ಮಗನ ಹಾಗೇ ನೋಡಿಕೊಳ್ಳವವನು. ಮಾಧವನ ಹೆಂಡತಿ ಸುಗಂಧಿ. ಹೊಸದಾಗಿ ಮದುವೆಯಾದ ಮಾಧವ ಮೀನು ಹಿಡಿಯುವುದರಲ್ಲಿ ಪರಿಣಿತನಾದರೆ, ಇವಳು ಮೀನು ಮಾರುವುದರಲ್ಲಿ ಪ್ರವೀಣೆ. ಇವರಿಬ್ಬರ ಜೀವನ ಸಾಂಗವಾಗಿ ನಡೆಯುತ್ತಿರುವಾಗ ಸುಗಂಧಿಯಲ್ಲಿ ಹುಟ್ಟುವ ವಾಸನಾಪಲ್ಲಟ ದುರಾಸೆಯ ಬೀಜ ಮೊಳಕೆಯೊಡೆಯುವಂತೆ ಮಾಡುತ್ತದೆ. ಮೀನುವಾಸನೇ ತಮ್ಮ ಜೀವದ್ರವ್ಯವಾಗಿದ್ದರು ಸಹ ಅವಳು ಆಸೆ ಪಡುವುದು ಫಾರಿನ್ ಸೆಂಟ್‌ಗೆ. ಇದು ರೂಪಕದ ನೆಲೆಯಲ್ಲಿ ಗ್ರಹಿಸಿದರು ಸಹ ಇದು ಮಾಡುವ ಅನಾಹುತ ಬಹು ದೊಡ್ಡದು. ತನ್ನ ಆಸೆಯನ್ನು ನೆರವೇರಿಸಿಕೊಳ್ಳಲು ಮಾಧವನನ್ನು ಹಿಂಸೆಗೆ ಪ್ರಚೋದಿಸುತ್ತಾಳೆ. ಮುಗ್ಧ ಮಾಧವ ಹಿಂಸೆಗೆ ಒಪ್ಪಿಸಲು ಅವಳು ತನ್ನ ದೇಹವನ್ನು ಮಾಧ್ಯಮವಾಗಿ ಬಳಸುತ್ತಾಳೆ. ದೇಹ ಸುಖದ ಮೂಲಕ ಮನಸಿಗೆ ಇಳಿಯುವ ಮಾತುಗಳು ಮಾಧವನ ನಿಷ್ಠೆಯನ್ನು ಕೊಲ್ಲುತ್ತದೆ. ಹೀಗಾಗಿ ಇದರಲ್ಲಿ ಸರಣಿ ಕೊಲೆಗಳಾಗುತ್ತವೆ. ಮನುಷ್ಯ ಒಳತಿಗಾಗಿ ನಿರ್ಮಿತಗೊಂಡ ಸಂಪ್ರದಾಯದ ಆಚೆಗಿನ ಮೌಲ್ಯಗಳು ಮುರಿದು ಬಿದ್ದಾಗ ಹೀಗೆ ಆಗುತ್ತದೆ. ಈ ಕೊಲೆಗಳಿಂದ ಅವರು ಸಂಪಾದಿಸಿದ ಶ್ರೀಮಂತಿಕೆ ಶಾಶ್ವತವಾಗಿದ್ದರು, ಅನುಭವಿಸಲಾಗದು ಎನ್ನುವುದು ಮನುಷ್ಯನ ಮನಸ್ಸಿನ ವಿಮರ್ಶಾತ್ಮಕ ಧೋರಣೆಯನ್ನು ಪ್ರತಿನಿಧಿಸುತ್ತದೆ. ಕೊಲೆಗೆ ಕಾರಣಳಾಗಿದ್ದ ಸುಗಂಧಿಗೆ ಮೀನು, ಸೆಂಟ್ ವಾಸನೆ ಮೀರಿ ರಕ್ತದ ವಾಸನೆ ಅಂಟಿಕೊಳ್ಳುತ್ತದೆ. ಅದನ್ನು ಮೀರಲು ಅವಳಿಗೆ ಕೊನೆಗೂ ಸಾಧ್ಯವಾಗುವುದಿಲ್ಲ. ಹೆಂಡತಿಯ ಈ ಸ್ಥಿತಿ ಮತ್ತು ತಾನು ಮಾಡಿದ ಕೆಲಸ ಬಗ್ಗೆ ನಿರಂತರವಾಗಿ ಬೇಯುವ ಮಾಧವನಿಗೆ ನೆಮ್ಮದಿ ಇಲ್ಲ. ಅವರಿಬ್ಬರಿಗೂ ಇವುಗಳಿಂದ ಮುಕ್ತಿ ಸಾವಿನಿಂದ ಮಾತ್ರವಾಗಿರುತ್ತದೆ. ಇವರಿಬ್ಬರನ್ನೂ ಸಾಯಿಸುವ ದಿನೇಶಣ್ಣನ ಮಗ ಮತ್ತು ಅವರ ಮನಸ್ಥಿತಿಗಳು ಸಹ ಹೀಗೆ ರೂಪಗೊಳ್ಳಬಹುದು. ಅವರ ಸ್ಥಿತಿ ಏನಾಗಬಹುದು ಎಂಬ ಪ್ರಶ್ನೆ ಪ್ರಚೋದನೆ ಆಗಿ ಹಾಗೇ ಉಳಿಯುತ್ತದೆ. ತಾವು ಮಾಡಿದ ತಪ್ಪುಗಳಿಗೆ ಬಾಹ್ಯ ಶಿಕ್ಷೆಗಿಂತಲೂ ಆಂತರಿಕವಾಗಿ ತನ್ನಿಂದ ತಾನೇ ಹುಟ್ಟುವ ಶಿಕ್ಷೆ ಬಹಳ ಪರಿಣಾಮಕಾರಿಯಾಗಿರುತ್ತದೆ. ತನ್ನಿಂದ ತಾನು ತಪ್ಪಿಸಿಕೊಳ್ಳಲು ಮನುಷ್ಯನಿಗೆ ಸಾಧ್ಯವಿಲ್ಲ. ತಪ್ಪು ಮಾಡಿದರ ಪಾಪಪ್ರಜ್ಞೆ ಜ್ವಾಲೆಯಾಗಿ ದಿನವೂ ಸುಡುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಕಥನವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಸ್ವಲಾಭಕ್ಕಾಗಿ ಉತ್ಪಾದನೆಗೊಳ್ಳುವ ಸ್ವಾರ್ಥ ಭಾವ ಕ್ರೌರ್ಯ ಹಾಗೂ ಮೋಸಕ್ಕೆ ಪ್ರೇರಣೆ ನೀಡುವ ಬಗೆ ಅದರಿಂದಾಗುವ ದುರಂತಗಳ ಸರಮಾಲೆ ಈ ಚಿತ್ರದಲ್ಲಿವೆ.

