ಟೀಕಿಸಬೇಕು ಅನ್ನೋ ಕಾರಣಕ್ಕೆ ಮಾಧ್ಯಮವನ್ನು ಎಳೆದಾಡಬೇಡಿ…

427

ನಮ್ಮ ಬೆನ್ನನ್ನ ನಾವೇ ತಟ್ಟಿಕೊಳ್ಳುತ್ತಿಲ್ಲ. ವಾಸ್ತವದ ಬಗ್ಗೆ ಹೇಳುವ ಪ್ರಯತ್ನವಷ್ಟೆ. ವಿಶ್ವಕಂಡ ಶ್ರೇಷ್ಠ ಪತ್ರಕರ್ತ ಪುಲಿಟ್ಜರ್ ಒಂದು ಮಾತು ಹೇಳುತ್ತಾನೆ, ‘ನನ್ನ ಪತ್ರಿಕೆ ಸದಾ ಜನಸಾಮಾನ್ಯರ ರಕ್ಷಣೆಯಲ್ಲಿರುತ್ತೆ. ಪ್ರತಿಷ್ಟಿತ ವರ್ಗ, ಸಾಮಾಜಿಕ ಸ್ವತ್ತಿನ ಮೇಲೆ ಕಣ್ಣಿಟ್ಟಿರುತ್ತದೆ. ಅವನು ರಾಜನಾಗಿ, ನಿರ್ಗತಿಕನಾಗಿರಲಿ ತಪ್ಪು ಮಾಡಿದವರನ್ನ ಮುಲಾಜಿಲ್ಲದೆ ಟೀಕಿಸುತ್ತದೆ’. ಇದನ್ನ ಇಂದಿಗೂ ಎಷ್ಟೋ ಮಾಧ್ಯಮಗಳು ಮಾಡಿಕೊಂಡು ಬರುತ್ತಿವೆ. ಎಲ್ಲವೂ ಕಲುಷಿತವಾಗಿಲ್ಲ. ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದಿದೆ. ಅದನ್ನ ಪ್ರಜೆಗಳು ಅರಿತುಕೊಳ್ಳಬೇಕಾಗಿದೆ. ಯಾಕಂದ್ರೆ, ದೇಶದಲ್ಲಿ ನಡೆಯುವ ತಪ್ಪುಗಳಿಗೆಲ್ಲ ಮಾಧ್ಯಮವೇ ಕಾರಣ ಅನ್ನೋ ರೀತಿಯಲ್ಲಿ ಮಾತ್ನಾಡುವುದು ಸರಿಯಿಲ್ಲ. ನಮ್ಮ ಕಡೆಯಿಂದಲೂ ತಪ್ಪುಗಳು ಆಗುತ್ತವೆ. ಹಾಗಂತ ನಾವು ಬರೀ ತಪ್ಪುಗಳನ್ನೇ ಮಾಡುವುದಿಲ್ಲ. ನಮ್ಮ ಜವಾಬ್ದಾರಿ ಏನು ಅನ್ನೋದು ನಾವು ಮರೆತಿಲ್ಲ.

