ಡಿಕೆಶಿ ವಿರುದ್ಧ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಪತ್ರ ಬರೆದರಾ?

189

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೆಸರಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದು ಬರೆಯಲಾಗಿದೆ. ಇದರಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ ಭಾಗವಹಿಸದೆ ಇರೋದಕ್ಕೆ ಕ್ಷಮೆ ಕೇಳಿರುವುದು. ಬಹುಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿರುವುದು.

ಕೆಪಿಸಿಸಿ ಅಧ್ಯಕ್ಷರು ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಜನವರಿ 3ರಂದು ಬಿಡುಗಡೆ ಮಾಡುವುದಾಗಿ ಮಾಧ್ಯಮಗಳ ಮೂಲಕ ತಿಳಿಯಿತು. ಇದಕ್ಕೆ ನನ್ನ ಬೆಂಬಲಿಗರು ಬಲವಾಗಿ ಪ್ರತಿರೋಧಿಸಿರುವುದರಿಂದ ಅದನ್ನು ಮುಂದೂಡಲ್ಪಟ್ಟು ಸಂಕ್ರಾಂತಿಯ ನಂತರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡತೊಡಗಿತು. ಹೀಗೆ ಒಂದು ಪುಟದ ಪತ್ರದಲ್ಲಿ ಸಾಕಷ್ಟು ಆರೋಪಗಳನ್ನು ಮಾಡಲಾಗಿದೆ.

ಈ ಪತ್ರ ನಕಲಿಯಾಗಿದೆ. ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ನಕಲಿ ಪತ್ರವೊಂದು ಹರಿದಾಡುತ್ತಿದೆ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ತಿಳಿಸಿದ್ದಾರೆ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರ ಸಂಬಂಧವನ್ನು ಕೆಡಿಸುವ ದುರುದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಈ ಪತ್ರಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಗೆಲುವಿನ ಹಾದಿಯಲ್ಲಿರುವ ನಮ್ಮ ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದಲೇ ಈ ಖೊಟ್ಟಿ ಪತ್ರವನ್ನು ಹರಿಬಿಡಲಾಗಿದೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಲಿದ್ದು, ಈ ದೃಷ್ಕೃತ್ಯದ ಹಿಂದಿನ ದುರುಳರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುತ್ತಾರೆಂದು ನಂಬಿದ್ದೇನೆ ಅಂತಾ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಈ ಪತ್ರ ಬರೆದಿದ್ಯಾರು ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!