ಪಂಜಾಬ್ ಸಿಎಂ 2ನೇ ಮದುವೆ.. ಜೋಡಿ ನಡುವೆ 19 ವರ್ಷ ಅಂತರ

378

ಪ್ರಜಾಸ್ತ್ರ ಸುದ್ದಿ

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು 2ನೇ ಮದುವೆಯಾಗಿದ್ದಾರೆ. ವೈದ್ಯೆ ಗುರ್ ಪ್ರೀತ್ ಕೌರ್ ಜೊತೆಗೆ ಕುಟುಂಬಸ್ಥರು, ಆಪ್ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಸಿಖ್ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಹಾಸ್ಯನಟನಾಗಿ ಕಾಣಿಸಿಕೊಂಡ ಭಗವಂತ್ ಮಾನ್, ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯರಾದರು. ಕಳೆದ ಮಾರ್ಚ್ ನಲ್ಲಿ ಆಪ್ ಪಕ್ಷ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಮೊದಲೇ ಘೋಷಿಸಿದಂತೆ ಮಾನ್ ಮುಖ್ಯಮಂತ್ರಿಯಾದರು.

ಇನ್ನು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೋವಾ ಜಿಲ್ಲೆಯ ಡಾ.ಗುರ್ ಪ್ರೀತ್ ಕೌರ್ ಕಳೆದ ನಾಲ್ಕು ವರ್ಷಗಳ ಹಿಂದೆ ಎಂಬಿಬಿಎಸ್ ಮುಗಿಸಿದ್ದಾರೆ. ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅಂಕಲ್ ಗುರಜಿಂದ್ರ್ ಸಿಂಗ್ ನಟ್ಟಾ ಆಪ್ ಪಕ್ಷದ ಸದಸ್ಯರಾಗಿದ್ದಾರೆ. ಎರಡು ವರ್ಷಗಳ ಹಿಂದೆಯೇ ಇವರಿಬ್ಬರ ಮದುವೆ ಪ್ರಸ್ತಾಪವಾಗಿತ್ತೆಂದು ಹೇಳಲಾಗುತ್ತಿದೆ. ಮಾನ್ ಹಾಗೂ ಕೌರ್ ನಡುವೆ 19 ವರ್ಷಗಳ ವಯಸ್ಸಿನ ಅಂತರವಿದೆ.

ಸಿಎಂ ಭಗವಂತ್ ಮಾನ್ 1973ರಲ್ಲಿ ಜನಿಸಿದರೆ, ಡಾ.ಗುರ್ ಪ್ರೀತ್ ಕೌರ್ 1993ರಲ್ಲಿ ಜನಿಸಿದ್ದಾರೆ. ಈ ಜೋಡಿ ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದೆ. ಸಿಎಂ ಮಾನ್ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ಡಿವೋರ್ಸ್ ಪಡೆದಿದ್ದಾರೆ. ಇವರಿಗೆ 21 ವರ್ಷದ ಸೀರತ್ ಕೌರ್ ಹಾಗೂ 17 ವರ್ಷದ ದಿಲ್ಶನ್ ಮಾನ್ ಅನ್ನೋ ಇಬ್ಬರು ಗಂಡು ಮಕ್ಕಳಿದ್ದು, ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಸಿಎಂ ಮಾನ್ ಹಾಗೂ ಡಾ.ಕೌರ್ ದಂಪತಿಗೆ ದೆಹಲಿ ಸಿಎಂ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸೇರಿ ಪ್ರಮುಖರು ಭಾಗವಹಿಸಿ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!