ಎಂಪಿ 50, ಸಿಎಂ 47 ಗ್ರಾಮದ ರಿಯಲ್ ಕಥೆ!

434

ನರೇಂದ್ರ ಮೋದಿ ನೇತೃತ್ವದ ಮೊದಲ ಎನ್ ಡಿಎ ಸರ್ಕಾರದ ಅವಧಿಯಲ್ಲಿ ‘ಆದರ್ಶ ಗ್ರಾಮ’ ಯೋಜನೆ ಜಾರಿಗೆ ತರಲಾಯ್ತು. ಕೇಂದ್ರ ಗಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವಾಲಯದ ಮೂಲಕ ಇದು ಜಾರಿಗೆ ಬಂದಿತು. ಇದರ ಮೂಲ ಉದ್ದೇಶ, ಸಂಸದರು ತಮ್ಮ ಕ್ಷೇತ್ರದ ಗ್ರಾಮಗಳನ್ನ ದತ್ತು ಪಡೆದು ಅಭಿವೃದ್ಧಿ ಮಾಡುವುದು.

ಸಂಸದರು ತಮ್ಮ ಊರು, ಪತ್ನಿಯ ಊರನ್ನ ಹೊರತು ಪಡಿಸಿ ಉಳಿದ ಗ್ರಾಮಗಳನ್ನ ಆಯ್ಕೆ ಮಾಡಿಕೊಳ್ಳಬೇಕು. 2016ರ ಒಳಗೆ ಒಂದು ಗ್ರಾಮ, 2017ರಲ್ಲಿ ಮತ್ತೊಂದು ಗ್ರಾಮ ಹಾಗೂ 2018ರಲ್ಲಿ ಮಗದೊಂದು ಗ್ರಾಮ. ಹೀಗೆ ಆಯ್ಕೆ ಮಾಡಿಕೊಂಡು 5 ವರ್ಷಗಳಲ್ಲಿ ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿ ಪಡಿಸಬೇಕು. ಇದರಲ್ಲಿ ಎಷ್ಟು ಅಭಿವೃದ್ಧಿಯಾಗಿವೆ ಅಂತಾ ನೋಡಿದ್ರೆ ಶಾಕ್ ಆಗುತ್ತೆ. ಇದರ ಜೊತೆ ಸಿಎಂ ಕುಮಾರಸ್ವಾಮಿ ಇದೀಗ ಮತ್ತೆ ಶುರು ಮಾಡಿರುವ ಗ್ರಾಮ ವಾಸ್ತವ್ಯದ 2006ರ ಕಥೆ ಸಹ ಭಿನ್ನವಾಗಿಲ್ಲ.

ಸಂಸದರ ಸುಂದರ ಗ್ರಾಮಗಳು!

ಕಳೆದ ಲೋಕಸಭೆಯಲ್ಲಿ ಬಿಜೆಪಿಯಿಂದ 17, ಕಾಂಗ್ರೆಸ್ ನಿಂದ 9 ಹಾಗೂ 2 ಜೆಡಿಎಸ್ ಸಂಸದರಿದ್ರು. ಜೊತೆಗೆ 12 ಜನ ರಾಜ್ಯಸಭಾ ಸದಸ್ಯರು ಹಾಗೂ 4 ಜನ ಕೇಂದ್ರ ಸಚಿವರಿದ್ರು. ಮೊದಲ ಬಾರಿಗೆ ಪ್ರತಿಯೊಬ್ಬ ಸಂಸದರು ಗ್ರಾಮ ದತ್ತು ಪಡೆದ್ರು. 2ನೇ ಹಂತದಲ್ಲಿ ಕೇವಲ 10 ಜನ ಗ್ರಾಮ ದತ್ತು ಪಡೆದ್ರು. 3ನೇ ಹಂತದಲ್ಲಿ ಎಲ್ಲವೂ ಮರೆತು ಹೋಗಿತ್ತು. ರಾಜ್ಯಸಭಾ ಸದಸ್ಯರಲ್ಲಿ ಮೊದಲ ಹಂತದಲ್ಲಿ 10 ಜನ, 2ನೇ ಹಂತದಲ್ಲಿ ಇಬ್ಬರು ಗ್ರಾಮ ಆಯ್ಕೆ ಮಾಡಿಕೊಂಡ್ರು. ಅಲ್ಲಿಗೆ 50 ಗ್ರಾಮಗಳಾದ್ವು.

