ಸಂವಿಧಾನ ಮತ್ತು ಅನುಭವ ಮಂಟಪಕ್ಕೆ ಬಗೆದ ಅಪಚಾರ

409

ವಿಜಯಪುರ ಮೂಲದ ಲೇಖಕರು, ಚಿಂತಕರು ಆಗಿರುವ ಡಾ. ಜೆ ಎಸ್ ಪಾಟೀಲ ಅವರು ಬರೆದ ವಿಶೇಷ ಲೇಖನ ಇಲ್ಲಿದೆ…

ಭಾರತವು ಜಾತ್ಯಾತೀತ ದೇಶವೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಜನಪ್ರತಿನಿಧಿಯಾದವನು ಯಾವುದೇ ಧರ್ಮಕ್ಕೆ ಸೇರಿದವನಾಗಿರಲಿ ಆತ ಸರಕಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವಾಗ ಯಾವುದೇ ಒಂದು ನಿರ್ಧಿಷ್ಟ ಧರ್ಮದ ಆಚರಣೆಗಳ ಮೂಲಕ ನೆರವೇರಿಸುವುದು ಸಂವಿಧಾನ ವಿರೋಧಿ ಕ್ರಮ. ಆದರೆ ಈ ಮತೀಯವಾದಿ ಮನಸ್ಥಿತಿಯುಳ್ಳ ರಾಜಕಾರಣಿಗಳು ಸಂವಿಧಾನವನ್ನು ಸರಿಯಾಗಿ ಓದಿಕೊಂಡಿಲ್ಲವೊ ಅಥವ ಓದಿದರೂ ಅದರ ಬಗ್ಗೆ ಅಗೌರವ ಹೊಂದಿದ್ದಾರೊ ಅನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇತ್ತೀಚಿನ ಐದಾರು ವರ್ಷಗಳಲ್ಲಿ ಫ್ಯಾಸಿಷ್ಠ ಹಿನ್ನೆಲೆಯ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಂತಹ ಸಂವಿಧಾನ ವಿರೋಧಿ ನಡೆಗಳು ಗಣನೀಯವಾಗಿ ಹೆಚ್ಚಿವೆ.

ಮೊನ್ನೆ ಪ್ರಧಾನಿ ಮೋದಿಯವರು ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಕರ್ನಾಟಕ ಮೂಲದ ಶ್ರಂಗೇರಿಯ ವೈದಿಕ ಪುರೋಹಿತರನ್ನು ಸೇರಿಸಿ ವೈದಿಕ ವಿಧಿವಿಧಾನಗಳ ಆಚರಣೆಯ ಮೂಲಕ ಎನ್ನುವುದನ್ನು ನೀವೆಲ್ಲ ಬಲ್ಲಿರಿ. ಮೋದಿಯವರ ಈ ನಡೆ ಸ್ಪಷ್ಟವಾಗಿ ಸಂವಿಧಾನ ವಿರೋಧಿ ನಡೆ ಎಂದು ಹೇಳಲೇಬೇಕು. ಒಂದು ನಿರ್ಧಿಷ್ಟ ಸಮುದಾಯದ ವಿಧಿವಿಧಾನಗಳ ಆಚರಣೆ ಸರಕಾರಿ ಕಟ್ಟಡದ ಶಂಕುಸ್ಥಾಪನೆಯಲ್ಲಿ ನಡೆಸುವುದು ಸಂವಿಧಾನಕ್ಕೆ ಬಗೆಯುವ ಅಪಚಾರವಾಗಿದ್ದು ಇಂತದ್ದನ್ನು ಮೊದಲು ನಿಲ್ಲಸಬೇಕು. ಇದರ ಕುರಿತು ಯಾರಾದರೂ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಬೇಕು. ಇಲ್ಲದಿದ್ದರೆ ಭಾರತದ ಜಾತ್ಯಾತೀತ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಅಪಾಯ ತಪ್ಪಿದ್ದಲ್ಲ. ಆದರೆˌ ಇತ್ತೀಚಿನ ದಿನಗಳಲ್ಲಿ ಅನೇಕ ಸಂಶಯಾಸ್ಪದ ತೀರ್ಪುಗಳು ಅವಲೋಕಿಸಿದರೆ ನ್ಯಾಯಾಲಯ ಕೂಡ ತನ್ನ ವಿಶ್ವಾಹಾರ್ತನೆ ಕಳೆದುಕೊಳ್ಳುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇಂದು ಇಡೀ ದೇಶದ ರೈತರು ಕಾರ್ಪೋರೇಟ್ ಕಳ್ಳರಿಗೆ ಸಹಕಾರಿಯಾಗಬಲ್ಲ ತಿದ್ದುಪಡೆಗೊಂಡ ಕ್ರಷಿ ಮಸೂದೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸರಕಾರ ರೈತರ ಬೇಡಿಕೆಯನ್ನು ಆಲಿಸುವ ಬದಲಿಗೆ ತನ್ನ ಕೈಗೊಂಬೆ ಮಾಧ್ಯಮ ಮತ್ತು ಪಕ್ಷದ ಐಟಿ ಸೆಲ್ ಮೂಲಕ ರೈತರ ಚಾರಿತ್ರ್ಯಹರಣದ ಕೆಲಸದಲ್ಲಿ ತೊಡಗಿದೆ. ದೇಶದ ಬಹುತೇಕ ಭಾಗಗಳು ಅತಿವ್ರಷ್ಟಿಯಿಂದ ಬಳಲುತ್ತಿವೆ. ಮತ್ತೊಂದು ಕಡೆ ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ಸರಕಾರದ ಅವೈಜ್ಞಾನಿಕ ಲಾಕ್ ಡೌನ್ ಘೋಷಣೆಯಿಂದ ದೇಶದ ಆರ್ಥಿಕತೆ ಮುಳುಗುತ್ತಿದೆ. ಅದಕ್ಕಿಂತ ಮೊದಲೇ ಸರಕಾರದ ನೋಟು ನಿಷೇಧˌ ಜಿಎಸ್ ಟಿ ಮುಂತಾದ ಕರಾಳ ನಿರ್ಧಾರಗಳಿಂದ ದೇಶದ ಆರ್ಥಿಕತೆ ತಳಪಾಯ ಕಂಡಾಗಿದೆ.