‘ಪಡ್ಡಾಯಿ’ ಎಂದರೆ ಪಶ್ಚಿಮ ಮತ್ತು ಸಮುದ್ರ ಎಂಬ ಎರಡು ಅರ್ಥಗಳನ್ನು ಒಳಗೊಂಡಿದೆ. ಈ ಚಿತ್ರ ತುಳುನಾಡಿನ ಸಾಂಸ್ಕೃತಿಕ ಪರಿಸರವನ್ನು ಮುಖ್ಯವಾಗಿಟ್ಟುಕೊಂಡು ರೂಪಿತವಾಗಿದೆ. ಆ ಪ್ರದೇಶ ಮುಖ್ಯ ಕಸುಬಾದ ಮೀನುಗಾರಿಕೆ, ಮೀನುಗಾರರ ಜೀವನನ್ನು ವಾಸ್ತವದ ನೆಲೆಯಲ್ಲಿ ಭಿತ್ತರಿಸಿದೆ. ಮಲ್ಪೆ, ಉಡುಪಿ ಪ್ರದೇಶದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಮುಖ್ಯ ಸಾಂಸ್ಕೃತಿಕ ಅಂಶಗಳಾದ ಭೂತಾರಾಧನೆ ಮತ್ತು ಯಕ್ಷಗಾನವನ್ನು ಪೂರಕವಾಗಿ ಬಳಸಿಕೊಳ್ಳಲಾಗಿದೆ. ಮ್ಯಾಕ್‌ಬೆತ್‌ನಲ್ಲಿ ಬರುವ ಮಾಟಗಾತಿಯರು ಇಲ್ಲಿ ಭೂತವಾಗಿದೆ. ಮಾಟಗಾತಿಯರು ಎವಿಲ್‌ನ್ನು ಪ್ರತಿನಿಧಿಸಿದರೆ, ಇಲ್ಲಿ ಭೂತ ದೈವದ ರೂಪದಲ್ಲಿದೆ. ವಾಸ್ತವ ನೆಲೆಯಲ್ಲಿ ಗ್ರಹಿಸಿದಾಗ ಇಲ್ಲಿ ಭೂತ ರೂಪದಲ್ಲಿರುವುದು ಯಕ್ಷಗಾನದ ಕಲಾವಿದ, ಅದಕ್ಕೆ ಪೂರಕವಾದ ದೃಶ್ಯವೊಂದು ಭೂತ ನುಡಿಯುವ ದೃಶ್ಯದ ಮೊದಲು ಬರುತ್ತದೆ. ಭೂತದ ಬಗ್ಗೆ ಅಪಾರ ನಂಬಿಕೆ ಹೊಂದ್ದಿದ ಮಾಧವನಿಗೆ, ಭೂತ ನಿನ್ನ ಭ್ರಮೆ, ಅವು ನಿನ್ನ ಮನಸ್ಸಿನ ಮಾತುಗಳು ಎಂದು ಅವನ ಗೆಳೆಯ ಬನ್ನಂಜೆಣ್ಣ ಹೇಳುವುದು ಮಹತ್ವದಾಗುತ್ತದೆ. ಹೀಗೆ ಭೂತ ಚಿತ್ರದ ಪ್ರಮಖ ಆಂತರಿಕ ಭಾಗವಾದರೆ, ಚಿತ್ರದ ಘಟನೆಗಳಿಗೆ ಪೂರಕವಾಗಿ ಯಕ್ಷಗಾನ ಬರುತ್ತದೆ. ಮಾಧವ ಕೊಲೆ ಮಾಡಲು ಹೋಗುವಾಗ ‘ಬೇಡ ಬೇಡ’ ಎಂದು ಹೇಳುವ ಯಕ್ಷಗಾನದ ದೃಶ್ಯ ಬರುತ್ತದೆ. ಹೀಗೆ ಬಹುಪರಿಣಾಮಕಾರಿಯಾಗಿ ಈ ಎರಡು ಅಂಶಗಳನ್ನು ನಿರ್ದೇಶಕರು ಬಳಿಸಿಕೊಂಡಿದ್ದಾರೆ. ಈ ರೀತಿ ಹಲವು ಅಂಶಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಪದರಗಳನ್ನು ಇದು ನಮಗೆ ಉಣಬಡಿಸುತ್ತದೆ.

