ರೊಕ್ಕಾ ಪಡೆಯುವವರ ನಡುವೆ ‘ಕೆಆರ್ ಎಸ್’ನ ಈ ನಡೆ ವರ್ಕೌಟ್ ಆಗುತ್ತಾ?

296

ಪ್ರಜಾಸ್ತ್ರ ಸುದ್ದಿ, ನಾಗೇಶ ತಳವಾರ

ಸಿಂದಗಿ: ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ದಿಲ್ಲಿ ಚುನಾವಣೆವರೆಗೂ ಝಣಝಣ ಕಾಂಚಾಣದ್ದೇ ಸದ್ದು. ಚುನಾವಣಾ ಆಯೋಗ ನಿಗದಿ ಮಾಡುವ ಖರ್ಚು ವೆಚ್ಚದ ಮಿತಿ ಇವತ್ತಿನ ರಾಜಕೀಯದಲ್ಲಿ ನಗಣ್ಯ. ಅದು ಪ್ರತಿಯೊಬ್ಬರಿಗೂ ಗೊತ್ತಿರುವ ಬಹಿರಂಗ ಸತ್ಯ. ಹೀಗಿರುವಾಗ ಭ್ರಷ್ಟಾಚಾರ ಮುಕ್ತ ಸಮಾಜ, ಒಂದು ತತ್ವ ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುತ್ತೇವೆ. ನಮಗೆ ಅವಕಾಶ ಕೊಟ್ಟರೆ ಒಂದೊಳ್ಳೆ ಆಡಳಿತ ನಡೆಸಿ ತೋರಿಸುತ್ತೇವೆ ಎನ್ನುತ್ತಿರುವ ಕೆಆರ್ ಎಸ್ ಪಕ್ಷ, ಜನರಿಂದ ದೇಣಿಗೆ ಸಂಗ್ರಹಿಸಿ ಚುನಾವಣೆ ನಡೆಸುತ್ತಿದೆ. ಹಾಗಂತ ಇದು ಹೊಸದಲ್ಲ, ಈ ಹಿಂದೆ ಅನೇಕ ರಾಜಕಾರಣಿಗಳು ಚುನಾವಣೆಗೆ ನಿಂತಾಗ ಜನರು ಹಣದ ಜೊತೆಗೆ ಮತ ಕೊಟ್ಟು ಗೆಲ್ಲಿಸಿದ್ದಾರೆ. ಆದರೆ, ಭ್ರಷ್ಟಾಚಾರವನ್ನೇ ಹಾಸಿ ಹೊದ್ದುಕೊಂಡಿರುವ ಈ ಹೊತ್ತಿನಲ್ಲಿ ಕೆಆರ್ ಎಸ್ ನಡೆ ಎಷ್ಟು ಫಲ ನೀಡುತ್ತೆ ಅನ್ನೋ ಪ್ರಶ್ನೆ ಮೂಡಿದೆ.

ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಡಾ.ಸುನೀಲಕುಮಾರ್ ಹಬ್ಬಿ ಕಣಕ್ಕೆ ಇಳಿದಿದ್ದಾರೆ. ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ. ಬದಲಾವಣೆಯ ಹೊಸ ಗಾಳಿ ಬೀಸಲಿ ಎನ್ನುತ್ತಿರುವ ಇವರ ತಂಡಕ್ಕೆ ಅನೇಕರು ಹಲವು ರೂಪದಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ಸಹಾಯ ಮತವಾಗಿ ಬದಲಾಯಿಸಬೇಕಾದ ಬಹುದೊಡ್ಡ ಸವಾಲು ರವಿಕೃಷ್ಣ ರೆಡ್ಡಿ ಹಾಗೂ ಅವರ ತಂಡದ ಮುಂದಿದೆ. ಇದು ಅವರಿಗೂ ಗೊತ್ತಿದೆ. ಈ ಉಪಚುನಾವಣೆಯಲ್ಲಿ ಕನಿಷ್ಠ 10 ಸಾವಿರ ಮತಗಳನ್ನಾದರೂ ಪಡೆದರೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಉಳಿದ ಪಕ್ಷಗಳಿಗೆ ದೊಡ್ಡ ಪೈಪೋಟಿ ನೀಡಿ ಗೆಲ್ಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜಾತಿ ಬಲ, ಹಣ ಬಲ, ತೋಳ್ಬಲದ ಕಪಿಮುಷ್ಠಿಯಲ್ಲಿ ಸಿಲುಕಿರುವ ಮತದಾರರ ಎದೆಯಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಪೆರಿಯಾರ್ ಚಿಂತನೆಗಳನ್ನು ಬಿತ್ತಬೇಕಾದರೆ ಆಗಾಗ ಚೆಗುವಾರ್ ರೀತಿಯ ಕಾಂತ್ರಿಯ ಹೆಜ್ಜೆಯೂ ಬೇಕಾಗುತ್ತೆ. ಮುಂದಿನ ದಿನಗಳಲ್ಲಿ ಅಂತಹ ಬದಲಾವಣೆ ನೋಡಬಹುದಾ ಅನ್ನೋದು ಸಧ್ಯದ ಪ್ರಶ್ನೆ.




Leave a Reply

Your email address will not be published. Required fields are marked *

error: Content is protected !!