ಪುರನಾನೂರು

274

ಕವಿತೆ: ಪುರನಾನೂರು
ತಮಿಳು ಮೂಲ: ಪ್ರೊ.ಸಾಲಮನ್‌ ಪಾಪಯ್ಯ
ಅನುವಾದ: ಡಾ. ಮಲರ್‌ ವಿಳಿ ಕೆ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು

( ಏಳು ಜನ ಮಡಿದು ಈಗಿರುವ ದಾನಿ ನೀ  ಒಬ್ಬ ತಾನೇ)

ಮುದಿರಂ ಎಂಬುದು ಒಂದು ಮಲೆ; ಉಡುಮಲೈಪೇಟ್ಟೈ ಬಳಿ ಇರುವ ಕುದಿರೈ ಮಲೆಯೇ ಈಗಿನ  ಮುದಿರಮಲೈ. ಕುಮಣನ್‌  ಇದರ ನಾಯಕ, ಇವನ  ತಮ್ಮ ಇಳಂಗುಮಣನ್. ಕುಮಣನ್‌ʼನ ದಾನ ಮತ್ತು ಕೀರ್ತಿಯ ಉನ್ನತಿಯನ್ನು ಕಂಡು ತಮ್ಮನಿಗೆ ಆಕ್ರೋಶ; ಆತುರ; ಸ್ವತ್ತು ಎಲ್ಲಿ ವಿನಾಶವಾಗುವುದೋ? ಎಂಬ ಕಾರಣದಿಂದ  ಯುದ್ಧ ಮಾಡಿ ಕುಮಣನನ್ನು ಕಾಡಿಗೆ ಅಟ್ಟಿಬಿಟ್ಟನು. ಕಾಡಿನಲ್ಲಿರುವ  ಅರಸನಾದ ಕುಮಣನ್‌ʼನನ್ನು  ಕಾಣಲು  ಪೆರುಂಚಿತ್ತಿರನಾರ್‌ ಎಂಬ ಕವಿ  ಬಂದರು.

ಚಿಕ್ಕ ಕೋಲಿನಿಂದ ಮುರಜವನ್ನು ಬಾರಿಸಿ

 ಬಿಳಿ ಶಂಖವ ಮೊಳಗಿ ಅರಸರೊಡನೆ ಯುದ್ಧಗೈದವನು;

ಶ್ರೇಷ್ಠ ಎತ್ತರದ ಮಲೆಯಲ್ಲಿ ಸದ್ದೇಳುವ

 ಬೆಳ್ಳನೆಯ ಜಲಪಾತ

 ಕಲ್ಲನ್ನು ಉರುಳಿಸಿಕೊಂಡು ಓಡುವ

 ಪರಂಬು ಮಲೆಯ ರಾಜ ಪಾರಿ;

 ಎತ್ತರದ ಶಿಖರವಿರುವ

 ಕೊಲ್ಲಿ ಮಲೆಯನ್ನು ಆಳಿದ

 ವಲ್ವಿಲ್‌ ಓರಿ;

 ಕಾರಿ ಎಂಬ  ಅರಸರು ಕುದುರೆಯ ಮೇಲೆ ಸಾಗಿ

ದೊಡ್ಡ ಹೋರಾಟದಲ್ಲಿ ಗೆದ್ದು,

 ಮಳೆಯಂತೆ ಕೊಡುವ ದಾನವನ್ನು

 ಕಡು ಯುದ್ಧವನ್ನುಳ್ಳ ಮಲಯನ್‌;

 ಓಡಿಸಿಕೊಂಡು ಹೋಗಲಾಗದ ಉನ್ನತ

 ಕುದುರೆ ಎಂಬ ಮಲೆ,

 ಹರಿತವಾದ ಶೂಲ,

 ಬಿಲ್ವ ಹೂವಿನ ಶಿರಮಾಲೆ ,

 ಬಾಗಿದ ಹಾರ ʼ

 ಇವೆಲ್ಲವನ್ನುಳ್ಳ

 ಎಳಿನಿ ಅದಿಯಮಾನ್‌

 ಅತಿ ತಂಪಾದ ಮಲೆಯಲಿ

 ಇರುಳು  ತುಂಬಿದ  ದೊಡ್ಡ  ಗುಹೆಯನ್ನು,

 ಯುದ್ಧ ಮಾಡಲು ಅದ್ಭುತ ಶೌರ್ಯವನ್ನು,

 ದೈವ ಕಾವಲಿರುವ

 ಅತ್ಯುನ್ನತ ಶಿಖರಗಳನ್ನೊಳಗೊಂಡ

 ದೊಡ್ಡ ಮಲೆನಾಡನ್ ಪೇಗನ್;‌

 ಒಪ್ಪವಾದ ನುಡಿಯನ್ನುಳ್ಳ

 ಮೋಸಿ ಎಂಬ ಕವಿಯ ಹೊಗಳಿಕೆಗೆ  

ಪಾತ್ರನಾದ  ಆಯ್;‌  ಎಂಬ ಅರಸ  

 ಬಯಕೆಯಿಂದ ತನ್ನನ್ನು

 ನೆನೆದು ಬರುವವರ ಬಡತನ

 ಹೆಚ್ಚಿಗೆ  ನೀಗುವಂತೆ ನೀಡಲು

 ತಪ್ಪದ  ದ್ಯೇಯವನ್ನೊಳಗೊಂಡ ದಾನವನ್ನು

 ಹಗೆಗಳನ್ನು ಅಟ್ಟಿಸಿದವನಾದ ನಳ್ಳಿ ( ಅರಸ) ಎಂದು

 ಹೀಗೆ ಹೇಳಲ್ಪಟ್ಟ  ಏಳು ಮಂದಿ

 ಕಾಲವಾದ ನಂತರ;….

