ರಾಜ್ಯದಲ್ಲಿ ನೋ ನೈಟ್ ಕರ್ಫ್ಯೂ: ಅಸಲಿ ಕಾರಣ ಏನು ಗೊತ್ತಾ?

360

ಪ್ರಜಾಸ್ತ್ರ ವಿಶೇಷ ಸ್ಟೋರಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ಹೇಗೆ ಆಡಳಿತ ಮಾಡ್ತಿದ್ದಾರೆ ಅನ್ನೋ ಗೊಂದಲ್ಲಿದ್ದಾರೆ ರಾಜ್ಯದ ಜನತೆ. ಕಳೆದ ಹಲವು ದಿನಗಳಿಂದ ಅವರು ತೆಗೆದುಕೊಳ್ಳುವ ನಿರ್ಧಾರ, ಆದೇಶದ ಹಿಂದೆ ಒಂದು ಸ್ಪಷ್ಟತೆ ಇಲ್ಲ. ಹೀಗಾಗಿ ಆ ಕ್ಷಣಕ್ಕೆ ಇದ್ದ ಆದೇಶ ಮರುಕ್ಷಣಕ್ಕೆ ಇರುವುದಿಲ್ಲ.

ಬಧುವಾರ ರಾತ್ರಿ 10 ಗಂಟೆಯಿಂದಲೇ ಜನವರಿ 2ರ ತನಕ ನೈಟ್ ಕರ್ಫ್ಯೂ. 10 ದಿನಗಳ ಕಾಲ ರಾತ್ರಿ 10ಗಂಟೆಯಿಂದ ಬೆಳಗ್ಗೆ 6ಗಂಟೆಯ ತನಕ ನೈಟ್ ಕರ್ಫ್ಯೂ ಅಂದರು. ಸಂಜೆಯೊಳಗೆ ಅದು ಬಧುವಾರ ಹೋಗಿ ಗುರುವಾರ ರಾತ್ರಿಯಿಂದ ಅಂದ್ರು. ಅಲ್ದೇ, ರಾತ್ರಿ 11ಗಂಟೆಯಿಂದ ಬೆಳಗ್ಗೆ 5ಗಂಟೆಯ ತನಕ ಕರ್ಫ್ಯೂ ಜಾರಿ ಅಂದ್ರು. ಸಾರಿಗೆ ವಾಹನಗಳಿಗೆ ಒಪ್ಪಿಗೆ ನೀಡಿದ್ರು. ಆಟೋ, ಟ್ಯಾಕ್ಸಿ ಸಂಚಾರಕ್ಕೆ ಓಕೆ ಅಂದ್ರು.

ಎಲ್ಲ ಸೌಲಭ್ಯ ನೀಡಿ ಇದ್ಯಾವು ನೈಟ್ ಕರ್ಫ್ಯೂ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ರು. ವಿರೋಧ ಪಕ್ಷಗಳು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ವು. ಈಗ ನೋಡಿದ್ರೆ ನೈಟ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ಈ ಮೂಲಕ ಡಿಸೆಂಬರ್ 24ರಿಂದ ಜನವರಿ 2ರ ತನಕ ಇದ್ದ ನೈಟ್ ಕರ್ಫ್ಯೂ ಹಿಂಪಡೆದುಕೊಳ್ಳಲಾಗಿದೆ. ಇದೆಲ್ಲ ನೋಡಿದ್ರೆ ಮಹ್ಮದ್ ಬಿನ್ ತುಘಲಕ್ ಆಡಳಿತ ನೆನಪಾಗ್ತಿದೆ. ಆದ್ರೆ, ದಿಢೀರ್ ಎಂದು ನೈಟ್ ಕರ್ಫ್ಯೂ ವಾಪಸ್ ಪಡೆದಿರುವುದರ ಹಿಂದೆ ಇರೋದು ಇಂಗ್ಲೆಂಡ್ ಪ್ರಧಾನಿ.

