ಏನಾಗಿದೆ ಸಿಂದಗಿ ಪಟ್ಟಣಕ್ಕೆ..?

267

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ಪಟ್ಟಣದಲ್ಲಿ ಎಲ್ಲಿ ನೋಡಿದರೂ ಬರೀ ಧೂಳು.. ಧೂಳು.. ಧೂಳು.. ಯಾಕೆಂದು ನೋಡಿದರೆ ಕಾಮಗಾರಿಗಳ ಭರಾಟೆ ಜೋರಾಗಿದೆ. ಯಾವ ರಸ್ತೆ, ಬಡವಾಣೆಗೆ ಹೋದರೂ ರಸ್ತೆಗಳೆಲ್ಲ ಬಾಯ್ತೆರೆದಿವೆ. ತಗ್ಗು ಗುಂಡಿಗಳು ಲೆಕ್ಕವೇ ಇಲ್ಲ. ಮಣ್ಣಿನ ರಾಶಿ. ಅಬ್ಬಾ ಎಂಥಾ ಅಭಿವೃದ್ಧಿ ಕೆಲಸ. ಜನರು ಸಹ ಅಭಿವೃದ್ಧಿ ಕೆಲಸ ನೋಡಿ ಮೂಕವಿಸ್ಮಿತರಾಗಿದ್ದಾರೆ.

ಹಾಳಾದ ರಸ್ತೆಯಿಂದ ವಾಹನ ಸವಾರರು ಬಿದ್ದರೂ, ಧೂಳಿನ ಕಣಗಳಿಂದ ಅಲರ್ಜಿಯಾಗಿ ಕೆಮ್ಮು, ನೆಗಡಿ ಬರುತ್ತಿದ್ದರೂ, ಹಾಳಾದ ಚರಂಡಿಗಳಿಂದ, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯಿಂದ ರೋಗ ರುಜಿನಗಳು ಬಂದರೂ ಯಾರಿಗೂ ಬೈಯದೆ ಅಭಿವೃದ್ಧಿ ಕೆಲಸ ಆಗುತ್ತಿರುವುದಕ್ಕೆ ಸಂತಸ ಪಡುತ್ತಿದ್ದಾರೆ. ಪುರಸಭೆಗೆ ಸಂಬಂಧಿಸಿದ ಹಾಗೂ ಶಾಸಕರ ಅನುದಾನದ ಕಾಮಗಾರಿಗಳು ಭರ್ಜರಿಯಾಗಿ ನಡೆಯುತ್ತಿರುವುದು ನೋಡಿ ನಮ್ಮೂರು ಹೈಟೆಕ್ ಆಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಹೀಗೆ ಹೇಳುತ್ತಿದ್ದಾರೆ ಎಂದುಕೊಂಡಿರಾ? ಖಂಡಿತ ಇಲ್ಲ. ಊರು ತುಂಬಾ ಅಗೆಯುತ್ತಿರುವ ರಸ್ತೆಗಳು, 2 ವರ್ಷಗಳಿಂದ ನಡೆದಿರುವ ಒಳಚರಂಡಿ ಕೆಲಸ, ನೀರಿನ ಪೈಪ್ ಲೈನ್ ಕೆಲಸ, ರಸ್ತೆ ಪಕ್ಕದ ಚರಂಡಿಗಳ ಕೆಲಸ. ಹೀಗೆ ಸಾಲು ಸಾಲು ಕಾಮಗಾರಿಗಳು ಏಕಕಾಲದಲ್ಲಿ ನಡೆದು ಜನರ ಜೀವ ಹಿಂಡುತ್ತಿರುವುದಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಯಾವುದೇ ವಾರ್ಡಿಗೆ ಹೋದರೂ ನರಕ ದರ್ಶನವಾಗುತ್ತಿದೆ. ಸ್ಥಳೀಯ ಆಡಳಿತ ಹಾಗೂ ಶಾಸಕರ ನಡುವೆ ಸರಿಯಾಗಿ ಹೊಂದಾಣಿಕೆ ಇಲ್ಲದ ಪರಿಣಾಮ ಪಡಬಾರದ ಪಾಡು ಪಡುತ್ತಿದ್ದೇವೆ ಎಂದು ಆಕ್ರೋಶದ ನುಡಿಗಳನ್ನಾಡುತ್ತಿದ್ದಾರೆ.