ಸಾಮಾಜಿಕ ಜೀವನವನ್ನು, ಅವರ ದಿನನಿತ್ಯದ ವ್ಯವಹಾರವನ್ನು ಕಟ್ಟಿಕೊಟ್ಟ ರೀತಿ ನೆಲಮೂಲ ಅಂಶಗಳನ್ನು ಒಳಗೊಂಡು ರೂಪಿತಗೊಂಡ ಕಲಾಕೃತಿಗೆ ಹೇಗೆ ಮೆರುಗು ಪಡೆಯುತ್ತದೆ ಎಂಬುದಕ್ಕೆ ಸಾಕ್ಷಿಯಂತಿದೆ. ಸಮುದ್ರ ಎರಡು ರೀತಿಯಾಗಿ ನಮಗೆ ಇಲ್ಲಿ ಕಾಣುತ್ತದೆ. ಒಂದು ನೇರ ಪಾತ್ರದಾರಿಯಂತೆ, ಇನ್ನೊಂದು ಮನುಷ್ಯ ಮನಸ್ಸಿನ ಹೊಯ್ದಾಟ್ಟದಂತೆ. ಮೊದಲ ದೃಶ್ಯದಿಂದ ಹಿಡಿದ ಕೊನೆಯ ದೃಶ್ಯದವರಗೆ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸುವ ಸಮುದ್ರ ಜೀವನವನ್ನು ನೀಡಿದಂತೆ, ಜೀವವನ್ನು ಪಡೆದುಕೊಳ್ಳುತ್ತದೆ. ಅದರ ಭೌತಿಕ ಸ್ಥಿತಿಯಾದ ಹೊಯ್ದಾಟ ಮನುಷ್ಯನ ಮನಸಿನ ದುಗುಡ, ಚಂಚಲತೆಯ ರೂಪಕದಂತಿದೆ. ಬರಿದಾಗುತ್ತಿರುವ ಕಡಲಿನ ಬಗೆಗಿನ ಕಾಳಜಿ ಇದ್ದರಲ್ಲಿ ವ್ಯಕ್ತವಾಗಿದೆ. ಸಾಂಪ್ರದಾಯಿಕ ಮೀನುಗಾರಿಕ ಮಹತ್ವವನ್ನು ದಿನೇಶಣ್ಣನ ಮೂಲಕ ಹೇಳಿಸುತ್ತಾರೆ. ಇದರ ಪ್ರತಿನಿಧಿಯಾದ ಇವನು ಹೇಗೆ ವ್ಯಾಪಾರಿ ಮನೋಭಾವ ವ್ಯಕ್ತಿಗಳನ್ನು ಎದುರಿಸುತ್ತಾನೆ ಎನ್ನುವುದು ಮಹತ್ವದಾಗಿದೆ. ವರ್ಷಪೂರ್ತಿ ಮೀನುಗಾರಿಕೆ ಮಾಡಿದರೆ ಮೀನುಗಳು ಹೇಗೆ ಬೆಳೆಯುತ್ತವೆ ಮತ್ತು ನಿರಂತರ ಮೀನುಗಾರಿಕೆಯಿಂದ ಕಡಲ ಸಂಪತ್ತಿನ ಮೇಲಾಗುವ ಪರಿಣಾಮವನ್ನು ಸೂಚಿಸುತ್ತದೆ. ಮೀನಿನ ಬಲೆ, ಬೋಟು, ಮೀನಿನ ಮಾರುಕಟ್ಟೆ, ಕಡಲ ಮೇಲೆ ಕಾಣುವ ಸೂರ್ಯ, ಸಂದರ್ಭ ತಕ್ಕ ಹಾಗೇ ಬಣ್ಣ ಬದಲಿಸುವ ಸಮುದ್ರ ಇವೆಲ್ಲ ಮನಸ್ಸಿಗೆ ಬೆಚ್ಚನೆ ಅನುಭವನ್ನು ನೀಡುತ್ತವೆ. ಮಂಜೇಶ ಮೂಲಕ ಪಾಶ್ಚೀತಿಕರಣದ ಹಂಬಲವನ್ನು ತೋರಿಸುತ್ತಾರೆ.