ರಣಭಯಂಕರ ಮಳೆಯಿಂದ ಇವತ್ತು ಅರ್ಧ ಕರ್ನಾಟಕದ ಬದುಕು ಮುಳುಗಿದೆ. ಈ ಬಗ್ಗೆ ಮೀಡಿಯಾ ಈ ಹಿಂದೆ ಕೊಡಗು ಟೈಂನಲ್ಲಿ ಮಾಡಿದಷ್ಟೇ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲಿರುವ, ತಾಲೂಕುಗಳಲ್ಲಿರುವ ನಮ್ಮ ಪತ್ರಕರ್ತ ಸಂಗಾತಿಗಳು ನಿರ್ವಹಿಸ್ತಿರುವ ಕೆಲಸ ಎಷ್ಟೊಂದು ಕಷ್ಟ ಅನ್ನೋದು ಅವರಿಗೆ ಮಾತ್ರ ಗೊತ್ತು. ಅದೇ ರೀತಿ ಡೆಸ್ಕ್ ನಲ್ಲಿ ಕೆಲಸ ಮಾಡ್ತಿರುವ ಸಂಗಾತಿಗಳು ಸಹ ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಆದ್ರೆ, ಕೆಲವರು ಮಾಧ್ಯಮಗಳು ಮಾಡ್ತಿರುವ ಕಾರ್ಯಕ್ರಮಗಳ ಟೈಟಲ್ ಬಗ್ಗೆ ಕುಹುಕವಾಡ್ತಿದ್ದಾರೆ. ಹಾಗೇ ಮಾತ್ನಾಡುವವರ ಮಾತುಗಳಿಂದ ಯಾರಿಗೇನೂ ಪ್ರಯೋಜನವಾಗಲ್ಲ. ಸರ್ಕಾರಕ್ಕೂ ಮುಟ್ಟಲ್ಲ. ಮಾಧ್ಯಮದ ಉದ್ದೇಶ ಇನ್ನೊಬ್ಬರ ನೋವಲ್ಲಿ ಮಜಾ ತೆಗೆದುಕೊಳ್ಳುವುದಲ್ಲ. ಜನರ ನೋವು ಎಷ್ಟಿದೆ ಅನ್ನೋದು ಸರ್ಕಾರಕ್ಕೆ ಮುಟ್ಟಿಸುವುದು, ನೆರವು ನೀಡುವ ಜನರು ಸ್ಪಂದಿಸಲಿ ಅನ್ನೋ ಕಾರಣಕ್ಕೆ.

ಸ್ವಲ್ಪ ಹೊತ್ತು ಕಣ್ಮುಚ್ಚಿ ಯೋಜನೆ ಮಾಡಿ ಮಾಧ್ಯಮ ಇಲ್ಲದೆ ಇದ್ರೆ ಸಮಾಜ ಹೇಗಿರುತ್ತೆ ಅಂತ. ನೀವು ಅಂದ್ಕೊಂಡಷ್ಟು ಶಾಂತಿಯಿಂದ ಇರಲ್ಲ. ಮಾಧ್ಯಮ ಅನ್ನೋ ಅಸ್ತ್ರ ಇರೋದ್ರಿಂದಲೇ ನಮ್ಮನ್ನಾಳುವ ಸರ್ಕಾರ ಸೇರಿದಂತೆ ಪ್ರತಿಯೊಬ್ಬರಿಗೂ ಭಯವಿದೆ. ಮೀಡಿಯಾ ಎಲ್ಲವನ್ನೂ ಗಮನಿಸುತ್ತೆ. ಸಮಾಜದ ಎದುರು ನಮ್ಮನ್ನ ಬೆತ್ತಲೆ ಮಾಡುತ್ತೆ ಅನ್ನೋ ಭಯವಿರೋದಕ್ಕೆ ಕದ್ದುಮಚ್ಚು ತಪ್ಪುಗಳನ್ನ ಮಾಡಲು ಹೋಗಿಯೂ ಸಿಕ್ಕಿಬೀಳಲು ಸಾಧ್ಯ. ಅದನ್ನ ಜನರ ಮುಂದೆ ಇಟ್ಟು ಸಾಧ್ಯವಾದಷ್ಟು ನ್ಯಾಯ ಕೊಡಿಸುವ ಕೆಲಸ ಮಾಡುತ್ತೆ. ಒಂದು ವಿಷಯದ ಬಗ್ಗೆ ಜನರು ಮಾತ್ನಾಡುವುದಕ್ಕೂ ಮಾಧ್ಯಮ ಮಾತ್ನಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಇದು ಗೊತ್ತಿದ್ದೂ ಸೋಷಿಯಲ್ ಮೀಡಿಯಾದಲ್ಲಿ ಬಾಯಿಗೆ ಬದ್ದಂತೆ ಮಾತ್ನಾಡುವುದು. ಟಿವಿ ಕಾರ್ಯಕ್ರಮಗಳ ಟೈಟಲ್, ಪತ್ರಿಕೆಗಳಲ್ಲಿನ ಫೋಟೋ ತೆಗೆದುಕೊಂಡು ಪುಟಗಟ್ಟಲೆ ಉಪದೇಶ ನೀಡುವುದು ಸುಲಭ. ಯಾಕಂದ್ರೆ, ಅದರ ಹಿಂದಿನ ಉದ್ದೇಶ ನಿಮ್ಗೆ ಬೇಡ. ಮೀಡಿಯಾದವರು ಮಾಡಬಾರದ್ದನ್ನ ಏನೋ ಮಾಡಿದ್ದಾರೆ ಅನ್ನೋ ರೀತಿಯಲ್ಲಿ ಮಾತ್ನಾಡುವ ಮುನ್ನ ಸ್ವಲ್ಪ ಯೋಚಿಸಿ.

