ಸಿಂದಗಿ ಉಪ ಕದನ: ‘ಗಲಾಟೆ ಮಾಡಿದರೆ ಲಾಠಿ ಚಾರ್ಜ್’

633

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧಾನಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ನೋಡಲ್ ಅಧಿಕಾರಿ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದ್ದಾರೆ.

ಪಟ್ಟಣದ ಸಿಪಿಐ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕಾಂಗ್ರೆಸ್ ವಿರುದ್ಧ 12, ಬಿಜೆಪಿ ವಿರುದ್ಧ 9 ಹಾಗೂ ಜೆಡಿಎಸ್ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ ಎಂದರು. ನಾಳೆ ನಡೆಯುವ ಮತದಾನದ ವೇಳೆ ಎಲ್ಲಿಯಾದರೂ ಗಲಾಟೆ ಕಂಡು ಬಂದರೆ ಲಾಠಿ ಚಾರ್ಜ್ ಮಾಡಲಾಗುವುದು ಅಂತಾ ಹೇಳಿದರು.

ಇನ್ನು ಕಳೆದ 22 ದಿನಗಳ ಕಾಲ ಬಿಗಿ ಬಂದೋಬಸ್ತಿ ನೀಡಲಾಗಿದೆ. ಅದರಂತೆ ನಾಳೆ ನಡೆಯುವ ಮತದಾನದ ಸಂದರ್ಭದಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಕಲ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಕೆಎಸ್ಆರ್ ಪಿ 150,  ಡಿಆರ್ 100, ಸೇನೆ 200 ಸೇರಿದಂತೆ 980 ಜನ ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ 101 ಹಳ್ಳಿಗಳಿದ್ದು 297 ಮತಗಟ್ಟೆಗಳಿವೆ. ಇದರಲ್ಲಿ 57 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಸಿಂದಗಿ, ಆಲಮೇಲ, ತಾಂಬಾ, ದೇವಣಗಾಂವ, ದೇವರಹಿಪ್ಪರಗಿ ಭಾಗದಲ್ಲಿ ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಸಿಂದಗಿಯ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಎಲ್ಲಿಯೇ ಗಲಾಟೆ ನಡೆದರೂ 15 ನಿಮಿಷದೊಳಗೆ ಅಲ್ಲಿಗೆ ಹೋಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.




Leave a Reply

Your email address will not be published. Required fields are marked *

error: Content is protected !!