ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ವಿದ್ಯಾರ್ಥಿಗಳು

869

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿರುವ ರಾಜೀವ ಗಾಂಧಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಶಿಕ್ಷಕರ ಕೊರತೆಯಿಂದಾಗಿ ವಿದ್ಯಾಭ್ಯಾಸ ಹಾಳಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಹೇಳಿ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಜೀವ ಗಾಂಧಿ ಪ್ರೌಢ ಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗೂ 187 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಗಣಿತ ಹಾಗೂ ಸಮಾಜ ವಿಜ್ಞಾನ ಶಿಕ್ಷಕರು ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. 625ಕ್ಕೆ 625 ಅಂಕ ಪಡೆಯಬೇಕು ಎಂದು ಹೇಳುತ್ತಾರೆ. ಆದರೆ, ನಮಗೆ ಸರಿಯಾಗಿ ಕಲಿಸಲು ಶಿಕ್ಷಕರಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿನಿ ಅಶ್ವಿನಿ ವಡ್ಡರ ತಮ್ಮ ಸಮಸ್ಯೆ ಹೇಳಿಕೊಂಡರು.

ಶಿಕ್ಷಕರ ಸಮಸ್ಯೆಯಿಂದ ಈ ಹಿಂದೆ ಒಮ್ಮೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದೇವೆ. ಬಿಇಒ ಕಚೇರಿಗೆ ಹೋಗಿ ಎನ್ನುತ್ತಾರೆ. ಗಣಿತ, ಸಮಾಜ ವಿಜ್ಞಾನ ಶಿಕ್ಷಕರಿಲ್ಲದೆ ತೀವ್ರ ತೊಂದರೆಯಾಗುತ್ತಿದೆ ಎಂದು 10ನೇ ತರಗತಿ ವಿದ್ಯಾರ್ಥಿ ದೇವರಾಜ ಗೋಲಗೇರಿ ತಾವು ಎದುರಿಸುತ್ತಿರುವ ತೊಂದರೆ ಹೇಳಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಶಿಕ್ಷಣಕ್ಕೆ ಬಹುದೊಡ್ಡ ಆಧಾರ. ಹತ್ತಾರು ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಓದಿ ಸಾಧನೆ ಮಾಡಬೇಕು ಎಂದುಕೊಂಡಿರುತ್ತಾರೆ. ಆದರೆ, ಶಿಕ್ಷಕರೆ ಇಲ್ಲದೆ ಹೋದರೆ ಅವರ ಓದು ಏನಾಗಬೇಕು? ಇಂತಹ ಕಾರಣಗಳಿಂದಾಗಿಯೇ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಭವಿಷ್ಯ ಕಮರಿಹೋಗುತ್ತಿದೆ. ಸಿಂದಗಿ ಬಿಇಒ ಆರೀಫ್ ಬಿರಾದಾರ ಅವರು ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಓದಿಗೆ ನೆರವಾಗಬೇಕಿದೆ.




Leave a Reply

Your email address will not be published. Required fields are marked *

error: Content is protected !!