ಸಿಂದಗಿ ಉಪ ಕದನ: ಜೆಡಿಎಸ್ ನಿಂದ ಮನಗೂಳಿ ಸ್ಪರ್ಧೆ?

634

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ತಾಲೂಕಿನ ಉಪ ಚುನಾವಣೆ ಚರ್ಚೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಯಾವ ಪಕ್ಷದಿಂದ ಯಾರಿಗೆ ಟಿಕೆಟ್ ನೀಡುತ್ತಾರೆ? ಯಾರು ಗೆಲ್ಲುತ್ತಾರೆ? ಅನ್ನೋ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಕೈ ಹಾಗೂ ಕಮಲದ ನಡುವೆ ತೆನೆ ಹೊತ್ತ ಮಹಿಳೆ ಎಲ್ಲಿ ಸೈಡ್ ಲೈನ್ ಆಗುತ್ತಾಳೆ ಅನ್ನೋ ಮಾತುಗಳ ನಡುವೆ, ಜೆಡಿಎಸ್ ವರಿಷ್ಠರು ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ.

ದಿವಂಗತ ಎಂ.ಸಿ ಮನಗೂಳಿ ಅವರು ಸಿಂದಗಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನ ಗಟ್ಟಿಗೊಳಿಸಿದ್ದರು. ಅವರ ನಂತರ ಮಕ್ಕಳು ಜೆಡಿಎಸ್ ಅಭ್ಯರ್ಥಿಗಳಾಗುತ್ತಾರೆ ಅನ್ನೋದು ತಾಲೂಕಿನ ಜನರ ಮಾತಾಗಿತ್ತು. ಆದ್ರೆ, ಅಶೋಕ ಮನಗೂಳಿ ಅವರು ಅದನ್ನು ಸುಳ್ಳಾಗಿಸಿದರು. ಹೀಗಾಗಿ ಇಲ್ಲಿ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಾ ಅನ್ನೋ ಚರ್ಚೆಯ ನಡುವೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರ ಹೆಸರು ಕೇಳಿ ಬರ್ತಿದೆ.

ಪಟ್ಟಣದ 13ನೇ ವಾರ್ಡಿನಿಂದ ಗೆದ್ದು ಪುರಸಭೆ ಅಧ್ಯಕ್ಷರಾಗಿರುವ ಅವರನ್ನ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿಸಲಿದ್ದಾರೆ ಅನ್ನೋ ಚರ್ಚೆ ನಡೆದಿದೆಯಂತೆ. ಈ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯೆಂಡಿಗೇರಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ…

ಸಿಂದಗಿ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ನಿಲ್ಲಿಸುವ ಕುರಿತು ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ವಿಜಯಪುರಕ್ಕೆ ಭೇಟಿ ನೀಡುತ್ತಿರುವ ಸಂಸದ ಪ್ರಜ್ವಲ ರೇವಣ್ಣನವರು ಜೊತೆ ಜಿಲ್ಲಾ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಶಾಂತವೀರ ಮನಗೂಳಿ ಅವರು ನಾನು ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತೇನೆ ಅಂತಾ ಹೇಳಿದರೆ, ಅದನ್ನು ಪರಿಶೀಲನೆ ಮಾಡಲಾಗುವುದು.

ಮಲ್ಲಿಕಾರ್ಜುನ ಯೆಂಡಿಗೇರಿ, ಜೆಡಿಎಸ್ ಜಿಲ್ಲಾಧ್ಯಕ್ಷರು, ವಿಜಯಪುರ

ಇನ್ನು ಈ ಬಗ್ಗೆ ಡಾ.ಶಾಂತವೀರ ಮನಗೂಳಿ ಅವರ ಪ್ರತಿಕ್ರಿಯೆಗಾಗಿ ಅವರನ್ನ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಒಂದು ವೇಳೆ ಜೆಡಿಎಸ್ ನಿಂದ ಡಾ.ಶಾಂತವೀರ ಮನಗೂಳಿ ಹಾಗೂ ಕಾಂಗ್ರೆಸ್ ನಿಂದ ಅಶೋಕ ಮನಗೂಳಿ ಸ್ಪರ್ಧೆ ಮಾಡಿದರೆ ಇದರ ಲಾಭ ಆಗೋದು ಮಾತ್ರ ಬಿಜೆಪಿಗೆ. ಮನಗೂಳಿ ಕುಟುಂಬ ಹಾಗೂ ಜೆಡಿಎಸ್ ಅಭಿಮಾನಿಗಳ ನಡುವಿನ ಮತಗಳು ಹೋಳಾಗುವುದರಲ್ಲಿ ಅನುಮಾನವಿಲ್ಲ. ಸಹೋದರರ ನಡುವಿನ ಹೋರಾಟದ ಫಲ ಬಿಜೆಪಿಗೆ ಆಗುವ ಸಾಧ್ಯತೆಗಳು ಹೆಚ್ಚು.




Leave a Reply

Your email address will not be published. Required fields are marked *

error: Content is protected !!