ಇಂತ ಕಠಿಣ ಸಂದರ್ಭದಲ್ಲಿ ಮೋದಿಯವರಿಗಾಗಿ ವಿಶೇಷ ದುಬಾರಿ ಐಷಾರಾಮಿ ವಿಮಾನಗಳ ಖರೀದಿ ಮತ್ತು ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ ಹೊಸ ಸಂಸತ್ ಭವನ ನಿರ್ಮಾಣದ ಅಗತ್ಯವೇನಿತ್ತು? ರೋಮ್ ಹೊತ್ತಿ ಉರಿಯುವಾಗ ನೀರೊ ಪಿಟಿಲು ಕುಯ್ಯುತ್ತಿದ್ದ ಎನ್ನುವಂತೆ ಪ್ರಧಾನಿ ಮೋದಿಯವರು ಇಡೀ ದೇಶವೇ ಆರ್ಥಿಕ ಮುಗ್ಗಟ್ಟಿನಲ್ಲಿ ಮುಳುಗಿರುವಾಗ ತರಹೆವಾರಿ ಧಿರಿಸು ಹಾಕಿಕೊಂಡು ಪುರೋಹಿತರನ್ನು ಮೆಚ್ಚಿಸುವ ಗೊಡ್ಡು ಧಾರ್ಮಿಕ ಆಚರಣೆಯಲ್ಲಿ ನಿರತರಾಗಿದ್ದಾರೆ. ಪ್ರಧಾನಿಯಾದವರಿಗೆ ಕನಿಷ್ಠ ಜವಾಬ್ಧಾರಿ ಇಲ್ಲದಂತೆ ನಡೆದುಕೊಳ್ಳುವ ಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ಬಂದಿರಲಿಲ್ಲ.