ಮಣಿಕಾಂತ ಕದ್ರಿ ಅವರು ನೀಡಿರುವ ಸಂಗೀತ ಚಿತ್ರದ ಸಂವೇದನೆಗೆ ಪೂರಕವಾಗಿದೆ. ಪ್ರತಿಯೊಂದು ಪಾತ್ರ ಬಂದಾಗಲೂ ಒಂದೊಂದು ರೀತಿಯ ಹಿನ್ನಲೆ ಸಂಗೀತ ಬರುತ್ತಿರುತ್ತದೆ. ನಿರ್ದೇಶಕ ದೃಷ್ಟಿಕೋನ ಏನಾಗಿದೆ ಎಂದು ಅರ್ಥ ಮಾಡಿಕೊಂಡು ಸಂಗೀತ ನೀಡುವುದು ಮಹತ್ವದ್ದು. ಅಂತಿಮವಾಗಿ ಅದು ಪ್ರೇಕ್ಷನಿಗೆ ಇಷ್ಟವಾಗಬೇಕು ಅಂತಹ ಕ್ರಿಯೆ ಸಂಗೀತ ನಿರ್ದೇಶಕರಿಂದ ಆಗಿದೆ. ಕರಾವಳಿ ಪರಿಸರದ ಸಂಗೀತ ಮತ್ತು ವಾದ್ಯಗಳನ್ನು ಇದರಲ್ಲಿ ಬಳಿಸಿಕೊಂಡಿದ್ದರಿಂದ ದೃಶ್ಯವನ್ನು ಆಪ್ತವಾಗಿ ಗ್ರಹಿಸುವಂತೆ ಮಾಡುತ್ತದೆ. ವಿಷ್ಣುಪ್ರಸಾದ ಪಲಿಂಜೆ ಅವರ ಸಿನಿಮಾಟೋಗ್ರಾಫಿ ಚೆನ್ನಾಗಿದೆ. ಭೂತವನ್ನು ಕಾಡಿನ ಮಧ್ಯ ಹಿಂದೆ ದೊಡ್ಡದಾಗಿ ಬೆಳಕು ಹಾಕಿ ಶ್ಯಾಡೋ ರೂಪದಲ್ಲಿ ತೋರಿಸಿದ್ದು, ಒಂದೇ ಸಮುದ್ರ ಬದಲಾಗವುದನ್ನು ಸಂದರ್ಭಕ್ಕೆ ತಕ್ಕ ಹಾಗೇ ಬಣ್ಣಗಳ ಜೊತೆ ತೋರಿಸುದ್ದು, ಕೊನೆಯ ಡ್ರೋನ್ ಶಾಟ್‌ನಲ್ಲಿ ಸಮುದ್ರ ಮಧ್ಯ ನಿರ್ಲಿಪ್ತವಾಗಿ ನಿಂತ ಬೋಟ್ ಸೆರೆಹಿಡಿದಿದ ದೃಶ್ಯಗಳು ಚೆನ್ನಾಗಿವೆ.

ನೀನಾಸಂ ಪ್ರತಿಭೆಗಳಾದ ಬಿಂದು ರಕ್ಷಿದಿ ಸುಗಂಧಿ ಪಾತ್ರವನ್ನು ಜೀವಿಸಿದ್ದಾರೆ. ಗಂಡನ ಒಲಿಸಿಕೊಳ್ಳವ ವೈಯಾರ, ಕ್ರೌರ್ಯಕ್ಕೆ ಪ್ರಚೋದನೆ ನೀಡುವಾಗ ಹುಬ್ಬಿನೊಡನೆ ಆಟ. ವಾಸನೇ ಗ್ರಹಿಸುವಾಗ ಮುಖದಲ್ಲಿ ಆಗುವ ಪರಿವರ್ತನೆ ನಮ್ಮ ಮೂಗಿಗೂ ವಾಸನೆ ಅನುಭವಾಗುವ ಹಾಗೇ ಅವರ ನಟನೆಯಿದೆ. ಮಾಧವನ ಪಾತ್ರಧಾರಿ ಮೋಹನ ಮನಸ್ಸಿನಲ್ಲಿ ಬೇರೂರುತ್ತಾರೆ. ಈ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ನಟನೆ ಕೃತಕತೆಯನ್ನು ಮೀರಿ ಜೀವಂತಿಕೆ ಪಡೆದುಕೊಂಡಿದೆ. ಹೀಗಾಗಿ ಅವರ ಪಯಣದಲ್ಲಿ ನಾವು ಸಹ ಪಯಣಿಗರಾಗುತ್ತೇವೆ.

ನಿಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು vinay99164@gmail.com




Leave a Reply

Your email address will not be published. Required fields are marked *

error: Content is protected !!