ವೈದ್ಯನೊಳಗೊಬ್ಬ ಯೋಧ…

919

ಪ್ರಿಯ ಓದುಗರೆ, ಮಾಜಿ ಪ್ರಧಾನಿ ಶಾಸ್ತ್ರಿ ಅವರು ಒಂದು ಮಾತು ಹೇಳಿದ್ದಾರೆ. ಜೈ ಜವಾನ್.. ಜೈ ಕಿಸಾನ್ ಅಂತ.. ಇವತ್ತು ನಾವೆಲ್ಲ ನೆಮ್ಮದಿಯಿಂದ ಉಸಿರಾಡ್ತಿದ್ದೀವಿ ಅಂದ್ರೆ ಅದ್ಕೆ ನಮ್ಮ ಹೆಮ್ಮೆಯ ವೀರ ಯೋಧರು ಕಾರಣ. ನಾವು ಹೊಟ್ಟೆ ತುಂಬಾ ಊಟ ಮಾಡ್ತಿದೀವಿ ಅಂದ್ರೆ ನೇಗಿಲಯೋಗಿಯ ಬೆವರ ಹನಿ ಕಾರಣ. ಇವರಿಬ್ಬರನ್ನ ನಾವು ದಿನನಿತ್ಯ ನೆನಪು ಮಾಡಿಕೊಳ್ಳಬೇಕು.

ಈ ಲೇಖನದ ಕೇಂದ್ರ ಕಥೆಗೆ ಬರುವುದಕ್ಕೂ ಮೊದ್ಲು, ನಮ್ಮ ಹೆಮ್ಮೆಯ ಸೈನಿಕರನ್ನ ನೆನಪು ಮಾಡಿಕೊಳ್ಳಲೇಬೇಕು. ತಮ್ಮ ಜೀವದ ಹಂಗು ತೊರೆದು, ತಾಯ್ನಾಡಿಗಾಗಿ ಹೋರಾಟ ಮಾಡುವ ಕಲಿಗಳು. ಪಕ್ಕಾ ಟೈಮಿಂಗ್ ಪರ್ಫೆಕ್ಟ್ ಶಾಟ್ ಅವರದು. ಗಾಳಿಯ ವೇಗ, ಬೆಂಕಿಯ ತೀವ್ರತೆ ಅವರ ನರನಾಡಿಗಳಲ್ಲಿ ಸಂಚರಿಸುತ್ತಿರುತ್ತೆ. ವೈರಿಗಳ ಎದೆಯಲ್ಲಿ ನಡುಕು ಹುಟ್ಟಿಸುವ ಅವರಿಗೂ ಒಂದು ಸುಂದರ ಬದುಕಿದೆ. ಆ ಬದುಕಿನಲ್ಲಿ ಹೆತ್ತವರು, ಕೈ ಹಿಡಿದವಳು, ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಜೀವಗಳಿವೆ. ಈ ಎಲ್ಲ ಜೀವಗಳ ಕಣ್ಣುಗಳಲ್ಲಿ ಹತ್ತಾರು ಕನಸುಗಳಿವೆ. ಆದರೆ, ಆ ಕನಸುಗಳೆಲ್ಲ ನನಸಾಗುತ್ತವೆ ಅನ್ನೋ ನಂಬಿಕೆ ಯಾರೊಬ್ಬರಲ್ಲಿ ಇಲ್ಲ.

ಡಾ. ಅಭಯ ಕುಲಕರ್ಣಿ

ವರ್ಷಕ್ಕೆ, ಎರಡು ವರ್ಷಕ್ಕೆ ತನ್ನವರಿಗೆ ದರ್ಶನ ನೀಡುವ ಭಾರತಾಂಭೆಯ ಪುತ್ರ, ತನ್ನೆಲ್ಲ ಕರಳು ಬಳ್ಳಿಯ ಸಂಬಂಧದಿಂದ ದೂರುವಿದ್ದು ಈ ದೇಶ ಕಾಯುತ್ತಾನೆ. ಮರಭೂಮಿ, ಹಿಮಪಾತ, ಕಡಲು, ದಟ್ಟವಾದ ಕಾಡು.. ಹೀಗೆ ಎಲ್ಲಿ ಬೇಕೋ ಅಲ್ಲಿ ನುಗ್ಗಿ ಬರ್ತಾನೆ. ಸಾವು ಅನ್ನೋದು ಹೆಗಲಿಗೇರಿಸಿಕೊಂಡು ಕಲ್ಲುಬಂಡೆಯಂತೆ ನಿಂತಿರುವ ಧೀರ. ಆತನ ತಾಗ್ಯದ ಮುಂದೆ ನಾವು ಮಾಡುವ ಯಾವ ತ್ಯಾಗವೂ ಸಮನಾಗುವುದಿಲ್ಲ. ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಿಲ್ಲುವ ಮಾತೃಭೂಮಿ ರಕ್ಷಸಕರಿಗೆ ನಾವು ಏನಾದ್ರೂ ಸಹಾಯ ಮಾಡಲೇಬೇಕು ಅನ್ನೋ ಕಾರಣಕ್ಕೆ ‘ವಾತ್ಸಲ್ಯ’ ಆಸ್ಪತ್ರೆ ಪಣತೊಟ್ಟಿದೆ.