ಅದಷ್ಟೇ ಅಲ್ಲದೆ ಮೋದಿಯವರು ಸಂಸತ್ ಭವನದ ಉದ್ಘಾಟನೆಯಲ್ಲಿ ಬಸವಣ್ಣನವರು ಮತ್ತು ಅವರು ಸ್ಥಾಪಿಸಿದ ಅನುಭವ ಮಂಟಪದ ಬಗ್ಗೆ ಮಾತನಾಡಿದ್ದಾರೆ. ಅನುಭವ ಮಂಟಪ ಹುಟ್ಟುಪಡೆದದ್ದು ಸನಾತನ ಆರ್ಯ ವೈದಿಕರ ಅಕ್ರಮಗಳ ವಿರುದ್ಧ. ಅದೇ ಸನಾತನ ವೈದಿಕ ವಿಕೃತ ಆಚರಣೆಗಳ ಪ್ರತಿನಿಧಿಯಾದˌ ಪ್ರಚಾರಕರಾದˌ ಪೋಷಕರಾದ ಮೋದಿಯವರು ಬಸವಣ್ಣನವರ ಅನುಭವ ಮಂಟಪದ ಧ್ಯೇಯೊದ್ದೇಶಗಳನ್ನು ಇನ್ನೂ ಆಳವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಅನುಭವ ಮಂಟಪದ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿದವರು ಅದೇ ಅನುಭವ ಮಂಟಪ ವ್ಯವಸ್ಥೆಯನ್ನು ವಿರೋಧಿಸಿ ಶರಣರನ್ನು ಹತ್ಯೆಮಾಡಿˌ ಶರಣರು ಬರೆದ ವಚನ ಕಟ್ಟುಗಳನ್ನು ಸುಟ್ಟವರು ಸನಾತನಿ ಆರ್ಯ ವೈದಿಕರು ಎನ್ನುವ ಮಾಹಿತಿಯನ್ನು ಏಕೆ ನೀಡಲಿಲ್ಲ?

ಇನ್ನೊಂದನ್ನು ನಾವೆಲ್ಲ ಗಮನಿಸಲೇಬೇಕು. ಕೆಲವು ದಿನಗಳ ಹಿಂದೆ ರಾಮ ಮಂದಿರ ನಿರ್ಮಾಣ ಪ್ರಯುಕ್ತ ನಡೆದ ಭೂಮಿ ಪೂಜೆ ಮತ್ತು ಇತ್ತೀಚಿನ ಸಂಸತ್ ಭವನದ ಶಂಕುಸ್ಥಾಪನೆ ಈ ಉಭಯ ಕಾರ್ಯಕ್ರಮಗಳಲ್ಲಿ ದೇಶದ ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ಅವರನ್ನು ಆಹ್ವಾನಿಸದೆ ಉಪೇಕ್ಷಿಸಲಾಗಿದೆ. ಕೋವಿಂದ್ ಅವರು ಹಿಂದುಳಿದ ಶೂದ್ರ ಕೋಳಿ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣದಿಂದಲೇ ಶೂದ್ರ ಎಂದು ತಪ್ಪಾಗಿ ಬಿಂಬಿಸಲಾಗಿರುವ ವೈಶ್ಯ ಸಮುದಾಯದ ಮೋದಿಯವರನ್ನು ನಿಯಂತ್ರಿಸುವ ಪುರೋಹಿತಶಾಹಿಗಳು ಈ ದೇಶದ ಪ್ರಥಮ ಪ್ರಜೆ ಕೋವಿಂದ್ ಅವರನ್ನು ಅವಮಾನಿಸುತ್ತಿವೆ ಎನ್ನುವ ಭಾವನೆ ದೇಶದ ಶೂದ್ರ ವರ್ಗದಲ್ಲಿ ಮನೆಮಾಡುತ್ತಿರುವುದು ಸುಳ್ಳಲ್ಲ. ಇದನ್ನು ದೇಶದ ಪ್ರಜ್ಞಾವಂತ ನಾಗರಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಮೋದಿಯವರು ವಿದೇಶಕ್ಕೆ ಹೋದರೆ ತಾನು ಬುದ್ದ, ಬಸವಣ್ಣ, ಗಾಂಧಿˌ ಅಂಬೇಡ್ಕರ್ ಅವರ ನೆಲದಿಂದ ಬಂದಿದ್ದೇನೆ ಎನ್ನುತ್ತಾರೆ. ಇಲ್ಲಿರುವಾಗ ಅದೇ ರಾಮ, ಕ್ರಷ್ಣ, ಸಾವರಕರ್, ಗೋಳ್ವಾಲ್ಕರ್, ಶ್ಯಾಮಾಪ್ರಸಾದ ಬಗ್ಗೆ ಹೆಮ್ಮೆ ಪಡುತ್ತಾರೆ. ವಿದೇಶಗಳಿಗೆ ಹೋದಾಗ ಮೋದಿಯವರಿಗೆ ರಾಮ, ಕ್ರಷ್ಣ, ಸಾವರಕರ್ ಮುಂತಾದವರ ಬಗ್ಗೆ ಹೇಳಲು ಯಾವುದೇ ಆದರ್ಶಗಳು ಸಿಗುವುದಿಲ್ಲವೆ ಅಥವಾ ವೀದೇಶಿಗರಿಗೆ ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ ಮುಂತಾದ ಪ್ರಗತಿಪರ ದಾರ್ಶನಿಕರು ಮಾತ್ರ ಭಾರತದ ಮಹಾನ್ ನಾಯಕರು ಎನ್ನುವ ಸಂಗತಿ ತಿಳಿದಿರುವುದರಿಂದಲೆ? ಮೋದಿಯವರು ಈ ಇಬ್ಬಗೆತನ ಮೊದಲು ಬಿಡಬೇಕು. ಅವರ ಈ ನಾಟಕೀಯತೆ ಭಾರತದಲ್ಲಿ ಗರಿಷ್ಠ ಎರಡು ದಶಕ ಬಾಳಿದ್ದೇ ಅಚ್ಚರಿಯ ಸಂಗತಿ. ಆದರೆ ಈಗ ಅದರ ಬಗ್ಗೆ ಜನತೆಗೆ ತಿಳಿಯಲಾರಂಭಿಸಿದೆ.