 ನೋಡಿದವರಿಗೆ ಕರುಣೆ ಬರುವಂತೆ

 ಹಾಡುತ್ತಾ ಬರುವವರು, ಉಳಿದವರು ಸೇರಿ

 ಯಾಚಿಸಿ ನಿಂತಿರುವವರ ಕಷ್ಟಗಳ

 ನಾನು ನೀಗಿಸುವೆ  ಎಂಬ  ಮನವಿರುವ

 ನೀನು ಇರುವುದರಿಂದ ಇಲ್ಲಿ

 ಉಡುಗೊರೆ ಪಡೆಯಲು ಧಾವಿಸಿ ಬಂದೆನು

ಮುಗಿಲೆತ್ತರದ

 ಬಿದಿರು ಬೆಳೆವ ಮಲೆ;

 ಅದರಲ್ಲಿ ಸುರ ಹೊನ್ನೆಯೊಡನೆ ಎತ್ತರವಾಗಿ

  ಆಸಿನಿ ಮರದೊಡನೆ ಸುಂದರವಾಗಿ

 ಹಲಸಿನ ಮೇಲೆ ಆಸೆಗೊಂಡು ʼ

 ಹೊರಗೆ  ಮುಳ್ಳಿನೊಡನೆ  ಬಲಿತ

 ಹಲಸಿನ ಹಣ್ಣನ್ನು ಪಡೆದ ಗಂಡು ಮಂಗ

 ಹತ್ತಿಯಂತೆ ಕೂದಲ

 ತಲೆಯನ್ನುಳ್ಳ ಮಂಗವನ್ನು ( ಹೆಣ್ಣು ಮಂಗವ)

 ಕೈಯಿಂದ ಬೆಟ್ಟುಮಾಡಿ ತೋರಿ ಕರೆವ ʼ

 ಕುಂದಿಲ್ಲದ ಹೊಸ( ಉಪ) ಆದಾಯಗಳನ್ನುಳ್ಳ

 ಮುದಿರಂ ಎಂಬ ಮಲೆಗೆ ನಾಯಕನೇ!

ಲೋಕವೆಲ್ಲಾ ಪ್ರಸಿದ್ಧಿ ಪಡೆದ ನಾಯಕತ್ವವನ್ನು,

ನಿರ್ಮಿಸಿದ ರಥವನ್ನುಳ್ಳ ಕುಮಣನೇ!

ಅತಿಪ್ರಸಿದ್ಧ ದಾನದಿಂದ

 ನೀನು   ಎತ್ತರಿಸಿದ ಶೂಲ

ನಿನ್ನ ಹಗೆಗಳ ಮುಂದೆ  ಉನ್ನತಿ ಹೊಂದಲಿ

ವಿಶೇಷಾಂಶ:  ಕುಮಣನ್‌   ಎಂಬ ಅರಸನನ್ನು ಕುರಿತು ಕವಿ ಪೆರುಂಚಿತ್ತಿರನಾರ್‌ ಹಾಡಿದುದು.

ಲೇಖಕರ ಪರಿಚಯ:

ಪ್ರೊ.ಸಾಲಮನ್‌ ಪಾಪಯ್ಯ

ಪ್ರಸಿದ್ಧ ತಮಿಳು ಪ್ರಾಧ್ಯಾಪಕರು ಪದ್ಮಶ್ರೀ ಪ್ರಶಸ್ತಿ ವಿಜೇತರು ಪ್ರೊ.ಸಾಲಮನ್‌ ಪಾಪಯ್ಯ ಅವರು  ಮಧುರೈಯ ಅಮೇರಿಕನ್‌  ಕಾಲೇಜಿನಲ್ಲಿ  ತಮಿಳು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸಿದ್ಧ ಲೇಖಕರು ಹಾಗೂ ಅತ್ಯುತ್ತಮ ವಾಗ್ಮಿ, ನಟರು,  ಸರಳ ಸಜ್ಜನಿಕೆಯ ಬಹುಮುಖ ಪ್ರತಿಭಾವಂತರು. ತಮಿಳಿನ ಅರಟ್ಟೈ ಅರಂಗಂ ಎಂಬ  ಟಿ . ವಿ. ಕಾರ್ಯಕ್ರಮದ ಮೂಲಕ ಜಗತ್ಪಪ್ರಸಿದ್ಧರು. ಹಾಗೂ  ತಿರುಕ್ಕುರಳ್‌ ನ  ತಾತ್ಪರ್ಯವನ್ನು ಶ್ರೀ  ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿ ಜನಮನ್ನಣೆ ಪಡೆದವರು.

ಪ್ರಸ್ತುತ ಪುರನಾನೂರು ಹಾಗೂ ಅಗನಾನೂರು ಎಂಬ ತಮಿಳಿನ  ಸಂಗಂ ಕೃತಿಗಳನ್ನು  ಪಂಡಿತರಿಗೂ, ಪಾಮರರಿಗೂ  ಅರ್ಥವಾಗುವಂತೆ  ಸರಳವಾಗಿ ಪದ್ಯವನ್ನು ಬರೆದಿದ್ದಾರೆ. ಮುನ್ನುಡಿಯಂತೂ ಒಂದು ಸಂಶೋಧನಾ ಕೃತಿಯಲ್ಲಿರಬಹುದಾದ ಎಲ್ಲ ಅಂಶಗಳನ್ನೂ ಒಳಗೊಂಡಿದೆ.




Leave a Reply

Your email address will not be published. Required fields are marked *

error: Content is protected !!