ಆದ್ರೆ, ಹೀಗೆ ಆಯ್ಕೆಯಾದ ಗ್ರಾಮಗಳು ‘ಆದರ್ಶ ಗ್ರಾಮ’ ಅನ್ನೋ ಯಾವ ಹೆಸರು ಮಾಡ್ಲಿಲ್ಲ. ಕಾರಣ, ಯಾವ ಸಂಸದರು ಇದರ ಬಗ್ಗೆ ಕಾಳಜಿ ತೋರಿಸ್ಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರಿಗೆ ರಾಜ್ಯಸಭಾ ಸದಸ್ಯರಿಗೆ ಇದರ ಲಾಭ ಯಾರಿಗೆ ಹೋಗುತ್ತೆ ಅನ್ನೋ ಲೆಕ್ಕಾಚಾರ ಶುರುವಾಯ್ತು. ನಾವು ಮಾಡಿದ ಕೆಲಸಕ್ಕೆ ಕೇಂದ್ರಕ್ಕೆ ಹೆಸರು ಬರುತ್ತೆ. ನಾವ್ಯಾಕೆ ಇದನ್ನ ಮಾಡಬೇಕಂತ ಮೌನಕ್ಕೆ ಶರಣಾದ್ರು. ಹೀಗಾಗಿ ದತ್ತು ಪಡೆದ ಯಾವ ಗ್ರಾಮಗಳು ಅಭಿವೃದ್ಧಿಯಾಗ್ಲಿಲ್ಲ.

ಇನ್ನು ಕೇಂದ್ರದಲ್ಲಿ ಬಿಜೆಪಿ ಆಡಳಿತ ಇದ್ರೂ ಸ್ವತಃ ಬಿಜೆಪಿ ಸಂಸದರು ಸಹ ಆದರ್ಶ ಗ್ರಾಮ ಯೋಜನೆಯಲ್ಲಿ ಫೇಲ್ ಆದ್ರು. 17 ಜನ ಬಿಜೆಪಿ ಸಂಸದರು ಸಹ ಸಂಪೂರ್ಣವಾಗಿ ಇದನ್ನ ಯಶಸ್ವಿ ಮಾಡಲು ಆಗ್ಲಿಲ್ಲ. ಬರೀ ಮಾತಿನಲ್ಲಿ ಐದು ವರ್ಷ ಕಳೆದ್ರು. ಹೀಗಾಗಿ ಇವರಿಂದಲೂ ಸರಿಯಾದ ಆದರ್ಶ ಗ್ರಾಮ ಸೃಷ್ಟಿ ಮಾಡಲು ಆಗ್ಲಿಲ್ಲ.

ಸಿಎಂ 2006ರ ಗ್ರಾಮ ವಾಸ್ತವ್ಯದ ಕಥೆ

ಇನ್ನು ಸಿಎಂ ಕುಮಾರಸ್ವಾಮಿ ಕಳೆದ ಬಾರಿ ಗ್ರಾಮ ವಾಸ್ತವ್ಯ ಶುರು ಮಾಡಿದ್ರು. 2006ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಕುಮಾರಸ್ವಾಮಿ ಸಿಎಂ ಆಗಿದ್ರು. ಆಗ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗನೂರು ಗ್ರಾಮದಿಂದ ತಮ್ಮ ವಾಸ್ತವ್ಯ ಶುರು ಮಾಡಿದ್ರು. ಬಳಿಕ ಅವರ ಅಧಿಕಾರ ಅವಧಿಯಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ರು.

ನಾಗನೂರು ಗ್ರಾಮಕ್ಕೆ ಸಿಎಂ ಅವರು ಬಂದು ಹೋಗಿದ್ದೇ ಬಂತು, ಅಭಿವೃದ್ಧಿ ಅನ್ನೋದು ಕಾಣಲೇ ಇಲ್ಲ. ಕೇವಲ ಶೇ.25ಕ್ಕಿಂತಲೂ ಕಡಿಮೆ ಕೆಲಸಗಳಾಗಿವೆ ಅಂತಾರೆ ಗ್ರಾಮಸ್ಥರು. ಇನ್ನು ನಿಪ್ಪಾಣಿ ತಾಲೂಕಿನ ಶೇಂಡೂರು, ಬಳ್ಳಾರಿ ಜಿಲ್ಲೆ ಕುರುಗೋಡೆ ತಾಲೂಕಿನ ಮುಷ್ಟಗಟ್ಟೆ, ಹೊಸಪೇಟೆ ತಾಲೂಕಿನ ಪೋತಲಕಟ್ಟೆ, ಉಳ್ಳಾದ ಖದೀಜಮ್ಮನ ಮನೆ, ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶ್ರೀರಾಂಪುರ ಗ್ರಾಮ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಂದಿಗೋಡು ಹಾಗೂ ಮೈಸೂರು ತಾಲೂಕಿನ ದಡದಕಲ್ಲಹಳ್ಳಿ, ಚಿಕ್ಕಕಾನ್ಯದಲ್ಲಿಯೂ ಸಿಎಂ ವಾಸ್ತವ್ಯ ಹೂಡಿದ್ರು. ಆದ್ರೆ, ಅಭಿವೃದ್ಧಿ ಅನ್ನೋದು ಸರ್ಕಾರಿ ಅಧಿಕಾರಿಗಳ ದಾಖಲೆಯಲ್ಲಿ ಭದ್ರವಾಗಿದೆ.