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸದೆ, ಸ್ವಾತಂತ್ರ ಹೋರಾಟಗಾರರನ್ನು ಬ್ರಿಟೀಷರಿಗೆ ಹಿಡಿದುಕೊಡುವ ಕೆಲಸ ಮಾಡಿದ ಮತ್ತು ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ವಿಚಾರಧಾರೆಗಳ ವಿರೋಧಿಯಾಗಿರುವ ಸಂಘಟನೆಗೆ ಸೇರಿದವರಾದ ಮೋದಿಯವರು ಹೊರಗೆ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಅವರ ಸ್ತುತಿ ಮಾಡುತ್ತ ಅಂತರಂಗದಲ್ಲಿ ಸಾವರಕರ್, ಘೋಡ್ಸೆ, ಶ್ಯಾಮಾಪ್ರಸಾದ್, ಹೆಡಗೆವಾರ್, ಗೋಳ್ವಾಲ್ಕರ್ ಮುಂತಾದ ಭಾರತದ ಬಹು ಸಂಸ್ಕ್ರತಿ ವಿರೋಧಿಗಳನ್ನು ಆರಾಧಿಸುವ ಸಂಗತಿ ಗುಟ್ಟಾಗಿ ಉಳಿದಿಲ್ಲ.

ಸ್ವತಃ ಮೋದಿಯವರು, ಅವರ ಪಕ್ಷ ಮತ್ತು ಅವರನ್ನು ಬೆಳೆಸಿದ ಸಂಘಟನೆ ತಿಪ್ಪರಲಾಗ ಹಾಕಿದರೂ ಭಾರತದ ಜಾತ್ಯಾತೀತ ಪರಂಪರೆ, ಬಹು ಸಂಸ್ಕ್ರತಿ, ಜನಪದೀಯ ಸಮಮುದಾಯ ಧರ್ಮವನ್ನು ಮುಗಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಅವರು ಅರಿತುಕೊಳ್ಳಬೇಕಿದೆ. ಭಾರತ ಎಂದೆಂದಿಗೂ ಪುರೋಹಿತಶಾಹಿಗಳ ವಶವಾಗಲು ಈ ನೆಲಮೂಲದ ಜನರು ಬಿಡುವುದಿಲ್ಲ ಎನ್ನುವುದನ್ನು ನಾನು ಪುನರುಚ್ಛರಿಸುತ್ತಿದ್ದೇನೆ. ಸಿಕ್ಕ ಅವಕಾಶದಲ್ಲಿ ಮೋದಿ ಮತ್ತು ಅವರ ಬೆನ್ನಿಗಿರುವ ಫ್ಯಾಸಿಷ್ಟ್ ಸಂಘಟನೆಗಳು ದೇಶವನ್ನು ಒಂದಷ್ಟು ಹಿಂದುಳಿಸಬಹುದೇ ಹೊರತು ಸಂಪೂರ್ಣ ನಾಶ ಮಾಡುವುದು ಅಸಾಧ್ಯವಾದ ಮಾತು ಎಂದು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ.

ಲೇಖಕ ಜೆ.ಎಸ್ ಪಾಟೀಲ



Leave a Reply

Your email address will not be published. Required fields are marked *

error: Content is protected !!