ಈ ಜಾಗ ಪುರಸಭೆ ವ್ಯಾಪ್ತಿಯಲ್ಲಿರುವುದಕ್ಕೆ ದಾಖಲೆ.. ಅನಧಿಕೃತ ಅಂಗಡಿಗಳ ತೆರವು ಯಾಕೆ ಆಗ್ತಿಲ್ಲ?

488

ಪ್ರಜಾಸ್ತ್ರ ವಿಶೇಷ ವರದಿ, ಭಾಗ-2

ಸಿಂದಗಿ: ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಇರುವ ವಿಜಯಪುರ ರೋಡ್ ಹಾಗೂ ಕಾಲೇಜ್ ರೋಡ್ ಪಕ್ಕದ ಜಾಗ ಪುರಸಭೆ ವ್ಯಾಪ್ತಿಗೆ ಬರುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ದೇ, ರಸ್ತೆ ನಿರ್ಮಾಣದ ಬಳಿಕ ಪಿಡಬ್ಲುಡಿ ಜಾಗವನ್ನ ಪುರಸಭೆಗೆ ಹಸ್ತಾಂತರ ಮಾಡಿದ್ದಾರೆ. ಹೀಗಾಗಿ ಇದರ ಜವಾಬ್ದಾರಿ ಪುರಸಭೆಗಿದೆ.

ಯಾವ ಯಾವ ರಸ್ತೆಯನ್ನ ಪುರಸಭೆಗೆ ಪಿಡಬ್ಲುಡಿ ಹಸ್ತಾಂತರಿಸಿದ ದಾಖಲೆ

ಸಾಮಾನ್ಯವಾಗಿ ರಸ್ತೆ ನಿರ್ಮಾಣ ಮಾಡಿದ್ಮೇಲೆ ಮಧ್ಯ ಭಾಗದಿಂದ ಎಡ ಹಾಗೂ ಬಲಕ್ಕೆ ಇಂತಿಷ್ಟು ಜಾಗ ಬಿಡಬೇಕು ಅನ್ನೋ ನಿಯಮವಿದೆ. ಕಾರಣ, ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿ, ಅಪಘಾತ ಸಂಭವಿಸದಿರಲಿ ಎಂದು. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದಾಗ 15 ಮೀಟರ್, ಜಿಲ್ಲಾವಾರು ಬಂದಾಗ 10 ಮೀಟರ್, ಇತರೆ ಜಿಲ್ಲಾ ರಸ್ತೆ ಬಂದಾಗ 7.5 ಮೀಟರ್ ಬಿಡಬೇಕು ಎಂದು ಹೇಳಲಾಗುತ್ತೆ.

2019ರಲ್ಲಿ ನೀಡಿದ ವರದಿ

ಹೀಗೆ ಊರೊಳಗಿನ ರಸ್ತೆ ಮಧ್ಯದಿಂದ ಎಡ-ಬಲಕ್ಕೆ ಬಿಡುವ ಜಾಗಕ್ಕೆ ಅದಕ್ಕೆ ಸಂಬಂಧಿಸಿದ ಆಡಳಿತ ಇಲಾಖೆಯ ವ್ಯಾಪ್ತಿಗೆ ಬರುತ್ತೆ. ಅದೇ ರೀತಿ ತಹಶೀಲ್ದಾರ್ ಕಚೇರಿ ಕಾಂಪೌಂಡ್ ಗೆ ಹೊಂದಿಕೊಂಡಂತಿರುವ ಜಾಗ, ಪುರಸಭೆ ವ್ಯಾಪ್ತಿಗಿದೆ. ಅಲ್ಲಿ ಅನಧಿಕೃತವಾಗಿ ಅಂಗಡಿಗಳನ್ನ ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡಲಾಗ್ತಿದೆ. ಇದು ಬರೀ ಇಲ್ಲಿ ಅಷ್ಟೇ ಅಲ್ಲ. ಪಟ್ಟಣದ ಅನೇಕ ಕಡೆ ಇವೆ. ಇದನ್ನ ತೆರವುಗೊಳಿಸುವ ಅಧಿಕಾರಿ ಪುರಸಭೆಗೆ ಇದ್ದರೂ ಸಾಧ್ಯವಾಗ್ತಿಲ್ಲ. ಕಾರಣ ಉಪಜೀವನ ಹಾಗೂ ರಾಜಕೀಯ ಎಂದು ಹೇಳಲಾಗ್ತಿದೆ.

