ಸುವರ್ಣಸೌಧದ ಮುಂದೆ ಶಾವಿಗೆ.. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

265

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಇಲ್ಲಿನ ಸುವರ್ಣ ಸೌಧದ ಮೆಟ್ಟಿಲುಗಳ ಮುಂದೆ ಶಾವಿಗೆ ಒಣ ಹಾಕಿದ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ದಿನಗೂಲಿ ನೌಕರಿ ಮಾಡುತ್ತಿದ್ದ ಮಲ್ಲವ್ವ ಕೆಲಸ ಕಳೆದುಕೊಂಡಿದ್ದಾಳೆ. ವಿಷಯದ ಗಂಭೀರತೆ ಅರಿಯದೆ ಹೋದ ಮಲ್ಲವ್ವಳನ್ನು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ.

ಸುವರ್ಣಸೌಧದ ಮುಂದೆ ಸೈಕ್ಲಿಂಗ್ ಹೋಗುವವರು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದು ವೈರಲ್ ಆಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಶಾವಿಗೆ ತೆಗೆಸಿ, ಮಲ್ಲವ್ವಳನ್ನು ಕೆಲಸದಿಂದ ತೆಗೆದಿದ್ದಾರೆ.

ದಿನಗೂಲಿ ಕೆಲಸ ಮಾಡುವ ಮಲ್ಲವ್ವಳನ್ನು ಕೆಲಸದಿಂದ ತೆಗೆದು ಹಾಕುವ ಅಧಿಕಾರಿಗಳು, 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೌಧದ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಅನ್ನೋದು ಸ್ಥಳೀಯರ ಬಾಯಿಯಿಂದ ತಿಳಿದುಕೊಳ್ಳಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯಗಳ ಚರ್ಚೆಯ ಹಿನ್ನೆಲೆಯಲ್ಲಿ ಅಧಿವೇಶನ ನಡೆಸಲು ಸುವರ್ಣಸೌಧ ನಿರ್ಮಿಸಿದರು. ಆದರೆ, ಅಭಿವೃದ್ಧಿ ವಿಚಾರ ಇರಲಿ ಪ್ರಸ್ತುತ ವಿಚಾರದ ಚರ್ಚೆಗಳು ನಡೆಯದೆ, ಬರೀ ವಿವಾದಾತ್ಮಕ ವಿಷಯಗಳಲ್ಲೇ ಕಳೆದು ಬಿಡುತ್ತಾರೆ. ಅಧಿವೇಶನ ಮುಗಿದ ಬಳಿಕ ಇತ್ತ ಯಾರ ಸುಳಿವು ಇರುವುದಿಲ್ಲ.

ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಹೇಳುತ್ತಲೇ ಬಂದಿದ್ದಾರೆ. ಆದರೆ, ಆ ಕೆಲಸ ಇನ್ನು ಆಗಿಲ್ಲ. ಜಿಲ್ಲಾಮಟ್ಟದ ಕಚೇರಿಗಳು ಸ್ಥಳಾಂತರವಾಗಿದ್ದರೂ ಶೇಕಡ 20ರಷ್ಟು ಬಳಕೆಯಾಗುತ್ತಿಲ್ಲ. ಹೀಗಿರುವಾಗ, ದಿನಗೂಲಿ ನಂಬಿ ಬದುಕುತ್ತಿದ್ದ ಮಲ್ಲವ್ವ ಮಾಡಿದ ತಪ್ಪಿಗೆ ಬುದ್ದಿಹೇಳಿ, ವಿಷಯದ ಗಂಭೀರತೆ ತಿಳಿಸಿದರೆ ಮುಗಿಯೋದು. ಆದರೆ, ಅಧಿಕಾರಿಗಳ ಆಟ ಯಾವಾಗಲೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತೆ ಪ್ರಯೋಗವಾಗುತ್ತಲೇ ಇರುತ್ತೆ. ನೀತಿ, ನಿಯಮ, ಕಾನೂನು ಮೀರಿದ ಮಾನವೀಯತೆ ದೊಡ್ಡದಲ್ಲವಾ?




Leave a Reply

Your email address will not be published. Required fields are marked *

error: Content is protected !!