ನಮ್ಮಿಂದಲೂ ತಪ್ಪುಗಳು ಆಗುತ್ತವೆ. ಆಗ ನೀವು ಸಹ ನಮ್ಮನ್ನ ಎಚ್ಚರಿಸುತ್ತೀರಿ. ಆದ್ರೆ, ಕೆಲವು ಸಾರಿ ಎಲ್ಲ ಕೆಟ್ಟದಕ್ಕೂ ಶನೇಶ್ವರನೇ ಕಾರಣ ಅನ್ನೋ ರೀತಿ ಮಾತ್ನಾಡುವುದು ಸರಿಯಲ್ಲ. ಬದುಕು ಕಳೆದುಕೊಂಡ ಜನರಿಗೆ ಹೊಸ ಬದುಕು ಸಿಗ್ಲಿ. ಅವರ ರಕ್ಷಣೆಗೆ, ಮೂಕಪ್ರಾಣಿಗಳ ರಕ್ಷಣೆಗೆ ಸರ್ಕಾರ ನಿಂತುಕೊಳ್ಳಲಿ. ಮಳೆ ನಂತ್ರದ ಬದುಕು ಇದಕ್ಕಿಂತಲೂ ಘೋರವಾಗಿರುತ್ತೆ. ಅದನ್ನ ಎಲ್ಲರ ಎದುರು ತೆರೆದಿಡುವ ಮೂಲಕ ಅವರಿಗೊಂದು ಆಸರೆಯಾಗುವ ಕೆಲಸ ಮಾಡ್ತೀವಿ. ಹೀಗಿರುವಾಗ, ಟಿವಿ ಅವರು ಮಾಡುವ ಕಾರ್ಯಕ್ರಮ ಬರೀ ಟಿಆರ್ ಪಿಗಾಗಿ, ಪೇಪರ್ ನಲ್ಲಿ ಬರುವ ಸುದ್ದಿ ಸರಿಯಿರೋದಿಲ್ಲ ಅಂತಾ ಎಲ್ಲೆಡೆ ಬರೆದು ಕಳಿಸ್ತಿದ್ದಾರೆ. ಅಂಥವರಿಗೆ ಫ್ಯಾಕ್ಟ್ ಅರ್ಥವೆ ಆಗುವುದಿಲ್ಲ. ಒಟ್ನಲ್ಲಿ ಮೀಡಿಯಾವನ್ನ ಹೇಗಾದ್ರು ಮಾಡಿ ಬೈಬೇಕು ಅಷ್ಟೆ.