ಏನಿದು ಕರ್ನಾಟಕದಲ್ಲಿನ ನೈಟ್ ಕರ್ಫ್ಯೂಗೂ ಇಂಗ್ಲೆಂಡ್ ಪ್ರಧಾನಿಗೂ ಏನ್ ಸಂಬಂಧ ಅಂತಾ ಕೇಳಬಹುದು. ಟ್ವಿಸ್ಟ್ ಇರುವುದೇ ಇಲ್ಲಿ. ಅದೇನಪ್ಪ ಅಂದ್ರೆ, ಈ ಬಾರಿ ಜನವರಿ 26ರ ಗಣರಾಜ್ಯೋತ್ಸವಕ್ಕೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಬರ್ತಿದ್ದಾರೆ. ಭಾರತದ ಮನವಿಯನ್ನ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಜನವರಿ 26ರ ಗಣ್ಯರಾಜ್ಯೋತ್ಸವದಲ್ಲಿ ಯುಕೆ ಪ್ರಧಾನಿ ಮುಖ್ಯಅತಿಥಿಯಾಗಿರುತ್ತಾರೆ.

ಹೀಗೆ ಭಾರತಕ್ಕೆ ಬರ್ತಿರುವ ಯುಕೆ ಪ್ರಧಾನಿಗೆ ಒಂದು ಮುಜುಗರದ ಸಂಗತಿ ಎಲ್ಲೆಡೆ ಹರಡಿಕೊಂಡಿದೆ. ಅದುವೇ ಭಾರತದಲ್ಲಿ ಸೌಂಡ್ ಮಾಡ್ತಿರುವ ಯುಕೆ ಕರೋನಾ ವೈರಸ್ ಅನ್ನೋದು. ಯೆಸ್, ಇದೀಗ ಭಾರತದಲ್ಲಿ ರೂಪಾಂತರಗೊಂಡಿರುವ ಕರೋನಾಗೆ ಯುಕೆ ಮೂಲ ಎನ್ನಲಾಗ್ತಿದೆ. ಹೀಗಾಗಿ ಇಂಗ್ಲೆಂಡ್ ನೆಲದಿಂದ ಭಾರತಕ್ಕೆ ಬರ್ತಿರುವ ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಗಿದೆ.

ಇಷ್ಟೆಲ್ಲ ಸದ್ದು ಮಾಡ್ತಿರುವ ವೈರಸ್ ಜೊತೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಅನ್ನೋದು ಗೊತ್ತಾದ್ರೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಬರುವುದಕ್ಕೆ ಮತ್ತಷ್ಟು ಮುಜುಗರ. ಐಟಿಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಟಿ. ಹೀಗಾಗಿ ನೈಟ್ ಕರ್ಫ್ಯೂ ಸಹಜವಾಗಿಯೇ ಎಲ್ಲೆಡೆ ಸುದ್ದಿ ಹರಡಿಬಿಡುತ್ತೆ. ಇದ್ರಿಂದಾಗಿ ಪ್ರಧಾನಿ ಮೋದಿ ಆಹ್ವಾನ ನೀಡಿರುವ ಬೋರಿಸ್ ಜಾನ್ಸನ್ ಮುಜುಗರಕ್ಕೆ ಇದು ಕಾರಣವಾಗಬಾರದು ಅನ್ನೋ ಕಾರಣಕ್ಕೆ ಹೈಕಮಾಂಡ್ ಬಿಎಸ್ವೈ ಮೇಲೆ ಮತ್ತೆ ಸವಾರಿ ಮಾಡಿದೆ.

ಸಿಎಂ ಬಿಎಸ್ವೈ ದಿಢೀರ್ ಎಂದು ನೈಟ್ ಕರ್ಫ್ಯೂ ವಾಪಸ್ ಪಡೆಯುವುದರ ಹಿಂದೆ ಹೈಕಮಾಂಡ್ ಒತ್ತಡವಿದೆ. ಇದ್ರಿಂದಾಗಿ ಅವರೆ ನೀಡಿದ ಆದೇಶ ಜಾರಿಗೆ ಬರುವ ಕೆಲವು ಗಂಟೆಗಳ ಮೊದ್ಲೇ ವಾಪಸ್ ಪಡೆದುಕೊಂಡಿದ್ದಾರೆ. ಇದ್ರಿಂದಾಗಿ ರಾಜಕೀಯವಾಗಿ ಬಿಎಸ್ವೈಗೂ ಡ್ಯಾಮೇಜ್ ಮಾಡಲಾಗ್ತಿದೆ. ಕಾಟಾಚಾರದ ನೈಟ್ ಕರ್ಫ್ಯೂ ಜಾರಿ ಮಾಡಲು ಹೇಳಿ, ಸಿಎಂ ಬಿಎಸ್ವೈ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ಯಾರೋ ಅನ್ನೋ ಪ್ರಶ್ನೆಗಳ ಜೊತೆಗೆ ಇದೆಲ್ಲ ಬೇಕಿತ್ತಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!