ಜಾತಿ, ಧರ್ಮದ ಬೆಂಕಿಯಲ್ಲಿ ದೇಶ ಕುದಿಯತ್ತಿದೆ: ಜ್ಞಾನಪ್ರಕಾಶ ಸ್ವಾಮೀಜಿ

426

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಧರ್ಮ ಹಾಗೂ ಜಾತಿಗಳ ನಡುವೆ ಪರಸ್ಪರ ಬೆಂಕಿ ಹಚ್ಚುವ ಕಾರ್ಯ ನಡೆದಿದೆ. ದೇಶವು ಜಾತಿ, ಧರ್ಮದ ಬೆಂಕಿಯಲ್ಲಿ ಕುದಿಯುತ್ತಿದೆ. ಇದರಿಂದಾಗಿ ದೇಶದ ಅಖಂಡತೆಗೆ ಅಪಾಯ ಉಂಟಾಗಿದೆ ಎಂದು ಮೈಸೂರು ಉರಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿ ಅವರ 75ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಸರ್ವಧರ್ಮ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.

ಭಾರತ ಮನುಷ್ಯರ ದೇಶವಾಗಿ ಉಳಿದಿಲ್ಲ, ಮೃಗತ್ವ ದೇಶವಾಗಿದೆ. ಭಾರತೀಯರು ನಾವೆಲ್ಲ ಒಂದೇ ಎಂಬ ಸಂದೇಶ ಸಾರಬೇಕು. ಭಾಷಣದಲ್ಲಿ ಮಾತ್ರ ಬಸವಣ್ಣ, ಅಲ್ಲಮಪ್ರಭುಗಳ ಹೆಸರು ಕೇಳಿ ಬರುತ್ತಿದೆ ಹೊರತು ಬದುಕಿನಲ್ಲಿ ಅಲ್ಲ. ನಮಗೆ ಬುದ್ಧ, ಬಸವಣ್ಣ, ಅಲ್ಲಮ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ ಆದರ್ಶವಾಗಬೇಕು ಎಂದು ಕಿವಿ ಮಾತು ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಡಾ.ಡಿ.ಜಿ. ಸಾಗರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಾತಿ, ಧರ್ಮಕ್ಕೊಂದು ಮಠಗಳಾಗುತ್ತಿವೆ. ಮಾನವನನ್ನು ದೂರಿಡುವ ಧರ್ಮ ಹೆಚ್ಚುತ್ತಲಿವೆ ಎಂದು ವಿಷಾದ ವ್ಯಕ್ತಪಡಿಸಿದರು. ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಒಡೆಯುವುದು ಧರ್ಮವಲ್ಲ. ಎಲ್ಲರನ್ನು ಒಂದುಗೂಡಿಸುವುದು ನಿಜವಾದ ಧರ್ಮ ಎಂದರು.

ಅಲ್ಲಮಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ, ಫಾದರ್ ಆಲ್ವಿನ್ ಡಿಸೋಜ, ಕಕಮರಿ ಗುರುಲಿಂಗ ಮಹಾರಾಜರು, ಮರುಳಶಂಕರ ಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿದರು. ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶರಣಪ್ಪ ಸುಣಗಾರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಂತಗಂಗಾಧರ ಸ್ವಾಮೀಜಿ ಅವರ ತುಲಾಭಾರ ಕಾರ್ಯಕ್ರಮವನ್ನು ರಾಜಶೇಖರ ನರಗೋದಿ, ಬಸವರಾಜ ಗುಳಬಾಳ ಅವರು ದಂಪತಿ ಸಮೇತ ನೆರವೇರಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶಾಂತಗಂಗಾಧರ ಸ್ವಾಮೀಜಿ ಅವರನ್ನು ಸಾರೋಟದಲ್ಲಿ ಆಸೀನರಾಗಿಸಿ ಪಟ್ಟಣದ ಪ್ರಮಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.

ಈ ವೇಳೆ ತಳವಾರ, ಪರಿವಾರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ,  ಟಿಪ್ಪು ಕ್ರಾಂತಿ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಶಿವಣ್ಣ ಕೊಟರಗಸ್ತಿ, ವಿಜಯಕುಮಾರ ಯಾಳವಾರ, ಪರಶುರಾಮ ಉಪ್ಪಾರ, ನಾಗೇಶ ತಳವಾರ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!