ಸಿಂದಗಿಯ ವಿಜಯಪುರ ರೋಡ್ ನಲ್ಲಿರುವ ಆಸ್ಪತ್ರೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ವಾತ್ಸಲ್ಯ ಆಸ್ಪತ್ರೆ, ತಾಯಿಯ ಮಮತೆ, ಕರುಣೆ, ಕಾಳಜಿ, ಆಕೆಯ ನಿಸ್ವಾರ್ಥ ಸೇವೆಯಂತೆ, ಸೈನಿಕರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುತ್ತಾ ಬರುತ್ತಿದೆ. ಕಳೆದ ಮೂರು ವರ್ಷಗಳಿಂದ ಪಟ್ಟಣದಲ್ಲಿ ಸೇವೆ ನೀಡುತ್ತಿರುವ ಆಸ್ಪತ್ರೆಯ ರೂವಾರಿ ಡಾ.ಅಭಯ ಕುಲಕರ್ಣಿ. ಮೂಲತಃ ಇವರು ಸಿಂದಗಿ ತಾಲೂಕಿನ ಮಲಘಾಣ ಗ್ರಾಮದವರು.

ಡಾ.ಅಭಯ-ಡಾ.ಪೂಜಾ ದಂಪತಿ

2013ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಕಂಪ್ಲೀಟ್ ಮಾಡಿದ ಇವರು, ಹುಬ್ಬಳ್ಳಿ, ವಿಜಯಪುರ, ಮಲಘಾಣದಲ್ಲಿ ಸೇವೆ ಸಲ್ಲಿಸಿ 3 ವರ್ಷಗಳಿಂದ ಸಿಂದಗಿಯಲ್ಲಿ ತಮ್ಮ ಕಾರ್ಯವನ್ನ ನಿರ್ವಹಿಸ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅಜ್ಜ ಅಣ್ಣಾರಾವ್ ಕುಲಕರ್ಣಿ ಅವರಂತೆ ತಾವು ಸಹ ಯೋಧನಾಗಬೇಕೆಂದು ಆಸೆ ಪಟ್ಟವರು. ಆದರೆ, ಜೀವ ಭಯ ಅನ್ನೋದು ಅವರನ್ನ ವೈದ್ಯ ವೃತ್ತಿಗೆ ಕರೆದುಕೊಂಡು ಬಂತು. ಗಡಿಯಲ್ಲಿ ನಿಂತು ದೇಶ ಸೇವೆ ಮಾಡಲು ಆಗ್ಲಿಲ್ಲ ಅನ್ನೋ ನೋವು ಅವರಿಗೆ ಯಾವಾಗ್ಲೂ ಕಾಡ್ತಿತ್ತು. ಅದನ್ನ ಗಡಿಯೊಳಗೆ ಇದ್ದು ಮಾಡೋಣ ಅಂದ್ಕೊಂಡ ಡಾ ಅಭಯ ಕುಲಕರ್ಣಿ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಯೋಧರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಾ ಬರ್ತಿದ್ದಾರೆ. ವೀರ ಶುಭಾಷ್ ಚಂದ್ರ ಭೋಸ್ ಅವರ ಪಕ್ಕಾ ಅಭಿಮಾನಯಾಗಿರುವ ಇವರ ಹೃದಯ ಸಿಪಾಯಿಗಳ ಪರ ಸದಾ ಮಿಡಿಯುತ್ತೆ. ವೃತ್ತಿಯೊಳಗೊಬ್ಬ ಸೇವಕ ಸದಾ ಜಾಗೃತನಾಗಿರುತ್ತಾನೆ ಎನ್ನುವ ಇವರು, ದೇಶ ಮತ್ತು ಮನುಷ್ಯತ್ವ ಮೊದಲು ನಂತರ ಉಳಿದಿದ್ದು ಅಂತಾರೆ.

ರೋಗಿಗಳ ಆರೋಗ್ಯ ತಪಾಸಣೆಯಲ್ಲಿ ನಿರತ ಡಾ.ಅಭಯ ಕುಲಕರ್ಣಿ

ಇಸಿಜಿ, ಎಕ್ಸ್ ರೇ, ಲ್ಯಾಬ್ ಟೆಸ್ಟ್, ತುರ್ತು ಸೇವಾ ಘಟಕ, ಸ್ಪೆಷಲ್ ರೂಮ್ ಸೇವೆ, ಮೆಡಿಕಲ್ ಸೇರಿದಂತೆ ಪ್ರತಿಯೊಂದನ್ನ ಸಂಪೂರ್ಣ ಉಚಿತವಾಗಿ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಾಗ, ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸಿದ್ರೆ, ಅಲ್ಲಿ ಅವರು ಪಡೆಯುವ ಬಿಲ್ ನಲ್ಲಿ ಶೇಕಡ 50ರಷ್ಟು ಕಡಿಮೆ ಮಾಡಿಸುತ್ತಾರೆ. ಹೀಗೆ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸೇವೆಯನ್ನ ಯೋಧರಿಗಾಗಿ ಮಾಡ್ತಿದ್ದಾರೆ. 3 ವರ್ಷದಲ್ಲಿ ಸುಮಾರು 90ಕ್ಕೂ ಹೆಚ್ಚು ಕಾರ್ಯನಿರ್ವಹಿಸುತ್ತಿರುವ ಹಾಗೂ ಮಾಜಿ ಸೈನಿಕರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ.