ಯಾವ ಯಾವ ರಸ್ತೆಗೆ ಎಷ್ಟು ಜಾಗ ಬಿಡಬೇಕು ಅನ್ನೋದು

ಈ ಸಂಬಂಧ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಹೆಚ್ಚುವರಿಯಾಗಿ ಕಟ್ಟಡ ವಿಭಾಗ ಮತ್ತು ಎನ್ ಎ ವಿಭಾಗ ನೋಡಿಕೊಳ್ತಿರುವ ಅಭಿಷೇಕ ಪಾಂಡೆ ಅವರನ್ನ ಕೇಳಿದಾಗ ಅವರು ಹೇಳಿದ್ದು ಹೀಗೆ..

‘ತಹಶೀಲ್ದಾರ್ ಕಾಂಪೌಂಡ್ ಗೆ ಹೊಂದಿಕೊಂಡಿರುವ ಜಾಗ ಪುರಸಭೆ ವ್ಯಾಪ್ತಿಗೆ ಬರುತ್ತೆ. ಅಲ್ಲಿರುವ ಅಂಗಡಿಗಳು ಅನಧಿಕೃತವಾಗಿವೆ. ಅವುಗಳನ್ನ ತೆರವು ಮಾಡಬಹುದು. ಆದ್ರೆ, ಅಲ್ಲಿರುವವರ ಉಪಜೀವನಕ್ಕೆ ಏನು ಮಾಡಬೇಕು ಎಂದು ಕೇಳ್ತಾರೆ. ರಾಜಕೀಯ ಒತ್ತಡ ತರುತ್ತಾರೆ. ಈ ಮೊದ್ಲು ಭೂ ಬಾಡಿಗೆ ಕಟ್ಟಿಸಿಕೊಳ್ಳಲಾಗ್ತಿತ್ತು. ಅದು ಮುಂದೆ ನಮ್ಮದೆ ಜಾಗವೆನ್ನುತ್ತಾರೆ ಅನ್ನೋ ಕಾರಣಕ್ಕೆ, ಅದನ್ನೂ ನಿಲ್ಲಿಸಲಾಗಿದೆ. ಆದ್ರೆ, ಹಂತ ಹಂತವಾಗಿ ತೆರವುಗೊಳಿಸುವ ಕೆಲಸ ಮಾಡುತ್ತೇವೆ. ಎಸಿ ಅವರು ಈ ಬಗ್ಗೆ ಹೆಚ್ಚಿನ ಒತ್ತು ನೀಡಿದ್ರೆ ಕೆಲಸ ಬೇಗ ಆಗುತ್ತೆ’.

ಅಭಿಷೇಕ ಪಾಂಡೆ, ಹಿರಿಯ ಆರೋಗ್ಯ ನಿರೀಕ್ಷಕ

ಇದು ಇವರು ಹೇಳುವ ಮಾತು. ಉಪಜೀವನ ಪ್ರಶ್ನೆ ಇದೆ. ಒಪ್ಪಿಕೊಳ್ಳೋಣ. ಅದಕ್ಕೆ ಪರ್ಯಾಯ ಮಾರ್ಗವಿರುತ್ತೆ ಅಲ್ವಾ? ಇದರಲ್ಲಿ ರಾಜಕೀಯ ಒತ್ತಡ ಯಾಕೆ? ಇದರಿಂದ ಅವರಿಗೆ ಆಗ್ತಿರುವ ಲಾಭವೇನು? ಹೀಗೆ ಉಪಜೀವನದ ಹೆಸರಿನಲ್ಲಿ ಅನಿಧಿಕೃತವಾಗಿ ಕನಿಷ್ಠ ಜಾಗದ ತೆರಿಗೆ ಸಹ ಕಟ್ಟದೆ ವ್ಯಾಪಾರ ವಹಿವಾಟು ಮಾಡುವುದಾದ್ರೆ, ಅನಿಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದಾದ್ರೆ, ಇದಕ್ಕೆ ಅವಕಾಶ ಕೊಡುವ ಕೆಇಬಿ ಅಂತವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗದೆ ಹೋದ್ರೆ ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಬೇಕು? ಜನಪ್ರತಿನಿಧಿಗಳು ಯಾವುದಕ್ಕೆ ಇರಬೇಕು? ಈ ಬಗ್ಗೆ ಎಸಿ ಅವರು ಏನಂತಾರೆ…?

ವಿಶೇಷ ವರದಿ ಮುಂದುವರೆಯುತ್ತೆ…




Leave a Reply

Your email address will not be published. Required fields are marked *

error: Content is protected !!