ಸ್ಥಳೀಯ ಆಡಳಿತ ಕಾಂಗ್ರೆಸ್ ಇದೆ. ಶಾಸಕರು ಬಿಜೆಪಿಯವರು ಇದ್ದಾರೆ. ಒಬ್ಬರಿಗೊಬ್ಬರಿಗೂ ಹೊಂದಾಣಿಕೆ ಇಲ್ಲ. ಒಳಚರಂಡಿ ಕೆಲಸ ನಡೆದು 2 ವರ್ಷ ಆಗಿದೆ. ಒಬ್ಬ ಅಧಿಕಾರಿಯೂ ವೀಕ್ಷಣೆ ಮಾಡಿ ಏನಾಗುತ್ತಿದೆ ಎಂದು ಗಮನಿಸುತ್ತಿಲ್ಲ. ಬಂದವರೆಲ್ಲ ರಸ್ತೆ ಅಗೆಯುವುದು, ಗುಂಡಿ ತೆಗೆಯುವುದು ಅರ್ಧಂಬರ್ಧ ಮುಚ್ಚುವುದು ಹೋಗುವುದು ಮಾಡುತ್ತಿದ್ದಾರೆ. ಇದರಿಂದ ನಿತ್ಯ ಜನರು ಸಮಸ್ಯೆ ಎದುರಿಸುವಂತಾಗಿದೆ.

ಗುರುರಾಜ ಬಡಗೇರ, ಸ್ಥಳೀಯರು

ಹೌದು, ಒಂದು ಕಡೆ ಪುರಸಭೆ ಅನುದಾನದಲ್ಲಿ ನಡೆಯುತ್ತಿರುವ ಕೆಲಸಗಳು. ಮತ್ತೊಂದು ಕಡೆ ಶಾಸಕರ ಅನುದಾನದಲ್ಲಿ ನಡೆಯುತ್ತಿರುವ ಕೆಲಸಗಳು. ಹೀಗಾಗಿ ಇಲ್ಲಿ ನಾ ಮುಂದು ತಾ ಮುಂದು ಎಂದು ಕಾಮಗಾರಿ ಗುತ್ತಿಗೆ ಪಡೆದವರು ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಊರು ತುಂಬಾ ಪದೆಪದೆ ರಸ್ತೆ ಅಗೆಯುವುದು, ಗುಂಡಿ ತೆಗೆಯುವುದು. ಹೀಗೆ ಪ್ರತಿಯೊಂದು ವಾರ್ಡ್ ನಲ್ಲಿಯೂ ಕೆಲಸ ನಡೆಸಿದ್ದಾರೆ. ಇದರಿಂದಾಗಿ ಒಂದು ಏರಿಯಾಗೆ ಹೋಗಲು ಗುಡ್ಡ ಸುತ್ತಿ ಮೈಲಾರಕ್ಕೆ ಹೋಗವಂತಹ ಮತ್ತು ಧೂಳಿನ ಮಜ್ಜನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಂದಗಿಯಲ್ಲಿ ನಡೆಯುತ್ತಿರುವ ಕೆಲಸ ನೋಡಿದರೆ ಚುನಾವಣೆ ದೃಷ್ಟಿಯಿಂದ ಅನ್ನೋದು ಎಲ್ಲರಿಗೂ ಗೊತ್ತಾಗುತ್ತಿದೆ. ಚುನಾವಣೆ ಮುಗಿದ ಬಳಿಕ ಏನಾಗುತ್ತೆ ಗೊತ್ತಿಲ್ಲೆಂದು ಎಲ್ಲ ಒಟ್ಟಿಗೆ ಮಾಡುತ್ತಿದ್ದಾರೆ. ಊರು ತುಂಬಾ ಹೀಗೆ ಕಾಮಗಾರಿ ನಡೆಸಿರುವುದರಿಂದ ಸರಿಯಾಗಿ ಸಂಚರಿಸಲು ಆಗುತ್ತಿಲ್ಲ. ಧೂಳಿನಿಂದಾಗಿ ಅಸ್ತಮಾ, ಅಲರ್ಜಿ ಶುರುವಾಗಿವೆ. ಆದಷ್ಟು ಬೇಗ ಕೆಲಸ ಮುಗಿದರೆ ಸಾಕು ಅನ್ನೋ ಮಟ್ಟಕ್ಕೆ ಜನರು ರೋಸಿ ಹೋಗಿದ್ದಾರೆ.

ವಿಶಾಲ ಶಿವಸಿಂಪಗೇರ, ವಾಹನ ವಿಮಾ ಸಲಹೆಗಾರರು, ಸಿಂದಗಿ

ಅಭಿವೃದ್ಧಿ ಕೆಲಸ ಅನ್ನೋದು ಜನರಿಗೆ ನೆಮ್ಮದಿ ತರಬೇಕು. ಖುಷಿ ನೀಡಬೇಕು. ಆದರೆ, ಇಡೀ ಊರ ತುಂಬಾ ಏಕಕಾಲದಲ್ಲಿ ಕೆಲಸ ನಡೆಸಿರುವುದಕ್ಕೆ ಜನರು ಅಕ್ಷರಶಃ ಹೈರಾಣಾಗಿದ್ದಾರೆ. ಚುನಾವಣೆ ಘೋಷಣೆಯಾದ ಮೇಲೆ ಎಲ್ಲ ಕೆಲಸವೂ ಬಂದ್ ಆಗುತ್ತವೆ. ಆಗ ಮತ್ತೊಂದು ರೀತಿಯ ನರಕಯಾತನೆ ಅನುಭವಿಸುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!