ತಮ್ಮ ಪ್ರಾಣದ ಹಂಗು ತೊರೆದು ಗಡಿ ಕಾಯುವ ಯೋಧರ ಬಗ್ಗೆ ನನಗೆ ಹೆಮ್ಮೆ ಮತ್ತು ಗೌರವ ಇದೆ. ಅವರು ತಾಯ್ನಾಡಿಗಾಗಿ ಸಲ್ಲಿಸುವ ಸೇವೆಯ ಮುಂದೆ ನಮ್ಮ ಸೇವೆ ಏನೇನೋ ಅಲ್ಲ. ನಾವು ನೆಮ್ಮದಿಯಾಗಿ ಬದುಕಲು ತಮ್ಮ ಜೀವ ಕೊಡುವ ಸೈನಿಕರಿಗೆ ನನ್ನಿಂದ ಆದ ಸೇವೆ ಮಾಡುತ್ತಿದ್ದೇನೆ. ಇದನ್ನ ‘ಭಾರತೀಯ ಮೆಡಿಕಲ್ ಅಸೋಷಿಯನ್’ ಅಳವಡಿಸಿಕೊಳ್ಳಬೇಕು ಹಾಗೇ ಇತರೆ ಆಸ್ಪತ್ರೆಗಳು ಸಹ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ.

ಡಾ.ಅಭಯ ಕುಲಕರ್ಣಿ

ಭಾರತೀಯ ಮೆಡಿಕಲ್ ಅಸೋಷಿಯನ್ ಸದಸ್ಯರಾಗಿರುವ ಡಾ.ಅಭಯ ಕುಲಕರ್ಣಿ ಅವರು, ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ಉಚಿತ ಶಿಬಿರಗಳನ್ನ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮಲಿಗೆ ಬರುವ ರೋಗಿಗಳಿಗೆ ದುಶ್ಚಟಗಳ ಕುರಿತು ಜಾಗೃತಿ ಮೂಡಿಸ್ತಾರೆ. ಅವರಲ್ಲಿ ತಿಳುವಳಿಕೆ ಮೂಡಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ ನೀಡ್ತಾರೆ. ಇವರ ಈ ಕಾರ್ಯಕ್ಕೆ ಪತ್ನಿ ಡಾ. ಪೂಜಾ ಕುಲಕರ್ಣಿ ಅವರು ಸಾಥ್ ನೀಡಿದ್ದಾರೆ.

ಆಸ್ಪತ್ರೆಯ ವಿಶೇಷತೆಗಳು

ತುರ್ತು ಸೇವಾ ಘಟಕ

10 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ

ಲ್ಯಾಬ್, ಇಸಿಜಿ, ಎಕ್ಸ್ ರೇ ವ್ಯವಸ್ಥೆ

ಮೆಡಿಕಲ್

ದಿನದ 24X7 ಸೇವೆ

ಹೌದು, ಗಡಿಯಲ್ಲಿ ಗುಂಡು, ಬಾಂಬ್, ಮಿಸೈಲ್ ಗಳ ಮಧ್ಯ ನಿತ್ಯ ಹೋರಾಟ ಮಾಡುವ ವೀರ ಕಲಿಗಳಿಗೆ ನಮ್ಮಿಂದ ಈ ತರದ ಸೇವೆ ಮಾಡಲು ಮಾತ್ರ ಸಾಧ್ಯ. ಈ ಮೂಲಕ ಅವರ ಋಣವನ್ನ ನಾವು ತೀರಿಸಬಹುದು. ಇದನ್ನ ಮಾಡಬೇಕು ಅಂದ್ರೆ ಒಳ್ಳೆಯ ಮನಸ್ಸು ಬೇಕು. ಆ ಮನಸ್ಸು ಎಲ್ಲರಲ್ಲೂ ಬರ್ಲಿ. ಡಾ.ಅಭಯ ಕುಲಕರ್ಣಿ ಅವರಂತೆ ಇತರೆ ವೈದ್ಯರು ಸೈನಿಕರಿಗೆ ಉಚಿತ ಸೇವೆ ನೀಡಲಿ ಅನ್ನೋದೇ ನಮ್ಮ ಆಶಯ.

ಲ್ಯಾಬ್

TAG


Leave a Reply

Your email address will not be published. Required fields are marked *

error: Content is protected !!