ಇದೇ ರೀತಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನಳ್ಳಿ, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿತ್ರಾಲಿ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊನೆಗಹಳ್ಳಿ, ಕೆ.ಆರ್ ಪೇಟೆ ತಾಲೂಕಿನ ಬಂಡಿಹೊಳೆ, ಹಾವೇರಿ ಜಿಲ್ಲೆಯ ರಟ್ಟಹಳ್ಳಿ ತಾಲೂಕಿನ ಕಡೂರ, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚನ್ನಗಿರಿ ತಾಲೂಕಿನ ಮಧುರನಾಯಕನಹಳ್ಳಿ ಸೇರಿ 47 ಗ್ರಾಮಗಳಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ರು. ಈ ಎಲ್ಲ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಸ್ಥಿತಿ ಸಿಎಂ ಬರುವ ಮೊದ್ಲು ಹೇಗಿತ್ತೋ ಈಗ್ಲೂ ಹಾಗೇ ಇವೆ. ಅಲ್ಲೊಂದು ಇಲ್ಲೊಂದು ಗ್ರಾಮಗಳಲ್ಲಿ ರಸ್ತೆ, ಲೈಟ್, ಚರಂಡಿ ವ್ಯವಸ್ಥೆ ಬಿಟ್ರೆ ಉಳಿದ ಕೆಲಸಗಳು ಹಳ್ಳಹಿಡಿದಿವೆ.

ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಯೂ ಸಿಎಂ ಆಗಿರುವ ಕುಮಾರಸ್ವಾಮಿ ಅವರು ಇದೀಗ ಮತ್ತೆ ಗ್ರಾಮ ವಾಸ್ತವ್ಯ ಶುರು ಮಾಡ್ತಿದ್ದಾರೆ. ಈ ಬಾರಿ ಗ್ರಾಮದ ಪ್ರಾಥಮಿಕ ಶಾಲೆಗಲ್ಲಿ ವಾಸ್ತವ್ಯ ಹೊಡಲಿದ್ದಾರಂತೆ. ಆದ್ರೆ, ಯಾವ ಶಾಲೆ ಅನ್ನೋದು ಮಾತ್ರ ಸಿಕ್ರಿಟ್ ಆಗಿಟ್ಟು, ಅಧಿಕಾರಿಗಳಲ್ಲಿ ನಡುಕು ಹುಟ್ಟಿಸಲು ಮುಂದಾಗಿದ್ದಾರೆ.

ಸಿಎಂ ಗ್ರಾಮ ವಾಸ್ತವ್ಯ, ಎಂಪಿ ಆದರ್ಶ ಗ್ರಾಮ ಯೋಜನೆ ಎಲ್ಲವೂ ಬರೀ ನಾಲ್ಕು ದಿನ ಅಚ್ಚುಕಟ್ಟಾಗಿ ಎಲ್ಲವೂ ಪ್ಲಾನ್ ಪ್ರಕಾರ ನಡೆಯುತ್ತೆ. ಬಳಿಕ ಅದೇ ರಾಗ ಅದೇ ಹಾಡು. ಈಗ್ಲಾದ್ರೂ ಸಂಸದರು, ಸಿಎಂ ತಮ್ಮ ಯೋಜನೆಗಳನ್ನ ಸರಿಯಾದ ನಿಟ್ಟಿನಲ್ಲಿ ನಿರ್ವಹಿಸಿ ಗ್ರಾಮಗಳನ್ನ ನಿಜವಾಗಿಯೂ ಅಭಿವೃದ್ಧಿ ಹಾಗೂ ಮಾದರಿಯನ್ನಾಗಿ ಮಾಡಬೇಕಾಗಿದೆ.




Leave a Reply

Your email address will not be published. Required fields are marked *

error: Content is protected !!