ನಮಗೂ ಮಾನವೀಯತೆ ಇದೆ ಸ್ವಾಮಿ. ನಾವು ಮನುಷ್ಯರೆ. ಜನರ ಬದುಕಿನಲ್ಲಿ ಮೈಕಾಯಿಸಿಕೊಳ್ಳುವಷ್ಟು ನೀಚರಲ್ಲ. ಯಾಕಂದ್ರೆ, ಬದುಕು ಕಳೆದುಕೊಂಡು ಬೀದಿಗೆ ಬಿದ್ದವರಲ್ಲಿ 90ರಷ್ಟು ಸಾಮಾನ್ಯಜನರಿದ್ದಾರೆ. ಅವರು ಕಳೆದಕೊಂಡ ಬದುಕು ಮರಳಿ ಪಡೆಯಲು ವರ್ಷಗಳೆ ಉರುಳಿ ಹೋಗುತ್ತವೆ. ಅದು ಸಾಲದಂತ ತನ್ನೂರು, ತನ್ನ ಜನ ಅನ್ನೋ ಭಾವನಾತ್ಮಕ ಸಂಬಂಧ ಕಳೆದುಕೊಂಡು ಜೀವನ ಮಾಡುವುದು ಅಷ್ಟೊಂದು ಸುಲಭವಲ್ಲ. ಅಂತಹ ಜನರಿಗಾಗಿ ಮೀಡಿಯಾ, ತನ್ನ ಹೃದಯವನ್ನ ಗಟ್ಟಿ ಮಾಡಿಕೊಂಡು ಕಠೋರವಾದ ಟೈಟಲ್ ಕೊಡಬೇಕಾಗುತ್ತೆ. ದೃಶ್ಯಗಳನ್ನ ತೋರಿಸಬೇಕಾಗುತ್ತೆ. ನಾವು ಇಷ್ಟೆಲ್ಲ ಮಾಡುವುದು ಅವರಿಗೆ ಒಂದಿಷ್ಟು ಒಳ್ಳೆಯದಾಗ್ಲಿ ಅನ್ನೋ ಏಕೈಕ ಕಾರಣಕ್ಕೆ. ಅದೆಲ್ಲವನ್ನೂ ಪಕ್ಕಕ್ಕೆ ಸರಿಸಿ, ಇವರೇನ್ರಿ ಕಾರ್ಯಕ್ರಮ ಮಾಡ್ತಾರೆ. ಅದೇನ್ ಸುದ್ದಿ ತೋರಿಸ್ತಾರೆ. ಇವರು ಮಾಡುವುದೆಲ್ಲ ಬರೀ ಬಿಲ್ಡಪ್ ಅಂತಾ ಹೇಳ್ಬೇಡಿ. ಮಾಧ್ಯಮ ವೃತ್ತಿಯಿಂದ ದೂರ ನಿಂತಿರುವ ನಿಮ್ಗೆ ಅದರೊಳಗಿನ ವಾಸ್ತವ ಅರ್ಥವಾಗಲ್ಲ.

ನಾನು ಎಂ.ಎ ಪತ್ರಿಕೋದ್ಯಮ ಅಧ್ಯಯನ ಮಾಡುವ ಟೈಂನಲ್ಲಿ 4ಪಿ ಬಗ್ಗೆ ಮಾತ್ನಾಡಿದ್ದೆ. ಪಾಲಿಟಿಕ್ಸ್, ಪೊಲೀಸ್, ಪ್ರೆಸ್ ಮತ್ತು ಪಬ್ಲಿಕ್. ಮೊದಲ ಮೂರು ಅಂಗಗಳು ತಮ್ಮ ಕರ್ತವ್ಯವನ್ನ ಸರಿಯಾಗಿ ನಿಭಾಯಿಸಿದಾಗ ನಾಲ್ಕನೆ ಅಂಗ ಸ್ವಾಸ್ಥ್ಯದಿಂದ ಕೂಡಿರಲು ಸಾಧ್ಯವೆಂದು. ಹೆಸರೆ ಹೇಳುವಂತೆ ಮಾಧ್ಯಮ ಅನ್ನೋದು, ಸಮಾಜ ಮತ್ತು ಸರ್ಕಾರದ ನಡುವಿನ ಮಾಧ್ಯಮವಾಗಿ ಕೆಲಸ ಮಾಡುತ್ತೆ. ‘ಸ್ವಹಿತ ಸಾಧನೆಗಾಗಿ ಪತ್ರಿಕೋದ್ಯಮವನ್ನ ಎಂದೂ ವ್ಯಭಿಚಾರಕ್ಕಿಳಿಸಬೇಡಿ’ ಅನ್ನೋ ಗಾಂಧಿ ಮಾತನ್ನ ಇಂದಿಗೂ ಪಾಲಿಸಿಕೊಂಡು, ಪತ್ರಿಕಾಧರ್ಮವನ್ನ ಉಳಿಸಿಕೊಂಡು ಹೋಗ್ತಿರುವ ಅದೆಷ್ಟೋ ಮಾಧ್ಯಮಗಳಿವೆ. ಹೀಗಾಗಿ ನೀವು ಆಡುವ ಮಾತುಗಳು ನೋವು ತರುತ್ತವೆ. ಹಾಗಂತ ನಾವೇನು ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವಾಗ ಸ್ವಲ್ಪ ಯೋಚಿಸಿ ಅನ್ನೋದಷ್ಟೇ ನನ್ನ ಮನವಿ.




Leave a Reply

Your email address will not be published. Required fields are marked *

error: Content is protected !!