ಯಶಸ್ವಿಯಾದ ‘ಪ್ರಜಾಸ್ತ್ರ’ ಸಂವಾದ ಕಾರ್ಯಕ್ರಮ

341

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಗುರುಕುಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಪ್ರಜಾಸ್ತ್ರ ವೆಬ್ ಪತ್ರಿಕೆ ವತಿಯಿಂದ, ‘ಹೆಣ್ಮಕ್ಕಳ ಮೇಲೆ ದೌರ್ಜನ್ಯ: ಇನ್ನೆಷ್ಟು ದಿನ ಪ್ರತಿಭಟನೆ?’ ಅನ್ನೋ ವಿಷಯದ ಮೇಲೆ ಸಂವಾದ ನಡೆಸಲಾಯಿತು. ಗುರುವಾರ ಸಂಜೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿದರು.

ಇಂಡಿಯ ಡಿವೈಎಸ್ಪಿ ಶ್ರೀಧರ ದೊಡ್ಡಿ ಮಾತನಾಡಿ, ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕೆಲಸ ಮಾಡುತ್ತದೆ ಅನ್ನೋದರ ಕುರಿತು ಹೇಳಿದರು. ಅತ್ಯಾಚಾರದಂತಹ ಪ್ರಕರಣದಲ್ಲಿ ಎಂತಹ ಪ್ರಭಾವಿ ವ್ಯಕ್ತಿಗಳೇ ಭಾಗಿಯಾದರೂ ಅವರನ್ನು ನಾವು ಬಿಡುವುದಿಲ್ಲ ಅನ್ನೋ ಮಾತುಗಳನ್ನು ಹೇಳಿದರು. ಕಲಂ 376 ಅಡಿಯಲ್ಲಿ ಪ್ರಕರಣ ದಾಖಲಾಯಿತು ಅಂದರೆ, ಅದು ಯಾವತ್ತೂ ಬದಲಾಗುವುದಿಲ್ಲ. ತನಿಖೆ ನಡೆದು ತಪ್ಪಿತಸ್ಥರು ಎಂದು ತಿಳಿಸಿದರೆ ಶಿಕ್ಷೆ ಖಂಡಿತವಾಗುತ್ತೆ ಎಂದರು. ಇನ್ನು ಪೊಲೀಸ್ ಇಲಾಖೆಯ ಸಹಾಯವಾಣಿ 112 ಬಗ್ಗೆ ತಿಳಿ ಹೇಳಿದರು. ಸಂವಾದದಲ್ಲಿ ಕೇಳಿ ಬಂದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಜಾಗೃತಿ ಮೂಡಿಸಿದರು.

ಇನ್ನು ವಕೀಲರಾದ ಬಿ.ಜಿ ಮಾನ್ವಿ ಮಾತನಾಡಿ, ಕೋರ್ಟ್, ಕಾನೂನು, ವಕೀಲರ, ನ್ಯಾಯಾಧೀಶರ ಕಾರ್ಯವ್ಯಾಪ್ತಿ ಹೇಗಿರುತ್ತೆ. ಹೆಣ್ಮಕ್ಕಳ ಮೇಲಿನ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಏನೆಲ್ಲ ತೀರ್ಪುಗಳನ್ನು ನೀಡಿದೆ ಹಾಗೂ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಿದೆ ಅನ್ನೋದರ ಕುರಿತು ಮಾತನಾಡಿದರು.

ಅದೇ ರೀತಿ ಮಹಿಳಾ ಜಾಗರಣಾ ವೇದಿಕೆ ಅಧ್ಯಕ್ಷೆ ಶೈಲಜಾ ಸ್ಥಾವರಮಠ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ವಿದ್ಯಾರ್ಥಿನಿ ಸುಕೃತಾ ಪಟ್ಟಣಶೆಟ್ಟಿ ಮಾತನಾಡಿ, ಹೆಣ್ಮಕ್ಕಳ ರಕ್ಷಣೆಯ ವಿಚಾರದಲ್ಲಿ ಸಮಾಜದ ಪಾತ್ರ ಏನು ಅನ್ನೋದನ್ನು ತಿಳಿಸಿಕೊಟ್ಟರು. ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಸಂವಾದ ನಡೆಸಿಕೊಟ್ಟರು.




Leave a Reply

Your email address will not be published. Required fields are marked *

error: Content is protected !!